More

  ಕೊಟ್ಟ ಸೈಕಲ್ ಏರಲಾಗದ ದುಸ್ಥಿತಿ!

  | ಅಮೋಘ ಡಿ.ಎಂ/ಮಂಜುನಾಥ ಹುಡೇದ ಗೋಕಾಕ

  ಶಾಲಾ ಮಕ್ಕಳಿಗೆ ಅನುಕೂಲವಾಗಲಿ, ಮಕ್ಕಳು ಶಾಲೆಯತ್ತ ಮುಖ ಮಾಡಲಿ ಎಂದು ಸರ್ಕಾರ ಅನೇಕ ರೀತಿಯ ಸೌಲಭ್ಯಗಳನ್ನೊಳಗೊಂಡ ಯೋಜನೆಗಳನ್ನು ಜಾರಿಗೆ ತರುತ್ತಲೇ ಇವೆ. ಅದರಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಣೆಯೂ ಒಂದು. ಆದರೆ, ಸರ್ಕಾರ ವಿತರಿಸಿರುವ ಸೈಕಲ್ ಹತ್ತುವುದೋ ಬೇಡವೋ ಎಂದು ಚಿಂತೆಗೀಡಾಗಬೇಕಾದ ದುಸ್ಥಿತಿಗೆ ವಿದ್ಯಾರ್ಥಿಗಳು ಸದ್ಯ ತಲುಪಿದ್ದಾರೆ.

  ಗೋಕಾಕ ತಾಲೂಕಿನ ಶಿಂಧಿಕುರಬೇಟ ಗ್ರಾಮದಲ್ಲಿ ಅನುದಾನಿತ ಪ್ರೌಢಶಾಲೆ ಮತ್ತು ಸರ್ಕಾರಿ ಬಾಲಕಿಯರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರ ಸೈಕಲ್ ಕೊಟ್ಟಿದ್ದರೂ ಸದುಪಯೋಗವಾಗುತ್ತಿಲ್ಲ. ಅದಕ್ಕೆ ಕಾರಣ ಸಂಪೂರ್ಣ ಹದಗೆಟ್ಟ ರಸ್ತೆಗಳು. ಸರ್ಕಾರವೇನೋ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಿದೆ. ಆದರೆ ಸಂಬಂಧಪಟ್ಟ ಇಲಾಖೆಯವರು ಮತ್ತು ಕ್ಷೇತ್ರದ ಜನಪ್ರತಿನಿಧಿಗಳು ಎರಡೂ ಶಾಲೆ ಸಂಪರ್ಕಿಸುವ ರಸ್ತೆ ನಿರ್ಮಾಣ ಮಾಡುವಲ್ಲಿ ವಿಫಲರಾಗಿರುವುದು ವಿಜಯವಾಣಿ ರಿಯಾಲಿಟಿ ಚೆಕ್‌ನಲ್ಲಿ ಬಯಲಾಗಿದೆ. ನಿತ್ಯ 3 ಕಿಮೀ ದೂರವನ್ನು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲೇ ಕ್ರಮಿಸಿ ಶಾಲೆಗೆ ಹೋಗಿ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಲವು ಬಾರಿ ಸ್ಥಳೀಯ ಜನಪ್ರತಿನಿಧಿಗಳಿಂದ ಹಿಡಿದು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

  ಎಡವಟ್ಟಾಗೋದು ಗ್ಯಾರಂಟಿ: ಹೇಗಾದರೂ ಮಾಡಿ ಶಾಲೆಗೆ ಸೈಕಲ್ ತರಲೆಬೇಕು ಎಂದು ಪಣತೊಟ್ಟ ವಿದ್ಯಾರ್ಥಿಗಳು ಹಲವಾರು ಬಾರಿ ಕಲ್ಲು ಮುಳ್ಳಿನ ದಾರಿಯಲ್ಲಿ ಬಿದ್ದು ಕೈ ಕಾಲು ಮುರಿದುಕೊಂಡ ಉದಾಹರಣೆಗಳೂ ಇವೆ. ನಿತ್ಯ ಎರಡು ಶಾಲೆ ಸೇರಿ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದೇ ಮಾರ್ಗದ ಮೂಲಕ ಸಂಚರಿಸುತ್ತಾರೆ. ಸೈಕಲ್ ಶಾಲೆಗೆ ತರಬೇಕು ಎನ್ನುವ ಆಶಾಭಾವನೆಯನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸಿದರೂ ಸರಿಯಾದ ರಸ್ತೆ ಇಲ್ಲದ ಕಾರಣಕ್ಕೆ ವಿದ್ಯಾರ್ಥಿಗಳು ಸೈಕಲ್ ತರದೆ ಕಾಲ್ನಡಿ ಮೂಲಕ ಶಾಲೆಗೆ ಬರುತ್ತಿದ್ದಾರೆ.

  ಎರಡು ಶಾಲೆ, ಒಂದು ಆಸ್ಪತ್ರೆ ಇರುವ ರಸ್ತೆ: ಗ್ರಾಮದ ಬಬಲಾದಿ ಮಠಕ್ಕೆ ಹೋಗುವ ಮಾರ್ಗ ಹಿಡಿದು ತುಸು ದೂರ ಸಾಗಿದರೆ ಅಲ್ಲಿ ಶಿಂಧಿಕುರಬೇಟ ಮಾಧ್ಯಮಿಕ ಶಾಲೆ ಮತ್ತು ಸರ್ಕಾರಿ ಬಾಲಕಿಯರ ಪ್ರೌಢ ಶಾಲೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುವ ದಾರಿ ಸಿಗುತ್ತದೆ. ಬಬಲಾದಿ ಮಠದ ಮಾರ್ಗವಾಗಿ ಅರಭಾವಿಮಠಕ್ಕೆ ಹೋಗುವ ಮಾರ್ಗ ಸುಧಾರಣೆಯಾಗಿದೆ. ಆದರೆ ಬಲ ತಿರುವು ಪಡೆದು ಈ ಶಾಲೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುವ ದಾರಿ ಸಂಪೂರ್ಣ ಹಾಳಾಗಿದ್ದು ರಸ್ತೆಯ ಅಸ್ತಿತ್ವವೇ ಇಲ್ಲದಂತಾಗಿದೆ. ಹೀಗಾಗಿ ಗ್ರಾಮಸ್ಥರು ಮತ್ತು ಶಿಕ್ಷಕ ವಿದ್ಯಾರ್ಥಿ ವೃಂದ ರಸ್ತೆ ನಿರ್ಮಿಸುವಂತೆ ಮನವಿ ಮಾಡಿದ್ದಾರೆ. ಇನ್ನಾದರೂ ರಸ್ತೆ ಸುಧಾರಣೆಯಾದೀತೇ ಎಂಬುದನ್ನು ಕಾದು ನೋಡಬೇಕಿದೆ.


  ಸಮಸ್ಯೆ ಕುರಿತು ನನ್ನ ಗಮನಕ್ಕೆ ಯಾವುದೇ ಮಾಹಿತಿ ಬಂದಿಲ್ಲ. ಅಧಿಕಾರಿಗಳ ಜತೆ ಈ ಸಂಬಂಧ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
  | ಮೀನಾಕ್ಷಿ ಜೋಡಟ್ಟಿ ಜಿಪಂ ಸದಸ್ಯೆ ಗೋಕಾಕ

  ನಮಗ ಸರ್ಕಾರ ಸೈಕಲ್ ಕೊಟ್ಟಿದೆ. ಆದರೆ ಸೈಕಲ್ ಓಡಿಸಲು ಸರಿಯಾದ ರಸ್ತೆ ಇಲ್ಲ. ಹಾಗಾಗಿ ನಾವು ಸೈಕಲ್ ಮನೆಯಲ್ಲಿ ಬಿಟ್ಟು ನಡೆದುಕೊಂಡೇ ಶಾಲೆಗೆ ಹೋಗುತ್ತಿದ್ದೇವೆ. ರಸ್ತೆ ನಿರ್ಮಾಣವಾದರೆ ಸೈಕಲ್ ಹತ್ತಿ ಶಾಲೆಗೆ ಹೋಗುತ್ತೇವೆ.
  | ಮಣಿಕಂಠ ಭೂಷಿ ಶಾಲಾ ವಿದ್ಯಾರ್ಥಿ

  ಈ ಸಂಬಂಧ ನನ್ನ ಗಮನಕ್ಕೆ ಮಾಹಿತಿ ಬಂದಿಲ್ಲ. ಸ್ಥಳೀಯ ಗ್ರಾಪಂ ಆಡಳಿತದೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
  | ಆರ್.ಎ.ಗಾಣಿಗೇರ ಎಇಇ, ಲೋಕೋಪಯೋಗಿ ಇಲಾಖೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts