More

    ಬಳ್ಳಾರಿ ಜಿಲ್ಲೆಯಲ್ಲಿ ದಸರಾ ಹಬ್ಬ ಸಂಭ್ರಮ, ಸಡಗರ; ಶಮಿ ವೃಕ್ಷಕ್ಕೆ ಮಹಿಳೆಯರಿಂದ ವಿಶೇಷ ಪೂಜೆ

    ಕೂಡ್ಲಿಗಿ: ಪಟ್ಟಣ ಸೇರಿ ತಾಲೂಕಾದ್ಯಂತ ದಸರಾ ಹಬ್ಬ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಆಯುಧ ಪೂಜೆ ದಿನವಾದ ಭಾನುವಾರ ರೈತರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಕುಡುಗೋಲು, ಪಿಕಾಸಿ, ಗುದ್ದಲಿ, ಹಾರೆ, ಕುರ್ಜಿಗಿ, ಕುಂಟೆ ಇತರ ಕೃಷಿ ಸಲಕರಣೆಗಳನ್ನು ವಿವಿಧ ಹೂಗಳಿಂದ ಶೃಂಗರಿಸಿ ಪೂಜೆ ಸಲ್ಲಿಸಿದರು.

    ಇನ್ನೊಂದೆಡೆ ಬೈಕ್, ಕಾರು, ಟ್ರಾೃಕ್ಟರ್, ಲಾರಿ ಸೇರಿ ಇತರ ವಾಹನಗಳನ್ನು ಮಾಲೀಕರು ತೊಳೆದು ಪೂಜೆ ಮಾಡಿದರು. ಆಕರ್ಷಕವಾಗಿ ಹೂವಿನಹಾರಗಳಿಂದ ಸಿಂಗರಿಸಿದ್ದು ಕಂಡುಬಂತು. ಇನ್ನು ವಿಜಯದಶಮಿ ಹಬ್ಬದ ದಿನವಾದ ಸೋಮವಾರ ಬೆಳಗ್ಗೆಯಿಂದಲೇ ಮಹಿಳೆಯರು, ಮಕ್ಕಳು ಹೊಸಬಟ್ಟೆ ಧರಿಸಿ ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸುತ್ತಿರುವುದು ಸಾಮಾನ್ಯವಾಗಿತ್ತು. ಮಾರುಕಟ್ಟೆಯಲ್ಲಿ ಬಾಳೆಕಂಬ, ಹೂವು, ಹಣ್ಣುಗಳ ಮಾರಾಟ ಜೋರಾಗಿತ್ತು. ಆದರೂ, ಈ ಬಾರಿ ಕರೊನಾ ಹಾಗೂ ಅತಿವೃಷ್ಟಿಯಿಂದ ರೈತರ ಬೆಳೆಗಳು ನೀರು ಪಾಲಾಗಿದ್ದರಿಂದ ಹೂ, ಹಣ್ಣು, ತರಕಾರಿ ಬೆಲೆ ಏರಿಕೆಯಾಗಿತ್ತು. ಹೀಗಾಗಿ ಜನರು ಆರ್ಥಿಕ ಹೊರೆಯೊಂದಿಗೆ ಹಬ್ಬ ಆಚರಿಸಬೇಕಾಯಿತು.

    ಕಂಪ್ಲಿ: ಪಟ್ಟಣ ಸೇರಿ ತಾಲೂಕಿನಲ್ಲಿ ಕೆಲವೆಡೆ ವಿಜಯದಶಮಿ ಭಾನುವಾರ, ಇನ್ನೊಂದೆಡೆ ಸೋಮವಾರ ಆಚರಿಸಲಾಯಿತು. ಬಹುತೇಕ ರೈತರು ಭಾನುವಾರ ಆಯುಧ ಪೂಜೆ ಮಾಡಿದರು.ದೇವರ ಮನೆ, ಮನೆ ಅಂಗಳದಲ್ಲಿ ಕೃಷಿಗೆ ಬಳಸುವ ಕುಡುಗೋಲು, ಕೊಡಲಿ, ಪುಟ್ಟಿ, ಕತ್ತಿ, ಟಿಲ್ಲರ್, ಪಟ್ಲರ್, ಕುಂಟೆ, ಬ್ಲೇಡ್ ಮೊದಲಾದ ಪರಿಕರ, ಕೃಷಿ ಖರ್ಚಿನ ಲೆಕ್ಕಪುಸ್ತಕ, ಟ್ರ್ಯಾಕ್ಟರ್, ಬಂಡಿ ಸೇರಿ ವಾಹನಗಳೊಂದಿಗೆ ಇರಿಸಿ ಪೂಜೆ ಸಲ್ಲಿಸಿದರು. ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ನಿಮಿತ್ತ ಶಸ್ತಾಸ್ತ್ರಗಳನ್ನು ಇರಿಸಿ ಪೂಜಿಸಲಾಯಿತು. ವಿಜಯದಶಮಿ ದಿನ ಸೋಮಪ್ಪ ದೇವಸ್ಥಾನಕ್ಕೆ ತೆರಳುವ ಸೀಮೋಲ್ಲಂಘನ ಮೆರವಣಿಗೆ ರದ್ದಾಗಿದ್ದರಿಂದ, ಸಂಪ್ರದಾಯದಂತೆ ಭಕ್ತರು ವೈಯಕ್ತಿಕವಾಗಿ ದೇವಸ್ಥಾನಗಳಿಗೆ ತೆರಳಿ ಬನ್ನಿ ಮುಡಿಯಲಾಯಿತು.

    ಬಳ್ಳಾರಿ ಜಿಲ್ಲೆಯಲ್ಲಿ ದಸರಾ ಹಬ್ಬ ಸಂಭ್ರಮ, ಸಡಗರ; ಶಮಿ ವೃಕ್ಷಕ್ಕೆ ಮಹಿಳೆಯರಿಂದ ವಿಶೇಷ ಪೂಜೆ
    ಕಂಪ್ಲಿಯಲ್ಲಿ ಆಯುಧ ಪೂಜೆ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts