More

    ನದಿಪಾತ್ರದಲ್ಲಿ ಬ್ಯಾರಿಕೇಡ್ ಅಳವಡಿ

    ಶ್ರೀರಂಗಪಟ್ಟಣ: ಕೆಆರ್‌ಎಸ್ ಡ್ಯಾಂನಿಂದ 70 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರನ್ನು ಹೊರಬಿಟ್ಟಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ನದಿಪಾತ್ರ ಹಾಗೂ ದೇವಸ್ಥಾನ ಸಮೀಪ ಬ್ಯಾರಿಕೇಡ್ ಅಳವಡಿಸಲಾಗಿದೆ. ಜತೆಗೆ ಅಂಬೇಡ್ಕರ್ ಭವನದ ಮುಂಭಾಗದ ಪ್ರವೇಶದ್ವಾರದಲ್ಲಿ ನದಿಪಾತ್ರಕ್ಕೆ ತೆರಳದಂತೆ ಸಿಮೆಂಟ್ ಇಟ್ಟಿಗೆಯಿಂದ ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗಿದೆ.
    ಭಾನುವಾರ ಪ್ರವಾಹ ಪೀಡಿತ ಪ್ರದೇಶಗಳಿಗೆ ತಹಸೀಲ್ದಾರ್ ಎಂ.ವಿ.ರೂಪಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕು ಆಡಳಿತ, ಕಂದಾಯ ಇಲಾಖೆ ಮತ್ತು ಗ್ರಾಮಲೆಕ್ಕಿಗರು ಸೇರಿ ಪುರಸಭೆ ಅಧಿಕಾರಿಗಳೊಂದಿಗೆ ಗಂಜಾಂನ ಘೋಸಾಯ್‌ಘಾಟ್, ತ್ರಿವೇಣಿ ಸಂಗಮ, ನಿಮಿಷಾಂಬ ದೇವಾಲಯಕ್ಕೆ ಭೇಟಿ ನೀಡಿದರು.

    ಜತೆಗೆ ನದಿತೀರದ ಸ್ಥಳದಲ್ಲಿದ್ದ ಭಕ್ತರು, ಸಾರ್ವಜನಿಕರಿಗೆ ಅಳವಡಿಸಿರುವ ಬ್ಯಾರಿಕೇಡ್ ದಾಟಿ ನದಿ ತೀರಕ್ಕೆ ತೆರಳದಂತೆ ತಿಳಿವಳಿಕೆ ನೀಡಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಯಾವುದೇ ಅವಘಡ ಸಂಭವಿಸಿದಂತೆ ಎಚ್ಚರಿಕೆ ವಹಿಸುವಂತೆ ತಾಕೀತು ಮಾಡಿದರು.
    ಪಟ್ಟಣದ ಕಾವೇರಿಪುರ (ಸಂತೆಮಾಳ) ಬಡಾವಣೆ ತೆರಳಿದ ಅವರು, ನದಿ ತೀರದ ಅಂಚಿನಲ್ಲಿದ್ದ ಮನೆಗಳನ್ನು ವೀಕ್ಷಿಸಿದರು. ಪ್ರವಾಹದ ಹಿನ್ನೆಲೆಯಲ್ಲಿ ಮನೆಗಳು ಕುಸಿಯುವ ಅಥವಾ ನೀರು ತುಂಬಿಕೊಳ್ಳುವ ಸಾಧ್ಯತೆ ಇರುವುದರಿಂದ ಶೀಘ್ರ ಅಲ್ಲಿನ ನಿವಾಸಿಗಳನ್ನು ಅವಶ್ಯಕ ವಸ್ತುಗಳೊಂದಿಗೆ ಕೆಲದಿನ ಸುರಕ್ಷತಾ ಸ್ಥಳಗಳಿಗೆ ತೆರಳುವಂತೆ ಸಲಹೆ ನೀಡಿದರು.

    ವೆಲ್ಲೆಸ್ಲಿ ಸೇತುವೆ ಮೇಲೆ ಸಾರ್ವಜನಿಕರ ಪ್ರವೇಶ ಮತ್ತು ವಾಹನಗಳ ಸಂಚಾರಕ್ಕೆ ನಿರ್ಬಂಧಗೊಳಿಸಿ ಅಂಬೇಡ್ಕರ್ ಭವನದ ಮುಂಭಾಗದ ಪ್ರವೇಶದ್ವಾರದಲ್ಲಿ ನದಿ ಪಾತ್ರಕ್ಕೆ ತೆರಳದಂತೆ ಸಿಮೆಂಟ್ ಇಟ್ಟಿಗೆಯಿಂದ ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗಿದೆ. ಸೇತುವೆ ಕೆಳಗೆ ಅಪಾಯಕಾರಿ ಮಟ್ಟಕ್ಕೆ ನೀರಿನ ಹರಿವು ತಲುಪಿರುವುದರಿಂದ ಸುರಕ್ಷತೆಯ ಮುನ್ನೆಚ್ಚರಿಕೆಯಾಗಿ ಕ್ರಮಕ್ಕೆ ಮುಂದಾಗಿದ್ದು, ನದಿಯಲ್ಲಿ ಪ್ರವಾಹ ಕಡಿಮೆಯಾದ ಬಳಿಕ ತಡೆಗೋಡೆ ತೆರವುಗೊಳಿಸಲಾಗುವುದು ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

    ಕಾಡುದನ ರಕ್ಷಣೆ: ಕಾವೇರಿ ನದಿಯಲ್ಲಿ ಕೋಚ್ಚಿ ಹೋಗುತ್ತಿದ್ದ ಕಾಡುದನವನ್ನು ತಾಲೂಕಿನ ರಾಂಪುರ ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ರಂಗನತಿಟ್ಟು ಪಕ್ಷಿಧಾಮದ ನಡುಗಡ್ಡೆಯಲ್ಲಿನ ಗೂಳಿತಿಟ್ಟಿನಿಂದ ಕಾಡುದನವೊಂದು ನೀರಿನಲ್ಲಿ ಸಿಲುಕಿ ಸುಮಾರು 3 ಕಿ.ಮೀ ನದಿಯಲ್ಲಿ ಕೊಚ್ಚಿ ಬಂದಿದ್ದು, ಇದನ್ನು ಕಂಡ ನದಿ ತೀರದ ಗ್ರಾಮಸ್ಥರು ಹಗ್ಗದಿಂದ ರಕ್ಷಣೆ ಮಾಡಿದ್ದಾರೆ.
    ಸ್ಥಳಕ್ಕೆ ಪಶುವೈದ್ಯಾಧಿಕಾರಿ ಆನಂದ್ ಕುಮಾರ್ ಅವರೊಂದಿಗೆ ಆಗಮಿಸಿದ ಪಕ್ಷಿಧಾಮದ ಸಿಬ್ಬಂದಿ ಗಾಯಗೊಂಡಿದ್ದ ದನಕ್ಕೆ ಚಿಕಿತ್ಸೆ ಕೊಡಿಸಿದ್ದಾರೆ. ಪ್ರವಾಹ ರಭಸಕ್ಕೆ ನದಿಯಲ್ಲಿದ್ದ ಬಂಡೆಗಳಿಂದ ಹೊಡೆತ ತಿಂದ ಪರಿಣಾಮ ದನ ಗಾಯಗೊಂಡು ನಿತ್ರಾಣಗೊಂಡಿತ್ತು. ಇದೀಗ ಪಕ್ಷಿಧಾಮದ ಸಿಬ್ಬಂದಿ ದನವನ್ನು ತಮ್ಮ ಸುರ್ಪಧಿಗೆ ಪಡೆದಿದ್ದು, ಪ್ರವಾಹ ಇಳಿಮುಖಗೊಂಡ ಬಳಿಕ ಗೂಳಿತಿಟ್ಟಿಗೆ ಪುನಃ ಬಿಡಲಿದ್ದಾರೆ ಎಂದು ವನಪಾಲಕರು ತಿಳಿಸಿದ್ದಾರೆ.

    ಜನರ ಸೆಲ್ಫಿ ಕ್ರೇಜ್: ಪ್ರವಾಹದ ಮನಮೋಹಕ ದೃಶ್ಯ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರನ್ನು ತನ್ನತ್ತ ಸೆಳೆಯುತ್ತಿದೆ. ಸೇತುವೆ ಮೇಲಿಂದ ಈ ದೃಶ್ಯವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿಯಲು ಜನರು ಮುಂದಾಗುತ್ತಿದ್ದಾರೆ. ಜತೆಗೆ ಅಪಾಯದ ಅರಿವನ್ನು ಲೆಕ್ಕಿಸದೆ ಸೇತುವೆಯ ಗೋಡೆಗಳ ಮೇಲೆ ನಿಂತು ಸೆಲ್ಫಿಗೆ ಮುಂದಾಗಿದ್ದಾರೆ. ಮತ್ತೊಂದೆಡೆ ಸೇತುವೆ ಮೇಲೆ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸಿ ನದಿ ವೀಕ್ಷಣೆಗೆ ಮುಂದಾಗುತ್ತಿರುವ ಜನರಿಂದ ಹೆದ್ದಾರಿಯಲ್ಲಿ ಟ್ರಾಫಿಕ್ ಕಿರಿಕಿರಿ ಸಹ ಉಂಟಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts