More

    ಜನರ ನೋವಿಗೆ ಸ್ಪಂದಿಸುವ ನಾಯಕರಾಗಿ ; ಬಿಜೆಪಿ ಕಾರ್ಯಕರ್ತರಿಗೆ ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಸಂದೀಪ್ ಕುಮಾರ್ ಕರೆ

    ಕೋಲಾರ: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ವಿಸಿಟಿಂಗ್ ಕಾರ್ಡ್‌ಗೆ ಸೀಮಿತರಾಗದೆ ಜನರ ನೋವಿಗೆ ಸ್ಪಂದಿಸುವ ಮಾತೃ ಹೃದಯ ಬೆಳೆಸಿಕೊಳ್ಳಬೇಕು ಎಂದು ಮೋರ್ಚಾ ರಾಜ್ಯಾಧ್ಯಕ್ಷ ಡಾ.ಕೆ.ಸಿ.ಸಂದೀಪ್ ಕುಮಾರ್ ಹೇಳಿದರು.

    ನಗರದ ಕೆಇಬಿ ಸಮುದಾಯ ಭವನದಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನಿ ನರೇಂದ್ರ ಮೋದಿ ಅವರ 70ನೇ ಜನ್ಮದಿನದ ಅಂಗವಾಗಿ ಗುರುವಾರ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
    ಪಕ್ಷದಲ್ಲಿ ಉನ್ನತ ಸ್ಥಾನಕ್ಕೇರಿರುವ ನರೇಂದ್ರ ಮೋದಿ, ಅಮಿತ್ ಷಾ ಸಾಮಾನ್ಯ ಕಾರ್ಯಕರ್ತರಾಗಿ ಬೆಳೆದವರು.

    ನಾಯಕರ ಮನೆ ಕಾಯುವುದು, ವಿಸಿಟಿಂಗ್ ಕಾರ್ಡ್ ಇಟ್ಟುಕೊಂಡು ತಿರುಗಾಡುವುದಕ್ಕಷ್ಟೇ ಸೀಮಿತರಾಗಬಾರದು. ನಿಷ್ಠಾವಂತ ಕಾರ್ಯಕರ್ತರು ಜನರ ಸಮಸ್ಯೆ, ನೋವಿಗೆ ಸ್ಪಂದಿಸುವ ಮಾತೃ ಹೃದಯ ಬೆಳೆಸಿಕೊಂಡಾಗ ನಾಯಕರಾಗಲು ಸಾಧ್ಯ ಎಂದರು.

    ಮೋದಿ ವಿಶ್ವವೇ ಮೆಚ್ಚಿದ ನಾಯಕ, ಮೋದಿ ತನಗಾಗಿ ಬದುಕುವುದಿಲ್ಲ, ದೇಶಕ್ಕಾಗಿ, ಭಾರತವನ್ನು ವಿಶ್ವಗುರುವನ್ನಾಗಿಸಲು ಶ್ರಮಿಸುತ್ತಿರುವುದರಿಂದ ಯುವಶಕ್ತಿಗೆ ಪ್ರೇರಣಾ ಶಕ್ತಿಯಾಗಿದ್ದಾರೆ. ಕಾರ್ಯಕರ್ತರು ಮೋದಿ ಸರ್ಕಾರದ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವುದು, ಸೌಲಭ್ಯ ತಲುಪಿಸುವ ಮೂಲಕ ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕು ಎಂದರು. ಮುಂಬರುವ ಗ್ರಾಪಂ ಚುನಾವಣೆಯಲ್ಲಿ ಯುವಕರಿಗೆ ಆದ್ಯತೆ ನೀಡಿ, ಆಗ ಪಕ್ಷಕ್ಕೆ ಶಕ್ತಿ ತುಂಬಿದಂತಾಗುತ್ತದೆ ಎಂದು ಜಿಲ್ಲಾಧ್ಯಕ್ಷರನ್ನು ಕೋರಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್ ಮಾತನಾಡಿ, ಕರೊನಾ ವೇಳೆ ಜಿಲ್ಲಾ ಬಿಜೆಪಿ ಯುವ ಮೋರ್ಚಾ 9 ರಕ್ತದಾನ ಶಿಬಿರ ನಡೆಸಿ 2000 ಯೂನಿಟ್ ರಕ್ತ ಸಂಗ್ರಹಿಸಿ ನೀಡಿದೆ ಎಂದರು. ಕುಡಾ ಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಗೆದ್ದಂತೆ ಎಲ್ಲ ಕ್ಷೇತ್ರಗಳಲ್ಲೂ ಪಕ್ಷದ ಶಾಸಕರು ಆಯ್ಕೆಯಾಗುವಂತಾಗಲು ಕಾರ್ಯಕರ್ತರು ಸಂಘಟನೆ ಬಲಪಡಿಸಬೇಕು ಎಂದರು.

    ಬಿಜೆಪಿ ಉಪಾಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ, ಗುರುನಾಥರೆಡ್ಡಿ, ಉಪಾಧ್ಯಕ್ಷರಾದ ನಾರಾಯಣಸ್ವಾಮಿ, ಅರುಣಮ್ಮ, ನಗರಾಧ್ಯಕ್ಷ ತಿಮ್ಮರಾಯಪ್ಪ, ಕೋರ್‌ಕಮಿಟಿ ಸದಸ್ಯ ವಿಜಯಕುಮಾರ್, ಕಾರ್ಯದರ್ಶಿ ಮಂಜುನಾಥ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಆರ್. ಬಾಲಾಜಿ, ಪ್ರಧಾನ ಕಾರ್ಯದರ್ಶಿ ತೇಜೇಶ್, ಒಬಿಸಿ ಜಿಲ್ಲಾಧ್ಯಕ್ಷ ನಾಗರಾಜ್, ವಕ್ಫ್ ಬೋರ್ಡ್ ಅಧ್ಯಕ್ಷ ಜಾಮೀಲ್ ಉಲ್ಲಾ ಖಾನ್, ನಗರಸಭೆ ಸದಸ್ಯರಾದ ಶ್ರೀನಾಥ್, ಶ್ರೀಗಂಧ ರಾಜೇಶ್, ಕುಡಾ ಸದಸ್ಯ ಅಪ್ಪಿ ನಾರಾಯಣಸ್ವಾಮಿ, ಯುವ ಮೋಚಾ ರಾಜ್ಯ ಉಪಾಧ್ಯಕ್ಷ ವಸಂತ್ ಕಾರ್ಯದರ್ಶಿ ಅರವಿಂದ್, ಮುಖಂಡ ಕೆಂಬೋಡಿ ನಾರಾಯಣಸ್ವಾಮಿ ಇದ್ದರು.

    ಶಿಷ್ಟಾಚಾರ ತಿಳಿದಿಲ್ಲವೇ?: ಯುವ ಮೋರ್ಚಾ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಾಗಿರಬೇಕು. ಆದರೆ ಇಲ್ಲಿನ ಕಾರ್ಯಕರ್ತರಲ್ಲಿ ಶಿಸ್ತು ಕಾಣಿಸುತ್ತಿಲ್ಲ. ಇದು ಚುನಾವಣಾ ಪ್ರಚಾರ ಸಭೆಯಲ್ಲ. ಸಭೆಯಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ಶಿಷ್ಟಾಚಾರವೂ ತಿಳಿದಿಲ್ಲ ಎಂದರೆ ಹೇಗೆ ಎಂದು ಸಂದೀಪ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts