More

    ಪಾಕಿಸ್ತಾನಕ್ಕೆ ಬಿಸಿಸಿಐ ತಿರುಗೇಟು; ಭಾರತದಲ್ಲಿ ಭಯೋತ್ಪಾದನೆ ನಡೆಸುವುದಿಲ್ಲ ಎಂಬ ಗ್ಯಾರಂಟಿ ಕೊಡುವಿರಾ?

    ನವದೆಹಲಿ: ಭಾರತದಲ್ಲಿ ನಡೆಯಲಿರುವ 2021ರ ಟಿ20 ವಿಶ್ವಕಪ್ ಮತ್ತು 2023ರ ಏಕದಿನ ವಿಶ್ವಕಪ್ ಆಡಲು ತೆರಳುವಾಗ ಯಾವುದೇ ವೀಸಾ ಸಮಸ್ಯೆ ಉಂಟಾಗುವುದಿಲ್ಲ ಎಂಬ ಲಿಖಿತ ಭರವಸೆ ನೀಡುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಐಸಿಸಿ ಎದುರು ಬೇಡಿಕೆ ಇಟ್ಟಿದೆ. ಇದಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದಿಟ್ಟವಾಗಿಯೇ ತಿರುಗೇಟು ನೀಡಿದ್ದು, ಯಾವುದೇ ಭಯೋತ್ಪಾದಕ ಚಟುವಟಿಕೆ ನಡೆಸುವುದಿಲ್ಲ ಎಂಬುದಾಗಿ ಗ್ಯಾರಂಟಿ ನೀಡುವಿರಾ ಎಂದು ಪಿಸಿಬಿಯನ್ನು ಖಾರವಾಗಿಯೇ ಪ್ರಶ್ನಿಸಿದೆ.

    ಕ್ರೀಡಾ ಆಡಳಿತದಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪ ಇರಬಾರದು ಎಂಬ ನಿಯಮವನ್ನು ಐಸಿಸಿ ಹೊಂದಿದೆ. ಇದು ಕ್ರಿಕೆಟ್ ಮಂಡಳಿಗಳಿಗೂ ಅನ್ವಯಿಸುವುದಿಲ್ಲವೇ? ಸರ್ಕಾರದ ಆಡಳಿತದಲ್ಲಿ ಕ್ರಿಕೆಟ್ ಮಂಡಳಿಗಳೂ ಹಸ್ತಕ್ಷೇಪ ನಡೆಸಬಹುದೇ? ಭಾರತೀಯ ಕ್ರಿಕೆಟ್ ಮಂಡಳಿಯಿಂದ ವೀಸಾಗೆ ಸಂಬಂಧಿಸಿ ಖಚಿತತೆ ಕೇಳುವ ಮೊದಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ, ತನ್ನ ದೇಶದಿಂದ ಯಾವುದೇ ಭಯೋತ್ಪಾದಕ ಚಟುವಟಿಕೆ ನಡೆಯುವುದಿಲ್ಲ ಎಂಬ ಬಗ್ಗೆ ಲಿಖಿತ ಭರವಸೆ ನೀಡಬೇಕಾಗುತ್ತದೆ. ಭಾರತದ ನೆಲದಲ್ಲಿ ಪುಲ್ವಾಮಾ ರೀತಿಯ ದಾಳಿಗಳನ್ನು ಇನ್ನೆಂದೂ ಮಾಡುವುದಿಲ್ಲ ಎಂದು ಅವರು ಭರವಸೆ ನೀಡಬಲ್ಲರೇ? ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ.

    ಐಸಿಸಿಯಲ್ಲಿ ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುವ ವ್ಯಕ್ತಿಯೊಬ್ಬನಿದ್ದಾನೆ ಎಂದು ಚೇರ್ಮನ್ ಶಶಾಂಕ್ ಮನೋಹರ್​ಗೆ ಪರೋಕ್ಷವಾಗಿ ಟಾಂಗ್ ನೀಡಿರುವ ಬಿಸಿಸಿಐ ಅಧಿಕಾರಿ, ಆ ವ್ಯಕ್ತಿಗೆ ಏಜೆಂಟ್ ರೀತಿಯಲ್ಲಿ ಕೆಲಸ ಮಾಡುವುದನ್ನು ಪಿಸಿಬಿ ಬಿಡಬೇಕು ಎಂದಿದ್ದಾರೆ. ಈ ಮುನ್ನ ಪಿಸಿಬಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಾಸಿಂ ಖಾನ್, ‘2021 ಮತ್ತು 2023ರ ವಿಶ್ವಕಪ್​ಗಳು ಭಾರತದಲ್ಲಿ ನಡೆಯಲಿರುವುದನ್ನು ಗಮನದಲ್ಲಿಟ್ಟುಕೊಂಡು ನಾವು ಐಸಿಸಿಯಿಂದ ಲಿಖಿತ ಭರವಸೆ ಕೇಳಿದ್ದೇವೆ. ಭಾರತದಲ್ಲಿ ಆಡಲು ವೀಸಾ ಸಮಸ್ಯೆ ಆಗದು ಎಂಬ ಬಗ್ಗೆ ಅವರು ಬಿಸಿಸಿಐನಿಂದ ಭರವಸೆ ತೆಗೆದುಕೊಳ್ಳಬೇಕು’ ಎಂದು ಯುಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದರು. ಪಾಕಿಸ್ತಾನದ ಭಯೋತ್ಪಾದಕ ಚಟುವಟಿಕೆಗಳಿಂದಾಗಿ ಉಂಟಾಗಿರುವ ರಾಜತಾಂತ್ರಿಕ ಬಿಕ್ಕಟ್ಟುಗಳಿಂದ ಭಾರತ ಸರ್ಕಾರ ಇತ್ತೀಚೆಗಿನ ದಿನಗಳಲ್ಲಿ ಪಾಕಿಸ್ತಾನದ ಕೆಲ ಕ್ರೀಡಾ ತಂಡಗಳಿಗೆ ವೀಸಾ ನಿರಾಕರಿಸಿತ್ತು.

    ‘ಐಸಿಸಿ ಟೂರ್ನಿಗೆ ನಾವು ಮುಂಚಿತವಾಗಿಯೇ ಭರವಸೆ ಕೇಳಿದ್ದೇವೆ. ಪೂರ್ಣ ಸದಸ್ಯ ರಾಷ್ಟ್ರಕ್ಕೆ ಒಪ್ಪಂದದ ಪ್ರಕಾರ ಟೂರ್ನಿಯಲ್ಲಿ ಆಡುವ ಅವಕಾಶ ಮಾಡಿಕೊಡುವುದು ಐಸಿಸಿಯ ಜವಾಬ್ದಾರಿಯಾಗಿದೆ’ ಎಂದು ವಾಸಿಂ ಖಾನ್ ಹೇಳಿದ್ದರು. ಆದರೆ ಈ ಬೇಡಿಕೆ ಯಾವುದೇ ಮಾನ್ಯತೆ ಹೊಂದಿಲ್ಲ. ಯಾಕೆಂದರೆ ಕೇಂದ್ರ ಸರ್ಕಾರ 2019ರ ಜೂನ್​ನಲ್ಲೇ ಯಾವುದೇ ಬಹುರಾಷ್ಟ್ರಗಳ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ವೀಸಾ ಸಮಸ್ಯೆ ಆಗುವುದಿಲ್ಲ ಎಂಬ ಭರವಸೆ ನೀಡಿದೆ. ಇತರ ಕೆಲ ಕ್ರೀಡಾಕೂಟಗಳ ಆತಿಥ್ಯ ಭಾರತದ ಕೈತಪ್ಪಿದ್ದು ಇದಕ್ಕೆ ಕಾರಣ. ಆದರೆ ಪಾಕಿಸ್ತಾನ ವಿರುದ್ಧದ ದ್ವಿಪಕ್ಷೀಯ ಸರಣಿಗಳಿಗೆ ಮಾತ್ರ ವೀಸಾ ಸಮಸ್ಯೆ ಉಳಿದುಕೊಂಡಿದೆ.

    ನಟ ಸುಶಾಂತ್​ ಸಿಂಗ್​ ರಜಪೂತ್​ ತಿಂಗಳಿಗೆಷ್ಟು ಖರ್ಚು ಮಾಡುತ್ತಿದ್ದರು? ಹಳೇ ಮ್ಯಾನೇಜರ್​ ನೀಡಿದ್ದಾರೆ ಪೊಲೀಸರಿಗೆ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts