More

  ಬೆಂಗಳೂರು ರತ್ನ: ಸಹಕಾರಮೂರ್ತಿ ರಾಧಾಕೃಷ್ಣ, ಜನಸೇವೆಯತ್ತ ಸದಾ ಗಮನ

  ಅಪ್ಪಟ ಪರಿಸರ ಪ್ರೇಮಿ | ಕೋವಿಡ್ ಕಾಲದಲ್ಲಿ ಬಡವರಿಗೆ ನೆರವು

  ಪ್ರತಿಷ್ಠಿತ ಸರ್ಕಾರಿ ಸಂಸ್ಥೆಯ ನಿವೃತ್ತ ಅಧಿಕಾರಿ, ಸಹಕಾರಿ ಕ್ಷೇತ್ರದ ಸಹಕಾರ ಮೂರ್ತಿ, ಅಪ್ಪಟ ಕನ್ನಡಿಗ ಹಾಗೂ ಪರಿಸರ ಪ್ರೇಮಿಯಾಗಿರುವ ಟಿ.ಎನ್. ರಾಧಾಕೃಷ್ಣ, ತಮ್ಮ ಸಮಾಜಮುಖಿ ಕೆಲಸ ಕಾರ್ಯಗಳಿಂದಲೇ ರಾಜಾಜಿನಗರ ಕ್ಷೇತ್ರದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಕೃಷಿ ಕುಟುಂಬದಿಂದ ಬಂದ ಇವರು, ‘ನ್ಯೂ ಗೌರ್ನಮೆಂಟ್ ಎಲೆಕ್ಟ್ರಿಕ್ ಫ್ಯಾಕ್ಟರಿ’ಯಲ್ಲಿ (ಎನ್​ಜಿಇಎಫ್) ಅಭಿಯಂತರಾಗಿ ಕಾರ್ಯನಿರ್ವಹಿಸಿ, ಸ್ವಯಂನಿವೃತ್ತರಾದ ಬಳಿಕ ಸಹಕಾರ ಕ್ಷೇತ್ರದ ಕಡೆ ಮುಖ ಮಾಡಿದರು. ಬೆಂಗಳೂರು ಪದವೀಧರರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಹುಟ್ಟುಹಾಕಿ, ಮೂರು ದಶಕಕ್ಕೂ ಹೆಚ್ಚು ಕಾಲದಿಂದ ಮುನ್ನಡೆಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಪಾಲಿಕೆ ಚುನಾವಣೆಗೆ ಕಾಮಾಕ್ಷಿಪಾಳ್ಯ ವಾರ್ಡ್​ನಿಂದ ಸ್ಪರ್ಧಿಸಿ ಕೆಲವೇ ಮತಗಳ ಅಂತರದಿಂದ ಸೋಲುಂಡರು. ಆದರೆ, ಜನಸೇವೆಯಲ್ಲಿ ಸೋಲಲಿಲ್ಲ. ಕೋವಿಡ್ ಕಾಲದಲ್ಲಿ ಎಲ್ಲ ರೀತಿಯಲ್ಲೂ ನೆರವಾಗಿದ್ದಾರೆ. ಬಡಮಕ್ಕಳ ಶಿಕ್ಷಣಕ್ಕೂ ಆಸರೆಯಾಗಿದ್ದಾರೆ. ಹಾಲಿ ರಾಜಾಜಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಾಧಾಕೃಷ್ಣರ ಸಾಧನೆ ಪರಿಗಣಿಸಿ, ‘ವಿಜಯವಾಣಿ’ ಪತ್ರಿಕೆ ‘ಬೆಂಗಳೂರು ರತ್ನ’ ಗೌರವ ನೀಡಿದೆ.

  ಬೆಂಗಳೂರು ರತ್ನ: ಸಹಕಾರಮೂರ್ತಿ ರಾಧಾಕೃಷ್ಣ, ಜನಸೇವೆಯತ್ತ ಸದಾ ಗಮನ

  ಕರೊನಾ ಸಂದರ್ಭದಲ್ಲಿ ಬಡ ಜನರಿಗೆ ನೆರವಾದವರ ಸಾಲಿನಲ್ಲಿ ಮೊದಲಿಗೆ ನೆನಪಾಗುವ ಹೆಸರುಗಳಲ್ಲಿ ಟಿ.ಎನ್. ರಾಧಾಕೃಷ್ಣ ಪ್ರಮುಖರು. ಕಾಂಗ್ರೆಸ್​ನ ನಿಷ್ಠಾವಂತ ಕಾರ್ಯಕರ್ತನಾಗಿ ಜನರ ಸೇವೆ ಮಾಡಿದ ಅವರು, ತಮ್ಮದೇ ತಂಡ ಕಟ್ಟಿಕೊಂಡು ರಾಜಾಜಿನಗರ ಮತಕ್ಷೇತ್ರದ ಪ್ರತಿ ವಾರ್ಡ್​ನಲ್ಲೂ ಪ್ರತಿದಿನ 4-5 ಸಾವಿರ ಆಹಾರ ಪೊಟ್ಟಣ ಹಂಚಿದ್ದರು. ಇಸ್ಕಾನ್ ಸಂಸ್ಥೆ ಸಹಕಾರದೊಂದಿಗೆ ನಿತ್ಯ 22 ಬಾಕ್ಸ್ ಊಟವನ್ನು ತರಿಸಿ 2 ಸಾವಿರ ಜನರಿಗೆ ಪ್ರತಿದಿನ, 11 ತಿಂಗಳು ಕಾಲ ಕಾಮಾಕ್ಷಿಪಾಳ್ಯದ 10 ಸ್ಥಳಗಳಲ್ಲಿ ಬಡವರಿಗೆ ಊಟದ ವ್ಯವಸ್ಥೆ ಮಾಡಿದ್ದರು. ಡಿ.ಕೆ. ಶಿವಕುಮಾರ್ ಅವರ ಸಲಹೆ ಮತ್ತು ಸಹಕಾರದಿಂದ 15ರಿಂದ 20 ಸಾವಿರ ದಿನಸಿ ಕಿಟ್​ಗಳನ್ನು ವಿತರಣೆ ಮಾಡಿದ್ದರು. ಆಸ್ಪತ್ರೆಗಳಿಗೆ ಮಾಸ್ಕ್, ಸ್ಯಾನಿಟೈಸರ್ ಮತ್ತು ಕೈಗವಸು ವಿತರಿಸಿದ್ದರು. ಪೊಲೀಸ್ ಠಾಣೆಗಳ ಸಿಬ್ಬಂದಿಗೂ ಊಟ ನೀಡಿದ್ದರು. ವೈಯಕ್ತಿಕವಾಗಿ ಲಕ್ಷಾಂತರ ರೂ. ಖರ್ಚು ಮಾಡಿ ಬಡವರಿಗೆ ನೆರವಾಗಿದ್ದಾರೆ. ಪ್ರತಿವರ್ಷ 30ರಿಂದ 40 ವಿದ್ಯಾರ್ಥಿಗಳ ಶಾಲಾ-ಕಾಲೇಜು ಶುಲ್ಕವನ್ನು ಭರಿಸಿ ಬಡ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ. ಮಾಲಿನ್ಯ ನಿವಾರಣಾ ಸಂಸ್ಥೆಯಾದ ‘ರಚನಾ’ ಮೂಲಕ ರಾಧಾಕೃಷ್ಣ ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಸಂಸ್ಥೆಯ ಅಧ್ಯಕ್ಷರಾಗಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಹಲವು ಶಿಬಿರಗಳನ್ನು ಮಾಡಿದ್ದಾರೆ. ಅಲ್ಲದೇ ಸೇವಾ ಮನೋಭಾವವುಳ್ಳ ಹತ್ತಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

  ತಾವರೆಕೆರೆ ನರಸೇಗೌಡ ರಾಧಾಕೃಷ್ಣ (ಟಿ.ಎನ್. ರಾಧಾಕೃಷ್ಣ), ಮಾಗಡಿ ರಸ್ತೆಯ ತಾವರೆಕೆರೆ ಗ್ರಾಮದವರು. ತಂದೆ ಟಿ.ಕೆ. ನರಸೇಗೌಡ, ತಾಯಿ ಎಂ.ಕೆ. ಜಯಮ್ಮ. ಕೃಷಿಕ ಕುಟುಂಬ ಹಿನ್ನೆಲೆವುಳ್ಳವರು. ರಾಧಾಕೃಷ್ಣ ಅವರಿಗೆ ದರ್ಶಕ್ ಗೌಡ, ಸಂಜನಾ ಹೆಸರಿನ ಪುತ್ರ-ಪುತ್ರಿ ಇದ್ದಾರೆ. ಇಂಜಿನಿಯರ್ ಆಗಿದ್ದ ಮಗ ನಂತರ ನಟನೆ ಬಗ್ಗೆ ಆಸಕ್ತಿ ಮೂಡಿ ಸದ್ಯ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾನೆ. ಮಗಳು ಇಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಪತ್ನಿ ರತ್ನಮ್ಮ ಗೃಹಿಣಿಯಾಗಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ದೊಡ್ಡಬಳ್ಳಾಪುರ ತಾಲೂಕಿನ ವಡಗೆರೆಯಲ್ಲಿ, ಪ್ರೌಢಶಾಲಾ ಶಿಕ್ಷಣವನ್ನು ತಾವರೆಕೆರೆಯಲ್ಲಿ ವ್ಯಾಸಂಗ ಮಾಡಿದ ರಾಧಾಕೃಷ್ಣ ಅವರು, ಬಳಿಕ ಬೆಂಗಳೂರಿನ ವಿ.ವಿ. ಪುರ ಕಾಲೇಜಿನಲ್ಲಿ ಪಿಯುಸಿಗೆ ಸೇರಿದರು. ವಿಜ್ಞಾನ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದರು. ಉತ್ತಮ ಅಂಕ ಪಡೆದ ಹಿನ್ನೆಲೆ ಯೂನಿವರ್ಸಿಟಿ (ಖ್ಖಿಇಉ) ಶ್ರೀ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಸರ್ಕಾರಿ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗಕ್ಕೆ ಪ್ರವೇಶ ಸಿಕ್ಕಿತು. ಬಿ.ಇ. ಪದವಿಯನ್ನೂ ಡಿಸ್ಟಿಂಕ್ಷನ್​ನಲ್ಲಿ ಪಾಸ್ ಮಾಡಿದರು. ಬಳಿಕ ಬೆಂಗಳೂರು ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಒಂದೂವರೆ ವರ್ಷ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ಉನ್ನತ ಶಿಕ್ಷಣಕ್ಕಾಗಿ ಅಮೆರಿಕದ ಎರಡು ವಿವಿಗಳಿಗೆ ಆಯ್ಕೆಯಾಗಿದ್ದರೂ ಕಾರಣಾಂತರಗಳಿಂದ ಹೋಗಲಿಲ್ಲ. ಇದರ ಮಧ್ಯೆ ‘ನ್ಯೂ ಗೌರ್ನ್ ಮೆಂಟ್ ಎಲೆಕ್ಟ್ರಿಕ್ ಫ್ಯಾಕ್ಟರಿ’ಯಲ್ಲಿ (ಎನ್​ಜಿಇಎಫ್) ಇಂಜಿನಿಯರ್ ಆಗಿ ಸೇರ್ಪಡೆಯಾದರು. ಅಲ್ಲಿ 14 ವರ್ಷಗಳ ಕಾಲ ಸೇವೆ ಸಲ್ಲಿಸಿ, ಡಿಜಿಎಂಗೆ ಬಡ್ತಿ ಪಡೆದರು. ನಂತರ ಎನ್​ಜಿಎಫ್​ನಿಂದ ಸ್ವಯಂ ನಿವೃತ್ತಿ ಪಡೆದರು.

  ಬೆಂಗಳೂರು ರತ್ನ: ಸಹಕಾರಮೂರ್ತಿ ರಾಧಾಕೃಷ್ಣ, ಜನಸೇವೆಯತ್ತ ಸದಾ ಗಮನ

  ಸರಳ- ಸಜ್ಜನಿಕೆಯ ವ್ಯಕ್ತಿತ್ವ: 

  ರಾಧಾಕೃಷ್ಣ ಅವರ ತಂದೆ ನರಸೇಗೌಡ ತಾವರೆಕೆರೆ ಹೋಬಳಿಗೆ ಮೊದಲನೇ ಪದವೀಧರರಾಗಿದ್ದರು. ತಾತ ಪಟೇಲ್ ಕೆಂಪೇಗೌಡರದು ಒಳ್ಳೆಯ ಹೆಸರು. ಇವರು ಮಾಗಡಿ ತಾಲೂಕಿನಲ್ಲಿ ಹೆಚ್ಚಿನ ತೆರಿಗೆ ಪಾವತಿದಾರರಾಗಿದ್ದರು. ತಾವರೆಕೆರೆಯಲ್ಲಿ 570, ಕಲ್ಲೂರು ಬಳಿ 150 ಎಕರೆ ಜಮೀನು ಸಂಪಾದಿಸಿದ್ದರು. ಜತೆಗೆ ತಿಪ್ಪಗೊಂಡನಹಳ್ಳಿ ಆಣೆಕಟ್ಟೆ ಕಾಮಗಾರಿಯ ಮುಖ್ಯ ಗುತ್ತಿಗೆದಾರರಾಗಿದ್ದರು. ದುರದೃಷ್ಟವಶಾತ್ 39ನೇ ವಯಸ್ಸಿಗೆ ಬಸ್ ಅಪಘಾತದಲ್ಲಿ ತೀರಿಕೊಂಡರು. ರಾಧಾಕೃಷ್ಣ ಅವರದು ಕೃಷಿ ಹಿನ್ನೆಲೆಯ ಕುಟುಂಬವಾದ್ದರಿಂದ ಇಂದಿಗೂ ವ್ಯವಸಾಯದ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಚಿಕ್ಕಮಧುರೆ ಸಮೀಪದ ವಡಗೆರೆ ಬಳಿ 25 ಎಕರೆ ಜಮೀನಿನಲ್ಲಿ ಮೊದಲು ವ್ಯವಸಾಯ ಮಾಡುತ್ತಿದ್ದರು. ನಂತರ ನೀರಿನ ಕೊರತೆ ಉಂಟಾಗಿ ಅದನ್ನು ತೋಟವನ್ನಾಗಿ ಪರಿವರ್ತಿಸಿದ್ದಾರೆ. ಇಷ್ಟೆಲ್ಲ ಇದ್ದರೂ ರಾಧಾಕೃಷ್ಣ ಸರಳ ಜೀವನ ನಡೆಸುತ್ತಿದ್ದಾರೆ.

  ನನ್ನ ಸಮಾಜ ಸೇವೆಯನ್ನು ಗುರುತಿಸಿದ ಡಿ.ಕೆ. ಶಿವಕುಮಾರ್ ಅವರು ರಾಜಕೀಯಕ್ಕೆ ನನ್ನನ್ನು ಪರಿಚಯಿಸಿದರು. ಅವರಿಂದಲೇ ರಾಜಕೀಯಕ್ಕೆ ನಾನು ಬಂದೆ. ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ನನಗೆ ಟಿಕೆಟ್ ಕೊಡುತ್ತಾರೆ ಎಂಬ ಭರವಸೆ ಇದೆ.

  | ಟಿ.ಎನ್.ರಾಧಾಕೃಷ್ಣ, ರಾಜಾಜಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ

  ‘ವಿಜಯವಾಣಿ’ ಬಗ್ಗೆ ಧನ್ಯತಾ ಭಾವ

  ನಾನು ಬಹಳ ವರ್ಷಗಳಿಂದ ಸಮಾಜಸೇವೆಯನ್ನು ಮಾಡಿಕೊಂಡು ಬರುತ್ತಿದ್ದೇನೆ. ನನ್ನ ಜೀವನದಲ್ಲಿ ಮೊದಲನೇ ಬಾರಿಗೆ ಮಾಧ್ಯಮ ಸಂಸ್ಥೆಯೊಂದು ನನ್ನ ಸೇವೆಯನ್ನು ಗುರುತಿಸಿ ‘ಬೆಂಗಳೂರು ರತ್ನ’ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿದೆ. ಇದರಿಂದ ಬಹಳ ಹೆಮ್ಮೆ ಎನಿಸುತ್ತಿದೆ. ನಾನು ಮಾಡಿರುವ ಅಳಿಲು ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದ್ದು, ‘ವಿಜಯವಾಣಿ’ ಸಂಸ್ಥೆ ಮೇಲೆ ನನಗೆ ಧನ್ಯತಾ ಭಾವವಿದೆ ಎಂದು ಟಿ.ಎನ್. ರಾಧಾಕೃಷ್ಣ ತಿಳಿಸಿದ್ದಾರೆ.

  ಲಭಿಸಿರುವ ಪ್ರಶಸ್ತಿಗಳು

  ಸಮಾಜಸೇವಕ ರಾಧಾಕೃಷ್ಣ ಅವರನ್ನು ಹಲವು ಪ್ರಶಸ್ತಿ ಅರಸಿ ಬಂದಿವೆ. ಅಬ್ದುಲ್ ಕಲಾಂ ಸ್ವರ್ಣಕಮಲ ರಾಷ್ಟ್ರೀಯ ಪ್ರಶಸ್ತಿ, ನವ ಮಹಿಳಾ ಜಾಗೃತಿ ವೇದಿಕೆ ವತಿಯಿಂದ ‘ನವಭಾರತ ಭೂಷಣ ಪ್ರಶಸ್ತಿ’, ಕುವೆಂಪು ಕಲಾನಿಕೇತನ ವತಿಯಿಂದ ಶ್ರೀರಕ್ಷಾ ಮಂತ್ರಮಾಂಗಲ್ಯ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ಸನ್ಮಾನಗಳಿಗೆ ಅವರು ಕೊರಳೊಡ್ಡಿದ್ದಾರೆ.

  ಬೆಂಗಳೂರು ರತ್ನ: ಸಹಕಾರಮೂರ್ತಿ ರಾಧಾಕೃಷ್ಣ, ಜನಸೇವೆಯತ್ತ ಸದಾ ಗಮನ

  ರಾಜಕೀಯದ ತೀವ್ರ ಸೆಳೆತ

  ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ದ್ವಿತೀಯ ಪಿಯುಸಿಯಲ್ಲಿ ರಾಧಾಕೃಷ್ಣರ ಸಹಪಾಠಿಯಾಗಿದ್ದರು. ಅವರು ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಉತ್ತರಹಳ್ಳಿ ಕ್ಷೇತ್ರದಲ್ಲಿ ರಾಧಾಕೃಷ್ಣರ ಸಹಕಾರವನ್ನು ಕೋರುತ್ತಿದ್ದರು. ನಂತರದ ದಿನಗಳಲ್ಲಿ ಅಶೋಕ್ ಜತೆ ಒಡನಾಟ ಹೆಚ್ಚಾಗಿ 2010ರಲ್ಲಿ ಕಾಪೋರೇಷನ್ ಚುನಾವಣೆಗೆ ನಿಲ್ಲುವಂತೆ ರಾಧಾಕೃಷ್ಣರಿಗೆ ಅಶೋಕ್ ಸಲಹೆ ನೀಡಿದರು. ಆಗ ಅವರಲ್ಲಿ ರಾಜಕೀಯಕ್ಕೆ ಬರುವ ಆಸೆ ಚಿಗುರೊಡೆಯಿತು. 2010ರಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾಗಿ, ಪಕ್ಷದ ಕೆಲಸ ಕಾರ್ಯಗಳಲ್ಲಿ ಸಕ್ರಿಯರಾದರು. ಶಾಸಕ ಎಸ್.ಟಿ. ಸೋಮಶೇಖರ್ ಕೂಡ ಇವರ ಸ್ನೇಹಿತ, ಅವರು ಮೊದಲು ಪದವೀಧರರ ಕೋ-ಆಪರೇಟಿವ್ ಸೊಸೈಟಿ ಮತ್ತು ಭಾರತ್ ಕೋ-ಆಪರೇಟಿವ್ ಬ್ಯಾಂಕ್​ನ ನಿರ್ದೇಶಕರಾಗಿದ್ದವರು. ಹೀಗಾಗಿ ಇಬ್ಬರೂ ಇಂದಿಗೂ ತುಂಬಾ ಆತ್ಮೀಯರಾಗಿದ್ದಾರೆ. ರಾಧಾಕೃಷ್ಣ ಬ್ಲಾಕ್ ಎಂಪಿ, ಎಂಎಲ್​ಎ, ಬಿಬಿಎಂಪಿ ಚುನಾವಣೆ ವೇಳೆ ಕಾರ್ಯಕರ್ತರಿಗೆ ಮತ್ತು ಬೂತ್ ಮಟ್ಟದ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಿ ರಾಜಕೀಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಸತತವಾಗಿ ದುಡಿದಿದ್ದಾರೆ.

  ಪಾಲಿಕೆ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷೆ

  ರಾಧಾಕೃಷ್ಣ ಅವರು ಮುಂಬರುವ ಬಿಬಿಎಂಪಿ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಗೆದ್ದರೆ ವಾರ್ಡ್​ನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದಾರೆ. ‘ಬಡವರಿಗೆ ಸಹಾಯ ಮಾಡುತ್ತೇನೆ. ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಾಗೂ ಬಡವರ ವೈದ್ಯಕೀಯ ವೆಚ್ಚ ಸೇರಿ, ಬಡವರ ಪರ ಕಾಳಜಿಗಳಿಗೆ ಶಾಶ್ವತ ವ್ಯವಸ್ಥೆಗೆ ದುಡಿಯುತ್ತೇನೆ. ಪ್ರಸ್ತುತ ಸ್ನೇಹ ಬಳಗದ ಮೂಲಕ ಈಗಾಗಲೇ ಹಲವು ಸಮಾಜಮುಖಿ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಅದನ್ನು ಒಂದು ಟ್ರಸ್ಟ್ ಮಾಡಿ ಅದರ ಮೂಲಕ ಮತ್ತಷ್ಟು ಜನಪರ ಕೆಲಸ ಕಾರ್ಯಗಳನ್ನು ಮಾಡುತ್ತೇನೆ’ ಎನ್ನುತ್ತಾರೆ ರಾಧಾಕೃಷ್ಣ.

  ಸಹಕಾರ ಕ್ಷೇತ್ರಕ್ಕೆ ಕೊಡುಗೆ

  ಸ್ವಯಂನಿವೃತ್ತಿ ಪಡೆದ ನಂತರ ರಾಧಾಕೃಷ್ಣ ಸಹಕಾರ ಕ್ಷೇತ್ರದ ಕಡೆ ಮುಖಮಾಡಲು ‘ಸಹಕಾರಿ ರತ್ನ’ ಪುರಸ್ಕೃತ ಬಿ.ಎಲ್. ಲಕ್ಕೇಗೌಡ ಅವರೇ ಕಾರಣ. ಲಕ್ಕೇಗೌಡರು ರಾಧಾಕೃಷ್ಣರ ತಂದೆಯ ಸಹಪಾಠಿಗಳಾಗಿದ್ದರು. ಸಹಕಾರ ಕ್ಷೇತ್ರದಲ್ಲಿ ಅವರೊಂದಿಗೆ ದುಡಿದ ರಾಧಾಕೃಷ್ಣ, ಲಕ್ಕೇಗೌಡರೊಂದಿಗೆ ಬೆಂಗಳೂರು ಪದವೀಧರರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಹುಟ್ಟುಹಾಕಿದರು. ಸೊಸೈಟಿಯಲ್ಲಿ ಈಗ 15 ಸಾವಿರ ಸದಸ್ಯರಿದ್ದು, ಸೊಸೈಟಿಯ ಕಾರ್ಯವ್ಯಾಪ್ತಿ ಹಳೇ ಮೈಸೂರುವರೆಗೂ ವಿಸ್ತರಣೆಯಾಗಿದೆ. ಪ್ರಧಾನ ಕಚೇರಿ ಬಸವೇಶ್ವರನಗರದಲ್ಲಿದೆ. 33 ವರ್ಷಗಳಿಂದ ಈ ಸಂಸ್ಥೆಯ ಉಪಾಧ್ಯಕ್ಷರಾಗಿ ನಂತರ 11 ವರ್ಷ ಅದರ ಅಧ್ಯಕ್ಷರಾಗಿ, ಹಾಲಿ ನಿರ್ದೇಶಕ ರಾಗಿ ನಿರಂತರ ದುಡಿಯುತ್ತಿದ್ದಾರೆ.

  ರಾಜಕೀಯಕ್ಕೆ ಪರಿಚಯಿಸಿದ ಡಿಕೆಶಿ

  ರಾಧಾಕೃಷ್ಣ ತಮ್ಮ ಸ್ನೇಹಿತರೊಂದಿಗೆ ಡಿ.ಕೆ. ಶಿವಕುಮಾರ್ ಬಳಿ ಹೋಗಿ ಬಿಬಿಎಂಪಿ ಚುನಾವಣೆಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಅದು ಫಲ ನೀಡಿತು. ಹೀಗಾಗಿ 2010ರಲ್ಲಿ ರಾಜಾಜಿನಗರ ಕ್ಷೇತ್ರದ ಕಾಮಾಕ್ಷಿಪಾಳ್ಯ ವಾರ್ಡ್​ನಿಂದ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಿದರು. ಚುನಾವಣೆಯಲ್ಲಿ ಕೆಲವೇ ಕೆಲವು ಮತಗಳ ಅಂತರದಿಂದ ಸೋಲುಂಡರು. ಆದರೂ ಧೃತಿಗೆಡದೆ ಇಂದಿಗೂ ಕಾಂಗ್ರೆಸ್ ಪಕ್ಷಕ್ಕೆ ಪ್ರಾಮಾಣಿಕರಾಗಿ ದುಡಿಯುತ್ತಿದ್ದಾರೆ. ಮೊದಲು ಕಾಂಗ್ರೆಸ್ ಸದಸ್ಯನಾಗಿದ್ದವರಿಗೆ ಪಕ್ಷವು ಬೆಂಗಳೂರು ನಗರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಸ್ಥಾನ, ನಂತರ ರಾಜಾಜಿನಗರ ಕ್ಷೇತ್ರದ ಬ್ಲಾಕ್​ನ ಉಪಾಧ್ಯಕ್ಷ ಸ್ಥಾನ, ಹಾಲಿ ರಾಜಾಜಿನಗರ ಬ್ಲಾಕ್ ಸಮಿತಿಯ ಅಧ್ಯಕ್ಷರ ಸ್ಥಾನವನ್ನು ನೀಡಿದೆ.

  ರಾಧಾಕೃಷ್ಣ ಉತ್ತಮ ಸಮಾಜಸೇವಕ, ಸಾಮಾಜಿಕ ಕಳಕಳಿ ಇರುವ ವ್ಯಕ್ತಿ. ಎಲ್ಲರನ್ನೊಳಗೊಂಡಂತೆ ಸಾರ್ವಜನಿಕ ಜೀವನದಲ್ಲಿ ಉತ್ತಮವಾದ ಕೆಲಸ ಮಾಡಿಸುವ ಜನನಾಯಕ. ಅವರಿಗೆ ಪಕ್ಷ ಮತ್ತಷ್ಟು ಹೆಚ್ಚಿನ ಜವಾಬ್ದಾರಿಯನ್ನು ನೀಡಲಿ. ಅವರಿಗೆ ಒಳ್ಳೆಯದಾಗಲಿ.

  | ಎಚ್.ಎಂ. ರೇವಣ್ಣ ಮಾಜಿ ಸಚಿವ

  ರಾಧಾಕೃಷ್ಣ 2008ರಿಂದಲೂ ಕಾಂಗ್ರೆಸ್​ನಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದಾರೆ. ಅವರ ಪ್ರಾಮಾಣಿಕತೆ ಮತ್ತು ನಿಷ್ಠೆ ಗಮನಾರ್ಹ. 2010ರಲ್ಲೇ ಪಕ್ಷ ಅವರಿಗೆ ಬಿಬಿಎಂಪಿ ಚುನಾವಣೆಗೆ ಟಿಕೆಟ್ ನೀಡಿತ್ತು. ಆದರೆ, ಕೆಲವೇ ಮತಗಳ ಅಂತರದಿಂದ ಸೋತಿದ್ದರು. ಇದರಿಂದ ಧೃತಿಗೆಡದೆ ಅವರು ಇಂದಿನವರೆಗೂ ಜನಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಅವರ ರಾಜಕೀಯ ಭವಿಷ್ಯ ಉತ್ತಮವಾಗಲಿ.

  | ಜಿ. ಪದ್ಮಾವತಿ ಮಾಜಿ ಮೇಯರ್

  ರಾಧಾಕೃಷ್ಣ ಅವರು ಪ್ರಚಾರದ ಹಂಗಿಲ್ಲದೆ ಕೆಲಸ ಮಾಡುತ್ತಾರೆ. ಹೆಣ್ಣುಮಕ್ಕಳ ಕಷ್ಟಕ್ಕೆ ಕೂಡಲೇ ಸ್ಪಂದಿಸುತ್ತಾರೆ. ಕರೊನಾ ವೇಳೆ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ತುಂಬ ಜನರಿಗೆ ಸಹಾಯ ಮಾಡಿದ್ದಾರೆ. ಎಲ್ಲರನ್ನೂ ಸಮಾನವಾಗಿ ನೋಡುವ ಹೃದಯವಂತರು. ಇಂತಹವರು ಚುನಾವಣೆಯಲ್ಲಿ ಗೆದ್ದು ಮತ್ತಷ್ಟು ಸಮಾಜಸೇವೆ ಮಾಡಲಿ ಎಂಬುದು ನಮ್ಮ ಆಶಯ.

  | ಉಷಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ, ಕಾಮಾಕ್ಷಿಪಾಳ್ಯ ವಾರ್ಡ್

  ರಾಧಾಕೃಷ್ಣ ಅವರೊಂದಿಗೆ 5 ವರ್ಷಗಳ ಒಡನಾಟವಿದೆ. ಅವರು ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ದುಡಿದಿದ್ದಾರೆ. ಅಪ್ಪಟ ಕನ್ನಡ ಪ್ರೇಮಿ ಮತ್ತು ಪರಿಸರಪ್ರೇಮಿಯಾಗಿದ್ದಾರೆ. ಸ್ವದೇಶಿ ಸಂಸ್ಕೃತಿಯನ್ನು ಪಾಲಿಸುತ್ತಾರೆ. ಬಡವರು- ಕಾರ್ವಿುಕರ ಬಗ್ಗೆ ಅಪಾರ ಕಾಳಜಿ ಇದೆ. ಇಂಥವರು ರಾಜಕೀಯದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ.

  | ಅಂಜನಾಮೂರ್ತಿ ಕಾಂಗ್ರೆಸ್ ಮುಖಂಡ

  ರಾಧಾಕೃಷ್ಣ ಅವರನ್ನು ನಾನು ಚಿಕ್ಕಂದಿನಿಂದಲೂ ನೋಡಿ ಬೆಳೆದಿದ್ದೇನೆ. ಸಮಾಜಸೇವೆ ಮಾಡುವ ಮನೋಭಾವನೆ ಇದ್ದರೆ ನನ್ನ ಜತೆ ಬನ್ನಿ ಎಂದು ಕರೆದರು. ಅವರ ಕರೆಗೆ ಓಗೊಟ್ಟು ಅವರೊಂದಿಗೆ ಹಲವು ಬಾರಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಅದರಲ್ಲೂ ಕರೊನಾ ವೇಳೆ ಮಾನವೀಯತೆ ದೃಷ್ಟಿಯಿಂದ ಜನರಿಗೆ ಸಾವಿರಾರು ಫುಡ್ ಕಿಟ್ ಮತ್ತು ಔಷಧ ಒದಗಿಸಿಕೊಟ್ಟರು. ಇವರು ಸರಳ ವ್ಯಕ್ತಿ ಆಗಿದ್ದು, ನಿಸ್ವಾರ್ಥದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

  | ಯದುಕುಮಾರ್, ಕಾಮಾಕ್ಷಿಪಾಳ್ಯ ವಾರ್ಡ್​ನ ಕಾಂಗ್ರೆಸ್ ಅಧ್ಯಕ್ಷ

  ಟಿ.ಎನ್. ರಾಧಾಕೃಷ್ಣ ನನಗೆ 40 ವರ್ಷಗಳಿಂದ ಪರಿಚಿತರು. ನಾವಿಬ್ಬರೂ ಕಾಲೇಜಿನ ಸಹಪಾಠಿಗಳು ಮತ್ತು ಎನ್​ಜಿಇಎಫ್ ಸಹೋದ್ಯೋಗಿ ಆಗಿದ್ದವರು. ನಿವೃತ್ತರಾದ ನಂತರ ಅವರು ತಮ್ಮನ್ನು ಸಂಪೂರ್ಣವಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡರು. ಸುಶಿಕ್ಷಿತರು ರಾಜಕೀಯಕ್ಕೆ ಬಂದರೆ ಬದಲಾವಣೆ ಮಾಡಬಹುದು. ರಾಧಾಕೃಷ್ಣ ಅವರು ರಾಜಕೀಯ ಮುನ್ನೆಲೆಗೆ ಬಂದಲ್ಲಿ ಮತ್ತಷ್ಟು ಸಮಾಜಸೇವೆ ಮಾಡುತ್ತಾರೆ.

  | ಎಸ್. ಶ್ರೀನಿವಾಸ್​ರೆಡ್ಡಿ ರಾಧಾಕೃಷ್ಣರ ಸ್ನೇಹಿತ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts