More

    ತಾಕತ್ತಿದ್ದರೆ ಮುಂಬಾಗಿಲಿನ ರಾಜಕಾರಣ ಮಾಡಿ

    ಬೀಳಗಿ: ಒಂದೇ ಒಂದು ಬಾರಿಯೂ ನೇರವಾಗಿ ಆಯ್ಕೆಯಾಗದೆ ತಮ್ಮ ಜೀವನದುದ್ದಕ್ಕೂ ಹಿಂಬಾಗಿಲಿನ ರಾಜಕಾರಣವನ್ನೇ ಮಾಡಿಕೊಂಡು ಬಂದಿರುವ ವ್ಯಕ್ತಿಗೆ ನನ್ನ ಕುರಿತು ಮಾತನಾಡುವ ಯೋಗ್ಯತೆಯೂ ಇಲ್ಲ. ನನ್ನ ವಿರೋಧಿ ಹಾಕಿದ ಸವಾಲನ್ನು ಸ್ವೀಕರಿಸುವೆ. ಅವರಿಗೆ ತಾಕತ್ತಿದ್ದರೆ ಒಂದು ಬಾರಿ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗೋ, ಕೊನೇ ಪಕ್ಷ ಗ್ರಾಪಂ ಚುನಾವಣೆಯನ್ನಾದರೂ ಸ್ಪರ್ಧಿಸಿ ಗೆಲುವು ಸಾಧಿಸಿ ತೋರಿಸಲಿ. ಆಗ ಗೊತ್ತಾಗುತ್ತದೆ, ರಾಜಕೀಯ ಕ್ಷೇತ್ರದ ನಿರಾಣಿ ಪರಿವಾರದ ತಾಕತ್ತು ಎಂತಹದ್ದು ಎನ್ನುವುದು ಎಂದು ಶಾಸಕ ಮುರುಗೇಶ ನಿರಾಣಿ ಅವರು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

    ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಿರಾಣಿಯನ್ನು ಒದ್ದೋಡಿಸುವ ಮಾತನ್ನಾಡುವ ಗುಳ್ಳೆ ನರಿ ರಾಜಕಾರಣಿಗೆ ನಿರಾಣಿಯನ್ನು ಎದುರಿಸುವ ಶಕ್ತಿ ಕೂಡ ಇಲ್ಲ. ಕೇವಲ ಕಾಡಿನಲ್ಲಿದ್ದ ಮಾತ್ರಕ್ಕೆ ನರಿ ಸಿಂಹವಾಗಲಾರದು. ರೈತರಿಗೆ ಕಾರ್ಖಾನೆ ಅರ್ಪಿಸುತ್ತೇನೆಂದು ಬೊಗಳೆ ಬಿಡುವ ನಾಯಕನಿಗೆ ಸಕ್ಕರೆ ಉದ್ಯಮದಲ್ಲಿ ಮುರುಗೇಶ ನಿರಾಣಿಯ ಅಶ್ವಮೇಧ ಕುದುರೆಯನ್ನು ಕಟ್ಟಿ ಹಾಕುವ ಸಾಮರ್ಥ್ಯವಿಲ್ಲ. ಪದೇ ಪದೆ ರೈತರ ಸಕ್ಕರೆ ಕಾರ್ಖಾನೆಯೆಂದು ಮೊಸಳೆ ಕಣ್ಣೀರಿಡುವ ನಾಯಕರು ಸಕ್ಕರೆ ಕಾರ್ಖಾನೆಯನ್ನು ರೈತರಿಗೆ ಒಪ್ಪಿಸುವ ಮೊದಲು ಅಂದಾಜು 600 ಕೋಟಿ ರೂ. ಸಾಲದ ಸುಳಿಯಲ್ಲಿರುವ ಕಾರ್ಖಾನೆಯನ್ನು ಸಾಲಮುಕ್ತವಾಗಿಸಿ ರೈತರಿಗೆ ಅರ್ಪಿಸಬೇಕು. ಸಾಲಮುಕ್ತವಾಗಿಸಿ ನೀವು ಸಕ್ಕರೆ ಕಾರ್ಖಾನೆಯನ್ನು ರೈತರಿಗೆ ಅರ್ಪಿಸುವುದಾದರೆ ನಾನು ಕೂಡ ಸಾಲದಿಂದ ಸಂಪೂರ್ಣ ಮುಕ್ತವಾಗಿರುವ ಒಂದು ಸಕ್ಕರೆ ಕಾರ್ಖಾನೆಯನ್ನು ರೈತರಿಗೆ ಸಮರ್ಪಿಸಲು ಸಿದ್ಧನಿದ್ದೇನೆ. ಇದು ನನ್ನ ಮನದಾಳದ ಮಾತು. ನಿಮ್ಮ ಹಾಗೆ ತಲೆಯಿಂದ ಹೊಳೆದ ಮಾತನ್ನಾಡುವುದಿಲ್ಲ ಎಂದು ತಿರುಗೇಟು ನೀಡಿದರು.

    ಡಿಸಿಸಿ ಬ್ಯಾಂಕ್ ನಿರ್ದೇಶಕ ಚುನಾವಣೆಯ ಪರಾಜಿತ ಅಭ್ಯರ್ಥಿ ಈರಣ್ಣ ಗಿಡ್ಡಪ್ಪಗೋಳ ಮಾತನಾಡಿ, ನನ್ನ ಪ್ರತಿಸ್ಪರ್ಧಿಯನ್ನು ಸೋಲಿಸಲು ನಾವು ಕೋಟಿಗಟ್ಟಲೆ ಹಣದ ಹೊಳೆ ಹರಿಸಿದ್ದೇವೆಂದು ಹಾಗೂ ಶಾಸಕರು ಷಡ್ಯಂತ್ರ ಮಾಡಿದರೆಂದು ಆರೋಪ ಮಾಡುವ ಮುನ್ನ ನನ್ನ ಪ್ರತಿಸ್ಪರ್ಧಿಯಾದವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ರಾಜಕೀಯ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿರುವ ನನ್ನ ಮುಂದೆ ಗಟ್ಟಿತನದ ಸ್ಪರ್ಧೆಯೊಡ್ಡದೆ ಸೋಲಿನ ಭೀತಿಯಿಂದ ರೆಸಾರ್ಟ್ ರಾಜಕಾರಣ ಮಾಡುವ ಮೂಲಕ ಕೋಟಿ, ಕೋಟಿ ಹಣ ಚೆಲ್ಲಿದರು. ನಾನು ಬರಿಗೈ ದಾಸ. ಕೋಟಿ ಹಣ ಖರ್ಚು ಮಾಡಲು ನನ್ನ ಬಳಿ ಹಣವಿದೆಯೇ? ಮುರುಗೇಶ ನಿರಾಣಿಯವರು ಏನಾದರೂ ಕೈಹಚ್ಚಿದ್ದರೆ ಗೆಲುವು ನನ್ನದಾಗುತ್ತಿತ್ತು. ವಿನಾಕಾರಣ ನಿರಾಣಿಯವರ ಮೇಲೆ ಆರೋಪ ಮಾಡುವ ನನ್ನ ಪ್ರತಿಸ್ಪರ್ಧಿಯಾದವರಿಗೆ ಒಂದು ಕಿವಿಮಾತು, ಈಗಲೂ ಕಾಲ ಮಿಂಚಿಲ್ಲ. ರಾಜಕೀಯ ಕಸು ಮತ್ತು ಕಸರತ್ತು ನಿಮ್ಮಲ್ಲಿದ್ದರೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿ ಮತ್ತೊಮ್ಮೆ ನನ್ನೆದುರು ತೊಡೆತಟ್ಟಿ. ಆಗ ನನ್ನ ಬೆನ್ನಿಗೆ ನಿರಾಣಿ ಪರಿವಾರ ನಿಂತು ಚುನಾವಣೆ ಮಾಡಲಿದೆ. ನೋಡೋಣ ಯಾರು ಗೆಲ್ಲುತ್ತಾರೆಂದು ಸವಾಲು ಹಾಕಿದ ಅವರು, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲರಿಗೆ ಪರೋಕ್ಷ ಟಾಂಗ್ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts