More

    ಮತ್ತೊಂದು ಬೈರಮಂಗಲ ಆಗಲಿದೆ ಬಿಡದಿ: ತ್ಯಾಜ್ಯ ವಿದ್ಯುತ್ ಘಟಕ ಕೈಬಿಡಿ, ಮಾಜಿ ಶಾಸಕ ಬಾಲಕೃಷ್ಣ ಒತ್ತಾಯ

    ಬಿಡದಿ: ಬೆಂಗಳೂರಿನ ಕಸವನ್ನು ಬಿಡದಿ ಭಾಗಕ್ಕೆ ತಂದು ತ್ಯಾಜ್ಯ ಘಟಕದಲ್ಲಿ ವಿದ್ಯುತ್ ಉತ್ಪಾದಿಸುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಒತ್ತಾಯಿಸಿದ್ದಾರೆ.

    ಬಿಡದಿ ಖಾಸಗಿ ಹೋಟೆಲ್​ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೈಜ್ಞಾನಿಕ ಕಸ ವಿಲೇವಾರಿ ಘಟಕ ರಾಜ್ಯದಲ್ಲಿ ಎಲ್ಲೂ ಇಲ್ಲ. ಎಲ್ಲೆಲ್ಲಿ ಕಸ ಹಾಕಿದ್ದಾರೆ, ಆ ಭಾಗದ ಜನರ ನೋವು ಎಂತಹುದು ಎಂಬುದನ್ನು ಕಣ್ಣಾರೆ ಕಂಡಿದ್ದೇವೆ. ಅಲ್ಲಿನ ಜನ ಇಂದಿಗೂ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಹಾದಿಯಲ್ಲಿ ಹೋಗುವ ಮಾರಿಯನ್ನು ಮನೆಗೆ ಕರೆತಂದಂತಾಗಿದೆ ಸರ್ಕಾರದ ನಡೆ ಎಂದು ಟೀಕಿಸಿದರು.

    ಬಿಜೆಪಿ ಶಾಸಕರು ಇರುವ ಕಡೆ ವೈಜ್ಞಾನಿಕ ಕಸ ವಿಲೇವಾರಿ ಘಟಕ ಆರಂಭಿಸಿ ಯಶಸ್ವಿಯಾದರೆ ನಂತರ ಬಿಡದಿಯಲ್ಲಿ ಮಾಡಲಿ. ಇಲ್ಲದಿದ್ದರೆ ಎರಡನೇ ಬೈರಮಂಗಲ ಮಾಡುವುದಕ್ಕೆ ಬಿಡುವುದಿಲ್ಲ ಎಂದರು.

    ಸರ್ಕಾರಿ ಕಾರ್ಯಕ್ರಮಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ಬದಿಗಿಟ್ಟು, ಶಾಸಕರು ಮುಖ್ಯಮಂತ್ರಿಗಳ ಜತೆಗೂಡಿ ಶಂಕುಸ್ಥಾಪನೆ ಮಾಡುವ ಅಗತ್ಯ ಏನಿತ್ತು? ಈಗಾಗಲೇ ಬೆಂಗಳೂರಿನ ನೈರ್ಮಲ್ಯದ ಕಲುಷಿತ ನೀರು ಬೈರಮಂಗಲದ ಕೆರೆ ಸೇರಿ ಆ ಭಾಗದ ಜನರು ವಾಸ ಮಾಡದಂತಹ ಸ್ಥಿತಿ ನಿರ್ವಣವಾಗಿದೆ. ಮತ್ತೊಂದು ಮಾರಿಯನ್ನು ಬಿಡದಿಯ ಜನ ಆಹ್ವಾನಿಸಲು ಸಾಧ್ಯವಿಲ್ಲ. ವೈಜ್ಞಾನಿಕ ಕಸ ವಿಲೇ ಮಾಡಿ ವಿದ್ಯುತ್ ಉತ್ಪಾದನೆ ಮಾಡುವ ಉದ್ದೇಶ ಎಲ್ಲಿಯೂ ಸಾಕಾರಗೊಂಡಿಲ್ಲ. ಸೋಲೂರು ಬಂಡೆ ಮಠದಲ್ಲಿ ಕಸದ ಘಟಕ ಆರಂಭಿಸಲು ಹೋಗಿ ಸ್ಥಳೀಯ ಸ್ವಾಮೀಜಿಗಳು, ಸಾರ್ವಜನಿಕರ ತೀವ್ರ ವಿರೋಧದ ನಂತರ ಘಟಕ ಆರಂಭಿಸುವುದನ್ನು ಕೈಬಿಡಲಾಯಿತು ಎಂದು ಬಾಲಕೃಷ್ಣ ನೆನಪಿಸಿದರು.

    ಪುರಸಭೆ ಸದಸ್ಯರಾದ ರಮೇಶ್, ಹರೀಶ್, ಮುಖಂಡ ಅಬ್ಬನಕುಪ್ಪೆ ರಮೇಶ್ ಇದ್ದರು.

    ಸೂಕ್ತ ಜಾಗ ನೋಡಿ ಸ್ಥಳಾಂತರಿಸಿ

    ಬೆಂಗಳೂರಿನ ಕಸ ಬಿಡದಿಯ ಅಭಿವೃದ್ಧಿಗೆ ಮಾರಕವಾಗಿದೆ. ಸಂಸದರು ಮತ್ತು ಚುನಾಯಿತ ಪ್ರತಿನಿಧಿಗಳ ಜತೆ ಸಭೆ ನಡೆಸಬೇಕು. ರಾಜಕಾರಣಿಗಳು ನಿದ್ದೆಯಿಂದ ಹೊರಬಂದು ಹೋರಾಟ ಮಾಡಬೇಕೆಂದು ಸಾರ್ವಜನಿಕರು ಕೇಳುತ್ತಿದ್ದಾರೆ. ಸರ್ಕಾರ ಸೂಕ್ತ ಸ್ಥಳ ಗುರುತಿಸಿ ಘಟಕವನ್ನು ಸ್ಥಳಾಂತರ ಮಾಡದಿದ್ದರೆ ಸಾರ್ವಜನಿಕರ ಪರವಾಗಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಬಾಲಕೃಷ್ಣ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts