More

    ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದೆಡೆ ಮದ್ಯ ಮಾರಾಟಕ್ಕೆ ಅವಕಾಶ

    ತುಮಕೂರು: ಕರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿಯಾದಾಗಿನಿಂದ ಬಂದ್ ಆಗಿದ್ದ ಮದ್ಯದಂಗಡಿಗಳ ಬಾಗಿಲು ಮೇ 4 ರಂದು ತೆರೆಯಲಿವೆ. 40 ದಿನಗಳಿಂದ ‘ಎಣ್ಣೆ’ ಇಲ್ಲದೆ ಚಡಪಡಿಸುತ್ತಿದ್ದ ಮದ್ಯಪ್ರಿಯರು ಸೋಮವಾರ ಬೆಳಗ್ಗೆಯೇ ವೈನ್‌ಶಾಪ್, ಎಂಎಸ್‌ಐಎಲ್‌ಗಳಿಗೆ ಮುಗಿಬೀಳುವ ಸಾಧ್ಯತೆ ಇದೆ.

    ರಾಜ್ಯ ಸರ್ಕಾರದ ಆದೇಶದಂತೆ ಕಂಟೈನ್ಮೆಂಟ್ ರೆನ್ ಹೊರತುಪಡಿಸಿ ಉಳಿದೆಡೆ ಮದ್ಯ ಮಾರಾಟಕ್ಕೆ ಅವಕಾಶ ಇದೆ. ಜಿಲ್ಲೆಯಲ್ಲಿ ವೈನ್‌ಶಾಪ್‌ಗಳು (ಸಿಎಲ್-2) ಹಾಗೂ ಎಂಎಸ್‌ಐಎಲ್ (ಸಿಎಲ್-11) ಮಳಿಗೆಗಳಲ್ಲಿ ಮಾರಾಟ ಮಾಡಬಹುದಾಗಿದೆ. ಬೆಳಗ್ಗೆ 9 ರಿಂದ ಸಂಜೆ 7ರವರೆಗೆ ಮದ್ಯದಂಗಡಿಗಳು ತೆರೆದಿರಲಿದ್ದು, ಎಣ್ಣೆ ಖರೀದಿಸಲು ಬರುವ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ.

    ಪಬ್, ಕ್ಲಬ್, ಬಾರ್ ಆ್ಯಂಡ್ ರೆಸ್ಟೋರೆಂಟ್, ವೈನ್ : ಬೋಟಿಕ್‌ಗಳಲ್ಲಿ ಮದ್ಯಮಾರಾಟಕ್ಕೆ ಅವಕಾಶವಿರುವುದಿಲ್ಲ. ಸಿಎಲ್-2 ಹಾಗೂ ಸಿಎಲ್-11 ಮಳಿಗೆಗಳಲ್ಲಿ ಷರತ್ತುಬದ್ಧ ಮಾರಾಟಕ್ಕೆ ಅನುವು ಮಾಡಿಕೊಡಲಾಗಿದೆ. ಈ ಮಳಿಗೆಗಳಲ್ಲಿ ಪಾರ್ಸಲ್ ಮೂಲಕ ಮಾರಾಟ ಮಾಡಬಹುದು.

    239 ಮದ್ಯಮಳಿಗೆಗಳು: ಜಿಲ್ಲೆಯಲ್ಲಿ 239 ಮದ್ಯಮಳಿಗೆಗಳಿವೆ. 46 ಎಂಎಸ್‌ಐಎಲ್ ಮಳಿಗೆಗಳು ಹಾಗೂ 193 ವೈನ್‌ಶಾಪ್‌ಗಳಿದ್ದು, ಈ ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿದೆ. ಈ ಮಳಿಗೆಗಳಿಗೆ 6 ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೊಡ್ಡ ಸವಾಲಿದೆ. ಉಲ್ಲಂಘನೆ ಆಗದಂತೆ ಕ್ರಮ ತೆಗೆದುಕೊಳ್ಳುವ ಹೊಣೆಗಾರಿಕೆ ಮದ್ಯಮಳಿಗೆಗಳದ್ದಾಗಿದ್ದು ಆದೇಶ ಉಲ್ಲಂಘಿಸಿದರೆ ಕ್ರಮ ಜರುಗಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇದು ಮದ್ಯಮಾರಾಟಗಾರರಿಗೆ ತಲೆಬಿಸಿ ತಂದಿದೆ.

    ಖಾಸಗಿ ಸೆಕ್ಯುರಿಟಿ: ದೈಹಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ : ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯಲ್ಲೂ ನೂಕುನುಗ್ಗಲು ಊಂಟಾಗದಂತೆ ಕ್ರಮವಹಿಸುವ ಜವಾಬ್ದಾರಿ ಮದ್ಯದಂಗಡಿಗಳ ಮೇಲಿದೆ. ಹಾಗಾಗಿ, ಖಾಸಗಿ ಸೆಕ್ಯುರಿಟಿ ಗಾರ್ಡ್‌ಗಳ ಸೇವೆ ಬಳಸಿಕೊಳ್ಳುವಂತೆ ಪೊಲೀಸ್ ಇಲಾಖೆ ಮದ್ಯದಂಗಡಿ ಮಾಲೀಕರಿಗೆ ಸೂಚನೆ ನೀಡಿದೆ.

    ಒಬ್ಬರಿಗೆ ಫುಲ್‌ಬಾಟಲ್?: 40 ದಿನಗಳ ಬಳಿಕ ಮದ್ಯದಂಗಡಿಗಳು ಬಾಗಿಲು ತೆರೆಯುತ್ತಿರುವುದರಿಂದ ಆರಂಭದಲ್ಲಿ ನೂಕುನುಗ್ಗಲು ಉಂಟಾಗುವ ಹಿನ್ನೆಲೆಯಲ್ಲಿ ಗ್ರಾಹಕನಿಗೆ 1 ಫುಲ್‌ಬಾಟಲ್ ಖರೀದಿಗೆ ಅಥವಾ 180 ಎಂಎಲ್ 4-5 ಕ್ವಾರ್ಟರ್ ಬಾಟಲ್ ಖರೀದಿಸಲು ಅವಕಾಶ ಇರಲಿದೆ. ಮೊದಲ 3-4 ದಿನ ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾ ಅಬಕಾರಿ ಇಲಾಖೆ ಮದ್ಯದಂಗಡಿಗಳಿಗೆ ಸಲಹೆ ನೀಡಿದೆ.

    ಮದ್ಯಮಾರಾಟ ಪುನರಾರಂಭಕ್ಕೂ ಮುನ್ನ ಅನುಮಾನಗಳು, ದೂರುಗಳು ಬಂದ ಮದ್ಯದಂಗಡಿಗಳ ಸ್ಟಾಕ್ ಪರಿಶೀಲನೆ ಮಾಡಲಾಗಿದೆ. ಜಿಲ್ಲೆಯಲ್ಲಿ 7 ಮದ್ಯದಂಗಡಿಗಳ ಲೈಸೆನ್ಸ್ ಅಮಾನತುಪಡಿಸಲಾಗಿದೆ. ಮೇ 4ರಿಂದ ಸಿಎಲ್-2, ಸಿಎಲ್-11 ಮಳಿಗೆಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 7ರ ತನಕ ಮದ್ಯಮಾರಾಟಕ್ಕೆ ಅವಕಾಶ ಕೊಡಲಾಗಿದೆ.
    ಎಸ್.ನಾಗಾರಜಪ್ಪ ಅಬಕಾರಿ ಅಧೀಕ್ಷಕ

    ಮದ್ಯದಂಗಡಿಗಳ ಬಳಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಈ ಬಗ್ಗೆ ಮಾಲೀಕರ ಜತೆ ಸಭೆ ನಡೆಸಿ ನೂಕುನುಗ್ಗಲು ಉಂಟಾಗದಂತೆ ಖಾಸಗಿ ಸೆಕ್ಯುರಿಟಿ ಗಾರ್ಡ್‌ಗಳನ್ನು ನೇಮಿಸಿಕೊಳ್ಳುವುದು ಸೇರಿ ಕೆಲವು ನಿರ್ದೇಶನ ನೀಡಲಾಗಿದೆ. ಎಲ್ಲ ಕಡೆ ಪೊಲೀಸರನ್ನು ನಿಯೋಜಿಸಲು ಸಾಧ್ಯವಿಲ್ಲ. ಬದಲಾಗಿ ಮದ್ಯದಂಗಡಿಗಳ ಮೇಲೆ ನಿಗಾ ಇಡಲಾಗುವುದು.
    ಟಿ.ಜೆ.ಉದೇಶ್ ಎಎಸ್ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts