More

    ಜನ-ಜಾನುವಾರು ರಕ್ಷಣೆಗೆ ವ್ಯೆಹ

    ಬೆಳಗಾವಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ನದಿಗಳು ಉಕ್ಕಿ ಹರಿಯುತ್ತಿದ್ದು, ಯಾವುದೇ ಕ್ಷಣದಲ್ಲಾದರೂ ಪ್ರವಾಹ ಸಂಭವಿಸಬಹುದು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಹಾಗೂ ನದಿ ತೀರಗಳ ಜನ-ಜಾನುವಾರುಗಳ ರಕ್ಷಣೆಗೆ ಬೆಳಗಾವಿ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.
    ಪ್ರವಾಹ ಪರಿಸ್ಥಿತಿ ಎದುರಾದರೆ ಸಮರ್ಥವಾಗಿ ನಿಭಾಯಿಸಲು 573 ಪರಿಹಾರ ಕೇಂದ್ರ ಹಾಗೂ 230 ಗೋ ಶಾಲೆಗಳನ್ನು ಜಿಲ್ಲಾಡಳಿತ ಗುರುತಿಸಿದೆ. ಶನಿವಾರ ಮಳೆಯ ಅಬ್ಬರ ತುಸು ಇಳಿದಿದ್ದರೂ ನದಿಗಳು ಇನ್ನೂ ಉಕ್ಕಿ ಹರಿಯುತ್ತಿರುವ ಕಾರಣ ಮುನ್ನೆಚ್ಚರಿಕೆಯ ಕ್ರಮವಾಗಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಅಗತ್ಯ ಸಿದ್ಧತೆ ಮಾಡಿಸಿದ್ದಾರೆ.

    ಅಗತ್ಯ ವ್ಯವಸ್ಥೆ: ಮಹಾರಾಷ್ಟ್ರ ಮತ್ತು ಜಿಲ್ಲೆಯಲ್ಲಿಯೂ ನಿರಂತರ ಮಳೆಯಾದ ಕಾರಣ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ ನದಿ ಹಾಗೂ ಬಳ್ಳಾರಿ ನಾಲಾ ತುಂಬಿ ಹರಿಯುತ್ತಿವೆ. ಈ ನಡುವೆ ಮಹಾರಾಷ್ಟ್ರ ಜಲಾಶಯಗಳಿಂದ ನೀರು ಬಿಟ್ಟರೆ ಪ್ರವಾಹ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನದಿ ದಡದ ಗ್ರಾಮಗಳು ಮತ್ತು ನದಿ ತೀರದ ಜನವಸತಿ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಜನ-ಜಾನುವಾರುಗಳ ರಕ್ಷಣೆಗೆ ಜನರ ಸ್ಥಳಾಂತರಕ್ಕೆ ತುರ್ತು ಸಂದರ್ಭಕ್ಕಾಗಿ 27 ಬೋಟ್ ವ್ಯವಸ್ಥೆ ಮಾಡಿದೆ. ನದಿ ತೀರದ ಪ್ರವಾಹ ಭಯ ಇರುವ ಜನರು ತಮ್ಮ ಸಾಮಾನು-ಸರಂಜಾಮು, ಜಾನುವಾರುಗಳೊಂದಿಗೆ ಸುರಕ್ಷಿತ ಜಾಗಕ್ಕೆ ತೆರಳುತ್ತಿದ್ದಾರೆ.

    458 ಮನೆಗಳಿಗೆ ಹಾನಿ: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ 458 ಮನೆಗಳಿಗೆ ಹಾನಿಯಾಗಿದೆ. 29 ಜಾನುವಾರು ಮತ್ತು 7 ಜನರು ಮೃತಪಟ್ಟಿದ್ದಾರೆ. ಅಲ್ಲದೆ, 2 ಸಾವಿರ ಹೆಕ್ಟೇರ್‌ಗೂ ಅಧಿಕ ಕೃಷಿ ಪ್ರದೇಶದಲ್ಲಿನ ಬೆಳೆಗಳು ಜಲಾವೃತಗೊಂಡು ಹಾನಿಯಾಗಿವೆ.

    ಎನ್‌ಡಿಆರ್‌ಎಫ್ ತಂಡ: ಅಥಣಿ- 11, ಕಾಗವಾಡ- 1, ಚಿಕ್ಕೋಡಿ- 6, ರಾಯಬಾಗ- 1, ಕಿತ್ತೂರು- 1, ಎನ್‌ಡಿಆರ್‌ಎಫ್‌ನ- 4, ಅಗ್ನಿಶಾಮಕ- 3 ಸೇರಿದಂತೆ ಒಟ್ಟು 27 ಬೋಟ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಎಸ್‌ಡಿಆರ್ ತಂಡದ 20 ಸಿಬ್ಬಂದಿ ಹಾಗೂ ಎನ್‌ಡಿಆರ್‌ಎಫ್ ತಂಡದ 25 ಸದಸ್ಯರು ಆಯಾ ಪ್ರದೇಶಗಳಲ್ಲಿದ್ದು, ಪ್ರವಾಹದಿಂದ ಯಾವುದೇ ಕೇಡಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.

    ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳ ಪ್ರವಾಹ ಎದುರಿಸಲು ಮತ್ತು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 573 ಕಡೆ ಪರಿಹಾರ ಕೇಂದ್ರ ಗುರುತಿಸಲಾಗಿದೆ. ಅದಕ್ಕಾಗಿ ಸ್ಥಳೀಯ ಮಟ್ಟದಲ್ಲಿ ನೋಡಲ್ ಅಧಿಕಾರಿಗಳ ತಂಡ ರಚಿಸಲಾಗಿದೆ.
    |ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts