More

    ಬಂಕಾಪುರ ಪುರಸಭೆ: 21 ತಿಂಗಳಾದರೂ ಸದಸ್ಯರಿಗೆ ಸಿಗದ ಅಧಿಕಾರ

    ಬಂಕಾಪುರ: ಇಲ್ಲಿಯ ಪುರಸಭೆ ಆಡಳಿತ ಮಂಡಳಿಗೆ ಚುನಾವಣೆ ನಡೆದು 21 ತಿಂಗಳು ಕಳೆದರೂ ಸದಸ್ಯರ ಕೈಗೆ ಅಧಿಕಾರ ಸಿಕ್ಕಿಲ್ಲ. ಹೀಗಾಗಿ, ಜನರ ಸಮಸ್ಯೆ ಬಗೆಹರಿಸುವುದು ಹೇಗೆ ಎಂದು ತಿಳಿಯದೇ ಚುನಾಯಿತ ಪ್ರತಿನಿಧಿಗಳು ಚಿಂತೆಗೀಡಾಗಿದ್ದಾರೆ.

    23 ವಾರ್ಡ್​ಗಳನ್ನು ಹೊಂದಿರುವ ಪುರಸಭೆ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಕ್ಷೇತ್ರ ವಿಂಗಡಣೆಯಾಗಿದೆ ಮತ್ತು ಪ್ರಕಟಗೊಂಡ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಸರಿಯಾಗಿಲ್ಲ ಎಂದು ಸ್ಥಳೀಯರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಇಡೀ ಪ್ರಕ್ರಿಯೆ ಸ್ಥಗಿತಗೊಂಡಿದೆ.

    ಹುರುಪು, ಹುಮ್ಮಸ್ಸಿನಿಂದ ಚುನಾವಣೆ ಎದುರಿಸಿ ಗೆದ್ದು ಬೀಗಿದ ಸದಸ್ಯರಿಗೆ ಈಗ ತಮ್ಮ ತಮ್ಮ ವಾರ್ಡಿನ ಸಮಸ್ಯೆಗಳನ್ನು ಮುಂದಿಟ್ಟು ಪರಿಹಾರ ಕಲ್ಪಿಸುವಂತೆ ನಿತ್ಯ ತಮ್ಮ ಬಳಿ ಬರುವ ಸಾರ್ವಜನಿಕರಿಗೆ ಮುಖ ತೋರಿಸುವುದೇ ಕಷ್ಟವಾಗಿದೆ. ತಮ್ಮ ವಾರ್ಡಿನ ಜನರಿಗೆ ದಿನಕ್ಕೊಂದು ಭರವಸೆ ಕೊಟ್ಟು ಸಾಗಹಾಕಿದ್ದು ಆಯಿತು, ವಸ್ತುಸ್ಥಿತಿ ಹೀಗಿದ್ದು ತಮ್ಮ ಬಳಿ ಅಧಿಕಾರ ಇಲ್ಲದಿರುವುದು ಸಮಸ್ಯೆಯಾಗಿದೆ ಎಂದು ಕೆಲವರಿಗೆ ಮನವರಿಕೆ ಮಾಡಿಕೊಟ್ಟಿದ್ದು ಆಯಿತು, ಪ್ರಕರಣ ಇತ್ಯರ್ಥವಾಗುತ್ತದೆ ಎಂದು ಕಾದಿದ್ದೂ ಆಯಿತು… ಅಧಿಕಾರ ಸೂತ್ರ ಮಾತ್ರ ಕೈಗೆ ಬಂದಿಲ್ಲ.

    ಇದರಿಂದಾಗಿ, ಚುನಾಯಿಸಿದ ಜನರ ದೃಷ್ಟಿಯಲ್ಲಿ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬಂತಾಗಿದ್ದಾರೆ! ಇತ್ತ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಕೆಲವೊಂದು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕಾದ ಸದಸ್ಯರಿಗೆ ದಿಕ್ಕು ತೋಚದಂತಾಗಿದೆ.

    ಮುಖ್ಯಾಧಿಕಾರಿ, ಸಿಬ್ಬಂದಿ ಜತೆಗೆ ಹೊಂದಾಣಿಕೆ ಕೊರತೆಯಿಂದ ಚುನಾಯಿತ ಸದಸ್ಯರು, ರಸ್ತೆ, ಚರಂಡಿ ದುರಸ್ತಿ ಸೇರಿ ಜನರ ವೈಯಕ್ತಿಕ ಸಮಸ್ಯೆಗಳಿಗೆ ಸ್ಪಂದಿಸಲಾಗದೆ ಒದ್ದಾಡುತ್ತಿದ್ದಾರೆ. ನಿತ್ಯ ಪುರಸಭೆಗೆ ಬಂದರೂ ಸುಮ್ಮನೆ ಕುಳಿತು, ಎದ್ದು ಹೋಗುವ ದಯನೀಯ ಸ್ಥಿತಿಗೆ ಸಿಲುಕಿದ್ದಾರೆ. ಅಧಿಕಾರಿಗಳು, ಸಿಬ್ಬಂದಿ, ತಮ್ಮ ವ್ಯಾಪ್ತಿಯಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತಿದ್ದಾದರೂ ಕೆಲವು ಸಮಸ್ಯೆಗೆ ಸಾಮಾನ್ಯ ಸಭೆ ನಿರ್ಣಯಗಳೇ ಪರಿಹಾರವಾಗಿದೆ.

    ಅವೈಜ್ಞಾನಿಕ ಕ್ಷೇತ್ರ ವಿಂಗಡಣೆಯಾಗಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ದೂರು ಹಿಂಪಡೆಯಲಾಗಿದೆ. ಆದರೂ 2021ರ ಡಿಸೆಂಬರ್ 27ರಂದು ಚುನಾವಣೆ ನಡೆದು ಬರೋಬ್ಬರಿ 21 ತಿಂಗಳು ಗತಿಸಿದರೂ ಅಧಿಕಾರ ಮರೀಚಿಕೆಯಾಗೇ ಉಳಿದಿರುವುದರಿಂದ ಪುರಪಿತೃಗಳು ಕೈ ಕೈ ಹಿಸುಕಿಕೊಳ್ಳುವುದೇ ಆಗಿದೆ.

    ಪಟ್ಟಣದ ಅಭಿವೃದ್ಧಿ, ಜನರ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಆಡಳಿತಾರೂಢ ಸರ್ಕಾರ ತ್ವರಿತವಾಗಿ ಚುನಾಯಿತ ನೂತನ ಸದಸ್ಯರಿಗೆ ಅಧಿಕಾರ ನೀಡಿ ಸ್ಪಂದಿಸಬೇಕು ಎಂಬ ಒತ್ತಾಸೆ ಸ್ಥಳೀಯರದ್ದಾಗಿದೆ.

    ಬಂಕಾಪುರ ಪುರಸಭೆ ಸದಸ್ಯರಿಗೆ ಅಧಿಕಾರ ನೀಡುವ ಅಧಿಕಾರ ಸರ್ಕಾರದ ಮಟ್ಟದಲ್ಲಿ ನಿರ್ಣಯವಾಗಬೇಕು. ಜತೆಗೆ ಶಿಗ್ಗಾಂವಿ, ಸವಣೂರ, ಹಾನಗಲ್ಲ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಅವಧಿಯೂ ಮುಗಿದಿದೆ. ಹೊಸಬರ ಆಯ್ಕೆಗೆ ಸರ್ಕಾರ ಸೂಚಿಸಬೇಕು.

    | ಮೊಹಮ್ಮದ ಖಿಜರ್, ಉಪವಿಭಾಗಾಧಿಕಾರಿ, ಸವಣೂರ

    ಕ್ಷೇತ್ರ ವಿಂಗಡಣೆ ಅವೈಜ್ಞಾನಿಕವಾಗಿದೆ. ಸರಿಪಡಿಸುವಂತೆ ನ್ಯಾಯಾಲಯಕ್ಕೆ ನೀಡಿದ್ದ ದೂರನ್ನು ನಾನು ಹಿಂಪಡೆದಿದ್ದೇನೆ. ಬೇಗ ಸದಸ್ಯರಿಗೆ ಅಧಿಕಾರ ನೀಡಲು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದ್ದೇವೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ರಾಜ್ಯದ 54 ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿಯೂ ಇದೇ ಪರಿಸ್ಥಿತಿಯಾಗಿದೆ. ಸರ್ಕಾರದ ಮಟ್ಟದಲ್ಲಿ ನಿರ್ಣಯವಾಗಬೇಕಿದೆ ಎಂದಿದ್ದಾರೆ.

    | ಎಂ.ಎನ್. ಹೊನಕೇರಿ, ದೂರು ಹಿಂಪಡೆದ ಮಾಜಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts