More

    ಜಂಟಿ ಆಯುಕ್ತರೇ, ಪಾಲಿಕೆ ಮಾಜಿ ಸದಸ್ಯರ ಬೀಳ್ಕೊಡುಗೆ ಸಮಾರಂಭಕ್ಕೆ ಖರ್ಚು ಮಾಡಿದ ದುಡ್ಡು ಯಾರದ್ದು?

    ಬೆಂಗಳೂರು: ಚುನಾಯಿತ ಅವಧಿ ಪೂರ್ಣಗೊಳಿಸಿದ ಬಿಬಿಎಂಪಿ ಕಾಪೋರೇಟರ್​ಗಳಿಗೆ ಪಾಲಿಕೆ ಅಧಿಕಾರಿಗಳು ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಿ ಭರ್ಜರಿ ಉಡುಗೊರೆಗಳನ್ನು ನೀಡಿದ್ದಾರೆ. 2015-2020ರ ಅವಧಿಗೆ ಆಯ್ಕೆಯಾದ ಪಾಲಿಕೆ ಸದಸ್ಯರ ಅವಧಿ ಸೆ.10ಕ್ಕೆ ಪೂರ್ಣಗೊಂಡಿದೆ. ಸದಸ್ಯರು ಅಧಿಕಾರದಲ್ಲಿದ್ದಾಗ ಪಾಲಿಕೆ ಅಧಿಕಾರಿಗಳ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದರೆ, ಅವರಿಗೆ ಸೂಕ್ತ ಗೌರವಾರ್ಪಣೆಯೊಂದಿಗೆ ಭೋಜನ ಕೂಟ ಏರ್ಪಡಿಸಬಹುದು.

    * ಪಾಲಿಕೆ ಮಾಜಿ ಸದಸ್ಯರಿಗೆ ಭರ್ಜರಿ ಉಡುಗೊರೆ
    * 90 ಸಾವಿರ ರೂ. ಮೌಲ್ಯದ ಐಫೋನ್ ಗಿಫ್ಟ್
    * 15 ಲಕ್ಷ ರೂಪಾಯಿಗೂ ಅಧಿಕ ಖರ್ಚು?

    ಆದರೆ, ಯಲಹಂಕ ವಲಯದ ಅಧಿಕಾರಿಗಳು ತಮ್ಮ ವಲಯದ ನಿರ್ಗಮಿತ ಪಾಲಿಕೆ ಸದಸ್ಯರಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅಂದಾಜು 90 ಸಾವಿರ ರೂ. ಮೌಲ್ಯದ ಉಡುಗೊರೆಯನ್ನು ಮಂಗಳವಾರ ನೀಡಿರುವುದು ಬೆಳಕಿಗೆ ಬಂದಿದೆ. ಇಷ್ಟೊಂದು ದೊಡ್ಡ ಗಿಫ್ಟ್ ನೀಡಲು ಸದಸ್ಯರೊಂದಿಗೆ ಎಷ್ಟು ಭ್ರಷ್ಟಾಚಾರ ಎಸಗಿರಬಹುದು? ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.

    ಯಲಹಂಕದ ಐಷಾರಾಮಿ ಹೋಟೆಲ್​ನಲ್ಲಿ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಕೆಂಪೇಗೌಡ ವಾರ್ಡ್​ನ ಮಾಜಿ ಕಾಪೋರೇಟರ್ ಚಂದ್ರಮ್ಮ ಕೆಂಪೇಗೌಡ, ಚೌಡೇಶ್ವರಿ ವಾರ್ಡ್​ನ ಆರ್.ಪದ್ಮಾವತಿ ಅಮರನಾಥ್, ಅಟ್ಟೂರಿನ ನೇತ್ರ್ರಾಪಲ್ಲವಿ, ಯಲಹಂಕ ಉಪನಗರ ವಾರ್ಡ್​ನ ಎಂ.ಸತೀಶ್, ಕುವೆಂಪುನಗರ ವಾರ್ಡ್​ನ ಪಾರ್ತಿಬರಾಜನ್, ಕೊಡಿಗೆಹಳ್ಳಿ ವಾರ್ಡ್​ನ ಕೆ.ಎಂ.ಚೇತನ್, ವಿದ್ಯಾರಣ್ಯಪುರದ ಎಚ್.ಕುಸುಮ, ದೊಡ್ಡಬೊಮ್ಮಸಂದ್ರದ ಜಯಲಕ್ಷ್ಮಮ್ಮ ಪಿಳ್ಳಪ್ಪ, ಥಣಿಸಂದ್ರದ ಕೆ.ಎಂ. ಮಮತಾ ಹಾಗೂ ಹಲವು ನಾಮನಿರ್ದೇಶಿತ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು. ಜಂಟಿ ಆಯುಕ್ತ ಡಾ.ಡಿ.ಆರ್. ಅಶೋಕ್, ಮುಖ್ಯ ಇಂಜಿನಿಯರ್ ರಂಗನಾಥ್ ಸೇರಿ ವಲಯದ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಪ್ರತಿ ಜನಪ್ರತಿನಿಧಿಗೆ ಶಾಲು, ಹಾರ, ಕೆಂಪೇಗೌಡ ಸ್ಮರಣಿಕೆ ಹಾಗೂ 90 ಸಾವಿರ ರೂ. ಮೌಲ್ಯದ ಐ-ಫೋನ್ ಉಡುಗೊರೆ ಅರ್ಪಿಸಿದರು.

    ಜಂಟಿ ಆಯುಕ್ತರೇ, ಪಾಲಿಕೆ ಮಾಜಿ ಸದಸ್ಯರ ಬೀಳ್ಕೊಡುಗೆ ಸಮಾರಂಭಕ್ಕೆ ಖರ್ಚು ಮಾಡಿದ ದುಡ್ಡು ಯಾರದ್ದು?

    ಉಡುಗೊರೆ ನೀಡಲು ಹಣದ ಮೂಲ ಯಾವುದು?: ಅಧಿಕಾರಾವಧಿ ಪೂರ್ಣಗೊಳಿಸಿದ ಸದಸ್ಯರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಏರ್ಪಡಿಸುವ ಕುರಿತು ಪಾಲಿಕೆ ಆಯುಕ್ತರು ಅಥವಾ ಆಡಳಿತಾಧಿಕಾರಿಗಳಿಂದ ಯಾವುದೇ ಆದೇಶ ಬಂದಿಲ್ಲ. ಜತೆಗೆ, ಈ ಕುರಿತು ಹಿರಿಯ ಅಧಿಕಾರಿಗಳ ಅನುಮತಿಯನ್ನು ಪಡೆಯದೆ, ಯಲಹಂಕ ವಲಯದ ಜಂಟಿ ಆಯುಕ್ತರೇ ಮುಂದೆ ನಿಂತು ಸಮಾರಂಭ ಆಯೋಜಿಸಿದ್ದಾರೆ. 10ಕ್ಕೂ ಅಧಿಕ ಮಾಜಿ ಸದಸ್ಯರಿಗೆ ಉಡುಗೊರೆ ನೀಡಲು ಖರ್ಚು ಮಾಡಲಾದ 15 ಲಕ್ಷ ರೂ.ಗಿಂತ ಅಧಿಕ ಹಣ ಎಲ್ಲಿಂದ ಬಂತೆಂಬುದು ರಹಸ್ಯವಾಗಿದೆ.

    ಗುತ್ತಿಗೆದಾರರು ಆಯೋಜಿಸಿದ್ದ ಸಮಾರಂಭ: ಬೀಳ್ಕೊಡುಗೆ ಸಮಾರಂಭದ ಆಯೋಜನೆ ಕುರಿತು ಯಲಹಂಕ ವಲಯ ಜಂಟಿ ಆಯುಕ್ತ ಡಾ. ಅಶೋಕ್ ಪ್ರತಿಕ್ರಿಯಿಸಿ, ಗುತ್ತಿಗೆದಾರರು ನಮ್ಮ ವಲಯದ ಮಾಜಿ ಸದಸ್ಯರಿಗೆ ಸನ್ಮಾನ ಸಮಾರಂಭ ಏರ್ಪಡಿಸಿದ್ದರು. ಈ ವೇಳೆ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಆಹ್ವಾನಿಸಿದ್ದರಿಂದ ನಾವು ಪಾಲ್ಗೊಂಡಿದ್ದೇವೆ. ಅಧಿಕಾರಿ ಅಥವಾ ಸಿಬ್ಬಂದಿಯಿಂದ ಸದಸ್ಯರಿಗೆ ಸನ್ಮಾನ, ಉಡುಗೊರೆ ನೀಡಿಲ್ಲವೆಂದು ಹೇಳಿದ್ದಾರೆ.

    ಯೋಷಿಹಿಡೆ ಸುಗಾ ಪ್ರಮಾಣ ಇಂದು, ಅಧಿಕೃತವಾಗಿ ಪ್ರಧಾನಿ ಪಟ್ಟ ತೊರೆದ ಅಬೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts