More

    ಬೆಳಗಾವಿ ಬೆಲ್ಲಕ್ಕೆ ಬ್ರ್ಯಾಂಡ್ ಕಿರೀಟ; ರಾಸಾಯನಿಕಮುಕ್ತ ಬೆಲ್ಲ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ವ್ಯಾಪಾರ ವಹಿವಾಟಿನ ಕೇಂದ್ರ ಸ್ಥಾನವಾಗಿರುವ ಬೆಳಗಾವಿಯನ್ನು ‘ರಾಸಾಯನಿಕ ಮುಕ್ತ ಬೆಲ್ಲ’ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ‘ಬ್ರ್ಯಾಂಡ್’ ಆಗಿಸಲು ಜಿಲ್ಲಾ ಕೃಷಿ ಇಲಾಖೆ ಸಜ್ಜಾಗಿದೆ. ಕೇಂದ್ರ ಸರ್ಕಾರದ ‘ಆತ್ಮ ನಿರ್ಭರ’ ಯೋಜನೆಯಡಿ ಬೆಳಗಾವಿ ಜಿಲ್ಲೆಯಿಂದ ಕಬ್ಬು ಹಾಗೂ ಅರಿಶಿಣ ಬೆಳೆಗಳ ಬ್ರ್ಯಾಂಡ್​ಗೆ ಕೃಷಿ ಇಲಾಖೆ ಪ್ರಸ್ತಾವನೆ ಕಳುಹಿಸಿತ್ತು. ಬೆಳಗಾವಿಯಲ್ಲಿ 2.65 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ‘ರಾಸಾಯನಿಕ ಮುಕ್ತ ಬೆಲ್ಲ’ ತಯಾರಿಕೆಗೆ ಕಬ್ಬು ಬೆಳೆ ಆಯ್ಕೆಗೊಂಡಿದೆ. ಇದರಿಂದಾಗಿ ಅವಸಾನದ ಅಂಚಿನಲ್ಲಿರುವ ಜಿಲ್ಲೆಯ 134ಕ್ಕೂ ಅಧಿಕ ಆಲೆಮನೆ (ಬೆಲ್ಲದ ಗಾಣ)ಗಳಿಗೆ ಮತ್ತೆ ಮರುಜೀವ ಸಿಕ್ಕಂತಾಗಿದೆ.

    ಶೇ.80 ಕುಸಿತ: ರಾಜ್ಯದಲ್ಲಿ ಪ್ರತಿವರ್ಷ 409.45 ಲಕ್ಷ ಮೆ. ಟನ್ ಕಬ್ಬು ಉತ್ಪಾದನೆಯಾಗುತ್ತಿದೆ. 61 ಸಕ್ಕರೆ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿದ್ದು, ವಾರ್ಷಿಕ ಸರಾಸರಿ 44.01 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗುತ್ತಿದೆ. ಕಳೆದ 4-5 ವರ್ಷದಲ್ಲಿ ಸಕ್ಕರೆ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ಬೆಲ್ಲ ಉತ್ಪಾದನೆಯಲ್ಲಿ ಶೇ.80 ಕುಸಿತ ಕಂಡಿದೆ. ಇದರಿಂದಾಗಿ ಸಾವಯವ ಬೆಲ್ಲ ತಯಾರಿಕೆಗೂ ಹಿನ್ನೆಡೆ ಆಗಿತ್ತು. ಹೀಗಾಗಿ ಕೇಂದ್ರವು ಅಧಿಕ ಕಬ್ಬು ಬೆಳೆವ ಭಾಗಗಳಲ್ಲಿ ‘ರಾಸಾಯನಿಕ ಮುಕ್ತ ಬೆಲ್ಲ’ ತಯಾರಿಕೆ ಘಟಕಗಳ ಸ್ಥಾಪನೆಗೆ ಆದ್ಯತೆ ನೀಡಿದೆ.

    ಏನಿದು ಯೋಜನೆ?: ಕೇಂದ್ರ ಸರ್ಕಾರವು ಆತ್ಮ ನಿರ್ಭರ ಯೋಜನೆಯಡಿ ‘ಒಂದು ಜಿಲ್ಲೆ-ಒಂದು ಬೆಳೆ’ ಅನುಷ್ಠಾನಗೊಳಿಸುತ್ತಲಿದೆ. ಯಾವ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯಾವ ಬೆಳೆಯನ್ನು ಬೆಳೆಯಲಾಗುತ್ತದೆಯೋ ಅದರ ಉತ್ಪನ್ನಕ್ಕೆ ಮಾರುಕಟ್ಟೆ ಸೃಷ್ಟಿಸುವುದು ಈ ಯೋಜನೆಯ ಉದ್ದೇಶ. ಉದ್ಯಮಿಗಳಿಗೆ ಯೋಜನಾ ವೆಚ್ಚದ ಶೇ.35 ಸಬ್ಸಿಡಿ ಹಾಗೂ ಗರಿಷ್ಠ 10 ಲಕ್ಷ ರೂ.ವರೆಗೆ ಸಹಾಯಧನ ವಿತರಿಸಲಾಗುತ್ತದೆ. ಯಾವುದೇ ಉದ್ಯಮದಲ್ಲಿ ತೊಡಗಿರುವ ವ್ಯಕ್ತಿ, ರೈತರು, ಸ್ವಸಹಾಯ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು ಮತ್ತು ಇತರ ಕಿರು ಉದ್ದಿಮೆದಾರರು ಸಾವಯವ ಬೆಲ್ಲ ಸಂಸ್ಕರಣಾ ಘಟಕ ಸ್ಥಾಪಿಸಬಹುದು.

    ಆತ್ಮನಿರ್ಭರ ಯೋಜನೆಯಡಿ ಕಬ್ಬು ಬೆಳೆಗೆ ಆಯ್ಕೆ ಆಗಿರುವ ಬೆಳಗಾವಿ ಜಿಲ್ಲೆಗೆ 80 ಹಾಗೂ ಮಂಡ್ಯ ಜಿಲ್ಲೆಗೆ 50 ‘ರಾಸಾಯನಿಕ ಮುಕ್ತ ಬೆಲ್ಲ’ ಘಟಕ ಸ್ಥಾಪನೆ ಗುರಿ ನೀಡಲಾಗಿದೆ. ಈಗಾಗಲೆ ನೂರಾರು ರೈತರು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸುತ್ತಿದ್ದಾರೆ.

    |ಶಿವನಗೌಡ ಎಸ್.ಪಾಟೀಲ ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts