More

    ಮೀಸಲು ಮೀನಮೇಷ, ಹೈ ಆಕ್ರೋಶ: ರಾಜ್ಯ ಸರ್ಕಾರಕ್ಕೆ ದೊಡ್ಡ ಮೊತ್ತದ ದಂಡ ವಿಧಿಸುವ ಎಚ್ಚರಿಕೆ

    ಬೆಂಗಳೂರು: ಬಿಬಿಎಂಪಿಯ ಹಾಲಿ ಚುನಾಯಿತ ಸದಸ್ಯರ ಅವಧಿ ಸೆ.10ಕ್ಕೆ ಮುಗಿಯಲಿದ್ದರೂ ಈವರೆಗೆ ಪಾಲಿಕೆಯ 198 ವಾರ್ಡ್​ಗಳ ಮರು ವಿಂಗಡಣೆ ಹಾಗೂ ಮೀಸಲಾತಿ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಒದಗಿಸದ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹೈಕೋರ್ಟ್ ಭಾರಿ ಪ್ರಮಾಣದಲ್ಲಿ ದಂಡ ವಿಧಿಸುವ ಎಚ್ಚರಿಕೆ ರವಾನಿಸಿದೆ.

    ವಾರ್ಡ್ ಮರು ವಿಂಗಡಣೆ ಹಾಗೂ ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ, ಸರ್ಕಾರದ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿತು.

    ಚುನಾವಣಾ ಆಯೋಗ ಸಾಂವಿಧಾನಿಕ ಸಂಸ್ಥೆಯಾಗಿದ್ದು,ವಾರ್ಡ್ ಮರು ವಿಂಗಡಣೆ ಹಾಗೂ ಮೀಸಲು ಪಟ್ಟಿಯನ್ನು ಕಲ್ಪಿಸುವುದು ಸರ್ಕಾರದ ಕರ್ತವ್ಯ. ಆದರೆ, ಸರ್ಕಾರ ತನ್ನ ಶಾಸನಬದ್ಧ ಕೆಲಸವನ್ನು ಮಾಡದೆ ಆಯೋಗ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಪರಿಸ್ಥಿತಿ ತಂದೊಡ್ಡಿದೆ. ಆ ಕಾರಣದಿಂದ ಸರ್ಕಾರಕ್ಕೆ 10 ಲಕ್ಷ ರೂ.ಗಿಂತ ಕಡಿಮೆ ಇಲ್ಲದಂತೆ ದೊಡ್ಡ ಮೊತ್ತದ ದಂಡ ವಿಧಿಸಬೇಕಿದೆ ಎಂದು ಮೌಖಿಕವಾಗಿ ತರಾಟೆಗೆ ತೆಗೆದುಕೊಂಡಿತು.

    ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ ಆಕ್ಷೇಪಿಸಿ, ಇದೇ ಸೆ.10ಕ್ಕೆ ಹಾಲಿ ಚುನಾಯಿತ ಸದಸ್ಯರ ಅವಧಿ ಮುಗಿಯಲಿದೆ. ಅಷ್ಟರೊಳಗೆ ಚುನಾವಣೆ ನಡೆಸಬೇಕಿದೆ. ಅವಧಿ ಪೂರ್ಣಗೊಳ್ಳಲು 1 ವರ್ಷವಿರುವಾಗ ವಾರ್ಡ್ ಮರು ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪಡಿಸಬೇಕು ಎಂದು ಹೈಕೋರ್ಟ್ ಹಲವು ಬಾರಿ ಆದೇಶಿಸಿದೆ. ಆದರೂ ಸರ್ಕಾರ ವಿಳಂಬ ಮಾಡುತ್ತಿದೆ ಎಂದರು.

    ಕಳೆದ 3 ಅವಧಿಯಲ್ಲಿಯೂ ವಾರ್ಡ್ ಮರು ವಿಂಗಡಣೆ ಹಾಗೂ ಮೀಸಲಾತಿ ಪಟ್ಟಿ ಒದಗಿಸಲು ಕೋರಿ ಆಯೋಗ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ ಎಂದು ವಿವರಿಸಿದರು. ಅಂತಿಮವಾಗಿ ನ್ಯಾಯಪೀಠ, ಸರ್ಕಾರಕ್ಕೆ ದಂಡ ವಿಧಿಸಲು ಇದು ಅರ್ಹ ಪ್ರಕರಣವಾಗಿದೆ. ಆದಷ್ಟು ಶೀಘ್ರ ಸರ್ಕಾರ ವಾರ್ಡ್ ಮರು ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ. ವಾರ್ಡ್ ಮರು ವಿಂಗಡಣೆ ಪ್ರಕ್ರಿಯೆ ಯಾವಾಗ ಆರಂಭಿಸಲಾಯಿತು, ಕಳೆದ ಚುನಾವಣೆ ವೇಳೆ 2011ರ ಜನಗಣತಿ ಆಧರಿಸಿ ವಾರ್ಡ್ ಮರು ವಿಂಡಗಣೆ ಮಾಡಲಾಗಿದೆಯೇ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಮಾ.3ಕ್ಕೆ ಮುಂದೂಡಿತು. ತಿಂಗಳಲ್ಲಿ ಪೂರ್ಣ, ಭರವಸೆ: ಈಗಾಗಲೇ ವಾರ್ಡ್ ಮರು ವಿಂಗಡಣೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, 1 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ರೋಸ್ಟರ್ ನಿಯಮಗಳನ್ವಯ ಮೀಸಲಾತಿ ನಿಗದಿಪಡಿಸಬೇಕಿದ್ದು, ಜೂನ್ ಅಂತ್ಯದೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಸರ್ಕಾರಿ ವಕೀಲರು ಕೋರ್ಟ್ ಗಮನಕ್ಕೆ ತಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts