More

    ಸಮರ್ಪಕ ಚರಂಡಿ ವ್ಯವಸ್ಥೆಗಾಗಿ ಆಗ್ರಹಿಸಿ ನಾಲ್ಕು ಗಂಟೆ ತಾಳೂರು ರಸ್ತೆ ಸಂಚಾರ ಬಂದ್

    ಬಳ್ಳಾರಿ: ಇಲ್ಲಿನ ತಾಳೂರು ರಸ್ತೆಯ ರೇಣುಕಾ ನಗರದಲ್ಲಿ ಅನೇಕ ದಿನಗಳಿಂದ ಒಳಚರಂಡಿ ವ್ಯವಸ್ಥೆ ಸರಿಪಡಿಸದ ಮಹಾನಗರ ಪಾಲಿಕೆಯ ಅಧಿಕಾರಿಗಳ ನಡೆಯನ್ನು ಖಂಡಿಸಿ ಸ್ಥಳೀಯ ನೂರಾರು ನಿವಾಸಿಗಳು ತಾಳೂರು ರಸ್ತೆಯಲ್ಲಿ ಮಂಗಳವಾರ ನಾಲ್ಕು ಗಂಟೆಗೂ ಹೆಚ್ಚು ಸಂಚಾರ ತಡೆ ನಡೆಸಿದರು.

    ರೇಣುಕಾನಗರದ 7, 12ನೇ ಬಡವಾಣೆಯಲ್ಲಿ ಒಳಚರಂಡಿ ವ್ಯವಸ್ಥೆ ಹಾಳಾಗಿದ್ದು, ನೀರು ರಸ್ತೆಗೆ ಹರಿಯುತ್ತಿದೆ. ಇದರ ಜತೆ ಮಳೆ ನೀರು ಸೇರಿವೆ. ಈ ಬಗ್ಗೆ ಅನೇಕ ಬಾರಿ ಪಾಲಿಕೆ ಆಧಿಕಾರಿಗಳಿಗೆ ಮನವಿ ಮಾಡಿದ್ದು, ಡಿಸಿ, ಪಾಲಿಕೆ ಆಯುಕ್ತರು ಭೇಟಿ ನೀಡಿ ಪರಿಶೀಲಿಸಿ ಸಂಗ್ರಹ ನೀರನ್ನು ತೆಗೆಸಿದ್ದಾರೆ. ಆದರೆ, ಈವರೆಗೆ ಶಾಶ್ವತ ಕ್ರಮ ಜರುಗಿಸಿಲ್ಲ ಎಂದು ಪಾಲಿಕೆ ಆಯುಕ್ತರ ವಿರುದ್ಧ ನಿವಾಸಿಗಳು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಸಂಚಾರ ವ್ಯತ್ಯಯ: ಸಂಚಾರ ತಡೆ ನಡೆಸಿದ್ದರಿಂದ ಶಾಲಾ ಮಕ್ಕಳು, ವಿದ್ಯಾರ್ಥಿಗಳು ಸೇರಿದಂತೆ ವಾಹನ ಸಂಚಾರರು ಪರದಾಡಿದರು. ಪೊಲೀಸರು ರಸ್ತೆ ಬಂದ್ ಮಾಡದಂತೆ ಮನವಿ ಮಾಡಿದರೂ ಪ್ರತಿಭಟನೆಕಾರರು ಕ್ಯಾರೆ ಎನ್ನಲಿಲ್ಲ. ಪಾಲಿಕೆ ಅಧಿಕಾರಿ ಸ್ಥಳಕ್ಕೆ ಆಗಮಿಸಿ ಇಲ್ಲಿನ ಒಳಚರಂಡಿ ವ್ಯವಸ್ಥೆಗೆ, 48 ಲಕ್ಷ ರೂ. ಮಂಜೂರಗಿದ್ದು, ಎರಡು ದಿನದಲ್ಲಿ ಆರಂಭಿಸಲಿದ್ದಾರೆ ಎಂದು ಹೇಳಿದರು. ಆದರೆ, ಇದಕ್ಕೆ ಪ್ರತಿಭಟನಾ ನಿರತರು ಕಿವಿಗೊಡಲಿಲ್ಲ. ಬಳಿಕ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಬಂದು ಪ್ರತಿಭಟನೆ ಹಿಂತೆಗೆದು ಕೊಳ್ಳುವಂತೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಜಿಲ್ಲಾಧಿಕಾರಿ ಬಳಿ ಹೋಗಿ ಕೂಡಲೇ 150 ಕೋಟಿ ರೂ.ವೆಚ್ಚದ ಯೋಜನೆಗೆ ಮಂಜೂರು ಮಾಡುವಂತೆ ಪ್ರಯತ್ನಿಸಲಾಗುವುದು ಎಂಬ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

    ಪಾಲಿಕೆ ಸದಸ್ಯರಾದ ಮೋತ್ಕರ್ ಶ್ರೀನಿವಾಸ್, ಗುಡಿಗಂಟಿ ಹನುಮಂತು, ಕೆ.ಹನುಮಂತ, ಸ್ಥಳೀಯ ಮುಖಂಡರಾದ ಡಿಶ್ ಉಮೇಶ್, ಗುರು, ಗಂಗಿರೆಡ್ಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts