More

    ದಲಿತರಿಗೆ ಸ್ವಾಭಿಮಾನ ಕಲ್ಪಿಸಿಕೊಟ್ಟ ಬಸವಣ್ಣ

    ಹುಣಸೂರು: ಅಸ್ಪಶ್ಯರಿಗೆ ಸಮಾನತೆಯನ್ನು ಕಲ್ಪಿಸಿಕೊಡುವಲ್ಲಿ ಮೊದಲು ಹೆಜ್ಜೆಯಿಟ್ಟವರು ಮಹಾನ್ ಮಾನವತಾವಾದಿ ಬಸವಣ್ಣ ಎಂದು ಬೆಳಕು ಸೇವಾ ಸಂಸ್ಥೆ ಮುಖ್ಯಸ್ಥ ನಿಂಗರಾಜ್ ಮಲ್ಲಾಡಿ ಅಭಿಪ್ರಾಯಪಟ್ಟರು.

    ಕಟ್ಟೆಮಳಲವಾಡಿಯ ಬೆಳಕು ಸೇವಾ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾವಿರಾರು ವರ್ಷಗಳಿಂದ ಅವಮಾನ, ಶೋಷಣೆ, ಅಸ್ಪಶ್ಯತೆ, ಜಾತೀಯತೆಯ ನೋವನ್ನು ಅನುಭವಿಸುತ್ತಿದ್ದ ದಲಿತರಿಗೆ ಬಸವಣ್ಣ ಸಮಾನತೆ ಕಲ್ಪಿಸಿಕೊಟ್ಟರು ಎಂದರು.
    ಅಸ್ಪಶ್ಯರಿಗೆ ಸೂರ್ಯನ ಬೆಳಕು, ಬೀಸುವ ಗಾಳಿ ಇವೆರಡನ್ನು ಹೊರತುಪಡಿಸಿ ಉಳಿದೆಲ್ಲವಕ್ಕೂ ನಿರ್ಭಂಧಿಸಲಾಗಿತ್ತು. ದಲಿತರು ತಿರುಗಾಡಲು, ಆಹಾರ ಸೇವಿಸಲು, ಉಡುಗೆ ತೊಡಲು, ಮಾತನಾಡಲು ಎಲ್ಲದಕ್ಕೂ ನಿರ್ಭಂದಿಸಿ ಕತ್ತಲೆಯ ಕೂಪಕ್ಕೆ ದೂಡಲಾಗಿತ್ತು. ದಲಿತರು ಇಂತಹ ಅಪಮಾನ ನೋವುಗಳನ್ನು ನಿರಂತರವಾಗಿ ಅನುಭವಿಸಿ ಇದು ನಮ್ಮ ಕರ್ಮದ ಫಲ ಎಂದುಕೊಂಡಿದ್ದರು. ಇಂತಹ ಸನ್ನಿವೇಶದಲ್ಲಿ 12ನೇ ಶತಮಾನದಲ್ಲೇ ಜಗಜ್ಯೋತಿ ಬಸವಣ್ಣ ದಲಿತರಿಗೆ ಆಗುತ್ತಿರುವ ಶೋಷಣೆ, ಅನಿಷ್ಠ ಪದ್ಧತಿಗಳನ್ನು ತೀವ್ರವಾಗಿ ವಿರೋಧಿಸಿದ್ದರು ಎಂದರು.

    ಅನುಭವ ಮಂಟಪದ ಮೂಲಕ ಧ್ವನಿಯಿಲ್ಲದ, ದಿಕ್ಕಿಲ್ಲದ, ಅವಕಾಶ ವಂಚಿತ ದಲಿತರಿಗೆ ಸಮಾನತೆ ಕಲ್ಪಿಸಿದರು. ದಲಿತರು ಮಾತನಾಡುವ, ಅವರ ಅನಿಸಿಕೆಗಳನ್ನು ಹೇಳಲು ಅನುಭವ ಮಂಟಪ ಒಂದು ವೇದಿಕೆಯಾಯಿತು. ಬಸವಣ್ಣನವರು ದಲಿತ ಸಮಾಜದ ಹುಡುಗನಿಗೂ ಬ್ರಾಹ್ಮಣ ಸಮಾಜದ ಕನ್ಯೆಗೂ ವಿವಾಹ ನೆರವೇರಿಸಿದರು. ಇದನ್ನು ಬ್ರಾಹ್ಮಣ ಸಮಾಜ ತೀವ್ರವಾಗಿ ವಿರೋಧಿಸಿದ್ದರೂ ಸಮ ಸಮಾಜವನ್ನು ನಿರ್ಮಾಣ ಮಾಡಲು ಇಂತಹ ಮಹತ್ವವಾದ ಕೆಲಸವನ್ನು ಮಾಡಿದ್ದರು. ಬಸವಣ್ಣನವರ ಆಧಾರದ ಮೇಲೆಯೇ ಡಾ.ಅಂಬೇಡ್ಕರ್ ಭಾರತದ ಸಂವಿಧಾನ ರಚನೆ ಮಾಡಲು ಸಾಧ್ಯವಾಯಿತು. ಬಸವ ಜಯಂತಿಯನ್ನು ದಲಿತರು ತಮ್ಮ ಮನೆಗಳಲ್ಲಿ ಆಚರಣೆ ಮಾಡಿ ಅವರ ತತ್ವ ಸಿದ್ಧಾಂತಗಳನ್ನು ಅನುಸರಿಸಬೇಕಾದ ಅಗತ್ಯವಿದೆ ಎಂದರು.

    ಕಾರ್ಯಕ್ರಮದಲ್ಲಿ ಕಟ್ಟೆಮಳಲವಾಡಿ ಗ್ರಾಮದ ಯಜಮಾನ ಕೃಷ್ಣಶೆಟ್ಟರು, ಹರೀಶ, ಗ್ರಾಪಂ ಸದಸ್ಯ ಎಸ್. ಗಣೇಶ, ಅಗ್ರಹಾರದ ಸಾಕಯ್ಯ, ಸೋಮನಹಳ್ಳಿ ಸಾಫ್ಟ್‌ವೇರ್ ಇಂಜಿನಿಯರ್ ಶ್ರೀಧರ್, ಅಂಬೇಡ್ಕರ್ ನಗರದ ಹಂದಿಜೋಗಿ ಸಮಾಜದ ಶೇಖರ ಹಾಜರಿದ್ದರು .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts