More

    ಭಾರಿ ವಾಹನಗಳ ಸಂಚಾರ ನಿಯಂತ್ರಿಸಲು ಆಗ್ರಹಿಸಿದ ಮಹಾನಗಗರ ಪಾಲಿಕೆ ಸದಸ್ಯರು

    ಬಳ್ಳಾರಿ: ನಗರದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಭಾರಿ ವಾಹನಗಳ ಸಂಚಾರ ನಿಯಂತ್ರಿಸುವ ಜತೆ ರಸ್ತೆ ಬದಿಗಳಲ್ಲಿ ನಿಲುಗಡೆಯಾಗುವ ಲಾರಿಗಳನ್ನು ತಡೆಯುವಂತೆ ಆಗ್ರಹಿಸಿ ನಗರದ ಸಂಚಾರಿ ಠಾಣೆಯ ಎದುರು ಪಾಲಿಕೆ ಸದಸ್ಯರ ನೇತೃತ್ವದಲ್ಲಿ ಸಾರ್ವಜನಿಕರು ರಾಜ್ಯ ಹೆದ್ದಾರಿ ಸಂಚಾರ ತಡೆದು, ಜಿಲ್ಲಾಡಳಿತದ ವಿರುದ್ಧ ವಿವಿಧ ಘೋಷಣೆ ಕೂಗಿ ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.

    ಪಾಲಿಕೆ ಸದಸ್ಯ ಎಂ.ಪ್ರಭಂಜನ್ ಕುಮಾರ್ ಮಾತನಾಡಿ, ನಗರದ ಎಪಿಎಂಸಿ ವೃತ್ತದಲ್ಲಿ ಹೆಚ್ವಿನ ಸಂಖ್ಯೆಯಲ್ಲಿ ಲಾರಿಗಳು ಸಂಚರಿಸುತ್ತಿವೆ. ಮೂರು ತಿಂಗಳಿನಲ್ಲಿ ನಾಲ್ಕು ಅಪಘಾತಗಳು ಸಂಭವಿಸಿದ್ದು, ಘಟನೆಯಲ್ಲಿ ಕೆಲವರು ಮೃತಪಟ್ಟಿದ್ದಾರೆ. ಭಾರಿ ವಾಹನಗಳ ಸಂಚಾರದಿಂದ ಇತ್ತೀಚೆಗಷ್ಟೇ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಅಲ್ಲದೇ, ಭಾರಿ ವಾಹನಗಳ ಸಂಚಾರದಿಂದ ಶಾಲೆಗೆ ಹೋದ ವಿದ್ಯಾರ್ಥಿಗಳು ವಾಪಸ್ ಮನೆಗೆ ಬರುವವರೆಗೂ ಪಾಲಕರು ಆತಂಕದಲ್ಲೇ ಇರುವಂತಾಗಿದೆ. ನಗರದೊಳಗೆ ಸಂಚರಿಸುವ ಭಾರಿ ವಾಹನಗಳನ್ನು ನಿಯಂತ್ರಿಸಬೇಕು. ಇಲ್ಲದಿದ್ದರೆ ಅವುಗಳ ಸಂಚಾರಕ್ಕೆ ಸಮಯ ನಿಗದಿಪಡಿಸಬೇಕು. ರಸ್ತೆ ಬದಿಗಳಲ್ಲಿ ವಾಹನಗಳ ನಿಲುಗಡೆಯಿಂದ ನಗರ ಸ್ವಚ್ಛತೆಗೆ ತೊಂದರೆಯಾಗುತ್ತಿದ್ದು, ಇದಕ್ಕಾಗಿ ಇರುವ ಲಾರಿ ತಂಗುದಾಣದಲ್ಲೇ ಲಾರಿಗಳನ್ನು ನಿಲುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

    ಬಳಿಕ ಸ್ಥಳಕ್ಕೆ ಆಗಮಿಸಿದ ನಗರ ಡಿವೈಎಸ್ ಪಿ.ಶೇಖರಪ್ಪ, ಇಲ್ಲಿನ ತಂಗುದಾಣಕ್ಕಾಗಿ ಲಾರಿಗಳು ನಗರದೊಳಕ್ಕೆ ಬರುತ್ತಿವೆ. ಅದನ್ನು ನಿಯಂತ್ರಿಸಬೇಕಾದರೆ ಪಾಲಿಕೆಯವರು ತಂಗುದಾಣವನ್ನೇ ನಗರ ಹೊರವಲಯಕ್ಕೆ ಸ್ಥಳಾಂತರಿಸಬೇಕು ಸೇರಿದಂತೆ ಇತರೆ ವಿಷಯಗಳಲ್ಲಿ ಪಾಲಿಕೆ ನಮಗೆ ಸಹಕರಿಸಿದಲ್ಲಿ ಭಾರಿ ವಾಹನಗಳನ್ನು ನಿಯಂತ್ರಿಸಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

    ಬಳಿಕ ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ, ಎಸ್.ಪಿ.ಸೈದುಲು ಅದಾವತ್, ಸಂಚಾರಿ ಠಾಣೆ ವೃತ್ತ ನಿರೀಕ್ಷರಿಗೆ ಮನವಿ ಸಲ್ಲಿಸಿದರು. ಮೇಯರ್ ಎಂ.ರಾಜೇಶ್ವರಿ, ಉಪಮೇಯರ್ ಮುಬೀನಾ ಬಿ, ಸದಸ್ಯರಾದ ರಾಮಾಂಜನೇಯಲು, ಮುಲ್ಲಂಗಿ ನಂದೀಶ್, ರಾಜಶೇಖರ್, ಕುಬೇರ, ಜಬ್ಬಾರ್, ಪೇರಂ ವಿವೇಕ್ ಸೇರಿ ಮುಖಂಡರಾದ ರಿಜ್ವನ್ ಬಾನು, ಶಿವರಾಜ್, ಸೂರಿ, ಸೋಮಶೇಖರ್, ಹೊನ್ನಪ್ಪ, ಗೋವಿಂದರಾಜುಲು, ಅಯಾಜ್ ಅಹ್ಮದ್, ವೆಂಕಟೇಶ್ ಹೆಗಡೆ, ಬಿ.ಎಂ.ಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts