More

    ಕಾಂಗ್ರೆಸ್‌ನ ಸ್ಯೂಡೋ ಸೆಕ್ಯುಲರಿಸಂ ದೇಶಕ್ಕೆ ಅಪಾಯ: ಕೇಂದ್ರ ಸಚಿವ ಭೂಪೇಂದ್ರ ಯಾದವ್

    ವಿಜಯವಾಣಿ ಸುದ್ದಿಜಾಲ, ಬೆಂಗಳೂರು:
    ಕಾಂಗ್ರೆಸ್‌ನ ಸ್ಯೂಡೋ ಸೆಕ್ಯುಲರಿಸಂ ದೇಶಕ್ಕೆ ಅಪಾಯ ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ.
    ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಬಹುಸಂಖ್ಯಾತ, ಅಲ್ಪಸಂಖ್ಯಾತ ಅಂತ ಭೇದ ಭಾವ ಮಾಡಿಕೊಂಡು ಬಂದಿರುವ ಕಾಂಗ್ರೆಸ್ ಈಗಲೂ ಅಲ್ಪಸಂಖ್ಯಾತರ ಓಲೈಕೆಗೆ ಹೆಚ್ಚು ಒತ್ತು ಕೊಡುತ್ತಿದೆ ಎಂದರು.
    ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್‌ನ ಬೂಟಾಟಿಕೆ ಬಯಲಾಗಿದೆ. ದೇಶದಲ್ಲಿ ಒಂದೇ ಭರವಸೆಯ ಗ್ಯಾರಂಟಿ ಅಂದ್ರೆ ಅದು ಮೋದಿ ಗ್ಯಾರಂಟಿ ಮಾತ್ರ ಎಂದರು.
    ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಹಣ ಯಾವುದೇ ಬಾಕಿ ಇಲ್ಲ. 2023 ರ ವರೆಗಿನ ಹಣ ಬಂದಿದೆ. ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ ಎಂದರು.
    ಅಯೋಧ್ಯೆಯಲ್ಲಿ 500 ವರ್ಷಗಳ ಸಂಘರ್ಷದ ಬಳಿಕ ರಾಮಮಂದಿರ ನಿರ್ಮಾಣ ಆಗಿದೆ. ದೇಶದ ಸಾಂಸ್ಕೃತಿಕ ಸಂಕಲ್ಪ ಮುಂದುವರೆಸಲು, ಭಾರತೀಯರ ಪ್ರತಿಷ್ಠೆ ಮುಂದುವರೆಸಲು ರಾಮಮಂದಿರ ಆಗಿದೆ. ರಾಜ್ಯದ ಅರುಣ್ ಯೋಗಿರಾಜ್ ರಾಮನ ಬಾಲವಿಗ್ರಹ ಕೆತ್ತಿದ ಶಿಲ್ಪಿಯಾಗಿರುವುದು ಹೆಮ್ಮೆಯ ವಿಷಯ ಎಂದು ಶ್ಲಾಗಿಸಿದರು.
    ಮೋದಿ ನೇತೃತ್ವದ ಸರ್ಕಾರ, ದೇಶದ ಬಡವರಿಗೆ ಹತ್ತು ವರ್ಷಗಳಲ್ಲಿ ಹಲವು ಯೋಜನೆ ತಂದಿದೆ.
    ಆರ್ಥಿಕ ಸುಧಾರಣೆ ದೆಸೆಯಿಂದ ಜಿಎಸ್ಟಿ ಜಾರಿಯಾಗಿದೆ. ಕಾಂಗ್ರೆಸ್ ದೇಶವನ್ನು ಜಾತಿಗಳಲ್ಲಿ ಹಂಚುವ ಕೆಲಸ ಮಾಡುತ್ತಿದೆ. ಒಬಿಸಿಗೆ ಮೀಸಲಾತಿ ಕೊಡುವ ವಿಚಾರದಲ್ಲೂ ಕಾಂಗ್ರೆಸ್ ವಿರೋಧಿಸಿತ್ತು. ದೇಶದ ಅಭಿವೃದ್ಧಿ ಯೋಜನೆಗಳಿಗೂ ವಿರೋಧಿಸಿದೆ ಎಂದರು.
    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕಿದೆ. ಇಲ್ಲಿನ 28 ಕ್ಕೆ 28 ಲೋಕಸಭಾ ಕ್ಷೇತ್ರ ಗೆಲ್ಲಬೇಕು. ಜಗದೀಶ್ ಶೆಟ್ಟರ್ ಈ ಕೆಲಸ ಆರಂಭಿಸಿದ್ದಾರೆ ಎಂದರು.
    ಕೇಂದ್ರದ ಅನುದಾನ ಬಂದರೂ, ಇಲ್ಲಿ ಅಭಿವೃದ್ಧಿ ಮಾಡಲು ಕಾಂಗ್ರೆಸ್ ಮುಂದಾಗಿಲ್ಲ. ಕರ್ನಾಟಕಕ್ಕೆ ಅದರ ಬಾಕಿ ಜಿಎಸ್ಟಿ ಬಾಕಿ ಕೊಟ್ಟಾಗಿದೆ. ಇಲ್ಲಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರವೇ ಅಡ್ಡಿಯಾಗಿದೆ ಎಂದರು.

    ಪಂಚರಾಜ್ಯಗಳಲ್ಲಿ ಕಾಂಗ್ರೆಸ್‌ನ ಸುಳ್ಳುಗಳು ಜನತೆಗೆ ಗೊತ್ತಾಗಿದ್ದರಿಂದ ಅಲ್ಲಿ ಕಾಂಗ್ರೆಸ್‌ನ ಗ್ಯಾರಂಟಿಗಳು ವಿಫಲವಾಗಿವೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 400 ಸೀಟುಗಳು ಸಿಗೋದು ಖಚಿತ. ಹಾಗೆಯೇ ಮತ್ತೆ ಮೋದಿ ಪ್ರಧಾನಿ ಆಗೋದೂ ಖಚಿತ ಎಂದರು.

    ಸೈಡ್‌ಲೈಟ್ಸ್

    ತಡವಾಗಿ ಬಂದ ಶೋಭಾ ಕರಂದ್ಲಾಜೆ
    ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಡವಾಗಿ ಆಗಮಿಸಿ, ವೇದಿಕೆಯ ಮೇಲೆ ತೆರಳದೆ ಸಭೆಯ ಕಡೆಯ ಸಾಲಿನಲ್ಲಿ ಆಸೀನರಾದರು. ವೇದಿಕೆಯ ಮುಂಭಾಗಕ್ಕೆ ಆಗಮಿಸುವಂತೆ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಮನವಿ ಮಾಡಿದರೂ ಒಪ್ಪಲಿಲ್ಲ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರಿಂದಲೂ ಶೋಭಾ ಅವರನ್ನು ಮುಂದಿನ ಸಾಲಿಗೆ ಬರುವಂತೆ ಆಹ್ವಾನಿಸಿದಾಗಲೂ, ನಾನಿಲ್ಲೇ ಕುಳಿತುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿ ಕಡೆಯ ಸಾಲಿನಲ್ಲೇ ಕುಳಿತರು.

    ಗಮನ ಸೆಳೆದ ಜಗದೀಶ್ ಶೆಟ್ಟರ್
    ಕಾಂಗ್ರೆಸ್‌ನಿಂದ ಮರಳಿ ಬಿಜೆಪಿಗೆ ಬಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಭೆಯಲ್ಲಿ ಎಲ್ಲರ ಗಮನ ಸೆಳೆದರು. ತವರಿಗೆ ಬಂದ ಸಂಭ್ರಮದಲ್ಲಿ ಮುಳುಗಿದ್ದ ಶೆಟ್ಟರ್ ಅವರನ್ನು ಕಾರ್ಯಕರ್ತರು ಮತ್ತು ಮುಖಂಡರು ಪರಸ್ಪರ ಮಾತನಾಡಿ ಅಭಿನಂದಿಸಿದರು. ವೇದಿಕೆಯಲ್ಲಿ ಮಾತನಾಡಿದ ಎಲ್ಲರೂ ಶೆಟ್ಟರ್ ಬಗ್ಗೆ ಮೆಚ್ಚುಗೆ ಮಾತನ್ನಾಡಿದರು.

    ವೇದಿಕೆಯಲ್ಲಿ ಶ್ರೀರಾಮ
    ಕಾರ್ಯಕಾರಿಣಿ ಸಭೆಯ ವೇದಿಕೆಯಲ್ಲಿ ಶ್ರೀರಾಮ ವಿಗ್ರಹವನ್ನು ಇಟ್ಟಿದ್ದು ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.

    *ಖಂಡಿತವಾಗಿ ಯಾರೆಲ್ಲ ಪಕ್ಷ ಬಿಟ್ಟು ಹೋಗಿದಾರೋ ಅವರೆಲ್ಲ ವಾಪಸ್ ಬರಬೇಕು ಎಂದು ಮನವಿ ಮಾಡುವೆ. ಇದು ಅಭಿವೃದ್ಧಿ, ದೇಶದ ಭದ್ರತೆಯ ಪರ್ವಕಾಲ. ನಮ್ಮ ಶ್ರದ್ಧೆ, ವಿಶ್ವಾಸ ಕಾಪಾಡುವ ಕಾಲ. ಬೇಸತ್ತು ಬೇರೆ ಕಾರಣಕ್ಕೆ ಹಲವರು ಪಕ್ಷ ತೊರೆದು ಹೋಗಿರಬಹುದು.
    ಮತ್ತೆ ದೇಶ ಭದ್ರಪಡಿಸಲು, ಮೋದಿಯವರನ್ನು ಪ್ರಧಾನಿ ಮಾಡಲು ವಾಪಸ್ ಬರಬೇಕು.
    -ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ.

    • ಕಾರ್ಯಕಾರಿಣಿಗೆ ಎಲ್ಲರಿಗೂ ಆಹ್ವಾನ ಕಳುಹಿಸಲಾಗಿದೆ. ಕಾರಣಾಂತರಗಳಿಂದ ಕೆಲವರು ಬಂದಿಲ್ಲ. ಅವರ ಜೊತೆ ಮಾತನಾಡುತ್ತೇವೆ. ಯಾವುದೇ ಸಮಸ್ಯೆ ಇಲ್ಲ. ಎಲ್ಲವು ಸುಗಮವಾಗಿದೆ.
      ಯಾರೆಲ್ಲಾ ಬಂದಿಲ್ಲ ಅವರ ಜೊತೆ ರಾಜ್ಯ ಅಧ್ಯಕ್ಷರು ಮಾತಾಡುವರು.
      -ಆರ್.ಅಶೋಕ್, ವಿರೋಧ ಪಕ್ಷ ನಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts