More

    ಬೀಗರೂಟ ಸವಿದ 200ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಚನ್ನಪಟ್ಟಣ ಆಸ್ಪತ್ರೆಯಲ್ಲಿ ಚಿಕಿತ್ಸೆ

    ಚನ್ನಪಟ್ಟಣ: ಮೋಳೆದೊಡ್ಡಿ ಗ್ರಾಮದಲ್ಲಿ ಬೀಗರ ಊಟದಲ್ಲಿ ಮಾಂಸಾಹಾರ ಸೇವಿಸಿದ 200ಕ್ಕೂ ಹೆಚ್ಚು ಮಂದಿ ಮಂಗಳವಾರ ಅಸ್ವಸ್ಥರಾಗಿದ್ದಾರೆ.

    ವಧು-ವರರು ಒಂದೇ ಗ್ರಾಮದವರಾಗಿದ್ದು, ಮಂಗಳವಾರ ಔತಣಕೂಟ ಏರ್ಪಡಿಸಲಾಗಿತ್ತು. ನೂರಾರು ಮಂದಿ ಪಾಲ್ಗೊಂಡಿದ್ದರು. ಸಂಜೆ ವೇಳೆಗೆ ಕೆಲವರಿಗೆ ವಾಂತಿ ಭೇದಿ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ಬೆಳಗ್ಗೆ ಮತ್ತೆ 200ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು ಕಂಡುಬಂತು.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಹಸೀಲ್ದಾರ್, ತಾಲೂಕು ಆರೋಗ್ಯಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು. ಅಸ್ವಸ್ಥರನ್ನು ಕೂಡಲೇ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ ಹಾಗೂ ಕೆಲವರಿಗೆ ಸ್ಥಳೀಯವಾಗಿ ಚಿಕಿತ್ಸೆ ನೀಡಲಾಗಿದೆ.

    ಆಹಾರದಲ್ಲಿ ವ್ಯತ್ಯಾಸವಾದ ಕಾರಣದಿಂದ ಏರುಪೇರಾಗಿದೆ ಎನ್ನಲಾಗಿದ್ದು, ಸಮಸ್ಯೆ ಗಂಭೀರವಾಗಿಲ್ಲ. ಅಸ್ವಸ್ಥರಾಗಿರುವ ಎಲ್ಲರಿಗೂ ಚಿಕಿತ್ಸೆ ಕೊಡಿಸುವುದಾಗಿ ತಹಸೀಲ್ದಾರ್ ಎಲ್.ನಾಗೇಶ್ ತಿಳಿಸಿದರು.

    ಪ್ರಕರಣದ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಗ್ರಾಮಾಂತರ ವೃತ್ತ ನಿರೀಕ್ಷಕ ಬಿ.ಶಿವಕುಮಾರ್ ಹಾಗೂ ಪಿಎಸ್​ಐ ಶಿವಕುಮಾರ್ ಪರಿಶೀಲಿಸಿದ್ದಾರೆ. ತಾಲೂಕು ಆರೋಗ್ಯಾಧಿಕಾರಿ ಸೇರಿ ನಗರದ ಸಾರ್ವಜನಿಕ ಆಸ್ಪತ್ರೆ ವೈದ್ಯರು ನಿಗಾವಹಿಸಿದ್ದಾರೆ.

    ಕಿಕ್ಕಿರಿದು ತುಂಬಿದ್ದ ಆಸ್ಪತ್ರೆ

    ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆ ಕೆಲ ವಾರ್ಡ್​ಗಳನ್ನು ಕೋವಿಡ್ ನಿಗಾ ಘಟಕಕ್ಕೆ ಮೀಸಲಿಟ್ಟಿರುವ ಕಾರಣ 2 ವಾರ್ಡ್​ಗಳು ಸಾಮಾನ್ಯ ಚಿಕಿತ್ಸೆಗೆ ಲಭ್ಯವಿವೆ. ಈ ಹಿನ್ನೆಲೆಯಲ್ಲಿ ನೂರಾರು ರೋಗಿಗಳು ಒಮ್ಮೆಲೆ ಬಂದ ಕಾರಣ ಆಸ್ಪತ್ರೆ ತುಂಬಿತ್ತು. ಎಲ್ಲರಿಗೂ ಹಾಸಿಗೆ ಲಭ್ಯವಿಲ್ಲದ ಕಾರಣ, ಸಿಕ್ಕಸಿಕ್ಕ ಜಾಗಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದುದು ಕಂಡುಬಂತು.

    ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದೇನೆ. ಕರೊನಾ ನಡುವೆಯೂ ಅನುಮತಿ ಪಡೆಯದೆ ದೊಡ್ಡ ಮಟ್ಟದಲ್ಲಿ ಭೋಜನ ಕಾರ್ಯಕ್ರಮ ಮಾಡಿರುವುದು ಅಪರಾಧವಾಗಿದೆ. ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ.

    | ಎಲ್. ನಾಗೇಶ್ ತಹಸೀಲ್ದಾರ್

    ಹೊಗನೂರಿನಲ್ಲಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಾತ್ಕಾಲಿಕವಾಗಿ ಮೊಳೆದೊಡ್ಡಿಗೆ ಸ್ಥಳಾಂತರಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರನ್ನು ಚನ್ನಪಟ್ಟಣದ ಆಸ್ಪತ್ರೆಗೆ ಸೇರಿಸಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಹಾರವನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ.

    | ಡಾ ಕೆ.ಪಿ. ರಾಜು ತಾಲೂಕು ಆರೋಗ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts