ಬೆಳಗಾವಿ ಕೀರ್ತಿ ಹೆಚ್ಚಿಸಲಿರುವ ಬಡ ಕ್ರೀಡಾ ಪ್ರತಿಭೆಗಳು

blank
blank

| ಜಗದೀಶ ಹೊಂಬಳಿ ಬೆಳಗಾವಿ

ಆಲ್ ಇಂಡಿಯಾ ಕಬಡ್ಡಿ ಫೆಡರೇಷನ್ ವತಿಯಿಂದ ಹರಿಯಾಣದಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ 46ನೇ ಜ್ಯೂನಿಯರ್ ಕಬಡ್ಡಿ ನ್ಯಾಷನಲ್ ಚಾಂಪಿಯನ್‌ಷಿಪ್ ಪಂದ್ಯಾವಳಿಯಲ್ಲಿ ಜಿಲ್ಲೆಯ ಗ್ರಾಮೀಣ ಭಾಗದ ಇಬ್ಬರು ಬಡ ವಿದ್ಯಾರ್ಥಿಗಳು ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದು, ಕುಂದಾನಗರಿಯ ಕೀರ್ತಿ ಹೆಚ್ಚಿಸುವ ಕಾತುರದಲಿದ್ದಾರೆ.

ಅಥಣಿ ತಾಲೂಕಿನ ಐನಾಪುರ ಪಟ್ಟಣದ ತಾಯಕ್ಕ ಕೋಳಿ, ರಾಯಬಾಗ ತಾಲೂಕಿನ ಭೀರಡಿ ಗ್ರಾಮದ ಮಾದೇವಿ ಪಾಟೀಲ ಫೆ. 13 ರಿಂದ ಆರಂಭವಾಗಲಿರುವ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಈ ಇಬ್ಬರನ್ನು ಬೆಳಗಾವಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಜಿಲ್ಲಾ ಮಟ್ಟದಲ್ಲಿ ಆಯ್ಕೆ ಮಾಡಿ ರಾಜ್ಯ ಆಯ್ಕೆ ಸಮಿತಿಗೆ ಕಳುಹಿಸಿತ್ತು. ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ವಿವಿಧ ಜಿಲ್ಲೆಗಳಿಂದ ಪಾಲ್ಗೊಂಡಿದ್ದ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ 25 ವಿದ್ಯಾರ್ಥಿಗಳನ್ನು ಗುರುತಿಸಿ ರಾಜ್ಯಮಟ್ಟದ ಆಯ್ಕೆ ಸಮಿತಿಗೆ ಕಳುಹಿಸಲಾಗಿತ್ತು. ಅಂತಿಮವಾಗಿ ತಾಯಕ್ಕ, ಮಾದೇವಿ ಕರ್ನಾಟಕ ತಂಡದಿಂದ ಆಡುವ 1ರಿಂದ 7ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಬಡ ಪ್ರತಿಭೆಗಳು ಕರ್ನಾಟಕ ತಂಡಕ್ಕೆ ಆಯ್ಕೆಯಾಗಿರುವುದು ಜಿಲ್ಲೆಯ ಕ್ರೀಡಾ ಪ್ರೇಮಿಗಳ ಸಂತಸಕ್ಕೆ ಕಾರಣವಾಗಿದೆ.

ಬಡತನದ ನಡುವೆ ಸಾಧನೆಯ ಹಂಬಲ: ದ್ವಿತೀಯ ಪಿಯುಸಿ ಓದುತ್ತಿರುವ ತಾಯಕ್ಕ ಐನಾಪುರದಲ್ಲೇ ಪ್ರಾಥಮಿಕ, ಪ್ರೌಢಶಿಕ್ಷಣ ಪೂರೈಸಿದ್ದಾಳೆ. ಪಾಲಕರು ಕೂಲಿ ಮಾಡಿ ಕುಟುಂಬ ಸಲಹುತ್ತಾರೆ. ಮನೆಯಲ್ಲಿ ಬಡತನ ತಾಂಡವವಾಡುತ್ತಿದೆ. ರಾಷ್ಟ್ರಮಟ್ಟದ ಮಾಜಿ ಕಬಡ್ಡಿ ಕ್ರೀಡಾಪಟು ಸತೀಶ ಅಪರಾಸ ಅವರು ತರಬೇತಿಯಿಂದ ಹಿಡಿದು ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಫೆಡರೇಷನ್ ರಾಜ್ಯ ಉಪಾಧ್ಯಕ್ಷ, ಬೆಳಗಾವಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಸಿ.ಎಸ್.ಬರಗಾಲಿ ಅವರ ಮಾರ್ಗದರ್ಶನದಿಂದ ಕಬಡ್ಡಿಯಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ ಎನ್ನುತ್ತಾರೆ ತಾಯಕ್ಕ. ತಾಯಕ್ಕ ಮೊದಲಿನಿಂದಲೂ ಕಬಡ್ಡಿಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಳು. 2016-17 ಮತ್ತು 2017-18ರಲ್ಲಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದಳು. 2018-19ರಲ್ಲಿ ರಾಜ್ಯಮಟ್ಟದ ಸಬ್ ಜ್ಯೂನಿಯರ್ ಚಾಂಪಿಯನ್‌ಶಿಪ್‌ನಲ್ಲೂ ಜಿಲ್ಲೆ ಪ್ರತಿನಿಧಿಸಿ ಸಾಧನೆ ಮಾಡಿದ್ದಳು. ಈಗ ರಾಜ್ಯತಂಡಕ್ಕೆ ಆಯ್ಕೆಯಾಗಿರುವುದು ಕುಟುಂಬದ ಸಂತಸವನ್ನು ದ್ವಿಗುಣಗೊಳಿಸಿದೆ.

ಇನ್ನು ಮಾದೇವಿ ಪಾಟೀಲ ಅವರದ್ದು ಸಹ ಬಡತನದ ಕುಟುಂಬ. ಸದ್ಯ ಬಿ.ಎ.ವ್ಯಾಸಂಗ ಮಾಡುತ್ತಿದ್ದಾರೆ. ಅಪ್ಪ-ಅಮ್ಮ ಕೂಲಿ ಮಾಡಿ ಬದುಕುತ್ತಾರೆ. ಇದರ ಮಧ್ಯೆಯೂ ಕ್ರೀಡಾಪ್ರೀತಿ ಮರೆತಿಲ್ಲ. ಜತೆಗೆ, ಯೂನಿವರ್ಸಿಟಿ ಬ್ಲೂೃ ಆಗಿ ಹೆಸರು ವಾಸಿಯಾಗಿದ್ದಾರೆ. ಪ್ರೌಢಶಾಲೆಯಲ್ಲಿ ವಿಭಾಗ ಮಟ್ಟದವರೆಗೆ ಆಡಿದ್ದಾಳೆ. ಉಡುಪಿಯಲ್ಲಿ 2018-19ರಲ್ಲಿ ನಡೆದ ರಾಜ್ಯಮಟ್ಟದ ಅಥ್ಲೆಟಿಕ್ಸ್‌ನಲ್ಲಿ 100, 200ಮೀ. ಓಟ, ಉದ್ದ ಜಿಗಿತದಲ್ಲಿ ಸಾಧನೆ ಮಾಡಿ ರಾಜ್ಯಮಟ್ಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಸಮಾಜ ಸೇವಕ ಕುಮಾರ ಬಾಪಕರ, ಬಿರಡಿಯ ಅಬಾಧಿ ಕ್ರೀಡಾ ಕ್ಲಬ್ ತರಬೇತುದಾರ ಪ್ರದೀಪ ಸಗರೆ ತರಬೇತಿ ನೀಡಿದ್ದಾರೆ.

ಹೆಚ್ಚಿದ ಗಡಿಜಿಲ್ಲೆ ಹೆಗ್ಗಳಿಕೆ

ಹರಿಯಾಣದಲ್ಲಿ ಫೆ. 13ರಿಂದ 16ರ ವರೆಗೆ ನಡೆಯುತ್ತಿರುವ 46ನೇ ಜ್ಯೂನಿಯರ್ ಕಬಡ್ಡಿ ನ್ಯಾಷನಲ್ ಚಾಂಪಿಯನ್‌ಷಿಪ್ ಪಂದ್ಯಾವಳಿಗೆ 12 ಜನರನ್ನೊಳಗೊಂಡ ಕರ್ನಾಟಕ ತಂಡವನ್ನು ಕಳುಹಿಸಲಾಗುತ್ತಿದೆ. 12 ಜನರಲ್ಲಿ ಇಬ್ಬರು ಬೆಳಗಾವಿಯವರೇ ಆಗಿದ್ದು ಜಿಲ್ಲೆಯ ಹೆಗ್ಗಳಿಕೆಗೆ ಕಾರಣವಾಗಿದೆ.

ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದು ಸಂತಸ ತಂದಿದೆ. ಈ ಕ್ರೀಡಾಪಟುಗಳು ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ಭರವಸೆ ಇದೆ.
| ಸಿ.ಎಸ್. ಬರಗಾಲಿ ಕಾರ್ಯದರ್ಶಿ ಬೆಳಗಾವಿ ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೆಶನ್

Share This Article

ನೀರು, ಸೋಪು ಇಲ್ಲದೆ ಕೊಳಕಾದ ಸ್ವಿಚ್‌ಬೋರ್ಡ್‌ನ್ನು ಹೊಸದರಂತೆ ಮಾಡಲು ಇಲ್ಲಿದೆ ಸೂಪರ್‌ ಟಿಪ್ಸ್‌ | Switchboard

Switchboard: ಸಾಮಾನ್ಯವಾಗಿ ಮನೆಗಳಲ್ಲಿರುವ ವಿದ್ಯುತ್ ಸ್ವಿಚ್‌ಬೋರ್ಡ್‌ಗಳು ದಿನ ಕಳೆದಂತೆ ಕೊಳಕಾಗುತ್ತದೆ. ವಿಶೇಷವಾಗಿ ಅಡುಗೆಮನೆಯಲ್ಲಿರುವ ಸ್ವಿಚ್‌ಬೋರ್ಡ್‌ಗಳು ಬಹಳ…

ಈ ಆಹಾರಗಳ ಅತಿಯಾದ ಸೇವನೆಯಿಂದ ಕಿಡ್ನಿ ಸ್ಟೋನ್‌ ಉಂಟಾಗಬಹುದು: ತಜ್ಞರ ಎಚ್ಚರಿಕೆ..! Health Tips

Health Tips: ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ ಸೊಂಟ, ಹೊಟ್ಟೆ ಮತ್ತು ಬೆನ್ನಿನಲ್ಲಿ ತೀವ್ರವಾದ ನೋವು ಉಂಟಾಗುತ್ತದೆ. ಈ…