More

    ಬಂಕಾಪುರ ಆರೋಗ್ಯ ಕೇಂದ್ರ, ಗುತ್ತಿಗೆ ಸಿಬ್ಬಂದಿಗೆ 3 ತಿಂಗಳಿಗೊಮ್ಮೆ ವೇತನ

    ಬಂಕಾಪುರ: ಉತ್ತಮ ಸೇವೆಗಾಗಿ ನಾಲ್ಕು ಬಾರಿ ಕಾಯಕಲ್ಪ ಪ್ರಶಸ್ತಿ ಪಡೆದ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಹೊರ ಗುತ್ತಿಗೆ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿಯಾಗುತ್ತಿಲ್ಲ. ಸಂಬಳಕ್ಕಾಗಿ ಮೂರು ತಿಂಗಳು ಕಾಯಬೇಕಾದ ಅನಿವಾರ್ಯತೆ ಇದೆ.

    ಆರೋಗ್ಯ ಕೇಂದ್ರದಲ್ಲಿ ಗ್ರೂಪ್ ಡಿಯ ಸುಮಾರು 12 ಹುದ್ದೆಗಳು ಖಾಲಿ ಇವೆ. ಇದನ್ನು ಸರಿದೂಗಿಸಲು ಹೊರಗುತ್ತಿಗೆ ಮೂಲಕ 10 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಆದರೆ, ಗುತ್ತಿಗೆ ಟೆಂಡರ್​ದಾರರು ಸಕಾಲಕ್ಕೆ ವೇತನ ನೀಡುತ್ತಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ವೈದ್ಯಾಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ.

    ಆರೋಗ್ಯ ಕೇಂದ್ರದಲ್ಲಿ ಒಟ್ಟು 39 ಹುದ್ದೆ ಮಂಜೂರಾಗಿದ್ದು, ಇದರಲ್ಲಿ 20 ಹುದ್ದೆಗಳು ಖಾಲಿ ಇವೆ. ಒಬ್ಬ ಆಡಳಿತ ವೈದ್ಯಾಧಿಕಾರಿ ಸೇರಿದಂತೆ ಚಿಕ್ಕ ಮಕ್ಕಳ ತಜ್ಞ 1, ಅರಿವಳಿಕೆ ತಜ್ಞ 1, ದಂತ ವೈದ್ಯ 1, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ 1, ನೇತ್ರ ತಜ್ಞ 1 ಹಾಗೂ ಒಬ್ಬ ಆಯುಷ್ಯ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ.

    ಜನರಲ್ ಡ್ಯೂಟಿ ಮೆಡಿಕಲ್ ಆಫಿಸರ್, ಜನರಲ್ ಮೆಡಿಸನ್ ವೈದ್ಯ ಸೇರಿದಂತೆ ವಾಹನ ಚಾಲಕ 1, ಫಾರ್ಮಸಿಸ್ಟ್ 2, ಶುಶ್ರೂಶಕಿ 1, ಕ್ಲರ್ಕ್ ಕಂ ಟೈಪಿಸ್ಟ್ 1, ವಾಹನ ಚಾಲಕ 1, ಎಫ್​ಡಿಸಿ 1, ಗ್ರೂಪ್ ಡಿಯ 12 ಹುದ್ದೆ ಸೇರಿ ಒಟ್ಟು 20 ಹುದ್ದೆಗಳು ಖಾಲಿ ಇವೆ. ಉಳಿದಂತೆ ಪಟ್ಟಣದ ಆಸ್ಪತ್ರೆಗೆ ಹೊರ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು ತಿಂಗಳಿಗೆ 5333 ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಪ್ರತಿ ತಿಂಗಳು ಸುಮಾರು 626 ಒಳ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಾರೆ.

    30 ಹಾಸಿಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ ಏಪ್ರಿಲ್ ನಿಂದ ನವೆಂಬರ್ ವರೆಗೆ 240 ಹೆರಿಗೆ ಮಾಡಲಾಗಿದೆ. ವಾರಕ್ಕೊಮ್ಮೆ (ಬುಧವಾರ)ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. ಏಪ್ರಿಲ್ ನಿಂದ ನವೆಂಬರ್ ವರೆಗೆ 107 ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಇದಲ್ಲದೆ ಈಗ ಆಸ್ಪತ್ರೆಗೆ ಅರಿವಳಿಗೆ ಯಂತ್ರ ಒದಗಿಸಿದ್ದರಿಂದ ಮುಂದಿನ ವಾರದಿಂದ ಸಿಜೇರಿಯನ್ ಹೆರಿಗೆ ಸೌಲಭ್ಯ ಆರಂಭವಾಗಲಿದೆ. ಡೆಂಟಲ್ ಮಷಿನ್, ರಕ್ತ ಪರೀಕ್ಷೆ ಮಷಿನ್ (ಸಿಬಿಸಿ), ಡಿಜಿಟಲ್ ಎಕ್ಸರೆ ವ್ಯವಸ್ಥೆ ಇದೆ.

    ಶಿಥಿಲಗೊಂಡ ವಸತಿ ಗೃಹಗಳು:

    ಸುಮಾರು ವರ್ಷಗಳಿಂದ ಆಸ್ಪತೆ ಹಿಂಭಾಗದಲ್ಲಿರುವ 14 ವಸತಿ ಗೃಹಗಳು ಸಂಪೂರ್ಣ ಶಿಥಿಲಗೊಂಡು ವಾಸಿಸಲು ಯೋಗ್ಯವಾಗಿಲ್ಲ. ಹೊಸ ವಸತಿ ಗೃಹ ನಿರ್ವಣಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ವಸತಿ ಗೃಹ ಇಲ್ಲದ ಕಾರಣ ಸಿಬ್ಬಂದಿ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ.

    ಶವಾಗಾರಕ್ಕೆ ರಸ್ತೆ ಇಲ್ಲ:

    ಆಸ್ಪತ್ರೆ ಹಿಂಭಾಗದಲ್ಲಿರುವ ಶವಾಗಾರಕ್ಕೆ ಸರಿಯಾದ ರಸ್ತೆ ಇಲ್ಲ. ಪಕ್ಕದಲ್ಲಿ ಚರಂಡಿ ನೀರು ಹರಿಯುತ್ತಿರುವುದರಿಂದ ಯಾವಾಗಲೂ ರಸ್ತೆ ಕೆಸರಿನಿಂದ ಕೂಡಿರುತ್ತದೆ. ಅಪಘಾತ ಸೇರಿದಂತೆ ಇತರೆ ಅವಘಡಗಳಿಂದ ಮೃತಪಟ್ಟವರ ಶವಗಳನ್ನು ತರುವ ವಾಹಗಳು ದೂರದಲ್ಲಿಯೇ ನಿಲ್ಲುತ್ತವೆ. ಅಲ್ಲಿಂದ ಜನರೇ ಶವಗಳನ್ನು ಹೊತ್ತು ಶವಾಗಾರಕ್ಕೆ ಸಾಗಿಸಬೇಕಿದೆ.

    ಪಟ್ಟಣದ ವಾರದ ಸಂತೆ ಮಂಗಳವಾರದಂದು ಆಸ್ಪತ್ರೆ ಮುಂದಿನ ರಸ್ತೆಯಲ್ಲಿ ಸಂತೆ ಅಂಗಡಿಗಳನ್ನು ಹಚ್ಚುವುದರಿಂದ ಆಸ್ಪತ್ರೆಗೆ ರೋಗಿಗಳನ್ನು ಸಾಗಿಸಲು ಪರದಾಡುವಂತಾಗಿದೆ. ಈ ಬಗ್ಗೆ ಪುರಸಭೆಗೆ ಹಲವು ಬಾರಿ ಮನವಿ ಮಾಡಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

    ಪಟ್ಟಣದ ಆಸ್ಪತ್ರೆಯ ಸುಮಾರು 12 ಕಿ.ಮೀ. ಅಂತರದಲ್ಲಿ ಶಿಗ್ಗಾಂವಿ ಮತ್ತು ಸವಣೂರ ತಾಲೂಕು ಆಸ್ಪತ್ರೆ ಇರುವುದರಿಂದ ನಾವು ಧೈರ್ಯದಿಂದ ಕೆಲಸ ಮಾಡುತ್ತಿದ್ದೇವೆ. ಇದರಿಂದ ತಕ್ಷಣ ಚಿಕಿತ್ಸೆ ನೀಡಲು ಅನುಕೂಲವಾಗುತ್ತಿದೆ. ಹೊರಗುತ್ತಿಗೆಯಿಂದ ಪಡೆದ ಸಿಬ್ಬಂದಿಗೆ ಸರಿಯಾಗಿ ಸಂಬಳವಾಗುತ್ತಿಲ್ಲ. ಈ ಸಮಸ್ಯೆ ಕುರಿತು ಗಮನ ಹರಿಸಿದರೆ ನಮಗೆ ಇನ್ನಷ್ಟು ಸಹಾಯವಾಗಲಿದೆ.

    | ಮನೋಜ ನಾಯ್ಕ, ಆಡಳಿತ ವೈದ್ಯಾಧಿಕಾರಿ ಬಂಕಾಪುರ ಆಸ್ಪತ್ರೆ

    ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ವಸತಿ ಗೃಹ ಶಿಥಿಲಗೊಂಡಿದ್ದರಿಂದ ವೈದ್ಯರು ಬೇರೆಡೆ ನೆಲೆಸಿದ್ದಾರೆ. ಇದರಿಂದ ರೋಗಿಗಳಿಗೆ ಹೆರಿಗೆ ಹೊರತು ಪಡಿಸಿ ಉಳಿದ ಸೇವೆ ಸಕಾಲಕ್ಕೆ ಸಿಗುತ್ತಿಲ್ಲ. ಸರ್ಕಾರ ವಸತಿಗೃಹಗಳನ್ನು ಬೇಗ ನಿರ್ವಿುಸಿಕೊಟ್ಟರೆ ವೈದ್ಯರಿಂದ ಇನ್ನಷ್ಟು ಸೇವೆ ಪಡೆದುಕೊಳ್ಳಬಹುದಾಗಿದೆ.

    | ಬಸವರಾಜ ನಾರಾಯಣಪುರ, ಬಂಕಾಪುರ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts