More

    ಬ್ಯಾರಿಕೇಡ್ ಬಾಡಿಗೆ 1 ಕೋಟಿ 10 ಲಕ್ಷ!

    ಸಂತೋಷ ವೈದ್ಯ ಹುಬ್ಬಳ್ಳಿ

    ಅವಳಿ ನಗರದಲ್ಲಿ ಕರೊನಾ ಸೋಂಕಿತರು ಪತ್ತೆಯಾದ ಪ್ರದೇಶಗಳನ್ನು ಸೀಲ್​ಡೌನ್ ಮಾಡುವ ಜವಾಬ್ದಾರಿಯನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಿಭಾಯಿಸಿದೆ. ಇದಕ್ಕಾಗಿ ಮಾಡಲಾದ ಬ್ಯಾರಿಕೇಡಿಂಗ್ ವ್ಯವಸ್ಥೆಯ ಬಾಡಿಗೆ ವೆಚ್ಚವು ಹುಬ್ಬೇರಿಸುವಂತಿದೆ. ಬರೋಬ್ಬರಿ 1,10,50,943 ರೂ. ಬಿಲ್ ತಯಾರಿಸಲಾಗಿದೆ.

    8 ಜನ ಶಾಮಿಯಾನ ಸಪ್ಲೈಯರ್ಸ್​ಗೆ ಬ್ಯಾರಿಕೇಡ್ ಬಾಡಿಗೆ ವೆಚ್ಚವಾಗಿ ಈ ಮೊತ್ತ ಪಾವತಿಯಾಗಬೇಕು. ಈ ಸಂಬಂಧ ವಲಯ ಕಚೇರಿಗಳ ಸಹಾಯಕ ಆಯುಕ್ತರು ಅಂತಿಮಗೊಳಿಸಿದ ಬಿಲ್ ಅನ್ನು ಕ್ರೋಡಿಕರಿಸಿರುವ ಪಾಲಿಕೆಯ ಕೇಂದ್ರ ಕಚೇರಿ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಸದ್ಯದಲ್ಲೇ ಬ್ಯಾರಿಕೇಡಿಂಗ್ ವೆಚ್ಚದ ಕಡತ ಸಲ್ಲಿಸಲಿದ್ದಾರೆ. ವಲಯ ಕಚೇರಿ 7ರಲ್ಲಿ ಅತಿ ಹೆಚ್ಚು 17.75 ಲಕ್ಷ ರೂ. ಹಾಗೂ ವಲಯ ಕಚೇರಿ 3ರಲ್ಲಿ ಅತಿ ಕಡಿಮೆ 3 ಲಕ್ಷ ರೂ. ಬ್ಯಾರಿಕೇಡಿಂಗ್ ವೆಚ್ಚ ತೋರಿಸಿದೆ.

    ಧಾರವಾಡ ಜಿಲ್ಲಾಡಳಿತವೇ ಈ ಹಣವನ್ನು ಬಿಡುಗಡೆ ಮಾಡಬೇಕಿದೆ. ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರವು ಜಿಲ್ಲೆಗೆ ಬಿಡುಗಡೆ ಮಾಡಿದ ಅನುದಾನದಲ್ಲಿ ಪಾಲಿಕೆಗೆ ಯಾವುದೇ ಪಾಲು ಬಂದಿಲ್ಲ. ಪಾಲಿಕೆ ತನ್ನ ಅನುದಾನದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕ್ರಿಮಿನಾಶಕ ಸಿಂಪಡಣೆ, ಪೌರ ಕಾರ್ವಿುಕರಿಗೆ ಸುರಕ್ಷಾ ಸಾಧನಗಳ ವಿತರಣೆಗೆ ಕ್ರಮ ಕೈಗೊಂಡಿತ್ತು.

    ಸಾವಿರ ದಾಟಿತ್ತು ಸೀಲ್​ಡೌನ್ ಪ್ರದೇಶಗಳ ಸಂಖ್ಯೆ: ಹುಬ್ಬಳ್ಳಿ- ಧಾರವಾಡ ಅವಳಿನಗರದಲ್ಲಿ 2020ರ ಜುಲೈ-ಆಗಸ್ಟ್ ತಿಂಗಳಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಅಧಿಕವಾಗಿದ್ದವು. ಆಗ ಸೀಲ್​ಡೌನ್ ಪ್ರದೇಶಗಳ ಸಂಖ್ಯೆ 1100-1300ರ ಆಸುಪಾಸಿ ನಲ್ಲಿದ್ದವು. ಧಾರವಾಡದಲ್ಲಿ ಮೊದಲ ಕರೊನಾ ಪ್ರಕರಣ ಹೊಸಯಲ್ಲಾಪುರದಲ್ಲಿ ಹಾಗೂ ಹುಬ್ಬಳ್ಳಿಯಲ್ಲಿ ಕಮರಿಪೇಟೆಯ ಮುಲ್ಲಾ ಓಣಿಯಲ್ಲಿ ಪತ್ತೆಯಾಗಿತ್ತು. ಆಗ, ಸೋಂಕಿತರು ವಾಸವಿದ್ದ ಸ್ಥಳದಿಂದ ಸುತ್ತಳತೆಯ 3 ಕಿ.ಮೀ. ವ್ಯಾಪ್ತಿಯನ್ನು ನಿರ್ಬಂಧಿತ ಪ್ರದೇಶ (ಕಂಟೈನ್ಮೆಂಟ್ ಝೋನ್) ಎಂದು ಘೊಷಿಸಲಾಗುತ್ತಿತ್ತು. ಇದರಿಂದ ಹುಬ್ಬಳ್ಳಿಯಲ್ಲಿ

    ಮತ್ತು ಧಾರವಾಡದಲ್ಲಿ ಶೇ.80ರಷ್ಟು ಜನ ವಸತಿ ಪ್ರದೇಶ ಲಾಕ್ ಆಗಿತ್ತು. ಆಗ ಲಾಕ್​ಡೌನ್ ಪೂರ್ಣ ಪ್ರಮಾಣದಲ್ಲಿ ಜಾರಿಯಲ್ಲಿತ್ತು. ಎಲ್ಲೆಡೆ ಬ್ಯಾರಿಕೇಡ್ ಅಳವಡಿಸಿ ಜನ ಹಾಗೂ ವಾಹನಗಳ ಓಡಾಟ ನಿಯಂತ್ರಿಸಲಾಗಿತ್ತು. ಧಾರವಾಡದ ಹೊಸಯಲ್ಲಾಪುರ ಹಾಗೂ ಹುಬ್ಬಳ್ಳಿಯ ಮುಲ್ಲಾಓಣಿ ಪ್ರದೇಶಗಳು 28 ದಿನಗಳವರೆಗೆ ಸೀಲ್​ಡೌನ್​ಗೆ ಒಳಗಾಗಿದ್ದವು.

    ಬಳಿಕ ಕರೊನಾ ಸೋಂಕಿತ ಪತ್ತೆಯಾದ ಮನೆಯಿಂದ 100 ಮೀಟರ್ ವ್ಯಾಪ್ತಿ ಪ್ರದೇಶವನ್ನು ಮಾತ್ರ ಸೀಲ್​ಡೌನ್ ಮಾಡಲಾಗುತ್ತಿತ್ತು. ಕಾಲ ಕ್ರಮೇಣ ಲಾಕ್​ಡೌನ್ ನಿಯಮಗಳಲ್ಲಿ ಸಡಿಲಿಕೆಯಾಗಿ ಇದೀಗ ಬಹುತೇಕ ಮೊದಲಿನಂತೆ ಮುಕ್ತ ವ್ಯವಸ್ಥೆ ಇದೆ. ಅಕ್ಟೋಬರ್​ನಿಂದ ಬ್ಯಾರಿಕೇಡಿಂಗ್ ವ್ಯವಸ್ಥೆ ನಿಲ್ಲಿಸಲಾಗಿದೆ. ಸೋಂಕಿತ ವಾಸಿಸಿರುವ ಮನೆಗೆ ಹೋಮ್ ಕ್ವಾರಂಟೈನ್ ಎಂದು ಸ್ಟಿಕ್ಕರ್ ಅಂಟಿಸಲಾಗುತ್ತಿದೆ.

    ಫೆಬ್ರವರಿ 16ರವರೆಗೆ ಹುಬ್ಬಳ್ಳಿಯಲ್ಲಿ 9430 ಹಾಗೂ ಧಾರವಾಡದಲ್ಲಿ 6221 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

    ಮೀಟರ್​ಗೆ ಏಳು ರೂಪಾಯಿ: ಲೋಕೋಪಯೋಗಿ ಇಲಾಖೆ ಮಾನ್ಯ ಮಾಡಿರುವ ಶೆಡ್ಯೂಲ್ ರೇಟ್​ನಂತೆ ಪ್ರತಿ ರನ್ನಿಂಗ್ ಮೀಟರ್​ಗೆ ಪ್ರತಿ ದಿನಕ್ಕೆ 7 ರೂ. ನಂತೆ ಬ್ಯಾರಿಕೇಡಿಂಗ್ ವೆಚ್ಚ ಲೆಕ್ಕ ಹಾಕಲಾಗಿದೆ. ಶಾಮಿಯಾನ ಸಪ್ಲೈಯರ್ಸ್ ನವರು ಪ್ರತಿ ರನ್ನಿಂಗ್ ಮೀಟರ್​ಗೆ 10-12 ರೂ. ಕೇಳಿದ್ದರು. ಸರ್ಕಾರದಿಂದ 7 ರೂ.ಗೆ ಅನುಮೋದನೆ ಪಡೆಯಲಾಗಿದೆ’ ಎಂದು ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಅವರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts