More

    ಭದ್ರಾ ಅಭಯಾರಣ್ಯ ವನ್ಯಜೀವಿ ಪ್ರದೇಶ ಘೋಷಣೆ ಬೇಡ

    ಚನ್ನಗಿರಿ: ತಾಲೂಕಿನ ಕುಕ್ಕುವಾಡ ಭದ್ರಾ ಅಭಯಾರಣ್ಯವನ್ನು ‘ವನ್ಯಜೀವಿ ಪ್ರದೇಶ’ವಾಗಿ ಘೋಷಣೆ ಮಾಡುವುದು ಬೇಡ ಎಂದು ಕೆಎಸ್‌ಡಿಎಲ್ ಅಧ್ಯಕ್ಷ, ಶಾಸಕ ಮಾಡಾಳು ವಿರೂಪಾಕ್ಷಪ್ಪ ವಿರೋಧ ವ್ಯಕ್ತಪಡಿಸಿದರು.
    ಚನ್ನಗಿರಿ ತಾಲೂಕು ಹಲಕನಾಳು ಗ್ರಾಮದಲ್ಲಿ ಗುರುವಾರ, 4.8 ಕೋಟಿ ರೂ. ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
    ಭದ್ರಾ ಅಭಯಾರಣ್ಯ ಪ್ರದೇಶವನ್ನು ವನ್ಯಜೀವಿ ಪ್ರದೇಶವನ್ನಾಗಿ ಘೋಷಿಸದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಈಗಾಗಲೇ ಈ ವ್ಯಾಪ್ತಿಯ ಐವರು ಶಾಸಕರು ಸೇರಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
    ಈಗ ಕೇಂದ್ರ ಸರ್ಕಾರ ವನ್ಯಜೀವಿ ಪ್ರದೇಶ ಪಟ್ಟಿಗೆ ಸೇರಿಸಲು ಹೊರಟಿದೆ. ಹಾಗೇನಾದರೂ ಮಾಡಿದಲ್ಲಿ ಈ ಭಾಗದ ಜನರಿಗೆ ತೊಂದರೆ ನಿಶ್ಚಿತ. ಇದನ್ನು ಮನಗಂಡು ಚನ್ನಗಿರಿ, ಭದ್ರಾವತಿ, ತರೀಕೆರೆ, ಚಿಕ್ಕಮಗಳೂರು ಹಾಗೂ ಕಡೂರು ಈ ಐದೂ ಕ್ಷೇತ್ರಗಳ ಶಾಸಕರು ಸೇರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ಬಹಿರಂಗಪಡಿಸಿದರು.
    ಚನ್ನಗಿರಿ ತಾಲೂಕು 306 ಕಿ.ಮೀ. ವ್ಯಾಪ್ತಿಯ ದೊಡ್ಡ ಅರಣ್ಯ ಪ್ರದೇಶ ಹೊಂದಿದೆ. ಆದರೆ, ಅರಣ್ಯದಲ್ಲಿ ಆಹಾರ ಸಿಗದೆ ಕಾಡು ಪ್ರಾಣಿಗಳು ನಾಡಿಗೆ ನುಗ್ಗಿ ಜೀವ ಹಾನಿ, ಬೆಳೆ ಹಾನಿ ಉಂಟು ಮಾಡುತ್ತಿವೆ. ಇದನ್ನು ತಡೆಯಲು ಗ್ರಾಮದ ಸುತ್ತ ಆಗಲೇ ಆನೆ ಕಂದಕ ನಿರ್ಮಿಸಲಾಗಿದೆ ಎಂದು ಹೇಳಿದರು.
    ಹಲಕನಾಳು ಗ್ರಾಮಕ್ಕೆ ಕಾಡಾನೆಗಳು ಬರುವುದನ್ನು ತಪ್ಪಿಸುವ ಸಲುವಾಗಿ 1 ಕೋಟಿ ರೂ. ವೆಚ್ಚದಲ್ಲಿ ಆನೆ ಕಂದಕ ನಿರ್ಮಿಸಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರ ಖಾತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ 10 ಸಾವಿರ ರೂ. ಹಾಕುತ್ತಿದೆ. ಕೇಂದ್ರದ ಜಲಮಿಷನ್ ಯೋಜನೆಯಲ್ಲಿ ಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳ ಮನೆಗೆ ನಲ್ಲಿ ಸಂಪರ್ಕ ನೀಡಲಾಗಿದೆ ಎಂದರು.
    ಗ್ರಾಪಂ ಅಧ್ಯಕ್ಷೆ ಪುಟ್ಟಮ್ಮ, ಸದಸ್ಯರಾದ ಜಿ.ವೀರಭದ್ರಪ್ಪ, ತಾಪಂ ಮಾಜಿ ಸದಸ್ಯ ಕೆ.ಸಿ.ರವಿ, ಹೆಬ್ಬಳಗೆರೆ ಗ್ರಾಪಂ ಸದಸ್ಯ ಕೆ.ಕೆಂಚಪ್ಪ, ತುಮ್‌ಕೋಸ್ ನಿರ್ದೇಶಕ ಜಿ.ಆರ್.ಶಿವಕುಮಾರ್, ಗುತ್ತಿಗೆದಾರ ಮಹೇಶ್ ಕಾಕನೂರು, ಎಪಿಎಂಸಿ ಮಾಜಿ ಅಧ್ಯಕ್ಷ ಟಿ.ಎನ್.ನಾಗರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts