More

    ಅಭಿವೃದ್ಧಿ ಮರೆತ ಜೆಡಿಎಸ್, ಕಾಂಗ್ರೆಸ್: ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಟೀಕೆ

    ಮಂಡ್ಯ: ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ಜಿಲ್ಲೆಯ ಶಾಸಕರನ್ನು ಲೆಕ್ಕಕ್ಕೆ ಮಾತ್ರ ಇಟ್ಟುಕೊಂಡಿದ್ದಾರೆ. ಆದರೆ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಟೀಕಿಸಿದ್ದಾರೆ.
    ಮಂಡ್ಯ ಕೃಷಿಯಾಧಾರಿತ ಜಿಲ್ಲೆಯಾಗಿರುವುದರಿಂದ ಅದಕ್ಕೆ ಪೂರಕವಾದ ಕೈಗಾರಿಕೆ ತರಬಹುದಿತ್ತು. ಪ್ರವಾಸೋದ್ಯಮಕ್ಕೂ ಹೆಚ್ಚಿನ ಅವಕಾಶವಿತ್ತು. ಈ ಬಗ್ಗೆ ಜೆಡಿಎಸ್, ಕಾಂಗ್ರೆಸ್ ಗಮನಹರಿಸಿದ್ದರೆ ಹೋಟೆಲ್ ಸೇರಿದಂತೆ ವ್ಯಾಪಾರ ವಹಿವಾಟು ಸಾಧ್ಯವಾಗುತ್ತಿತ್ತು. ಜತೆಗೆ ಉದ್ಯೋಗ ಸೃಷ್ಠಿಯೂ ಆಗುತ್ತಿತ್ತು. ಆದರೆ ಈವರೆಗೆ ಅಧಿಕಾರ ನಡೆಸಿದ ಎರಡು ಪ್ರಮುಖ ಪಕ್ಷಗಳು ಆ ಬದ್ಧತೆ ತೋರಿಸದಿರುವುದು ಬೇಸರದ ವಿಷಯ ಎಂದಿದ್ದಾರೆ.
    ಎಚ್.ಡಿ.ಕುಮಾರಸ್ವಾಮಿ ಅವರಿಗೆ ರಾಜ್ಯ ರಾಜಕಾರಣ ಮತ್ತು ಕೇವಲ ಅಧಿಕಾರದ ರಾಜಕಾರಣದತ್ತ ಗಮನವೇ ಹೊರತು ಮಂಡ್ಯದ ಅಭಿವೃದ್ಧಿಯ ಚಿಂತೆಯಿಲ್ಲ. ಇನ್ನು ಕಾಂಗ್ರೆಸ್ ಒಳಜಗಳದಿಂದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಐದು ವರ್ಷ ಕಾಲ ಕಳೆದರು. ಮಾತ್ರವಲ್ಲದೆ ಬಿಜೆಪಿ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಾ ಹಾಗೂ ರಾಜ್ಯದ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡದೇ ಕಾಲಹರಣ ಮಾಡಿದರು ಎಂದು ವಾಗ್ದಾಳಿ ನಡೆಸಿದ್ದಾರೆ.
    ಈ ಎರಡು ಪಕ್ಷದ ದುರಾಡಳಿತದಿಂದ ಬೇಸತ್ತಿರುವ ಜಿಲ್ಲೆಯ ಜನರು ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಯನ್ನು ಬೆಂಬಲಿಸುವ ನಿರ್ಧಾರ ಮಾಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾಯಕ ಮತ್ತು ಆಡಳಿತದ ವೈಖರಿ ಗಮನಿಸಿ ಜಿಲ್ಲೆಯ ಏಳು ಕ್ಷೇತ್ರದಲ್ಲಿ ಬಿಜೆಪಿ ಪರ ಮತ ಚಲಾಯಿಸಲಿದ್ದಾರೆ. ಪ್ರಮುಖವಾಗಿ 11 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ, ಭೂರಹಿತ ಮಹಿಳೆಯರಿಗೆ 1 ಸಾವಿರ ರೂ ಮಾಶಾಸನ, 15 ಸಾವಿರ ಶಿಕ್ಷಕರ ನೇಮಕಾತಿ, 11 ಸಾವಿರ ಜನ ಪೌರಕಾರ್ಮಿಕರ ನೇಮಕಾತಿ, ಮೀಸಲಾತಿಯಲ್ಲಿ ಸಾಮಾಜಿಕ ನ್ಯಾಯ ಒದಗಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಸಾಧನೆಯ ಮಾನದಂಡದಲ್ಲಿ ಬಿಜೆಪಿಗೆ ಬೆಂಬಲ ನೀಡಲಿದ್ದಾರೆ. ಇದರೊಂದಿಗೆ 2018ರ ಚುನಾವಣೆ ಫಲಿತಾಂಶ ಕಾಂಗ್ರೆಸ್‌ಗೆ ಮರುಕಳಿಸಲಿದೆ ಎಂದು ಪ್ರಕಟಣೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts