More

    ಭಾಗಮಂಡಲಕ್ಕೆ ಬೇಕಿದೆ ಬಸ್ ನಿಲ್ದಾಣ

    ಮಡಿಕೇರಿ:

    ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಭಾಗಮಂಡಲದಲ್ಲಿ ಸೂಕ್ತ ಸ್ಥಳದಲ್ಲಿ ಬಸ್ ತಂಗುದಾಣ ಇಲ್ಲದೆ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಮಳೆ, ಗಾಳಿ, ಬಿಸಿಲು ಮಧ್ಯೆ ಪ್ರಯಾಣಿಕರು ಬಸ್‌ಗಳಿಗಾಗಿ ರಸ್ತೆ ಮಧ್ಯೆಯೇ ಕಾಯಬೇಕಾದ ಅನಿವಾರ್ಯತೆ ಇದೆ. ದೇವಸ್ಥಾನ ಹಿಂಭಾಗ ಉತ್ತಮವಾದ ಬಸ್ ತಂಗುದಾಣ ಇದ್ದರೂ ಕೆಲವೊಂದು ಕಾರಣಗಳಿಂದ ಇಲ್ಲಿ ಬಸ್ ನಿಲ್ಲಿಸಲು ಚಾಲಕರು ಹಿಂದೇಟು ಹಾಕುತ್ತಿರುವುದೇ ಎಲ್ಲಾ ಸಮಸ್ಯೆಗಳಿಗೆ ಮೂಲವಾಗಿದೆ.

    ದಕ್ಷಿಣಕಾಶಿ ಎಂದೇ ಆಸ್ತಿಕರು ನಂಬುವ ಮಡಿಕೇರಿ ತಾಲೂಕಿನ ಭಾಗಮಂಡಲ ಕಾವೇರಿ, ಕನ್ನಿಕೆ ಹಾಗೂ ಸುಜ್ಯೋತಿ ನದಿಗಳ ತ್ರಿವೇಣಿ ಸಂಗಮ ಕ್ಷೇತ್ರವಾಗಿ ಭಕ್ತರ ಹೃದಯದಲ್ಲಿ ಸ್ಥಾನ ಪಡೆದಿದೆ. ದಿನಂಪ್ರತಿ ಇಲ್ಲಿಗೆ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಬರುತ್ತಿರುತ್ತಾರೆ. ಕಾವೇರಿ ತುಲಾ ಸಂಕ್ರಮಣ ಜಾತ್ರೆಯ ಒಂದು ತಿಂಗಳ ಅವಧಿಯಲ್ಲಿ ಸಾಮಾನ್ಯಕ್ಕಿಂತ ಎರಡು-ಮೂರು ಪಟ್ಟು ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಕೊಡಗಿನ ದೊಡ್ಡ ಹೋಬಳಿ ಕೇಂದ್ರಗಳ ಪೈಕಿ ಭಾಗಮಂಡಲವೂ ಒಂದಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಹೋಬಳಿ ಕೇಂದ್ರಕ್ಕೆ ಅಗತ್ಯವಿರುವ ಎಲ್ಲಾ ಸರ್ಕಾರಿ ಕಚೇರಿಗಳು ಇಲ್ಲಿದ್ದು, ದಿನಂಪ್ರತಿ ಜನರ ಓಡಾಟ ಇರುತ್ತದೆ. ಅದರಲ್ಲೂ ವಾರದ ಸಂತೆಯ ದಿನವಾದ ಸೋಮವಾರ ಹೆಚ್ಚಿನ ಜನಸಂದಣಿ ಕಂಡುಬರುತ್ತದೆ.

    ತಲಕಾವೇರಿ ಮತ್ತು ಭಾಗಮಂಡಲಕ್ಕೆ ಜಿಲ್ಲಾ ಕೇಂದ್ರ ಮಡಿಕೇರಿ, ರಾಜಧಾನಿ ಬೆಂಗಳೂರು, ಪಕ್ಕದ ಕೇರಳ ಹಾಗೂ ಜಿಲ್ಲೆಯ ಪ್ರಮುಖ ಊರುಗಳಿಂದ ಬಸ್ ಸಂಪರ್ಕ ಇದೆ. ಖಾಸಗಿ ಮತ್ತು ಸರ್ಕಾರಿ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಬಸ್‌ಗಳು ದಿನಂಪ್ರತಿ ಇಲ್ಲಿಗೆ ಬಂದು ಪ್ರಯಾಣಿಕರನ್ನು ಇಳಿಸುವುದು, ಹತ್ತಿಸುವುದು ಮಾಡುತ್ತವೆ. ಆದರೆ ಪ್ರಯಾಣಿಕರು ಮತ್ತು ಬಸ್‌ಗಳಿಗೆ ಅನುಕೂಲಕರವಾದ ಸ್ಥಳದಲ್ಲಿ ಬಸ್ ತಂಗುದಾಣ ಇಲ್ಲದಿರುವುದರಿಂದ ಇಲ್ಲಿ ಸಮಸ್ಯೆ ಆಗುತ್ತಿದೆ.
    ಭಾಗಮಂಡಲ ಭಗಂಡೇಶ್ವ ದೇವಾಲಯ ಹಿಂಭಾಗದಲ್ಲಿ ಪೇಟೆಯ ಪ್ರಮುಖ ಸ್ಥಳದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ 3 ವರ್ಷಗಳ ಹಿಂದೆ ಬಸ್ ತಂಗುದಾಣ ನಿರ್ಮಿಸಲಾಗಿದೆ. ಕಾಲ ಕಾಲಕ್ಕೆ ಸುಣ್ಣ. ಬಣ್ಣ ಹೊಡೆದು ಈ ಬಸ್ ತಂಗುದಾಣವನ್ನು ಸುಸ್ಥಿಯಲ್ಲಿ ಇಟ್ಟುಕೊಳ್ಳಲಾಗಿದೆ. ಆದರೆ ಈ ಬಸ್ ತಂಗುದಾಣದಿAದ ಪ್ರಯಾಣಿಕರಿಗೆ ಪ್ರಯೋಜನ ಇಲ್ಲದಂತಾಗಿದೆ. ಬಸ್‌ಗಳನ್ನು ಚಾಲಕರು ತಮಗೆ ಇಷ್ಟ ಬಂದಲ್ಲಿ ನಿಲ್ಲಿಸುತ್ತಿದ್ದಾರೆ.

    ಈ ಬಗ್ಗೆ ಹಲವು ಬಾರಿ ಚಾಲಕರಿಗೆ ಸೂಚಿಸಿದರೂ ಬಹುತೇಕ್ ಬಸ್‌ಗಳನ್ನು ನಾಪೋಕ್ಲು ರಸ್ತೆಯಲ್ಲಿ ನಿಲ್ಲಿಸಲಾಗುತ್ತಿದೆ. ದೇವಾಲಯ ಬಳಿ, ಚಾಮುಂಡಿ ಮೈದಾನ ಹತ್ತಿರವೂ ನಿಲ್ಲಿಸುವುದಿದೆ. ಇದರಿಂದ ಸಮಸ್ಯೆ ಆಗುವುದು ಮಾತ್ರ ಪ್ರಯಾಣಿಕರಿಗೆ. ಇದರಿಂದ ಸುಗಮ ಸಂಚಾರ ವ್ಯವಸ್ಥೆಗೆ ತೊಂದರೆ ಮಾತ್ರ ಆಗುವುದಲ್ಲದೆ, ಬಸ್‌ಗಳಿಗೆ ಕಾಯುವ ಸಂದರ್ಭ ಪ್ರಯಾಣಿಕರು ಬಿಸಿಲು ಮಳೆಯಿಂದ ರಕ್ಷಣೆ ಪಡೆಯಲು ಅಂಗಡಿಮುAಗಟ್ಟುಗಳನ್ನು ಆಶ್ರಯಿಸುವ ಅನಿವಾರ್ಯತೆಯಿದೆ.
    ಮೇಲ್ಸೇತುವೆ ಇರುವುದರಿಂದ ಬಸ್ ತಂಗುದಾಣ ಬಳಿ ಬಸ್‌ಗಳನ್ನು ತಿರುಗಿಸಲು ಆಗುವುದಿಲ್ಲ. ಹಾಗಾಗಿ ಬಸ್‌ಗಳನ್ನು ಮಾರುಕಟ್ಟೆ ತನಕ ತೆಗೆದುಕೊಂಡು ಹೋಗಿ ತಿರುಗಿಸಿ ತರಬೇಕಾಗುತ್ತದೆ. ಈಗ ಇರುವ ಬಸ್ ತಂಗುದಾಣ ಬಳಿ ಬಸ್‌ಗಳನ್ನು ನಿಲ್ಲಿಸಿದರೆ ಸಮೀಪದ ನಾಡ ಕಚೇರಿಗೆ ಹೋಗುವವರು, ಬ್ರಾಹ್ಮಣರ ಬೀದಿ ಕಡೆ ಸಂಚರಿಸುವವರು ತಮಗೆ ತೊಂದರೆ ಆಗುತ್ತದೆ ಎಂದು ಆಕ್ಷೇಪಿಸುತ್ತಾರೆ ಎನ್ನುವ ಕಾರಣಕ್ಕೆ ಹಾಲಿ ಇರುವ ಬಸ್ ತಂಗುದಾಣದಲ್ಲಿ ಬಸ್‌ಗಳನ್ನು ನಿಲ್ಲಿಸಲು ಚಾಲಕರು ಹಿಂದೇಟು ಹಾಕುತ್ತಿದ್ದಾರೆ. ಈ ಬೆಳವಣಿಗೆಯಿಂದ ಸಾಮಾನ್ಯ ಪ್ರಯಾಣಿಕರು ಬಸ್‌ಗಳಿಗಾಗಿ ಕಾಯುವ ಸಂದರ್ಭ ತೊಂದರೆ ಅನುಭವಿಸಬೇಕಾಗಿದೆ.

    ಎಲ್ಲೆಂದರಲ್ಲಿ ಬಸ್‌ಗಳು ನಿಲ್ಲುವುದರಿಂದ ಇತರ ವಾಹನಗಳ ಓಡಾಟಕ್ಕೂ ಸಮಸ್ಯೆ ಆಗುತ್ತಿದೆ. ವಾರಾಂತ್ಯ ಮತ್ತು ಇತರ ರಜಾ ದಿನಗಳಲ್ಲಿ ಭಾಗಮಂಡಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮತ್ತು ಭಕ್ತರು ಆಗಮಿಸುತ್ತಾರೆ. ಈ ವೇಳೆ ವಾಹನಗಳ ದಟ್ಟಣೆ ಇಲ್ಲಿ ಸಾಮಾನ್ಯವಾಗಿರುತ್ತದೆ. ಹಾಲಿ ಬಸ್ ತಂಗುದಾಣದಲ್ಲಿ ಒಮ್ಮೆಲೆ ಗರಿಷ್ಠ 3 ಬಸ್‌ಗಳನ್ನು ನಿಲ್ಲಿಸಿಕೊಳ್ಳಲು ಅವಕಾಶ ಇದೆ. ಹೊರಡುವ ಅರ್ಧಗಂಟೆ ಮೊದಲು ಬಸ್‌ಗಳನ್ನು ತಂಗುದಾಣಕ್ಕೆ ತಂದು ಉಳಿದ ಬಸ್‌ಗಳನ್ನು ಮೈದಾನದಲ್ಲಿ ನಿಲ್ಲಿಸಿಕೊಳ್ಳಬಹುದಾಗಿದೆ. ಇದರಿಂದ ಪ್ರಯಾಣಿಕರು ಮತ್ತು ಇತರ ವಾಹನಗಳಿಗೆ ಅನುಕೂಲ ಆಗುತ್ತದೆ ಎನ್ನುವ ಸಲಹೆಗಳಿವೆ. ಭಾಗಮಂಡಲ ಮಾರುಕಟ್ಟೆ ಬಳಿಯೂ ಒಂದು ಬಸ್ ತಂಗುದಾಣ ಇದ್ದು ಅಲ್ಲಿಯೂ ಬಸ್‌ಗಳನ್ನು ನಿಲ್ಲಿಸಬಹುದಾಗಿದೆ.

    ಭಾಗಮಂಡಲದಲ್ಲಿ ಬಸ್ ತಂಗುದಾಣದಲ್ಲೇ ಬಸ್‌ಗಳನ್ನು ನಿಲುಗಡೆಗೊಳಿಸುವುದಕ್ಕೆ ಸಂಬAಧಿಸಿದAತೆ ಸ್ಥಳೀಯ ಗ್ರಾಮ ಪಂಚಾಯಿತಿಯಿAದ ಹಲವು ಬಾರಿ ಚಾಲಕರಿಗೆ ಸೂಚನೆ ನೀಡಲಾಗಿದೆ. ಆದರೆ ಈ ಎರಡು ಬಸ್ ತಂಗುದಾಣಗಳಲ್ಲಿ ಬಸ್ ನಿಲ್ಲಿಸಲು ಚಾಲಕರು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಭಾಗಮಂಡಲ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಬಸ್ ಮಾಲೀಕರಿಗೆ ನೊಟೀಸ್ ಕೊಟ್ಟರೂ ಯಾವುದೇ ಪ್ರಯೋಜನ ಆಗಿಲ್ಲ. ಮಾರುಕಟ್ಟೆ ಬಳಿಯ ಬಸ್ ತಂಗುದಾಣದಲ್ಲಿ ಬಸ್ ನಿಲ್ಲಿಸಿದರೆ ಅಲ್ಲಿಗೆ ಪ್ರಯಾಣಿಕರು ಬರುವುದಿಲ್ಲ ಎನ್ನುವುದು ವಾಸ್ತವ ಸಂಗತಿಯಾಗಿದೆ.
    ಪ್ರಯಾಣಿಕರು ಮತ್ತು ಬಸ್ ಮಾಲೀಕರ ಸಮಸ್ಯೆಗೆ ಸ್ಪಂದಿಸಿರುವ ಭಾಗಮಂಡಲ ಗ್ರಾಮ ಪಂಚಾಯತಿ ಈಗ ಬಸ್‌ಗಳು ನಿಲುಗಡೆ ಆಗುತ್ತಿರುವ ಸ್ಥಳದಲ್ಲೇ ಬಸ್ ತಂಗುದಾಣ ನಿರ್ಮಿಸಲು ಚಿಂತನೆ ನಡೆಸಿದೆ. ಮಳೆಗಾಲದಲ್ಲಿ ಈ ಜಾಗದಲ್ಲಿ ಪ್ರವಾಹದ ನೀರು ಬರುವುದರಿಂದ ಸಮಸ್ಯೆ ಆಗಬಹುದು. ಹಾಗಾಗಿ ನೂತನ ಬಸ್ ತಂಗುದಾಣ ನಿರ್ಮಾಣಕ್ಕೂ ಮೊದಲು ಅನುಕೂಲ ಮತ್ತು ಅನಾನುಕೂಲತೆಗಳ ಬಗ್ಗೆ ವಿಸ್ತೃತ ಅಧ್ಯಯನವನ್ನೂ ನಡೆಸಲು ನಿರ್ಧರಿಸಲಾಗಿದೆ. ಒಟ್ಟಿನಲ್ಲಿ ಆದಷ್ಟು ಬೇಗ ಪ್ರಯಾಣಿಕರಿಗೆ ಅನುಕೂಲ ಆಗುವ ಸ್ಥಳದಲ್ಲಿ ಬಸ್ ತಂಗುದಾಣ ನಿರ್ಮಾಣ ಆಗಲಿ ಎನ್ನುವುದು ಸ್ಥಳೀಯರ ಆಶಯ.\

    ಪುಣ್ಯ ಕ್ಷೇತ್ರ ಭಾಗಮಂಡಲಕ್ಕೆ ಪ್ರತಿನಿತ್ಯ ನೂರರು ಪ್ರಯಾಣಿಕರು ಬರುತ್ತಾರೆ. ಆದರೆ ಇಲ್ಲಿ ಸೂಕ್ತ ಬಸ್ ತಂಗುದಾಣ ಇಲ್ಲದೆ ಜನ ಸಾಮಾನ್ಯರಿಗೆ ತೊಂದರೆ ಆಗಿದೆ. ಮಳೆ, ಬಿಸಿಲಿನಲ್ಲಿ ರಸ್ತೆಯಲ್ಲೇ ನಿಲ್ಲಬೇಕು. ದೇವಾಲಯ ಹಿಂಭಾಗದ ಬಸ್ ತಂಗುದಾಣದಲ್ಲಿ ಯಾವುದೇ ಬಸ್‌ಗಳನ್ನು ನಿಲ್ಲಿಸುವುದಿಲ್ಲ. ಮಾರುಕಟ್ಟೆ ಬಳಿಯ ಬಸ್ ತಂಗುದಾಣವೂ ನಿಷ್ಪçಯೋಜಕವಾಗಿದೆ. ಪ್ರಯಾಣಿಕರಿಗೆ ಅನುಕೂಲ ಆಗುವ ಸ್ಥಳದಲ್ಲಿ ಬಸ್ ನಿಲ್ದಾಣ ನಿರ್ಮಾಣ ಆಗಬೇಕು.
    ಶ್ರೀನಾಥ್ ನಾಯಕ್, ಭಾಗಮಂಡಲ ನಿವಾಸಿ

    ಬಸ್ ತಂಗುದಾಣದಲ್ಲೇ ಬಸ್ ನಿಲ್ಲಿಸುವಂತೆ ಈ ಹಿಂದೆ ಹಲವು ಬಾರಿ ಚಾಲಕರಿಗೆ ಸೂಚಿಸಲಾಗಿದೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಬಸ್ ಮಾಲೀಕರಿಗೆ ಈ ಬಗ್ಗೆ ನೊಟೀಸ್ ಕೊಟ್ಟು ಎಚ್ಚರಿಕೆ ಕೊಟ್ಟರೂ ಪರಿಸ್ಥಿತಿ ಬದಲಾಗಿಲ್ಲ. ಅವರ ಪ್ರಕಾರ ಹಾಲಿ ಬಸ್ ತಂಗುದಾಣದಲ್ಲಿ ಬಸ್ ನಿಲ್ಲಿಸುವುದಕ್ಕೆ ಈ ಭಾಗದಲ್ಲಿ ಆಕ್ಷೇಪ ಇದೆ. ಆವರ ವಾದವೂ ಸರಿಯಾಗಿದ್ದು, ಪ್ರಯಾಣಿಕರು ಮತ್ತು ಬಸ್‌ನವರಿಗೆ ಅನುಕೂಲ ಆಗುವ ಸ್ಥಳದಲ್ಲಿ ಹೊಸದಾಗಿ ಬಸ್ ನಿಲ್ದಾಣ ನಿರ್ಮಿಸುವ ಚಿಂತನೆಯಿದೆ.
    ಕಾಳನ ರವಿ, ಅಧ್ಯಕ್ಷ, ಗ್ರಾಮ ಪಂಚಾಯಿತಿ, ಭಾಗಮಂಡಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts