More

    ಭರತನಾಟ್ಯ ಭಾರತೀಯ ಸಂಸ್ಕೃತಿ ಪ್ರತೀಕ: ಎಚ್.ಉಮೇಶ್

    ಶಿವಮೊಗ್ಗ: ದೇಶದ ಸಂಸ್ಕೃತಿ ಕಲೆಗಳಿಂದ ಅಭಿವ್ಯಕ್ತಗೊಳ್ಳುತ್ತದೆ. ಭರತನಾಟ್ಯದಂತಹ ಸಾಂಸ್ಕೃತಿಕ ಶ್ರೀಮಂತಿಕೆಯ ಕಲೆಗಳು ನಮ್ಮ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಅನಾವರಣಗೊಳಿಸುತ್ತಿದೆ. ಭರತನಾಟ್ಯ ಪುರಾತನ ನೃತ್ಯ ಕಲಾ ಪ್ರಕಾರವಾಗಿದ್ದು, ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಹೇಳಿದರು.
    ಕುವೆಂಪು ರಂಗಮಂದಿರದಲ್ಲಿ ಶನಿವಾರ ಸಂಜೆ ಪುಷ್ಪ ಪರ್‌ಫಾರ್ಮಿಂಗ್ ಆರ್ಟ್ಸ್ ಸೆಂಟರ್ ಮತ್ತು ಕೀರ್ತಿಶೇಷ ವಿದ್ವಾನ್ ಗಣೇಶ್ ಪಿ. ಸ್ಮರಣಾರ್ಥ 43ನೇ ನೂಪುರ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕಲಾಸಕ್ತಿಯಿಂದ ದೈಹಿಕ ಹಾಗೂ ಮಾನಸಿಕ ಚೈತನ್ಯ ದೊರೆಯುತ್ತದೆ. ಯುವ ಸಮುದಾಯ ಭರತನಾಟ್ಯದಂತಹ ಪ್ರಾಚೀನ ಕಲೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಅಭ್ಯಾಸ ನಡೆಸಬೇಕು. ಕಲೆಯನ್ನು ಆರಾಧಿಸಬೇಕು, ಆಸ್ವಾದಿಸಬೇಕು ಎಂದರು.
    ಪ್ರಾಚೀನ ಕಲೆಗಳನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಯುವ ಸಮುದಾಯದ ಮೇಲಿದೆ. ಭರತನಾಟ್ಯದಂತಹ ಕಲೆಗಳು ಸಂಪದ್ಭರಿತ ಸಂಸ್ಕೃತಿಗೆ ಸಾಕ್ಷಿಯಾಗಿವೆ. ಭಾರತೀಯ ಕಲೆ, ಸಂಸ್ಕೃತಿಯ ಮೇಲೆ ನಿರಂತರವಾಗಿ ಆಕ್ರಮಣವಾಗಿದ್ದರೂ ಅವು ತಮ್ಮ ಮೂಲ ಸೊಗಡನ್ನು ಕಳೆದುಕೊಂಡಿಲ್ಲ. ಭಾರತೀಯ ಕಲಾ ಪರಂಪರೆಯ ಬೇರುಗಳು ಸದೃಢವಾಗಿರುವುದೇ ಇದಕ್ಕೆ ಕಾರಣ. ಇಂತಹ ಬೇರುಗಳನ್ನು ಬಲಪಡಿಸುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕಾಗಿದೆ ಎಂದು ಕರೆ ನೀಡಿದರು.
    ನೂಪುರ ಉತ್ಸವದಂತಹ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಯನ್ನು ಗಟ್ಟಿಗೊಳಿಸಲು ಸಹಕಾರಿಯಾಗಿವೆ. ಕರ್ನಾಟಕ ಕಲಾಶ್ರೀ ವಿದೂಷಿ ಪುಷ್ಪ ಕೃಷ್ಣಮೂರ್ತಿ ಅವರು ಭಾರತೀಯ ಶಾಸ್ತ್ರೀಯ ನೃತ್ಯವನ್ನು ಹೊಸ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಅನೇಕ ನೃತ್ಯ ರೂಪಕಗಳನ್ನು ಆಕರ್ಷಕವಾಗಿ ರಚಿಸಿ, ನಿರ್ದೇಶಿಸಿ ಅನೇಕ ಕಡೆ ಪ್ರಸ್ತುತ ಪಡಿಸುತ್ತಿದ್ದಾರೆ. ಇಂತಹ ಪ್ರಯತ್ನ ಎಲ್ಲಡೆ ನಿರಂತರವಾಗಿ ನಡೆಯಲಿ. ಇದಕ್ಕೆ ಇಲಾಖೆ ಹಾಗೂ ಸರ್ಕಾರ ಸಹಕಾರ ನೀಡುತ್ತಾ ಬರುತ್ತಿದೆ ಎಂದರು.
    ಇದೇ ಸಂದರ್ಭದಲ್ಲಿ ತಮಿಳುನಾಡಿನ ಐಸಿಎಂಡಿಎ ವತಿಯಿಂದ ದಾಖಲೆ ನಿರ್ಮಿಸಿದ ಕಲಾವಿದರಿಗೆ ಅಭಿನಂದನಾ ಪತ್ರ ವಿತರಿಸಲಾಯಿತು. ಪುಷ್ಪ ಪರ್‌ಫಾರ್ಮಿಂಗ್ ಆರ್ಟ್ಸ್ ಸೆಂಟರ್ ಕರ್ನಾಟಕ ಕಲಾಶ್ರೀ ವಿದೂಷಿ ಪುಷ್ಪಾ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts