More

    ಶಾಲೆ ಇಲ್ಲದೆ ದುಡಿಮೆಗಿಳಿದ ಮಕ್ಕಳು!; ಡಿಸಿಎಸ್​ಇಆರ್​ಟಿ ಸಮೀಕ್ಷೆಯಲ್ಲಿ ಬಯಲಾದ ಆತಂಕಕಾರಿ ವಿಷಯ

    | ದೇವರಾಜ್ ಕನಕಪುರ ಬೆಂಗಳೂರು

    ಕರೊನಾ ಹಿನ್ನೆಲೆಯಲ್ಲಿ ಮಕ್ಕಳಿಗಾಗಿ ಪರ್ಯಾಯ ಕಲಿಕೆ ವ್ಯವಸ್ಥೆ ಕಲ್ಪಿಸಿದ್ದರೂ ಶೇ.30 ಮಕ್ಕಳು ವಿದ್ಯಾಭ್ಯಾಸ ತೊರೆದು ಹಣ ಸಂಪಾದನೆಯಲ್ಲಿ ತೊಡಗಿದ್ದಾರೆಂಬ ಆತಂಕಕಾರಿ ವಿಷಯ ಬಹಿರಂಗವಾಗಿದೆ.

    ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್​ಇಆರ್​ಟಿ) ‘ಕರೊನಾ ರಜೆಯಲ್ಲಿ ವಿದ್ಯಾರ್ಥಿಗಳು ಗಳಿಸಿರುವ ಕೌಶಲಗಳು’ ಎಂಬ ವಿಷಯದ ಬಗ್ಗೆ ನಡೆಸಿರುವ ಸಮೀಕ್ಷೆ ವರದಿಯಲ್ಲಿ ತಿಳಿದು ಬಂದಿದೆ. ಡಿಎಸ್​ಇಆರ್​ಟಿ 32 ಜಿಲ್ಲೆಗಳಲ್ಲಿ ಅಧ್ಯಯನ ಕೈಗೊಂಡಿದೆ. ಪ್ರತಿ ಜಿಲ್ಲೆಯಿಂದ 108 ವಿದ್ಯಾರ್ಥಿಗಳನ್ನು ಯಾದೃಚ್ಛಿಕ ವಿಧಾನದ ಅಡಿ ಸಮೀಕ್ಷೆಗೆ ಒಳಪಡಿಸಿತ್ತು. ಒಟ್ಟು 3,672 ವಿದ್ಯಾರ್ಥಿಗಳನ್ನು ಸಂದರ್ಶನ ನಡೆಸಿ ದತ್ತಾಂಶ ಸಂಗ್ರಹಿಸಿ ವರದಿ ರೂಪಿಸಲಾಗಿದೆ. ಕಲಿಕೆಯಿಂದ ದೂರವಾಗಿರುವ ಮಕ್ಕಳು ಹೂ ಕಟ್ಟಿ ಮಾರುವುದು, ಮೆಕಾನಿಕ್ ಕೆಲಸ, ಪಾಲಕರೊಂದಿಗೆ ಕೂಲಿಗೆ ಹೋಗುವುದು ಈ ರೀತಿಯ ಸಂಪಾದನೆ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಶೇ.70 ವಿದ್ಯಾರ್ಥಿಗಳು ಸೀಮಿತ ಚೌಕಟ್ಟಿನೊಳಗೆ ಕಲಿಕೆಯಲ್ಲಿ ತೊಡಗಿಕೊಂಡಿದ್ದಾರೆ.

    ಮೊಬೈಲ್ ಗೇಮ್ ಮಕ್ಕಳಿಗೆ ಆನ್​ಲೈನ್ ಕ್ಲಾಸ್ ಒಂದು ರೀತಿಯಲ್ಲಿ ವರದಾನವಾಗಿದೆ. ಏಕೆಂದರೆ, ಆನ್​ಲೈನ್ ನೆಪದಲ್ಲಿ ಮಕ್ಕಳ ಕೈಗೆ ಪಾಲಕರು ಮೊಬೈಲ್ ನೀಡುವುದರಿಂದ ಮಕ್ಕಳು ಅದನ್ನು ಗೇಮ್ ಆಡಲು ಬಳಕೆ ಮಾಡಿಕೊಳ್ಳುತ್ತಿರುವುದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಶೇ.70 ಮಕ್ಕಳು ಎಲೆಕ್ಟ್ರಾನಿಕ್ಸ್ ಮಾಧ್ಯಮ ಬಳಕೆ ಮಾಡಿದ್ದಾರೆ. ಶೇ.50 ವಿದ್ಯಾರ್ಥಿಗಳು ಇ-ಮಾಧ್ಯಮ ಇತರ ಕಾರ್ಯಕ್ರಮ ನೋಡಲು ಬಳಸಿದ್ದು, ಶೇ.40 ವಿದ್ಯಾರ್ಥಿಗಳು ಮೊಬೈಲ್​ನಲ್ಲಿ ಆಟವಾಡಿರುವುದು ತಿಳಿದು ಬಂದಿದೆ.

    ಲಿಂಗ-ತಾರತಮ್ಯ

    ಮರ ಹತ್ತುವುದು, ಬೈಕ್ ಓಡಿಸುವುದು ಹಾಗೂ ಈಜುವುದರಲ್ಲಿ ಹೆಣ್ಣು ಮಕ್ಕಳು ತೊಡಗಿಸಿಕೊಳ್ಳುವಿಕೆ ಪರಿಶೀಲಿಸಿದಾಗ ಗಂಡು ಮಕ್ಕಳ ಭಾಗವಹಿಸುವುದಕ್ಕಿಂತ ಶೇ.50 ಕಡಿಮೆ ಇದೆ. ಅಂತೆಯೇ ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದರಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದ್ದು, ಗಂಡು ಮಕ್ಕಳ ಸಂಖ್ಯೆ ಕಡಿಮೆ ಇದೆ. ಇಂದು ಜೆಂಡರ್ ಸ್ಟೀರಿಯೋ ಟೈಪ್​ಗಳು ಮನೆಗಳಲ್ಲಿ ಬೆಳೆಯುತ್ತಿರುವುದರ ಸೂಚಕವಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.

    ಕೌಶಲ ಕಲಿತ ಮಕ್ಕಳು

    ಬಹುಶಃ ಮಕ್ಕಳು ಶಾಲೆ ನಡೆಯುತ್ತಿದ್ದರೆ, ಹೆಚ್ಚಾಗಿ ಓದುವುದು, ಬರೆಯುವುದು ಮಾತ್ರ ಕಲಿಯುತ್ತಿದ್ದವು ಎನಿಸುತ್ತದೆ. ಏಕೆಂದರೆ, ಸಮಯದ ಅಭಾವ ಹೆಚ್ಚಾಗಿ ರುತ್ತದೆ. ಕರೊನಾ ಹಿನ್ನೆಲೆಯಲ್ಲಿ ರಜೆ ಸಿಕ್ಕಿದರಿಂದ ಮಕ್ಕಳು ಪಠ್ಯೇತರ ಚಟುವಟಿಕೆಗಳಾದ ಸೈಕಲ್, ಬೈಕ್ ಓಡಿಸುವುದು, ಮರ ಹತ್ತುವುದು, ಈಜುವುದು, ಅಡುಗೆ ಮಾಡುವಂತ ಕೌಶಲ ಕಲಿತಿದ್ದಾರೆ.

    ಸರ್ಕಾರಿ ಮಕ್ಕಳೇ ಸ್ಟ್ರಾಂಗ್

    ಕಲಿಕೆ, ಕೌಶಲ, ಗಳಿಕೆ, ಆಟೋಟ, ಸುತ್ತಾಟ, ಮಾತುಕತೆಗಳಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಅತ್ಯಂತ ಹೆಚ್ಚಾಗಿ ತೊಡಗಿಸಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸರ್ಕಾರಿ ಶಾಲಾ ಮಕ್ಕಳು ಸ್ವಕಲಿಕೆಗೆ ಆದ್ಯತೆ ನೀಡಿದರೆ, ಖಾಸಗಿ ಶಾಲೆಯ ಮಕ್ಕಳು ಹೆಚ್ಚಾಗಿ ಮೊಬೈಲ್ ಅಥವಾ ಇತರ ಮಾರ್ಗಗಳ ಮೂಲಕ ಶಿಕ್ಷಕರು ಮತ್ತು ಹಿರಿಯರನ್ನು ಆಶ್ರಹಿಸಿರುವುದು ಅಧ್ಯಯನದಿಂದ ತಿಳಿದು ಬಂದಿದೆ.

    ಭೌತಿಕ ತರಗತಿಗಳು ಇಲ್ಲದೆ, ಇದ್ದರೆ ಮಕ್ಕಳು ಏನೆಲ್ಲ ಕ್ರಿಯೆಯಲ್ಲಿ ತೊಡಗಿಸಿಕೊಂಡಿರುತ್ತಾರೆ ಎಂಬುದಕ್ಕೆ ಈ ಸಮೀಕ್ಷಾ ವರದಿ ಸೂಕ್ತವಾದ ಉದಾಹರಣೆಯಾಗಿದೆ. ಅದರೆ, ಒಂದಲ್ಲ ಒಂದು ಅರ್ಥದಲ್ಲಿ ಇತರ ಕೌಶಲಗಳನ್ನು ಕಲಿತಿರುವುದು ಖುಷಿಯ ವಿಚಾರ.

    | ನಾಗಸಿಂಹ ಜಿ.ರಾವ್ ಸಂಚಾಲಕ, ಮಕ್ಕಳ ಹಕ್ಕುಗಳ ಟ್ರಸ್ಟ್

    ರಾಜ್ಯದಲ್ಲಿ ಮತ್ತೊಬ್ಬ ತಹಸೀಲ್ದಾರ್​ರಿಂದ ಕೋವಿಡ್​ ನಿಯಮ ಉಲ್ಲಂಘನೆ; ಕಾನೂನಿಗೂ ಮೀರಿ ಅದ್ಧೂರಿ ಕಾರ್ಯಕ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts