More

    ಬಿಕರ್ನಕಟ್ಟೆ ವಾರದ ಸಂತೆ ಬೇಕು ಸರ್ವ ಅನುಕೂಲತೆ

    ಭರತ್ ಶೆಟ್ಟಿಗಾರ್ ಮಂಗಳೂರು
    ನಗರ ವ್ಯಾಪ್ತಿಯಲ್ಲಿ ಸಂತೆ ನಡೆಯುವ ವಾರದ ಸಂತೆ ನಡೆಯುವ ಏಕೈಕ ಪ್ರದೇಶ ಬಿಕರ್ನಕಟ್ಟೆ. ಹಲವು ದಶಕಗಳಿಂದ ಪ್ರತಿ ಶನಿವಾರ ಸಂತೆ ನಡೆಯುವ ಈ ಪ್ರದೇಶ ಕನಿಷ್ಠ ಮೂಲ ಸೌಕರ್ಯದಿಂದಲೂ ವಂಚಿತವಾಗಿದೆ. ಪ್ರದೇಶದ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದರೂ, ಅದಕ್ಕೊಂದು ತಾರ್ಕಿಕ ಅಂತ್ಯ ಸಿಕ್ಕಿಲ್ಲ.

    ಬಿಕರ್ನಕಟ್ಟೆ ಸಂತೆ ಮಂಗಳೂರಿನಲ್ಲೇ ವಿಶೇಷ ಹೆಸರು ಪಡೆದಿದೆ. ನಗರ ವ್ಯಾಪ್ತಿಯಲ್ಲಿ ಸಾಕಷ್ಟು ಮಾರುಕಟ್ಟೆಗಳಿದ್ದರೂ, ಶನಿವಾರ ಬಂತೆಂದರೆ ತರಕಾರಿ ಸಹಿತ ವಿವಿಧ ವಸ್ತು ಖರೀದಿಗೆ ಇಲ್ಲಿಗೆ ಜನ ಆಗಮಿಸುತ್ತಾರೆ. ತಾಜಾ ತರಕಾರಿ, ಹಣ್ಣುಗಳು, ದಿನಸಿ ವಸ್ತುಗಳು, ಕೋಳಿ, ಮಾಂಸ, ಮೀನು, ತಿಂಡಿ ತಿನಿಸುಗಳು, ಸೇರಿದಂತೆ ಹತ್ತು ಹಲವು ಬಗೆಯ ವಸ್ತುಗಳು ಇಲ್ಲಿ ದೊರೆಯುತ್ತವೆ.

    ಪಾರ್ಕಿಂಗ್ ವ್ಯವಸ್ಥೆ ಇಲ್ಲ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್ ಕೆಳಗೆ, ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿ 167ರ ಪಕ್ಕದಲ್ಲಿರುವ ಸಣ್ಣ ಮೈದಾನದಂತಿರುವ ಜಾಗದಲ್ಲೇ ಸಂತೆ ನಡೆಯುತ್ತದೆ. ಹೆದ್ದಾರಿ ಪಕ್ಕ ಇರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಬಸ್, ಲಾರಿ ಸಹಿತ ದೊಡ್ಡ ವಾಹನಗಳು ಓಡಾಡುತ್ತವೆ. ಬೆಳಗ್ಗಿನಿಂದ ಸಾಯಂಕಾಲ ತನಕ ಸಾವಿರಾರು ಗ್ರಾಹಕರು ಸಂತೆಗೆ ಬರುತ್ತಾರೆ. ಬಹುತೇಕ ಜನ ದ್ವಿಚಕ್ರ ವಾಹನ, ಕಾರುಗಳಲ್ಲಿ ಬರುವುದರಿಂದ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ದಟ್ಟಣೆ ಉಂಟಾಗುತ್ತಿದೆ.
    ಫ್ಲೈ ಓವರ್ ತಳಭಾಗದಲ್ಲಿ ಕೆಲವು ವಾಹನಗಳನ್ನಷ್ಟೇ ನಿಲ್ಲಿಸಲು ಅವಕಾಶವಿದೆ. ಇದರಿಂದ ಸರ್ವೀಸ್ ರಸ್ತೆಯಲ್ಲಿ ಸಾಗುವವರಿಗೆ ಸಮಸ್ಯೆಯಾಗುತ್ತದೆ. ಕಾರ್ಮಿಕರಿಗೆ ಶನಿವಾರ ಸಂಬಳ ದಿನವಾಗಿರುವುದರಿಂದ ಸಾಯಂಕಾಲ ವೇಳೆ ಗ್ರಾಹಕರ ಸಂಖ್ಯೆಯೂ ಹೆಚ್ಚಿರುತ್ತದೆ. ಆದ್ದರಿಂದ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಗ್ರಾಹಕರ ಬೇಡಿಕೆಯಾಗಿದೆ.

    ಟಾರ್ಪಾಲಿನ ನೆಲ, ಛಾವಣಿ: ಸಂತೆಯಲ್ಲಿ ಕುಳಿತು ವ್ಯಾಪಾರ ಮಾಡುವವರಿಗೆ ತಮ್ಮ ತರಕಾರಿ ಸಹಿತ ವಸ್ತುಗಳನ್ನು ಕುಳಿತು ಮಾರಾಟ ಮಾಡಲು ಸರಿಯಾದ ವ್ಯವಸ್ಥೆಯಿಲ್ಲ. ನೆಲಕ್ಕೆ ಹಾಗೂ ಮೇಲ್ಭಾಗಕ್ಕೆ ಟಾರ್ಪಾಲು ಹಾಕಿ ಕುಳಿತುಕೊಳ್ಳುತ್ತಾರೆ. ಹೀಗೆ 3ರಿಂದ 4 ಸಾಲುಗಳಲ್ಲಿ ಒತ್ತಾಗಿ ಕುಳಿತುಕೊಳ್ಳುವುದರಿಂದ ಮಧ್ಯದಲ್ಲಿ ಗ್ರಾಹಕರಿಗೆ ಓಡಾಡಲು ಸ್ವಲ್ಪ ಮಾತ್ರ ಜಾಗವಿರುತ್ತದೆ. ಮಳೆಗಾಲದಲ್ಲಂತೂ ನೀರು ಬೀಳದಂತೆ ಹಾಕುವ ಟಾರ್ಪಾಲಿನಲ್ಲಿ ನೀರು ಸಂಗ್ರಹಗೊಂಡು ವ್ಯಾಪಾರಿಗಳು, ಗ್ರಾಹಕರ ಮೇಲೆಯೇ ಬೀಳುತ್ತದೆ ಸಾಮಾನ್ಯವಾಗಿದೆ.

    ವ್ಯಾಪಾರಿಗಳ ಬೇಡಿಕೆ: ಪ್ರತಿ ವಾರ ಸಂತೆ ವ್ಯಾಪಾರಿಗಳಿಂದ ಸುಂಕ ಸಂಗ್ರಹಿಸಲಾಗುತ್ತದೆ. ಸ್ಥಳಾವಕಾಶಕ್ಕೆ ಅನುಸಾರವಾಗಿ 50ರಿಂದ 200 ರೂ. ಪಾವತಿಸಬೇಕಾಗಿದೆ. ಸ್ಥಳೀಯರೊಬ್ಬರು ಇದನ್ನು ಸಂಗ್ರಹಿಸುತ್ತಿದ್ದು, ಬಳಿಕ ಅದನ್ನು ಮಹಾನಗರ ಪಾಲಿಕೆಗೆ ಪಾವತಿಸಲಾಗುತ್ತದೆ. ತಾವು ಪ್ರತಿವಾರ ಸುಂಕ ಪಾವತಿಸುತ್ತಿದ್ದರೂ, ಅದಕ್ಕೆ ತಕ್ಕ ವ್ಯವಸ್ಥೆಯಿಲ್ಲ. ಸಂತೆ ಮಾರುಕಟ್ಟೆಗೆ ಸೂಕ್ತವಾದ ಕಾಂಕ್ರೀಟ್ ನೆಲ, ಶೀಟ್ ಛಾವಣಿ ನಿರ್ಮಿಸಿದರೆ, ಮಳೆ ಬಿಸಿಲಿನ ಸಮಸ್ಯೆಯಿಲ್ಲದೆ ವ್ಯಾಪಾರ ಮಾಡಬಹುದು. ಜತೆಗೆ ಸುಸಜ್ಜಿತ ಶೌಚಗೃಹವನ್ನೂ ನಿರ್ಮಿಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.

    ಬಿಕರ್ನಕಟ್ಟೆ ಸಂತೆ ನಡೆಯುವ ಪ್ರದೇಶದ ಅಭಿವೃದ್ಧಿಗೆ ಯೋಜನೆ ಸಿದ್ಧವಿದೆ. ಆದರೆ ಸ್ಥಳದಲ್ಲಿ ಎರಡು ಹೆದ್ದಾರಿಗಳು ಹಾದು ಹೋಗುವುದರಿಂದ ಮುಂದಿನ ದಿನಗಳಲ್ಲಿ ವಿಸ್ತರಣೆ ಉದ್ದೇಶಕ್ಕೆ ಸಾಕಷ್ಟು ಜಾಗ ಕಳೆದುಕೊಳ್ಳಬೇಕಾದ ಅನಿವಾರ್ಯತೆಯಿದೆ. ಆದ್ದರಿಂದ ಎಷ್ಟು ಜಾಗ ನಷ್ಟವಾಗುತ್ತದೆ ಮತ್ತು ಎಷ್ಟು ಉಳಿಯುತ್ತದೆ ಎಂದು ಅಂತಿಮವಾದ ಬಳಿಕ ಸಾಧ್ಯವಾದರೆ ಸರ್ಕಾರಿ ಅನುದಾನ, ಇಲ್ಲವೇ ಪಿಪಿಪಿ ಮಾದರಿಯಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.
    ಡಿ.ವೇದವ್ಯಾಸ ಕಾಮತ್ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts