More

    ಬೇರೆ ಜಿಲ್ಲೆಗಳಿಗೂ ಉಪನಗರ ರೈಲ್ವೆ ಯೋಜನೆ ವಿಸ್ತರಣೆ: ಸಚಿವ ಎಂ.ಬಿ.ಪಾಟೀಲ್ ಮಾಹಿತಿ

    ಬೆಂಗಳೂರು: ಉಪನಗರ ರೈಲ್ವೆ ಯೋಜನೆಯನ್ನು ಬೆಂಗಳೂರು ಸುತ್ತಮುತ್ತ ಜಿಲ್ಲೆಗಳಿಗೆ ವಿಸ್ತರಿಸುವ ಉದ್ದೇಶ ಇದೆ.ಇದರ ಸಂಬಂಧಪಟ್ಟಂತೆ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

    ಲಿಂಗರಾಜಪುರ, ಶಾಂಪುರ, ಹೆಬ್ಬಾಳ ಮತ್ತು ಯಶವಂತಪುರದಲ್ಲಿ ನಡೆಯುತ್ತಿರುವ ಉಪನಗರ ರೈಲು ಯೋಜನೆ ಕಾಮಗಾರಿಗಳನ್ನು ಶುಕ್ರವಾರ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

    ಚಿಕ್ಕಬಳ್ಳಾಪುರ, ಮೈಸೂರು, ಮಾಗಡಿ, ತುಮಕೂರು, ಗೌರಿಬಿದನೂರು, ಕೋಲಾರ ಮತ್ತು ಹೊಸೂರುಗಳಿಗೆ ಯೋಜನೆ ವಿಸ್ತರಿಸಲು ಆಲೋಚಿಸಲಾಗಿದೆ. ಇದು ಕಾರ್ಯರೂಪಕ್ಕೆ ಬಂದರೆ ಯೋಜನೆಯು ಈಗಿನ 148 ಕಿ.ಮೀ.ಗಳಿಂದ 452 ಕಿ.ಮೀ.ಗಳಿಗೆ ಹಿಗ್ಗಲಿದೆ. ಮುಂದಿನ ಹಂತದಲ್ಲಿ ಹೀಳಲಿಗೆ-ರಾಜಾನುಕುಂಟೆ ನಡುವೆ ಕಾರಿಡಾರ್-3, ಬೆಂಗಳೂರು- ದೇವನಹಳ್ಳಿ (ವಿಮಾನ ನಿಲ್ದಾಣ ಸಂಪರ್ಕ) ಮತ್ತು ಕಾರಿಡಾರ್-4ರಲ್ಲಿ ಕೆಂಗೇರಿ- ವೈಟ್‌ಫೀಲ್ಡ್ ಬೆಸೆಯಲಾಗುವುದು. ಚಿಕ್ಕ ಬಾಣಾವರ ಹಾಗೂ ಬೆನ್ನಿಗಾನಹಳ್ಳಿ ನಡುವೆ ನಡೆಯುತ್ತಿರುವ ಕಾರಿಡಾರ್-2 ಕಾಮಗಾರಿಗಳು 2026ಕ್ಕೆ ಪೂರ್ಣಗೊಳ್ಳಲಿವೆ ಎಂದರು.

    ನಾಲ್ಕು ಕಾರಿಡಾರ್‌ಗಳ ಕಾಮಗಾರಿ ಕಾರ್ಯವು 2026ಕ್ಕೆ ಮುಗಿಸುವ ಉದ್ದೇಶವಿದೆ. ತುಸು ವಿಳಂಬವಾದರೂ 2028ರೊಳಗೆ ಮುಗಿಯಲಿದೆ. ಈ ಗಡುವುನೊಳಗೆ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಾರಿಡಾರ್-2 ಯೋಜನೆಗೆ 157 ಎಕರೆ ಭೂಮಿಯನ್ನು ನೈಋತ್ಯ ರೈಲ್ವೆಯಿಂದ ಗುತ್ತಿಗೆಗೆ ಪಡೆದುಕೊಳ್ಳಲಾಗಿದೆ. ಹಳಿ ಹಾಕಲು 5 ಎಕರೆ 11 ಗುಂಟೆ ಜಾಗವನ್ನು ಖಾಸಗಿಯವರಿಂದ ವಶಪಡಿಸಿಕೊಳ್ಳಲಾಗಿದೆ. ಯೋಜನೆಗೆ 8 ಎಕರೆ 23 ಗುಂಟೆ ಸರ್ಕಾರಿ ಜಮೀನು ಬೇಕಿದ್ದು, ಇದರಲ್ಲಿ 2.72 ಎಕರೆಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲಾಗಿದೆ. ಇದುವರೆಗೆ ಶೇ.10ರಿಂದ ಶೇ.15 ಕಾಮಗಾರಿ ಮುಗಿದಿದೆ. ಹತ್ತು ತಿಂಗಳಲ್ಲಿ ನೆಲಮಟ್ಟದ ಕಾಮಗಾರಿಗಳು ಪೂರ್ಣವಾಗಲಿದೆ. ಶಾಂಪುರದಲ್ಲಿಯೂ ರೈಲ್ವೆ ಕೆಳಸೇತುವೆ ಕೆಲಸ ಮುಗಿಸಲಾಗವುದು ಎಂದು ವಿವರಿಸಿದರು.

    ಇದನ್ನೂ ಓದಿ:ಪ್ರತಿದಿನ ಕ್ಯಾರೆಟ್ ತಿನ್ನುವುದರಿಂದ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ

    ಸಾವಿರ ಕೋಟಿ ರೂ.ಮೀಸಲು: ಉಪನಗರ ರೈಲು ಯೋಜನೆಗೆ ಒಟ್ಟು 15,767 ಕೋಟಿ ರೂ.ವೆಚ್ಚವಾಗುತ್ತಿದೆ. 2013ರ ಬಜೆಟ್‌ನಲ್ಲಿ ಅಂದಿನ ಮತ್ತು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯೋಜನೆಗೆ ಎಸ್‌ಪಿವಿ (ಸ್ಪೆಷಲ್ ಪರ್ಪಸ್ ವೆಹಿಕಲ್) ಘೋಷಿಸಿದ್ದು, ಪ್ರಸ್ತುತ ಹಣಕಾಸು ವರ್ಷದಲ್ಲಿ ಸಾವಿರ ಕೋಟಿ ರೂ. ಒದಗಿಸಿದ್ದಾರೆ. ಉಳಿದಂತೆ ಜರ್ಮನಿಯ ಕೆಎಫ್‌ಡಬ್ಲ್ಯು, ಯೂರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ಮತ್ತು ಲಕ್ಸಂಬರ್ಗ್‌ನಿಂದ ಒಟ್ಟು 7,438 ಕೋಟಿ ರೂ.ಗಳನ್ನು ಸಾಲ ಪಡೆಯಲಾಗುವುದು. ಇದಕ್ಕಾಗಿ ಬರುವ ಡಿಸೆಂಬರ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗುವುದು. ನಂತರ, ಕಾರಿಡಾರ್-1 ಮತ್ತು 3ರ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸುವುದಾಗಿ ಎಂ.ಬಿ.ಪಾಟೀಲ ಮಾಹಿತಿ ನೀಡಿದರು. ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಶಾಸಕ ಮುನಿರತ್ನ ಮತ್ತಿತರರಿದ್ದರು.

    ಎಲ್ಲೆಲ್ಲಿ ಭೇಟಿ:ಮೊದಲಿಗೆ ಸರ್ವಜ್ಞನಗರ ಕ್ಷೇತ್ರ ವ್ಯಾಪ್ತಿಯ ಲಿಂಗರಾಜಪುರದಲ್ಲಿ ನಡೆಯುತ್ತಿರುವ ತಡೆಗೋಡೆ ಕಾಮಗಾರಿಯನ್ನು ಸಚಿವರಾದ ಕೆ.ಜೆ.ಜಾರ್ಜ್ ಮತ್ತು ಎಂ.ಬಿ.ಪಾಟೀಲ್ ಒಟ್ಟಿಗೆ ವೀಕ್ಷಿಸಿದರು. ಬಳಿಕ ಶಾಂಪುರದಲ್ಲಿ ನಿರ್ಮಿಸುತ್ತಿರುವ ರೈಲ್ವೆ ಮೇಲ್ಸೇತುವೆ ಮತ್ತು ಹೆಬ್ಬಾಳದಲ್ಲಿ ನಿರ್ಮಾಣವಾಗಲಿರುವ ನಿಲ್ದಾಣದ ಉದ್ದೇಶಿತ ಸ್ಥಳಕ್ಕೆ ತೆರಳಿ ಅಲ್ಲಿಯ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲಿಂದ ಯಶವಂತಪುರದ ಬ್ಯಾಚಿಂಗ್ ಪ್ಲಾಂಟ್ ಮತ್ತು ಲ್ಯಾಬೊರೇಟರಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ, ಯಶವಂತಪುರ ಪ್ಲಾಂಟ್‌ನಲ್ಲಿ ಕಾಂಕ್ರೀಟ್ ಉತ್ಪಾದನೆಗೆ ಸಚಿವರು ಚಾಲನೆ ನೀಡಿ ಗುಣಮಟ್ಟ ನಿಯಂತ್ರಣ ಪರೀಕ್ಷೆ ಪ್ರಯೋಗಾಲಯದ ಚಟುವಟಿಕೆಗಳನ್ನು ಪರಿಶೀಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts