More

    ಮಳೆ ಅಬ್ಬರಕ್ಕೆ ಚೆಕ್‌ಡ್ಯಾಂ ಕಣ್ಮರೆ: ಎರಡು ಗ್ರಾಮಗಳ ಸಂಪರ್ಕ ಕಡಿತ

    ದಾಬಸ್‌ಪೇಟೆ: ವಾರದಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಸೋಂಪುರ ಹೋಬಳಿ ಮರಳಕುಂಟೆ ಗ್ರಾಪಂನ ಬರಗೂರು ಗ್ರಾಮದಲ್ಲಿನ ಚೆಕ್ ಡ್ಯಾಂ ಕೊಚ್ಚಿ ಹೋಗಿದ್ದು, ಎರಡು ಗ್ರಾಮಗಳ ನಡುವೆ ಸಂಪರ್ಕವೇ ಕಡಿತಗೊಂಡಿದೆ.


    ಮರಳಕುಂಟೆ ಗ್ರಾಪಂನ ಬರಗೂರು ಗ್ರಾಮದಿಂದ ಅಕ್ಕಪಕ್ಕದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಈ ಹಿಂದೆಯೇ ನಿರ್ಮಿಸಿದ್ದ ಚೆಕ್‌ಡ್ಯಾಂ ಕೊಚ್ಚಿ ಹೋಗಿದ್ದು, ಗ್ರಾಮ ಗ್ರಾಮಗಳ ನಡುವಿನ ಸಂಪರ್ಕಕ್ಕೆ ಮಳೆರಾಯ ಬ್ರೇಕ್ ಹಾಕಿದ್ದಾನೆ.


    ಸಂಚಾರಕ್ಕೆ ಅಡ್ಡಿ: ಬರಗೂರು ಮತ್ತು ಬರಗೂರು ಕಾಲನಿ, ಮುತ್ತುರಾಯಪ್ಪನ ಪಾಳ್ಯ ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂಡಿದ್ದು ಗ್ರಾಮಸ್ಥರು ಅಲ್ಲದೆ ಶಾಲಾಮಕ್ಕಳೂ ದಿಗ್ಬಂಧನ ಎದುರಿಸುವಂತಾಗಿದೆ. ಬರಗೂರು ಕೆರೆಯು ಕೋಡಿ ಬಿದ್ದಿರುವುದರಿಂದ ಸಮೀಪದಲ್ಲಿಯೇ ನಿರ್ಮಿಸಿದ್ದ ಚೆಕ್‌ಡ್ಯಾಂ ಕೊಚ್ಚಿಕೊಂಡು ಹೋಗಿದೆ, ನೀರಿನ ಹರಿವಿನಿಂದಾಗಿ ರಸ್ತೆಗಳಲ್ಲಿ ದೊಡ್ಡ ಕೊರಕಲು ನಿರ್ಮಾಣವಾಗಿವೆ, ಉಳಿದಿರುವ ಚೆಕ್‌ಡ್ಯಾಂನ ಅವಶೇಷವೂ ನೀರಿನಲ್ಲಿ ಮುಳುಗಡೆಯಾಗಿದ್ದು, ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದಂತಾಗಿದೆ.

    ಇದರಿಂದ ಸುತ್ತಮುತ್ತಲ ಗ್ರಾಮದ ಹೈನುಗಾರರು ಬೆಳಗ್ಗೆ ಹಾಗೂ ಸಂಜೆ ಡೇರಿಗೆ ಹಾಲು ಹಾಕಲು ಸಾಧ್ಯವಾಗದೆ ಪರದಾಡುವಂತಾಗಿದೆ. ಬರಗೂರು ಹಾಗೂ ಮುತ್ತರಾಯಪ್ಪನಪಾಳ್ಯದಲ್ಲಿ 50ಕ್ಕೂ ಹೆಚ್ಚು ಮನೆಗಳಿದ್ದು ಈ ಭಾಗದಲ್ಲಿ ಹಾಲು ಸಂಗ್ರಹಿಸಲು ಹಾಲಿನ ವಾಹನವು 20 ಕಿಮೀ ಸುತ್ತಿಕೊಂಡು ಬರಬೇಕಿದೆ, ಹುಲಿಕುಂಟೆ ಮಾರ್ಗವಾಗಿ ತ್ಯಾಮಗೊಂಡ್ಲುವಿನ ಮುದ್ದಲಿಂಗನಹಳ್ಳಿಗೆ ಬಂದು ತಲುಪಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ಜನರು ಶಾಕ್: ಸುತ್ತಮುತ್ತಲ ಪ್ರದೇಶದಿಂದ ನೀರು ರಭಸವಾಗಿ ಹರಿಯುತ್ತಿದ್ದು, ಎರಡು ದಿನದಿಂದ ಜನ ಹೊರಬರಲು ಸಾಧ್ಯವಾಗಿರಲಿಲ್ಲ, ಮಳೆ ತುಸು ಬಿಡುವು ನೀಡಿದ ಮೇಲೆ ಕೆರೆ ಬಳಿ ಬಂದ ಗ್ರಾಮಸ್ಥರಿಗೆ ಶಾಕ್ ಕಾದಿತ್ತು. ಚೆಕ್ ಡ್ಯಾಂ ನೀರಿನಲ್ಲಿ ಕೊಚ್ಚಿಹೋಗಿ ಅಳಿದುಳಿದ ಅವಶೇಷವೂ ನೀರಿನಲ್ಲಿ ಮುಳುಗಡೆಯಾಗಿತ್ತು. ಇದರಿಂದ ಹೌಹಾರಿದ ಜನ ಚೆಕ್‌ಡ್ಯಾಂ ಹುಡುಕಿಕೊಡಿ ಎಂದು ಗ್ರಾಪಂ ಮೇಲೆ ಒತ್ತಡ ಹೇರುತ್ತಿದ್ದಾರೆ.


    ಮರಳುಕುಂಟೆ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಂಬಂಧ ವಿಷಯ ಮಂಡಿಸಲಾಗುವುದು, ಈಗಾಗಲೇ ಸಂಬಂಧಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರನ್ನು ಸಂಪರ್ಕಿಸಲಾಗಿದೆ, ಆದಷ್ಟು ಬೇಗ ಚೆಕ್ ಡ್ಯಾಂ ದುರಸ್ತಿಗೆ ಕ್ರಮಕೈಗೊಳ್ಳುವಂತೆ ಒತ್ತಡ ಹೇರಲಾಗುವುದು.
    | ಮಾರುತಿಕುಮಾರ್ ಗ್ರಾಪಂ ಸದಸ್ಯ ಮರಳಕುಂಟೆ

    ಬರಗೂರಿನಲ್ಲಿ ಚೆಕ್ ಡ್ಯಾಂ ಒಡೆದಿರುವ ಕುರಿತು ಮಾಹಿತಿ ಬಂದಿದೆ. ಶೀಘ್ರವೇ ಅಧಿಕಾರಿಗಳೊಂದಿಗೆ ಸ್ಥಳ ಪರಿಶಿಲಿಸಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
    | ಡಾ.ಕೆ.ಶ್ರೀನಿವಾಸಮೂರ್ತಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts