More

    ಆನೆಗೂ ಸಿಗದ ಚಾಲಾಕಿ ಚಿರತೆ!

    ಬೆಳಗಾವಿ: ಇಪ್ಪತ್ತು ದಿನಗಳಿಂದ ಬೆಳಗಾವಿ ಮಂದಿಯ ನಿದ್ದೆಗೆಡಿಸಿರುವ ಚಿರತೆ ಬೃಹತ್ ಕಾರ್ಯಾಚರಣೆ ನಡೆಸಿದರೂ ಬಲೆಗೆ ಬೀಳುತ್ತಿಲ್ಲ. ಹೇಗಾದರೂ ಮಾಡಿ ಚಾಲಾಕಿ ಚಿರತೆಯನ್ನು ಬಲೆಗೆ ಕೆಡವಲೇಬೇಕು ಎಂದು ಹಟತೊಟ್ಟಿರುವ ಅರಣ್ಯ ಇಲಾಖೆಯ ಪ್ರಯತ್ನ ಬುಧವಾರವೂ ವಿಫಲವಾಗಿದೆ. ನಿರೀಕ್ಷೆ ಹುಟ್ಟಿಸಿದ್ದ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್‌ನಿಂದ ಆಗಮಿಸಿದ್ದ ಆನೆ ತಂಡವೂ ಬರಿಗೈಯಲ್ಲಿ ಮರಳಿದೆ.

    ದಿನವೂ ಒಂದಿಲ್ಲೊಂದು ಹರಸಾಹಸ ನಡೆಸಿದ್ದ ಅರಣ್ಯ ಇಲಾಖೆಗೆ ಸಕ್ರೆಬೈಲ್ ಆನೆ ತಂಡದ ಮೇಲೆ ನೀರಿಕ್ಷೆ ಹೆಚ್ಚಿತ್ತು. ಅರ್ಜುನ ಮತ್ತು ಆಲೆ ಎಂಬ ಆನೆಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. ಬುಧವಾರ ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ನಗರದ ಗಾಲ್ಫ್ ಮೈದಾನದಲ್ಲಿನ ದಟ್ಟಾರಣ್ಯದಲ್ಲಿ ಕಾರ್ಯಾಚರಣೆ ನಡೆಸಿದರೂ ಚಿರತೆ ಸುಳಿವು ಪತ್ತೆಯಾಗಿಲ್ಲ. ಪ್ರತಿ ಆನೆ ಮೇಲೆ ಎರಡು ಆನೆಗಳ ಜತೆಗೆ ಮಾವುತರು, ಅರಿವಳಿಕೆ ಚುಚ್ಚುಮದ್ದು ಶೂಟರ್ಸ್ ಒಳಗೊಂಡ ತಂಡ ಬೆಳಗ್ಗೆಯಿಂದಲೇ ಗುರಿ ಇಟ್ಟುಕೊಂಡು ಚಿರತೆಗಾಗಿ ಕಣ್ಗಾವಲು ನಡೆಸಿತ್ತು. ಹುಕ್ಕೇರಿಯಿಂದ ಬಂದ ಹಂದಿ ಹಿಡಿಯುವ ತಂಡದವರು, ಅರಣ್ಯ ಇಲಾಖೆಯ ಸಿಬ್ಬಂದಿ ಸೇರಿ 8 ಜನರ ತಂಡ ಕಾರ್ಯಾಚರಣೆ ನಡೆಸಿತು. ಒಟ್ಟು 2 ಆನೆಗಳು ಹಾಗೂ 16 ಜನ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

    ಗಾಲ್ಫ್ ಕ್ಲಬ್‌ನ ನಾಲ್ಕು ಕಡೆಗಳಲ್ಲಿ ಮಚಾನು ನಿರ್ಮಿಸಿ, ಅದರ ಮೇಲೆ ಅರವಳಿಕೆ ತಜ್ಞ ಶಾರ್ಪ್ ಶೂಟರ್‌ಗಳು ಚಿರತೆಗಾಗಿ ಕಾವಲು ಕಾಯುತ್ತಿದ್ದಾರೆ. ಒಂದು ಮಚಾನಿನ ಮೇಲೆ ಇಬ್ಬರಂತೆ ಒಟ್ಟು 8 ಜನ ಈ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಚಿರತೆ ಸೆರೆ ಕಾರ್ಯಾಚರಣೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ.

    ರಾತ್ರಿ ಗಾಲ್ಫ್ ಮೈದಾನದಿಂದ ಹೊರಬರಲಿದೆ ಎಂದು ಕಾಯುತ್ತಿರುವ ಅರಿವಳಿಕೆ ಚುಚ್ಚುಮದ್ದು ಶಾರ್ಪ್ ಶೂಟರ್‌ಗಳಿಗೆ ಕ್ಲಬ್ ರಸ್ತೆಯಲ್ಲಿನ ಬೆಳಕಿನ ಕೊರತೆ ಕಾಡುತ್ತಿದೆ. ಸರಿಯಾಗಿ ಬೀದಿ ದೀಪಗಳ ವ್ಯವಸ್ಥೆ ಇಲದ್ದರಿಂದ ಟಾರ್ಚ್ ಹಿಡಿದುಕೊಂಡು ರಾತ್ರಿಯಿಡೀ ಕಾಯುವುದು ಮತ್ತೊಂದು ಸವಾಲಾಗಿ ಪರಿಣಮಿಸಿದೆ. ಆ.5ರಂದು ಜಾಧವನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ದಾಳಿ ಮಾಡಿದ ಬಳಿಕ ಗಾಲ್ಫ್ ಕ್ಲಬ್‌ನಲ್ಲಿ ಅವಿತಿರುವ ಚಿರತೆ ಆಗೊಮ್ಮೆ ಈಗೊಮ್ಮೆ ದರ್ಶನ ಕೊಡುತ್ತ ಜನರ ಆತಂಕವನ್ನು ಹೆಚ್ಚಿಸುತ್ತಲೇ ಇದೆ. ಚಿರತೆಯನ್ನು ಸೆರೆ ಹಿಡಿದು ಅರಣ್ಯಕ್ಕೆ ಅಟ್ಟಲು ಅರಣ್ಯ ಇಲಾಖೆ ಹರಸಾಹಸಪಡುತ್ತಿದೆ. ಉಳಿದಂತೆ ಗಾಲ್ಫ್ ಕ್ಲಬ್‌ನ ಹೊರ ಆವರಣದಲ್ಲಿ ಹನುಮಾನ ನಗರ ರಸ್ತೆಯ ಸುತ್ತ 50ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕಾವಲಿಗೆ ನಿಲ್ಲಿಸಲಾಗಿತ್ತು. ಈ ರಸ್ತೆಯಲ್ಲಿ ಜನ ಸಂಚಾರ ಬಂದ್ ಮಾಡಲಾಗಿತ್ತು. ಹೊರ ಜಿಲ್ಲೆಯಿಂದ ಮತ್ತಷ್ಟು ನುರಿತ ತಂಡಗಳನ್ನು ಕರೆಯಿಸಿ, ಚಿರತೆ ಸಿಗುವವರೆಗೂ ಕಾರ್ಯಾಚರಣೆ ಮುಂದುವರಿಸಲು ಅರಣ್ಯ ಇಲಾಖೆ ಅವಿರತ ಪ್ರಯತ್ನ ನಡೆಸಿದೆ.

    ಜಿಲ್ಲಾಡಳಿತ ಬೆಳಕು ನೀಡಲಿ

    ಹಿಂಡಲಗಾ ರಸ್ತೆಯ ಮಹಾತ್ಮ ಗಾಂಧಿ ಪ್ರತಿಮೆ ಬಳಿಯಿಂದ ಗಣಪತಿ ಗುಡಿಯವರೆಗೆ ಹಾಗೂ ಬೆಳಗಾವಿ ಕ್ಲಬ್ ವರೆಗೆ ರಸ್ತೆ ದೀಪಗಳೇ ಇಲ್ಲ. ಈ ರಸ್ತೆಯಲ್ಲಿ ಚಿರತೆ ಹೊರಗೆ ಬಂದರೂ ಅದನ್ನು ಹೇಗೆ ಸೆರೆ ಹಿಡಿಯುವುದು? ಅರಿವಳಿಕೆ ಮದ್ದು ನೀಡಲು ಹೇಗೆ ಶೂಟ್ ಮಾಡುವುದು ಎಂಬ ಪ್ರಶ್ನೆ ದುರಾಗಿದ್ದು, ಈ ಮಾರ್ಗದಲ್ಲಿ ಜಿಲ್ಲಾಡಳಿತ ತಾತ್ಕಾಲಿಕ ಬೆಳಕಿನ ವ್ಯವಸ್ಥೆ ಮಾಡುವ ಮೂಲಕ ಚಿರತೆ ಸೆರೆ ಕಾರ್ಯಾಚರಣೆಗೆ ನೆರವಾಗಲಿ ಎಂದು ಜನತೆ ಒತ್ತಾಯಿಸುತ್ತಿದ್ದಾರೆ.

    ಗಜಪಡೆಗಾಗಿ ಕಬ್ಬು ಕಳ್ಳತನ?

    ಆಪರೇಷನ್ ಚಿರತೆಗೆ ಸಹಾಯಕ್ಕಾಗಿ ಕರೆಯಿಸಿರುವ ಆನೆಗಳ ಹೊಟ್ಟೆ ತುಂಬಿಸುವುದಕ್ಕಾಗಿ ಅರಣ್ಯ ಇಲಾಖೆ ಸಿಬ್ಬಂದಿ ರೈತರು ಬೆಳೆದಿದ್ದ ಕಬ್ಬು ಕಳ್ಳತನ ಮಾಡಿದ್ದಾರೆ ಎಂಬ ಆರೋಪ ಬುಧವಾರ ಕೇಳಿ ಬಂದಿತು. ಮುತಗಾ ಗ್ರಾಮದ ರಾಜು ಕಣಬರಕರ್ ಅವರ ಜಮೀನಿನಲ್ಲಿ ಬೆಳೆದಿರುವ ಕಬ್ಬು ಕಟಾವು ಮಾಡಿ ತಂದಿದ್ದಾರೆ ಎಂದು ಆರೋಪಿಸಲಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಯಾವುದೇ ಮಾಹಿತಿ ನೀಡದೆ 2 ಗುಂಟೆಯಲ್ಲಿ ಬೆಳೆದ ಕಬ್ಬು ತೆಗೆದುಕೊಂಡು ಹೋಗಿದ್ದಾರೆ. ಬೆಳಗ್ಗೆಯಷ್ಟೇ ಕಬ್ಬು ಕಟಾವು ಮಾಡಿ ತೆಗೆದುಕೊಂಡು ಹೋದ ಬಗ್ಗೆ ಗೊತ್ತಾಗಿದೆ. ಸಿಬ್ಬಂದಿ ಕಬ್ಬು ಕಟಾವಿನ ಸಂಬಂಧ ಮಾಹಿತಿಯಾದರೂ ನೀಡಬೇಕಿತ್ತು. ಹೇಳದೆ ಕೇಳದೆ ಕಬ್ಬು ಕಟಾವು ಮಾಡಿದ್ದಾರೆ ಎಂದು ರಾಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಸ್ಪಷ್ಟಿಕರಣ ನೀಡಿಲ್ಲ.

    ನಗರ ಪ್ರವೇಶಿಸುವ ಮಾರ್ಗ ಬಂದ್

    ಆನೆಗಳು ಹಾಗೂ ಹಂದಿ ಹಿಡಿಯುವ ಬಲೆಗಳ ಮೂಲಕ ಚಿರತೆ ಸೆರೆಗೆ ಪ್ರಯತ್ನಿಸುತ್ತಿರುವ ಅರಣ್ಯ ಇಲಾಖೆ ಬುಧವಾರ ಜಾಧವ್ ನಗರಕ್ಕೆ ಪ್ರವೇಶಿಸುವ ಗಟಾರಗಳನ್ನು ಬಂದ್ ಮಾಡಿ, ಚಿರತೆ ನಗರ ಪ್ರದೇಶಕ್ಕೆ ನುಗ್ಗದಂತೆ ಬೇಲಿ ಹಾಕಲಾಯಿತು. ಇದರಿಂದ ಚಿರತೆ ಚಿರತೆ ಅರಣ್ಯ ಪ್ರದೇಶದಲ್ಲೇ ಉಳಿಯುವುದರಿಂದ ಗುರುವಾರ ಚಿರತೆಯನ್ನು ಬೋನಿಗೆ ಬೀಳಿಸುವ ಲೆಕ್ಕಾಚಾರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts