More

    ಬಿಜೆಪಿಯ ಕಾರ್ಯಕರ್ತ ಪ್ರಧಾನಿಯಾಗಬಲ್ಲ

    ಬೆಳಗಾವಿ: ಪಕ್ಷದ ಸಮಾನ್ಯ ಕಾರ್ಯಕರ್ತನೂ ಸಹ ದೇಶದ ಪ್ರಧಾನ ಮಂತ್ರಿಯಂತಹ ಉನ್ನತ ಹುದ್ದೆಗೇರಲು ಬಿಜೆಪಿಯಲ್ಲಿ ಮಾತ್ರ ಅವಕಾಶವಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.

    ನಗರದ ಧರ್ಮನಾಥ ಸಭಾಭವನದಲ್ಲಿ ಬಿಜೆಪಿಯಿಂದ ಬುಧವಾರ ಆಯೋಜಿಸಿದ್ದ ಬೆಳಗಾವಿ ಗ್ರಾಮೀಣ, ಖಾನಾಪುರ, ಕಿತ್ತೂರು, ಬೈಲಹೊಂಗಲ ತಾಲೂಕು ಹಾಗೂ ಗ್ರಾಮಾಂತರ ಜಿಲ್ಲೆಯ ‘ಗ್ರಾಮ ಸ್ವರಾಜ್ ಸಮಾವೇಶ’ದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಬಿಜೆಪಿ ಸಂಘಟನಾ ತತ್ತ್ವದಲ್ಲಿ ಕಾರ್ಯನಿರ್ವಹಿಸುತ್ತದೆ. ಬೂತ್ ಮಟ್ಟದ ಕಾರ್ಯಕರ್ತರನ್ನೂ ಸಹ ನಾಯಕರನ್ನಾಗಿಸಲು ದೇಶದ ಎಲ್ಲ ಸ್ಥಳೀಯ ಚುನಾವಣೆಗಳ ಪ್ರಚಾರಕ್ಕೆ ರಾಜ್ಯ ಹಾಗೂ ರಾಷ್ಟ್ರ ನಾಯಕರನ್ನು ಕರೆತರಲಾಗುತ್ತಿದೆ ಎಂದು ತಿಳಿಸಿದರು.

    ಕಾಂಗ್ರೆಸ್ ಮುಳುಗುತ್ತಿರುವ ಹಡಗು: ದೇಶದಲ್ಲಿ ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಇನ್ನು ಜೆಡಿಎಸ್, ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಅತ್ಯುತ್ತಮ ಭವಿಷ್ಯ ಇದೆ.

    ಕಾಂಗ್ರೆಸ್‌ನಲ್ಲಿ ನೆಹರು ಅವರಿಂದ ಹಿಡಿದು ಈಗಿನ ಪ್ರಿಯಾಂಕಾ-ಪಪ್ಪು ವರೆಗೂ ಕುಟುಂಬ ರಾಜಕಾರಣ ಮುಂದುವರಿದಿದೆ. ಆದರೆ, ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲ ಎಂದು ಟೀಕಿಸಿದರು. ಒಂದೇ ಕುಟುಂಬಕ್ಕೆ ಜೋತು ಬಿದ್ದಿರುವ ಕಾಂಗ್ರೆಸ್ ವಿರುದ್ಧ ಸ್ವಪಕ್ಷೀಯರೇ ಆಕ್ಷೇಪ ವ್ಯಕ್ತಪಡಿಸಿ, ಬಿಜೆಪಿ ಕಾರ್ಯಕರ್ತರನ್ನು ನೋಡಿ ಕಲಿಯಿರಿ ಎನ್ನುತ್ತಿದ್ದಾರೆ ಎಂದು ಸಚಿವ ಶೆಟ್ಟರ್ ಹೇಳಿದರು.

    ಸಂಘಟನೆಯಲ್ಲಿ ತೊಡಗಿ: ಸಮಾವೇಶ ಉದ್ಘಾಟಿಸಿದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮಾತನಾಡಿ, ಗ್ರಾಮ ಪಂಚಾಯಿತಿ ಚುನಾವಣೆಯನ್ನು ಪಕ್ಷದ ಕಾರ್ಯಕರ್ತರು ಹಗುರವಾಗಿ ತೆಗೆದುಕೊಳ್ಳಬಾರದು. ಎಲ್ಲ ಗ್ರಾಪಂಗಳಲ್ಲೂ ಕನಿಷ್ಠ 80ರಷ್ಟು ಸ್ಥಾನದಲ್ಲಿ ಬಿಜೆಪಿ ಬೆಂಬಲಿತರೇ ಗೆಲ್ಲಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಂಘಟನೆಯಲ್ಲಿ ತೊಡಗಬೇಕು. ಬಿಜೆಪಿ ಯಾವುದೇ ಜಾತಿ, ಧರ್ಮ ಸೇರಿದಂತೆ ಯಾವುದೇ ಒಂದು ಕುಟುಂಬಕ್ಕೆ ಸೀಮಿತವಾಗಿಲ್ಲ. ಪ್ರಾಮಾಣಿಕ ಹಾಗೂ ನಿಷ್ಠಾವಂತ ಕಾರ್ಯಕರ್ತರನ್ನು ಪರಿಗಣಿಸುವ ಶಿಸ್ತು ಹಾಗೂ ಸಂಘಟನಾ ಸಿದ್ಧಾಂತದ ಪಕ್ಷವಾಗಿದೆ ಎಂದರು.

    ನಾಯಕರನ್ನಾಗಿಸುವ ಕೆಲಸ: ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಎಲ್ಲ ರಾಜಕೀಯ ಪಕ್ಷಗಳ ಕಾರ್ಯಕರ್ತರೂ ನಾಯಕರ ಚುನಾವಣೆಯನ್ನು ಮಾಡುತ್ತಾರೆ. ಆದರೆ, ಬಿಜೆಪಿಯಲ್ಲಿ ಮಾತ್ರ ಕಾರ್ಯಕರ್ತರನ್ನು ಬೆಳೆಸುವ ನಿಟ್ಟಿನಲ್ಲಿ ನಾಯಕರುಗಳೇ ಗ್ರಾಮ ಪಂಚಾಯಿತಿ ಸೇರಿದಂತೆ ಸ್ಥಳೀಯ ಚುನಾವಣೆಗಳಲ್ಲಿ ಕೆಲಸ ಮಾಡಿ ಅವರನ್ನು ಅಧಿಕಾರಕ್ಕೆ ತರುವ ಪರಂಪರೆ ಹುಟ್ಟುಹಾಕಿದೆ ಎಂದು ತಿಳಿಸಿದರು.

    ಅರ್ಹರನ್ನೇ ಬೆಂಬಲಿಸಿ: ಪಕ್ಷ ಅಂದ ಮೇಲೆ ಸರಿ, ತಪ್ಪುಗಳು ಇದ್ದೇ ಇರುತ್ತವೆ. ನಾಯಕರಾದವರು ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಹಳ್ಳಿಗಳ ಪ್ರತಿ ವಾರ್ಡ್‌ಗಳಲ್ಲಿಯೂ ಸ್ಥಳೀಯರು ಬಯಸುವಂತಹ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಬೇಕು. ಕೇವಲ ತಮ್ಮ ಆಪ್ತರನ್ನೇ ಹುರಿಯಾಳಾಗಿಸದೇ ಮತದಾರರಿಗೆ ಸರ್ಕಾರಿ ಯೋಜನೆಗಳನ್ನು ಸಕಾಲ ತಲುಪಿಸುವವರಿಗೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿ ಬಿಜೆಪಿ ಬಹುತೇಕ ಎಲ್ಲ ಕ್ಷೇತ್ರದಲ್ಲೂ ಮುನ್ನೆಡೆ ಸಾಧಿಸಿದೆ. ಆದರೆ, ಬೆಳಗಾವಿ, ಬೈಲಹೊಂಗಲ ಹಾಗೂ ಖಾನಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿಲ್ಲ. ಈ ಮೂರು ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಕವಟಗಿಮಠ ತಿಳಿಸಿದರು.

    ಗ್ರಾಮ ಸ್ವರಾಜ್ ಸಮಾವೇಶದ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಬಿಜೆಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವಿ ಹಿರೇಮಠ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಸದ ಅಣ್ಣಾಸಾಹೇಬ ಜೊಲ್ಲೆ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಶಾಸಕ ಮಹಾಂತೇಶ ದೊಡ್ಡಗೌಡರ, ಬಿಜೆಪಿ ಉಪಾಧ್ಯಕ್ಷ ಎಂ.ರಾಜೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ಧರಾಜು, ರಾಜ್ಯ ಕಾರ್ಯಕಾರಿಣಿ ಸದಸ್ಯ ಸಚಿವ ಶಶಿಕಾಂತ ನಾಯಕ, ಜಗದೀಶ ಮೆಟಗುಡ್ಡ, ಸುಭಾಷ ಪಾಟೀಲ, ಧನಶ್ರೀ ಸರದೇಸಾಯಿ, ಧನಂಜಯ ಜಾಧವ್, ಡಾ.ಬಸವರಾಜ ಕೊರಣ್ಣವರ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

    ಬಿಜೆಪಿಯಲ್ಲಿ ಎಲ್ಲರಿಗೂ ಸಮಾನತೆ ಇದೆ

    ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಯಾವುದೇ ಜಾತಿ, ಧರ್ಮದವರಿದ್ದರೂ ಭೇದ-ಭಾವ ತೋರದೆ ಸಮಾನತೆ ತೋರುವ ಏಕೈಕ ಪಕ್ಷ ಭಾರತೀಯ ಜನತಾ ಪಕ್ಷ. ಬಿಜೆಪಿಯಲ್ಲಿ ಎಲ್ಲರೂ ಒಂದೇ. ಸಣ್ಣ ಕಾರ್ಯಕರ್ತರಿಗೂ ಇಲ್ಲಿ ರಾಷ್ಟ್ರ ಮಟ್ಟದ ನಾಯಕನಾಗಿ ಬೆಳೆಯಲು ಅವಕಾಶ ನೀಡುತ್ತದೆ ಎಂದರು. ಭಾರತರತ್ನ, ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ಪಾಜಪೇಯಿ ಅವರು ದೇಶದ ಪ್ರಗತಿಗೆ ವೇಗ ನೀಡಿದ್ದರು. ಇದೀಗ ವಾಜಪೇಯಿ ಅವರು ಕಂಡ ದೇಶಾಭಿವೃದ್ಧಿಯ ಕನಸು ಸಾಕಾರಗೊಳಿಸುವ ಕಾರ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ತೊಡಗಿದ್ದಾರೆ ಎಂದರು. ಮಹಿಳೆಯರು ಸಹ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿ ಮುಂದೆ ಬರಬೇಕು. ಪಂಚಾಯಿತಿ ಮಟ್ಟದಲ್ಲಿ ಶೇ.50 ಮೀಸಲಾತಿ ಇದ್ದರೂ ಸಭೆಯಲ್ಲಿ ಮಾತ್ರ ಕೇವಲ ಶೇ. 5 ಮಹಿಳೆಯರು ಪಾಲ್ಗೊಂಡಿರುವುದು ಬೇಸರದ ಸಂಗತಿ. ಮುಂದಿನ ದಿನಗಳಲ್ಲಿ ಮಹಿಳಾ ಕಾರ್ಯಕರ್ತರು ರಾಜಕೀಯ ಚಟುವಟಿಕೆಗಳಲ್ಲಿ ಹೆಚ್ಚು ಪಾಲ್ಗೊಳ್ಳಬೇಕು ಎಂದರು.

    ಮುಂದಿನ ದಿನಗಳಲ್ಲಿ ತ್ರಿವಳಿ ನಗರ ಖ್ಯಾತಿ

    ಜಿಲ್ಲೆಯಲ್ಲಿ ದಿ. ಸುರೇಶ ಅಂಗಡಿ ಅವರು ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರು. ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೊಳಿ ಅವರು ತಮ್ಮ ಇಲಾಖೆಯ ವಿವಿಧ ಕಾಮಗಾರಿಗಳಿಗೆ ವೇಗ ನೀಡಿದ್ದಾರೆ. ಮಹದಾಯಿ ನೀರು ಬಳಕೆಗೆ ನೋಟಿಫಿಕೇಷನ್ ಹೊರಡಿಸಿದ್ದು, ಬಿಜೆಪಿ ನಾಯಕರಿಂದ ಬೆಳಗಾವಿಯ ಅಭಿವೃದ್ಧಿ ಶರವೇಗದಲ್ಲಿದೆ. ಕಳಸಾ ಬಂಡೂರಿಗೆ 500 ಕೋಟಿ ರೂ. ಅನುದಾನ ನೀಡಿದೆ. ಕೆಲ ತಾಂತ್ರಿಕ ಅಡಚಣೆಗಳಿದ್ದು, ಶೀಘ್ರ ಬಗೆಹರಿಸಲು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಸಚಿವ ರಮೇಶ ಕಾರ್ಯವೈಖರಿಗೆ ಜಗದೀಶ ಶೆಟ್ಟರ್ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಭಾಗದಲ್ಲಿ ನಡೆಯುತ್ತಿರುವ ಕೈಗಾರಿಕಾ ಅಭಿವೃದ್ಧಿಯಿಂದ ಮುಂದಿನ ದಿನಗಳಲ್ಲಿ ಅವಳಿ ನಗರ ಎಂದು ಹುಬ್ಬಳ್ಳಿ-ಧಾರವಾಡ ಮಾತ್ರವಲ್ಲ; ಬೆಳಗಾವಿಯೂ ಸೇರಿ ತ್ರಿವಳಿ ನಗರ ಎಂಬ ಜನಪ್ರಿಯತೆಗೆ ಸಾಕ್ಷಿಯಾಗುತ್ತದೆ ಎಂದು ಹೇಳಿದರು.

    ಚುನಾವಣೆ ನಂತರ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಕಗ್ಗಂಟಾಗುವ, ಕಿರಿಕಿರಿ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಪಾರದರ್ಶಕತೆ ಕಾಪಾಡಿಕೊಂಡು ಮುಖಂಡರ ಆಜ್ಞೆ ಪಾಲಿಸುವ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಮಣೆ ಹಾಕಬೇಕು.
    | ಮಹಾಂತೇಶ ದೊಡ್ಡಗೌಡರ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts