More

    ಭಾರತ ಬಂದ್​| ಕೊಡಗಿನಲ್ಲಿ ಕೆಎಸ್​ಆರ್​ಟಿಸಿ ಬಸ್​ಗೆ ಕಲ್ಲು ತೂರಿದ ಕಿಡಿಗೇಡಿಗಳು: ರಾಜ್ಯದಲ್ಲಿ ಬಂದ್​ಗೆ ನೀರಸ ಪ್ರತಿಕ್ರಿಯೆ

    ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ವಿವಿಧ ಸಂಘಟನೆಗಳು ರಾಷ್ಟ್ರವ್ಯಾಪಿ ಕರೆ ನೀಡಿರುವ ಭಾರತ್​ ಬಂದ್​ಗೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, ಜನರ ಮನಸ್ಸಿನಲ್ಲಿ ಬಂದ್​ ಎಂಬ ಭಾವನೆ ಮೂಡಿರುವುದರಿಂದ ಎಲ್ಲಿ ತೊಡಕಾಗುತ್ತದೆಯೋ ಎಂಬ ಭೀತಿಯಿಂದ ಜನರ ಚಟುವಟಿಕೆ ಕೊಂಚ ಪ್ರಮಾಣದಲ್ಲಿ ತಗ್ಗಿದೆ.

    ಎಂದಿನಂತೆ ರಾಜ್ಯದಲ್ಲಿ ಬಸ್​ ಸಂಚಾರ ಆರಂಭವಾಗಿದೆ. ಕೆಲವಡೆ ಪ್ರತಿಭಟನೆಗಳು ನಡೆಯುತ್ತಿದ್ದು, ಮುಂಜಾಗ್ರತ ಕ್ರಮವಾಗಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ. ವ್ಯಾಪಾರ ವಹಿವಾಟುಗಳಲ್ಲಿ ಕೊಂಚ ಇಳಿಮುಖವಾಗುವ ಸಾಧ್ಯತೆ ಕಾಣುತ್ತಿದೆ. ಒಟ್ಟಾರೆ ರಾಜ್ಯದಲ್ಲಿ ಭಾರತ್​ ಬಂದ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ರಾಜ್ಯದ ಚಿತ್ರಣ ಈಗ ಹೇಗಿದೆ ಎಂಬುದು ನೋಡುವುದಾದರೆ…

    ರಾಜಧಾನಿಯಲ್ಲಿ ಕೊಂಚ ಮಟ್ಟಿಗೆ ತಟ್ಟಿದ ಬಂದ್​ ಬಿಸಿ
    ಬೆಂಗಳೂರಿನ ಕೆ.ಆರ್. ಮಾರ್ಕೆಟ್​ಗೆ ಸ್ವಲ್ಪ ಮಟ್ಟಿಗೆ ಬಂದ್ ಬಿಸಿ ತಟ್ಟಿದೆ. ಗ್ರಾಹಕರು ಮತ್ತು ವ್ಯಾಪಾರಸ್ಥರು ಅವಸರವಸರಾಗಿ ವಹಿವಾಟು ಮುಗಿಸುತ್ತಿದ್ದಾರೆ. ಜನರಿಂದ ಗಿಜಿಗುಡುತ್ತಿದ್ದ ಕೆ.ಆರ್.ಮಾರ್ಕೆಟ್​ನಲ್ಲಿ ಸದ್ಯಕ್ಕೆ ಗ್ರಾಹಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಬಿಎಂಟಿಸಿ ಬಸ್​ಗಳಲ್ಲಿಯೂ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಬೆರಳೆಣಿಕೆಯ ಪ್ರಯಾಣಿಕರನ್ನು ಹೊತ್ತು ಬಿಎಂಟಿಸಿ ಬಸ್​ಗಳು ಸಾಗುತ್ತಿವೆ.

    ಮೈಸೂರಿಗೆ ಇಲ್ಲ ಮುಷ್ಕರದ ಬಿಸಿ
    ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿದೆ. ಚಿಕ್ಕ ಮಾರುಕಟ್ಟೆಯಲ್ಲೂ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಬಸ್​ ಸಂಚಾರವು ಸುಗಮವಾಗಿ ನಡೆಯುತ್ತಿದೆ. ಇನ್ನೊಂದೆಡೆ ಕಾರ್ಮಿಕ ಸಂಘಟನೆಗಳ ಮುಷ್ಕರ ಕೈಗೊಂಡಿವೆ. ನಂಜನಗೂಡು- ಮೈಸೂರು ರಸ್ತೆಯಲ್ಲಿ ಎಐಟಿಯುಸಿಯಿಂದ ಪ್ರತಿಭಟನೆ ನಡೆಯುತ್ತಿದೆ. ಮುಂಜಾಗ್ರತ ಕ್ರಮವಾಗಿ ಪೊಲೀಸ್​ ಬಂದೋಬಸ್ತ್​ ಮಾಡಲಾಗಿದೆ.

    ಪ್ರತಿಭಟನಾಕಾರರ ಬಂಧನ
    ಕೋಲಾರದಲ್ಲಿ ಕೆಎಸ್​ಆರ್​ಟಿಸಿ ಡಿಪೋ ಮುಂದೆ ಪ್ರತಿಭಟನೆ ಮಾಡುತ್ತಿದ್ದ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಬಸ್ ಹೊರಹೊಗದಂತೆ ಪ್ರತಿಭಟನಾಕಾರರು ತಡೆಯೊಡ್ಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಇದು ಬಿಟ್ಟರೆ, ಎಂದಿನಂತೆ ಸಂಚಾರ ಆರಂಭವಾಗಿದ್ದು ಜನಜೀವನ ಮಾಮೂಲಿಯಂತಿದೆ.

    ಮಡಿಕೇರಿಯಲ್ಲಿ ಬಸ್​ಗೆ ಕಲ್ಲು ತೂರಿದ ಕಿಡಿಗೇಡಿಗಳು
    ಭಾರತ್​ ಬಂದ್​ ಹಿನ್ನೆಲೆಯಲ್ಲಿ ಕೆಲ ಕಿಡಿಗೇಡಿಗಳು ಮಡಿಕೇರಿ ನಗರದ ಹೊರವಲಯದ ಚೈನ್ ಗೇಟ್ ಬಳಿ ಮಡಿಕೇರಿಯಿಂದ ಮೈಸೂರಿನ ಕಡೆ ಹೊರಟಿದ್ದ ಕೆಎಸ್​ಆರ್​ಟಿಸಿ ಬಸ್​ಗೆ ಕಲ್ಲು ತೂರಿದ್ದಾರೆ. ಉಳಿದಂತೆ ಸಾಮಾನ್ಯ ಜನಜೀವನ ಎಂದಿನಂತೆ ಸಾಗಿದೆ. ಸರಕಾರಿ ಹಾಗೂ ಖಾಸಗಿ ಬಸ್ ಸಂಚಾರ ಆರಂಭವಾಗಿದೆ. ಕೊಡಗಿನಲ್ಲಿ ಯಾವುದೇ ಸಂಘಟನೆ ಬಂದ್​ಗೆ ಕರೆ ನೀಡಿಲ್ಲ. ಅಂಗಡಿ ಮುಂಗಟ್ಟುಗಳು ಓಪನ್ ಆಗಿದ್ದು, ಕಾರ್ಮಿಕ ಸಂಘಟನೆಯಿಂದ ಕೇವಲ ಪ್ರತಿಭಟನೆ ಮಾತ್ರ ನಡೆಯಲಿದೆ.

    ವಾಣಿಜ್ಯ ನಗರಿ ಹುಬ್ಬಳ್ಳಿಗೆ ತಟ್ಟದ ಬಂದ್ ಬಿಸಿ
    ವಾಣಿಜ್ಯ ನಗರಿಯಲ್ಲೂ ಜನಜೀವನ ಎಂದಿನಂತಿದೆ. ದಿನನಿತ್ಯದಂತೆ ಅಂಗಡಿ ಮುಂಗಟ್ಟುಗಳು ಹಾಗೂ ಹೊಟೇಲ್​ಗಳು ಓಪನ್ ಆಗಿವೆ. ಬೆಳಿಗ್ಗೆಯಿಂದಲೇ ವ್ಯಾಪಾರ-ವಹಿವಾಟು ಆರಂಭವಾಗಿದೆ. ಸಂಚಾರವು ಕೂಡ ಎಂದಿನಂತೆ ಸಾಗಿದೆ. ಬಂದ್​ಗೆ ಬೆಂಬಲ ನೀಡದೇ ಕೇವಲ ಕೆಲಸದಿಂದ ದೂರ ಉಳಿದು ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

    ಉಳಿದಂತೆ ರಾಜ್ಯದ ಬಹುತೇಕ ಭಾಗದಲ್ಲಿ ಬಂದ್​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಾಮರಾಜನಗರ, ಹಾಸನ, ಮಂಡ್ಯ, ತುಮಕೂರು, ಬೆಳಗಾವಿ, ಕಲಬುರಗಿ, ಶಿವಮೊಗ್ಗ, ಉಡುಪಿ ಸೇರಿದಂತೆ ರಾಜ್ಯದೆಲ್ಲೆಡೆ ಬಂದ್​ ಪರಿಣಾಮ ಇಲ್ಲ. ಎಂದಿನಂತೆ ಜನಜೀವನ ಹಾಗೂ ವ್ಯಾಪಾರ ವಹಿವಾಟು ಸಾಗಿವೆ. ಆದರೆ, ಬಂದ್​​ಗೆ ಕರೆ ನೀಡಿರುವ ಸಂಘಟನೆಗಳು ಮಾತ್ರ ಪ್ರತಿಭಟನೆಯ ಮೂಲಕ ಬಂದ್​ ಆಚರಿಸುತ್ತಿವೆ. ಮುಂಜಾಗ್ರತ ಕ್ರಮವಾಗಿ ಪ್ರತಿ ಜಿಲ್ಲೆಯಲ್ಲೂ ಬಿಗಿ ಪೊಲೀಸ್​ ಬಂದೋಬಸ್ತ್​ ಮಾಡಲಾಗಿದೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts