More

    ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಲು ಸಚಿವ ಬಿ.ಶ್ರೀರಾಮುಲು ಸೂಚನೆ

    ಬಳ್ಳಾರಿ: ಚಿಕಿತ್ಸೆಗೆ ಆಗಮಿಸುವ ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ, ಸೂಕ್ತ ಚಿಕಿತ್ಸೆ ನೀಡುವುದರ ಮೂಲಕ ಗುಣಮುಖರನ್ನಾಗಿ ಮಾಡಿ ಎಂದು ಸಚಿವ ಬಿ.ಶ್ರೀರಾಮುಲು ಸೂಚನೆ ನೀಡಿದರು.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂತ್ರಾಲಯ, ವಿಮ್ಸ್ ಸಹಯೋಗದಲ್ಲಿ ಪ್ರಧಾನಮಂತ್ರಿ ಸ್ವಸ್ಥ್ಯ ಸುರಕ್ಷಾ ಯೋಜನೆಯಡಿ ನಿರ್ಮಿಸಲಾಗಿರುವ ಟ್ರಾಮಾ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಯಲ್ಲಿ ಟ್ರಾಮಾಕೇರ್ ಸೇವೆಗಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಮಾತನಾಡಿ, ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಬರಲು ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಹಾಗೂ ಬಿ. ಶ್ರೆರಾಮುಲು ಕಾರಣ, ಜನಪ್ರತಿನಿಧಿಗಳ ಇಚ್ಛಾಶಕ್ತಿಯಿಂದ ಮಾತ್ರ ಇಂತಹ ಕಟ್ಟಡ ತಲೆ ಎತ್ತಲು ಸಾಧ್ಯ ಎಂದರು.

    ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹನುಮಂತಪ್ಪ, ಬುಡಾ ಅಧ್ಯಕ್ಷ ಪಿ.ಪಾಲನ್ನ, ಡಿಸಿ ಪವನಕುಮಾರ ಮಾಲಪಾಟಿ, ಎಸ್ಪಿ ಸದುಲು ಅದಾವತ್, ಮಾಜಿ ಸಂಸದರಾದ ಸಣ್ಣ ಫಕೀರಪ್ಪ, ಜೆ.ಶಾಂತಾ, ಮಾಜಿ ಶಾಸಕ ಸುರೇಶ ಬಾಬು, ಮಹಾನಗರ ಪಾಲಿಕೆ ಸದಸ್ಯರು ಇದ್ದರು.

    ಮನೆಗಳು ತುರ್ತಾಗಿ ಪೂರ್ಣಗೊಳಿಸಿ: ನನೆಗುದಿಗೆ ಬಿದ್ದಿರುವ ಮುಂಡರಗಿ ಆಶ್ರಯ ವಸತಿ ಯೋಜನೆಯಡಿಯ ಮನೆಗಳನ್ನು ತುರ್ತಾಗಿ ಪೂರ್ಣಗೊಳಿಸಿ ಫಲಾನುಭವಿಗಳಿಗೆ ವಿತರಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಸೂಚನೆ ನೀಡಿದ್ದಾರೆ. ನಗರದ ಹೊರವಲಯದ ಮುಂಡರಗಿ ಆಶ್ರಯ ವಸತಿ ಬಡಾವಣೆಯಲ್ಲಿ ಶನಿವಾರ ಬಡಾವಣೆ ಪರಿಶೀಲನೆ ನಡೆಸಿ ಮಾತನಾಡಿದರು. ಬ್ಯಾಂಕ್ ಸಾಲಸೌಲಭ್ಯ ಪಡೆದ 600 ಜನರಿಗೆ ಮೊದಲ ಹಂತದಲ್ಲಿ ಮೂರು ತಿಂಗಳಲ್ಲಿ ಮನೆಗಳನ್ನು ಪೂರ್ಣಗೊಳಿಸಿ, ಹೆಚ್ಚುವರಿ ಹಣವನ್ನು ಸಿಎಂ ಮತ್ತು ವಸತಿ ಸಚಿವರೊಂದಿಗೆ ಚರ್ಚಿಸಿ ಸರ್ಕಾರದಿಂದ ಒದಗಿಸಿ ಕೊಡಲಾಗುವುದು ಎಂದರು.

    ಅಧಿಕಾರ ತ್ಯಾಗಕ್ಕೂ ಸಿದ್ಧ: ಕಾಂಗ್ರೆಸ್ 2023ಕ್ಕೆ ಅಧಿಕಾರಕ್ಕೆ ಬಂದೇ ಬರುತ್ತದೆ. ಅಂದು ಮುಖ್ಯಮಂತ್ರಿಗಳ ಕಾಲಿಗೆ ಬಿದ್ದಾದರೂ ವಾಲ್ಮೀಕಿ ಸಮುದಾಯಕ್ಕೆ 7.5 ಮೀಸಲಾತಿ ಕೊಡಿಸುವೆ. ಈಡೇರದಿದ್ದರೇ ಸಮುದಾಯಕ್ಕಾಗಿ ಅಧಿಕಾರ ತ್ಯಾಗಕ್ಕೂ ಸಿದ್ಧನಿರುವೆ ಎಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಹೇಳಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಮಿಶ್ರ ಸರ್ಕಾರದಲ್ಲಿ ಮೀಸಲಾತಿ ಪ್ರಗತಿಯಲ್ಲಿ ಇರುವಾಗಲೇ ಸರ್ಕಾರ ಬಿತ್ತು. ಆದರೆ, ಬಿಜೆಪಿ ಸರ್ಕಾರ ನಮ್ಮ ಸಮುದಾಯಕ್ಕೆ ಪೊಳ್ಳು ಭರವಸೆ ನೀಡುತ್ತಿದೆ. ಜತೆಗೆ ಸಮುದಾಯದ ಶ್ರೀಗಳನ್ನು ಕೂಡ ಕೆಲವರು ದಿಕ್ಕು ತಪ್ಪಿಸುತ್ತಿದ್ದಾರೆ. ಶ್ರೀರಾಮುಲುರನ್ನು ಸಮುದಾಯದ ಪರವಾಗಿ ಜನ ಬೆಳೆಸಿದ್ದಾರೆ. ಅವರಿಗೂ ಮೀಸಲಾತಿಗಾಗಿ ಹೋರಾಟ ಮಾಡುವಂತೆ ಮನವಿ ಮಾಡುತ್ತೇನೆ. ಸಮುದಾಯದ ಮೀಸಲಾತಿಯಲ್ಲಿ ಗೆದ್ದಿರುವ ನಾವು ಅದರ ಋಣ ತೀರಿಸಲು ಒಟ್ಟಾಗಿ ಹೋರಾಡಬೇಕಿದೆ. ಒಂದು ವೇಳೆ ಸಮುದಾಯ ಬಯಸಿದರೆ ಎಲ್ಲದಕ್ಕೂ ಸಿದ್ಧ ಎಂದು ನಾಗೇಂದ್ರ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts