More

    ಉತ್ತಮ ವಿಚಾರ ಅಳವಡಿಸಿಕೊಳ್ಳಿ

    ವಿಜಯವಾಣಿ ಸುದ್ದಿಜಾಲ ಧಾರವಾಡ

    ವಿದ್ಯಾರ್ಥಿಗಳ ವಿಕಾಸದಲ್ಲಿ ಪರಿಸರದ ಪ್ರಭಾವ ಮಹತ್ವದ್ದಾಗಿದೆ. ಪಾಲಕರ ಶ್ರಮವನ್ನು ಮನದಲ್ಲಿಟ್ಟುಕೊಂಡು ಉತ್ತಮವಾದ ವಿಚಾರಧಾರೆಗಳನ್ನು ರೂಢಿಸಿಕೊಂಡು ಪ್ರಾಮಾಣಿಕ ವ್ಯಕ್ತಿಗಳಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

    ಕನ್ನಡ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಇಲ್ಲಿನ ಕಲಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳ ಸಾಧನೆಯಿಂದ ಸಮಾಜದಲ್ಲಿ ಪಾಲಕರನ್ನು ಗೌರವಿಸಲಾಗುತ್ತದೆ. ಆದರೆ, ಸಂಸ್ಕಾರದ ಕೊರತೆಯಿಂದ ಮಕ್ಕಳು ಹಾದಿ ತಪ್ಪುತ್ತಿದ್ದಾರೆ. ಸಮಾಜದಲ್ಲಿನ ದುಷ್ಟ ಶಕ್ತಿಗಳ ಪ್ರಭಾವಕ್ಕೊಳಗಾಗಿ ಇಬ್ಬರು ಹೆಣ್ಣು ಮಕ್ಕಳು ದೇಶವಿರೋಧಿ ಹೇಳಿಕೆ ನೀಡಿದ್ದು ಸರಿಯಲ್ಲ. ಅಂತಹ ದೇಶ ವಿರೋಧಿಗಳಿಗೆ ಸರ್ಕಾರ ಕಠಿಣ ಶಿಕ್ಷೆ ನೀಡಬೇಕು ಎಂದರು.

    ಸಾಹಿತಿ ಶಂಕರ ಹಲಗತ್ತಿ ಮಾತನಾಡಿ, ಪಾಲಕರಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿ ಕನ್ನಡ ಭಾಷೆ ಎಂದರೆ ಮೂಗು ಮುರಿಯುವ ಸ್ಥಿತಿ ಬಂದಿರುವುದು ದುರಂತದ ಸಂಗತಿ. ಇಂಗ್ಲಿಷ್ ಭಾಷೆಯಲ್ಲಿ ವ್ಯಾಸಂಗ ಮಾಡಿದರೆ ಮಾತ್ರ ಮಕ್ಕಳಿಗೆ ಉಜ್ವಲ ಭವಿಷ್ಯವಿದೆ ಎಂಬ ಭಮ್ರೆಯಿಂದ ಪಾಲಕರು ಹೊರಬರಬೇಕು. ನಾಡಿಗೆ ಅತಿ ಹೆಚ್ಚು ಶ್ರೇಷ್ಠ ಕವಿ, ಸಾಹಿತಿ, ವಿಮರ್ಶಕರನ್ನು ನೀಡಿರುವುದು ಕನ್ನಡ ಭಾಷೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ ಎಂದರು.

    ಪ್ರಾಧಿಕಾರದ ಸದಸ್ಯೆ ವಿಜಯಲಕ್ಷ್ಮೀ ಬಾಳೇಕುಂದ್ರಿ ಮಾತನಾಡಿ, ವಿದ್ಯಾರ್ಥಿಗಳು ಓದಿನತ್ತ ಗಮನ ಕೊಡಬೇಕು. ದೇಶ ಪ್ರೇಮ, ಸಮಾಜ ಪ್ರೇಮವನ್ನು ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಯಾವುದೇ ಹುದ್ದೆ, ಗೌರವ ಪಡೆದರೂ ಕನ್ನಡ ಮರೆಯಬಾರದು ಎಂದರು.

    ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಪ್ರೊ. ಎಸ್.ಎಂ. ಶಿವಪ್ರಸಾದ ಮಾತನಾಡಿ, ಶಿಕ್ಷಕರು ಮಕ್ಕಳ ಅಗತ್ಯತೆಗೆ ತಕ್ಕಂತೆ ಪಾಠ ಮಾಡಬೇಕು. ಕನ್ನಡದಲ್ಲಿ ಗುಣಮಟ್ಟದ ಪಠ್ಯ ಹಾಗೂ ಶಿಕ್ಷಕರು ಇಲ್ಲ. ಈ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರಿ ಚಿಂತನೆ ನಡೆಸಬೇಕು ಎಂದರು.

    ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ, ಡಾ. ಕುಮಾರ ನಾಯಕ, ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಮಾತನಾಡಿದರು.

    ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಎಲ್.ಹಂಚಾಟೆ, ಬಿಇಒ ಗಿರೀಶ ಪದಕಿ, ಅರವಿಂದ್ ಪಾಟೀಲ, ವಿವಿಧ ಜಿಲ್ಲೆಯ ವಿದ್ಯಾರ್ಥಿಗಳು ಮತ್ತು ಪಾಲಕರು ಭಾಗವಹಿಸಿದ್ದರು.

    ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ. ಮುರಳೀಧರ ಸ್ವಾಗತಿಸಿದರು. ಪ್ರತಿಭಾ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ವಂದಿಸಿದರು.

    ಮಕ್ಕಳಿಗೆ ಉತ್ತಮ ಸಂಸ್ಕಾರ ಅಗತ್ಯ: ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರಿದ ಅಧ್ಯಕ್ಷ ಟಿ.ಎಸ್. ನಾಗಾಭರಣ ಮಾತನಾಡಿ, ವಿದ್ಯಾರ್ಥಿಗಳಿಗೆ ಗುರಿ, ಗುರು ಇಲ್ಲದಿದ್ದರೆ ಅಡ್ಡ ಹಾದಿ ಹಿಡಿಯಬಹುದು. ಇಂತಹ ಅಡ್ಡ ಹಾದಿಗಳಿಂದ ಅಪಕೃತ್ಯಗಳೇ ಹೆಚ್ಚು ನಡೆಯುತ್ತವೆ. ಇದಕ್ಕೆ ಇತ್ತೀಚೆಗೆ ನಡೆದ ಘಟನೆಗಳೇ ಸಾಕ್ಷಿ. ಗುರುಪರಂಪರೆ ಹೊಂದಿರುವ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಪಾಶ್ಚಿಮಾತ್ಯ ವಿಚಾರಗಳನ್ನು ಅಳವಡಿಸಿದ್ದರಿಂದ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಗೊಂದಲಗಳಿವೆ. ವೃತ್ತಿಗಿಂತ ಪ್ರವೃತ್ತಿ ಶ್ರೇಷ್ಠ. ಪ್ರತಿಯೊಬ್ಬರೂ ಸಂಸ್ಕಾರ ನೀಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.

    ಪ್ರಮಾಣ ಪತ್ರ ವಿತರಣೆ: ಹಾವೇರಿ ಜಿಲ್ಲೆಯ 50, ಗದಗ ಜಿಲ್ಲೆಯ 41, ಧಾರವಾಡ 39, ಬೆಳಗಾವಿ 84, ಬಾಗಲಕೋಟೆ 42, ವಿಜಯಪುರ 43, ಉತ್ತರ ಕನ್ನಡ 74 ಸೇರಿ ಒಟ್ಟು 205 ಎಸ್ಸೆಸ್ಸೆಲ್ಸಿ ಹಾಗೂ 178 ಪಿಯುಸಿ ಪ್ರಮಾಣಪತ್ರ, ನಗದು ಬಹುಮಾನ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts