More

    ಭೀಮಾತೀರಕ್ಕೆ ಬೇಕು ಹಂತಕರ ನಿಗ್ರಹ ಪಡೆ..!

    ಪರಶುರಾಮ ಭಾಸಗಿ ವಿಜಯಪುರ

    ಹಾಡಹಗಲೇ ಕೇಳಿ ಬರುವ ಗುಂಡಿನ ಸದ್ದು, ಪೆಟ್ರೋಲ್ ಬಾಂಬ್‌ಗಳ ಬಳಕೆ, ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲೇ ಗ್ಯಾಂಗ್ ವಾರ್, ಪರಸ್ಪರ ಲಾಂಗು-ಮಚ್ಚುಗಳಿಂದ ಬಡಿದಾಟ, ಟಿಪ್ಪರ್ ಹಾಯಿಸಿ ಭೀಕರ ಕೊಲೆ ಯತ್ನ !
    ಇದ್ಯಾವುದೋ ‘ಮಾಸ್’ ಚಲನಚಿತ್ರದ ಚಿತ್ರೀಕರಣದ ದೃಶ್ಯಗಳಲ್ಲ. ಛೋಟಾ ಬಿಹಾರ ಖ್ಯಾತಿಯ ಭೀಮಾತೀರದಲ್ಲಿ ಆಗಾಗ ಕಂಡು ಬರುತ್ತಿರುವ ನೈಜ ದೃಶ್ಯಗಳಿವು.
    ಈ ದೃಶ್ಯಗಳಲ್ಲಿ ಆಗಾಗ ಖಾಕಿ, ಖಾದಿ, ಹಿರಿ- ಕಿರಿ ಪುಢಾರಿಗಳು ಬಂದು ಹೋಗುತ್ತಾರೆ. ಗಾಂಜಾ, ಅಫೀಮು, ಮರಳು ದಂಧೆ, ಅಕ್ರಮ ಬಂದೂಕುಗಳ ಸಾಗಾಟದ ಸದ್ದು ಕೇಳಿ ಬರುತ್ತದೆ. ಆದರೂ ಈವರೆಗೆ ದೃಶ್ಯಗಳಿಗೆ ಇತೀಶ್ರೀ ಹಾಡುವ ಖಡಕ್ ಖಾಕಿಧಾರಿ ಬಂದಿಲ್ಲ.

    ವೈಫಲ್ಯಕ್ಕೆ ಹಿಡಿದ ಕೈಗನ್ನಡಿ

    ನ. 2 ರಂದು ಭೀಮಾತೀರದ ರೌಡಿ ಶೀಟರ್ ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಗುಂಡಿನ ದಾಳಿ ಖಾಕಿ ಪಡೆಯ ಕರ್ತವ್ಯಪ್ರಜ್ಞೆಯನ್ನು ಬಡಿದೆಬ್ಬಿಸಿದೆ. ಜಿಲ್ಲಾ ಕೇಂದ್ರಕ್ಕೆ ಹತ್ತಿರದಲ್ಲೇ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡದೊಂದು ಗ್ಯಾಂಗ್ ವಾರ್ ನಡೆಯುವವರೆಗೂ ಇಲಾಖೆ ಏನು ಮಾಡುತ್ತಿತ್ತು? ಪೆಟ್ರೋಲ್ ಬಾಂಬ್‌ಗಳು, ಕಂಟ್ರಿ ಪಿಸ್ತೂಲ್‌ಗಳು, ನಂಬರ್ ಪ್ಲೇಟ್ ಇಲ್ಲದ ವಾಹನಗಳು ಹಾಡಹಗಲೇ ರಾಷ್ಟ್ರೀಯ ಹೆದ್ದಾರಿ ಮೇಲೆ ಸಂಚರಿಸುವ ಮಟ್ಟಿಗೆ ಜಿಲ್ಲೆ ಮುಕ್ತವಾಗಿದೆ ಎಂದರೆ ಏನೆನ್ನಬೇಕು? ಗುಪ್ತಚರ ಇಲಾಖೆ ಮಾಡುತ್ತಿರುವುದೇನು? ಎರಡು ಕುಟುಂಬಗಳ ಹಗೆತನಕ್ಕೆ ಇನ್ನು ಎಷ್ಟು ಜನ ಬಲಿಯಾಗಬೇಕು? ಸಾರ್ವಜನಿಕರು ಎಷ್ಟು ದಿನ ಹೀಗೆ ಜೀವ ಕೈಯಲ್ಲಿ ಹಿಡಿದು ಓಡಾಡಬೇಕು. ಈಗಿರುವ ಪೊಲೀಸ್ ಇಲಾಖೆಯನ್ನು ನಂಬಿಕೊಂಡು ಕೂಡಲಾದೀತೆ? ಎಂಬ ಪ್ರಶ್ನೆ ಸಾರ್ವಜನಿಕವಾಗಿ ಕೇಳಿಬರುತ್ತಿದೆ.

    1500 ಸಿಬ್ಬಂದಿ ಬೇಕಾ?

    ಮಹಾದೇವ ಸಾಹುಕಾರ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿದ ತನಿಖೆಗೆ ಒಂದಲ್ಲ ಎರಡಲ್ಲ ಬರೋಬ್ಬರಿ 1500 ಜನರನ್ನು ನಿಯೋಜಿಸಿರುವುದು ಪೊಲೀಸ್ ಇಲಾಖೆ ಸಾಮರ್ಥ್ಯ ಓರೆಗಲ್ಲಿಗೆ ಹಚ್ಚಿದಂತಾಗಿದೆ. ದಾಳಿ ಮಾಡಿದ್ದು ಬಚ್ಚಾಗಳು, ಮರಿಪುಢಾರಿಗಳು ಎಂದೆಲ್ಲ ಮಾತನಾಡುವ ಐಜಿಪಿ ಅವರೇ ಖುದ್ದಾಗಿ ಅಖಾಡಕ್ಕಿಳಿದಿದ್ದಲ್ಲದೆ ಎಸ್‌ಪಿ, ಎಎಸ್‌ಪಿ, 37 ಇನ್ಸ್‌ಪೆಕ್ಟರ್‌ಗಳನ್ನೊಳಗೊಂಡ 10ಕ್ಕೂ ಅಧಿಕ ತಂಡಗಳು ಕಾರ್ಯಾಚರಣೆಗಿಳಿದಿದ್ದು ಗಮನಿಸಿದರೆ ದಾಳಿ ಮಾಡಿದ್ದು ಮರಿ ರೌಡಿಗಳೋ ಇಲ್ಲಾ ಅಂತಾರಾಜ್ಯಗಳ ನುರಿತ ಹಂತಕರೋ? ಎಂಬ ಅನುಮಾನ ಕಾಡುತ್ತಿದೆ.

    ಶಾಶ್ವತ ಪಡೆ ನಿಯೋಜನೆ ಅಗತ್ಯ

    ಭೀಮಾತೀರದಲ್ಲಿ ಪ್ರತಿ ಬಾರಿ ಗುಂಡಿನ ಸದ್ದು ಕೇಳಿದಾಗಲೊಮ್ಮೆ ಇಂಥದ್ದೊಂದು ದೊಡ್ಡ ತನಿಖೆ ಪ್ರಹಸನವೇ ನಡೆಯುತ್ತಿರುವುದು ಇಲ್ಲಿನ ಜನರಿಗೆ ಸಾಮಾನ್ಯ ಎಂಬಂತಾಗಿದೆ. ಮೂರ‌್ನಾಲ್ಕು ದಿನ ರಾಜ್ಯಮಟ್ಟದಲ್ಲಿ ಚರ್ಚೆಯಾಗಿ ನಂತರ ಭೀಮಾತೀರದ ಅಲೆಯಲ್ಲಿ ಗುಂಡಿನ ಸದ್ದು ಗೌಣವಾಗುತ್ತಿದೆ.
    ಹೀಗಾಗಿ ನಿರಂತರವಾಗಿ ನಡೆಯುತ್ತಿರುವ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಭೀಮಾತೀರದಲ್ಲಿ ನಕ್ಸಲ್ ನಿಗ್ರಹ ಪಡೆ ಮಾದರಿಯಲ್ಲಿ ‘ಹಂತಕರ ನಿಗ್ರಹ ಪಡೆ’ ಸ್ಥಾಪಿಸುವ ಅವಶ್ಯಕತೆ ಇದೆ. ಆ ಮೂಲಕ ಮರಳು ಮಾಫಿಯಾ, ಗಾಂಜಾ-ಅಫೀಮು ಸಾಗಾಟ, ಕಂಟ್ರಿ ಪಿಸ್ತೂಲ್‌ಗಳ ಹಾವಳಿಗೆ ಶಾಶ್ವತವಾಗಿ ಕಡಿವಾಣ ಹಾಕಬಹುದೆಂಬುದು ಪ್ರಜ್ಞಾವಂತರ ಅಭಿಪ್ರಾಯ.

    ಭೀಮಾತೀರದ ಅಪರಾಧ ತಡೆಯಲು ಯಾವ ವಿಶೇಷ ಪಡೆಯೂ ಬೇಡ. ನಮ್ಮ 4 ಇನ್ಸ್‌ಪೆಕ್ಟರ್ ಸಾಕು. ಮೊದಲ ದಿನ ಆರೋಪಿಗಳ ಪತ್ತೆಗೆ 1500 ಸಿಬ್ಬಂದಿಯನ್ನು ಬಳಸಿಕೊಳ್ಳಬೇಕಾಯಿತಷ್ಟೆ. ಇದೀಗ ಆ ಸಂಖ್ಯೆ 100ಕ್ಕೆ ಇಳಿದಿದೆ. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚುತ್ತೇವೆ.
    ರಾಘವೇಂದ್ರ ಸುಹಾಸ್, ಐಜಿಪಿ ಉತ್ತರ ವಲಯ

    ಭೀಮಾತೀರದಲ್ಲಿ ಕೊಲೆ, ಸುಲಿಗೆ, ದರೋಡೆ, ಗಾಂಜಾ, ಮರಳು ಮಾಫಿಯಾ ಹೆಚ್ಚಿನ ರೀತಿಯಲ್ಲಿ ನಡೆಯುತ್ತಿದೆ. ಇದರಲ್ಲಿ ಪೊಲೀಸರು ಮಾತ್ರವಲ್ಲ, ಅನೇಕ ಸರ್ಕಾರಿ ಅಧಿಕಾರಿಗಳೇ ಭಾಗಿಯಾಗಿದ್ದು ಕಂಡು ಬರುತ್ತಿದೆ. ಅಪರಾಧ ಕೃತ್ಯ ತಡೆಯುವಲ್ಲಿ ಪೊಲೀಸ್ ಇಲಾಖೆ ಸಾಕಷ್ಟು ವಿಫಲವಾಗಿದೆ. ಹೀಗಾಗಿ ಶಾಶ್ವತವಾಗಿ ಅಪರಾಧ ತಡೆಯಲು ವಿಶೇಷ ಪಡೆ ರಚಿಸಬೇಕು. ಆಗಾಗ ಭದ್ರತಾ ಸಿಬ್ಬಂದಿ ಬದಲಾಗುತ್ತ ಇರಬೇಕು.
    ಡಾ. ದೇವಾನಂದ ಚವಾಣ್, ಶಾಸಕರು ನಾಗಠಾಣ ಮತಕ್ಷೇತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts