More

    ಕಾನೂನಿನ ಚೌಕಟ್ಟಿನಲ್ಲಿ ಭೂಮಿ ಖರೀದಿ: ಮಾಜಿ ಸಚಿವ ಸಂತೋಷ ಲಾಡ್ ಹೇಳಿಕೆ

    ಬಳ್ಳಾರಿ: ಸಂಡೂರು ತಾಲೂಕಿನ ಮಾಳಾಪುರದಲ್ಲಿ 47ಎಕರೆ ಭೂಮಿಯನ್ನು ಕಾನೂನಿನ ಚೌಕಟ್ಟಿನಲ್ಲಿ ಖರೀದಿಸಿದ್ದೇನೆ. ಯಾರನ್ನೂ ಒಕ್ಕಲೆಬ್ಬಿಸಿ ಪಡೆದಿಲ್ಲ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.

    ರಾಜಕೀಯವಾಗಿ ತೇಜೋವಧೆ ಮಾಡಲು ವಿನಾಕಾರಣ ಭೂಮಿಯನ್ನು ನುಂಗಿದ್ದಾರೆಂಬ ಆರೋಪವನ್ನು ನಮ್ಮ ಕುಟುಂಬದ ಮೇಲೆ ಮಾಡಲಾಗುತ್ತಿದೆ. 1996ರಲ್ಲಿ ಮಾಳಾಪುರ ಜಮೀನಿನ ಪಟ್ಟಾದಾರರಾದ ಮಕಾಶಿ ಹನುಮಗಾರಿ ಹೊನ್ನೂರಪ್ಪ ತಂದೆ ಹನುಮಂತಪ್ಪರಿಂದ ಖರೀದಿ ಪತ್ರದ ಮೂಲಕ ಸಂಡೂರಿನ ಉಪನೋಂದಣಿ ಅಧಿಕಾರಿ ಕಚೇರಿಯಲ್ಲಿ ನಮ್ಮ ಕುಟುಂಬಕ್ಕೆ ನೋಂದಾಯಿಸಲಾಗಿದೆ. ಇದಕ್ಕೆ ಪ್ರತಿ ವರ್ಷ ತೆರಿಗೆ ಕಟ್ಟುತ್ತಿದ್ದೇವೆ. ಜಮೀನಿನಲ್ಲಿ ಕೃಷಿ ಚಟುವಟಿಕೆಗಳು ಸಹ ನಡೆಯುತ್ತಿವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಮಾಳಾಪುರ ಭೂಮಿಯ ವಿಚಾರಕ್ಕೆ ಸಂಬಂಧಿಸಿ ಸಂಡೂರಿನ ನ್ಯಾಯಾಲಯದಲ್ಲಿ ಈ ಹಿಂದೆ ವಿಚಾರಣೆ ನಡೆದು, ನಮ್ಮ ಪರ ತೀರ್ಪು ಬಂದಿದೆ. ಆದರೂ, ಮಕಾಶಿ ಹನುಮಗಾರಿ ಹೊನ್ನೂರಪ್ಪ ಅವರು ಜಿಲ್ಲಾಧಿಕಾರಿಗಳನ್ನು ಪ್ರತಿವಾದಿಯನ್ನಾಗಿಸಿ ಮೇಲ್ಮನವಿ ಹೋಗಿರುವುದರಿಂದ ಕೂಡ್ಲಿಗಿಯ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿದ್ದು, ಇತ್ಯರ್ಥವಾಗಬೇಕಿದೆ. ಒಂದು ವೇಳೆ ನಮ್ಮ ಕುಟುಂಬದ್ದು ತಪ್ಪಿದೆ ಎಂದು ಸಾಬೀತಾದರೆ ಯಾವುದೇ ಕ್ರಮ ಜರುಗಿದರೂ ಸಿದ್ಧರಿದ್ದೇವೆ ಎಂದರು. ಶಾಸಕ ಈ ತುಕಾರಾಮ್, ಕಾಂಗ್ರೆಸ್‌ನ ಜಿಲ್ಲಾ ನಗರ ಸಮಿತಿ ಅಧ್ಯಕ್ಷ ಜಿ.ಎಸ್.ಮೊಹಮ್ಮದ್ ರಫೀಕ್, ಜಿಪಂ ಸದಸ್ಯರಾದ ಅಕ್ಷಯಲಾಡ್, ಎ.ಮಾನಯ್ಯ, ಮಾಜಿ ಮೇಯರ್ ವೆಂಕಟರಮಣ ಸೇರಿದಂತೆ ಮತ್ತಿತರರಿದ್ದರು.

    ಕಲಘಟಕಿಯಿಂದಲೇ ಸ್ಪರ್ಧೆ:
    ನನ್ನ ಜನ್ಮ ಭೂಮಿ ಬಳ್ಳಾರಿ ಜಿಲ್ಲೆಯಾದರೂ ಕರ್ಮಭೂಮಿ ಕಲಘಟಗಿ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಲಘಟಗಿಯಿಂದಲೇ ಸ್ಪರ್ಧೆ ಮಾಡುವೆ. ಕಲಘಟಗಿ ಕ್ಷೇತ್ರಕ್ಕೆ ಈ ಹಿಂದೆ ಶಾಸಕನಾದ ವೇಳೆ ನಾನು ಹೋಗಿಲ್ಲ ಎಂಬ ಆರೋಪದಿಂದ 26 ಸಾವಿರ ಮತಗಳ ಅಂತರದಿಂದ ಸೋಲಬೇಕಾಯಿತು. ಆ ತಪ್ಪನ್ನು ತಿದ್ದಿಕೊಳ್ಳುವುದಕ್ಕಾಗಿ ಈಗಾಗಲೇ ಕಲಘಟಗಿಯಲ್ಲಿ ಮನೆ ಮಾಡಿ, ಕ್ಷೇತ್ರದ ಜನರೊಂದಿಗಿರುವೆ. ಮುಂದೆ ಒಂದಲ್ಲ, ಒಂದು ದಿನ ಬಳ್ಳಾರಿಗೆ ಬರಲೇಬೇಕು. ಸದ್ಯ ಗಣಿ ಜಿಲ್ಲೆಯಲ್ಲಿ ರಾಜಕೀಯವಾಗಿ ಮತ್ತೆ ಜೀವನ ಆರಂಭಿಸುವ ಇರಾದೆಯಿಲ್ಲ ಎಂದು ಸಂತೋಷ ಲಾಡ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts