More

    ಬಿಜೆಪಿ ಪ್ರಣಾಳಿಕೆ ರಾಜ್ಯ ಮತ್ತು ಜನ ಸಾಮಾನ್ಯರ ಅಭಿವೃದ್ಧಿಗೆ ಪೂರಕ

    ಚಿಕ್ಕಬಳ್ಳಾಪುರ: ರಾಜ್ಯದ ಆರು ಲಕ್ಷ ಜನರ ಸಲಹೆ ಪಡೆದು ರಚನೆಗೊಂಡಿರುವ ಬಿಜೆಪಿ ಚುನಾವಣಾ ಪ್ರಣಾಳಿಕೆಯು ರಾಜ್ಯ ಮತ್ತು ಜನ ಸಾಮಾನ್ಯರ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

    ತಾಲೂಕಿನ ಕಮ್ಮಗುಟ್ಟಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಚಾರ ಕಾರ್ಯಕ್ರಮವನ್ನು ಉದ್ದೇಶಿಸಿ, ಅನ್ನ, ಆರೋಗ್ಯ ಅಭಿವೃದ್ಧಿ, ಅಕ್ಷರ, ಅಭಯ ಮತ್ತು ಆದಾಯ ಎಂಬ ಆರು ಸೂತ್ರಗಳಡಿ ರಾಜ್ಯದ ಪ್ರತಿ ವರ್ಗದ ಜನರಿಗೂ ಅನುಕೂಲವಾಗುವ ಪ್ರಣಾಳಿಕೆಯನ್ನು ಘೋಷಿಸಲಾಗಿದೆ. ಇದಕ್ಕೆ ರೈತರು, ಮಹಿಳೆಯರು, ಕೂಲಿ ಕಾರ್ಮಿಕರು, ವೈದ್ಯರು, ವಿಜ್ಞಾನಿಗಳು ಸೇರಿದಂತೆ ಎಲ್ಲ ವರ್ಗದವರಿಂದ ಸಲಹೆಗಳನ್ನು ಪಡೆಯಲಾಗಿದೆ ಎಂದರು.

    ಪ್ರಸ್ತುತ ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ತಿಂಗಳಿನಿಂದಲೇ 7 ರೂಪಾಯಿಗೆ ಹೆಚ್ಚಿಸಲಾಗುತ್ತದೆ. ರೈತರಿಂದ ಹಾಲನ್ನು ಸರ್ಕಾರ ಖರೀದಿಸಿ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಮನೆಯ ಮಹಿಳೆಯರು, ಮಕ್ಕಳಿಗಾಗಿ ಉಚಿತವಾಗಿ ವಿತರಿಸಲಾಗುತ್ತದೆ. ಇದರಿಂದ ಹಾಲು ಉತ್ಪಾದಕರ ಆರ್ಥಿಕಾಭಿವೃದ್ಧಿಗೆ ಉತ್ತೇಜನ ಸಿಗಲಿದೆ ಎಂದರು.

    ಅಭಿವೃದ್ಧಿಯು ಕರೆಂಟ್, ಬಸ್ ಪ್ರಯಾಣ ಸೇರಿದಂತೆ ಹಲವು ಸೇವೆಗಳು ಎಂಬುದಾಗಿ ಸುಳ್ಳು ಹೇಳುವುದಲ್ಲ. ಈಗಾಗಲೇ 11 ರಾಜ್ಯಗಳಲ್ಲಿ ಸಾಕಷ್ಟು ಭರವಸೆಗಳನ್ನು ಕಾಂಗ್ರೆಸ್ ನೀಡಿದ್ದರೂ ಈಡೇರಿಸಿಲ್ಲ. ಇದಕ್ಕೆ ಯಾವ ರಾಜ್ಯದಲ್ಲಿಯೂ ಜನರು ಅವರನ್ನು ನಂಬುತ್ತಿಲ್ಲ ಎಂದರು.

    ಪ್ರಧಾನಿ ನರೇಂದ್ರ ಮೋದಿ ಹೇಳಿದ್ದನ್ನು ಮಾತ್ರವಲ್ಲದೆ, ಜನಪರ ಹೊಸ ಭರವಸೆಗಳನ್ನೂ ಈಡೇರಿಸಿದ್ದಾರೆ. ಇದರಿಂದಾಗಿ ದೇಶದಾದ್ಯಂತ ಬಿಜೆಪಿಯ ಮೇಲೆ ಹೆಚ್ಚಿನ ಒಲವು ಇದೆ ಎಂದರು.

    ಕಾಂಗ್ರೆಸ್ 10 ಕೆಜಿ ಅಕ್ಕಿ ನೀಡುವ ಭರವಸೆಯನ್ನು ಡಾನ್ಸ್ ಮಾಡುತ್ತ ಹೇಳುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಜನರಿಗೆ ಮಧುಮೇಹ ಸೇರಿದಂತೆ ಹಲವು ಅನಾರೋಗ್ಯ ಸಮಸ್ಯೆಗಳು ತೀವ್ರವಾಗಿ ಕಾಡುತ್ತಿವೆ. ಹಾಗಾಗಿ ಅನ್ನ ತಿನ್ನುವುದನ್ನು ಜನ ಕಡಿಮೆ ಮಾಡುತ್ತಿದ್ದಾರೆ. ಆದರೆ, ಬಿಜೆಪಿ ಸರ್ಕಾರವು ಮಹಿಳೆಯರ, ಮಕ್ಕಳ ಆರೋಗ್ಯಕ್ಕೆ ಸಿರಿಧಾನ್ಯಗಳ ವಿತರಣೆಯ ಭರವಸೆ ನೀಡಿದೆ. ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿಯ ಜತೆಗೆ, 5 ಕೆಜಿ ಸಿರಿಧಾನ್ಯ, ಪ್ರತಿನಿತ್ಯ ಬಡವರ ಮನೆಗೆ ನಂದಿನಿ ಹಾಲು ಸಿಗುತ್ತದೆ. ಇದರಿಂದ ರಾಜ್ಯದಲ್ಲಿ ರಕ್ತ ಹೀನತೆ ಮತ್ತು ಅಪೌಷ್ಟಿಕತೆ ಸಮಸ್ಯೆ ನಿವಾರಣೆಯಾಗಲಿದೆ ಎಂದರು.

    ಬಿಜೆಪಿ ಸರ್ಕಾರ ರಚನೆಯಾದ ಮೊದಲ ತಿಂಗಳಿನಿಂದಲೇ ಪ್ರಣಾಳಿಕೆಯಲ್ಲಿನ ಎಲ್ಲ ಸೌಲಭ್ಯಗಳನ್ನು ಜನರಿಗೆ ದೊರಕಿಸಿಕೊಡಲಾಗುತ್ತದೆ. ಮಹಿಳೆಯರ, ಮಕ್ಕಳ ಆರೋಗ್ಯಕ್ಕಾಗಿ ಸಂಪೂರ್ಣ ಆರೋಗ್ಯ ಆಹಾರ ಕಿಟ್ ಸಿಗಲಿದೆ ಎಂದರು.
    ಬಡವರ ಮನೆಗಳ ನಿರ್ಮಾಣಕ್ಕಾಗಿ ಪ್ರಸ್ತುತ ಸರ್ಕಾರ ನೀಡುತ್ತಿರುವ ಅನುದಾನ ಕಡಿಮೆ ಇದ್ದು, ಇದಕ್ಕೆ ಪ್ರತಿ ಮನೆಗೆ 5 ಲಕ್ಷ ರೂ. ಅನುದಾನ ಮಂಜೂರು ಮಾಡಲಾಗುತ್ತದೆ. ಕ್ಷೇತ್ರದಲ್ಲಿ ಉಚಿತ ನಿವೇಶನ ಪಡೆದಿರುವ ಎಲ್ಲ ಫಲಾನುಭವಿಗಳಿಗೂ ಗುಣಮಟ್ಟದ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದರು.

    ಕೇಂದ್ರ ಸರ್ಕಾರವು ದೇಶದ ಯಾವುದೇ ರಾಜ್ಯಗಳಿಗಿಂತಲೂ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡಿದೆ. ರಾಜ್ಯದಲ್ಲಿ ವರ್ಷಕ್ಕೆ 2 ಲಕ್ಷ ಮನೆ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಇದರೊಂದಿಗೆ 5 ವರ್ಷದಲ್ಲಿ 10 ಲಕ್ಷ ಮನೆಗಳನ್ನು ನಿರ್ಮಿಸಲಾಗುತ್ತದೆ ಎಂದರು.

    ಕೃಷಿ ಸಮ್ಮಾನ್ ಯೋಜನೆಯಡಿ ಈಗಾಗಲೇ ಪ್ರತಿ ರೈತನ ಖಾತೆಗೆ ವಾರ್ಷಿಕ 10 ಸಾವಿರ ರೂ. ಮತ್ತು ರೈತರ ಮಕ್ಕಳಿಗೆ ವಿದ್ಯಾನಿದಿ ಯೋಜನೆಯಡಿ 11 ಲಕ್ಷ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ಇದು ನಮ್ಮ ಗ್ಯಾರಂಟಿ, ಬಿಜೆಪಿ ಹೇಳುವುದನ್ನು ಮಾಡಲಿದೆ ಎಂಬ ನಂಬಿಕೆ ಜನರಿಗಿದೆ ಎಂದರು.

    ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್, ಜಿ.ಪಂ.ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಮಾಜಿ ಶಾಸಕಿ ಅನಸೂಯಮ್ಮ ನಟರಾಜನ್, ಮುಖಂಡರಾದ ಬಿ.ಎನ್.ಗಂಗಾಧರ್, ಎಚ್.ವಿ.ಗೋವಿಂದಸ್ವಾಮಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts