More

    ಬಂಡಳ್ಳಿ-ಹನೂರು ರಸ್ತೆ ಅಭಿವೃದ್ಧಿಗೆ ಒತ್ತಾಯ


    ಚಾಮರಾಜನಗರ : ಹನೂರು ತಾಲೂಕಿನ ಬಂಡಳ್ಳಿ ಗ್ರಾಮದಿಂದ ಹನೂರಿನವರೆಗೆ ಸಂಪೂರ್ಣ ಹಾಳಾಗಿರುವ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಜವಾದ್ ಅಹಮದ್ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಲ್ಲಿ ಮನವಿ ಮಾಡಿದರು.


    ಚಾಮರಾಜನಗರದಲ್ಲಿ ಬುಧವಾರ ಸಚಿವರನ್ನು ಭೇಟಿಯಾಗಿ ಮಾತನಾಡಿದ ಅವರು, ಹನೂರಿನಿಂದ ಬಂಡಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 10 ಕಿ.ಮೀ. ಅಂತರವನ್ನು ಹೊಂದಿರುವ ರಸ್ತೆಯ ಬಹುತೇಕ ಕಡೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಸಂಪೂರ್ಣ ಹದಗೆಟ್ಟಿದೆ. ಪರಿಣಾಮ ಗುಂಡಿಗಳನ್ನು ತಪ್ಪಿಸಲು ಹೋಗಿ ಬೈಕ್ ಸವಾರರು ಆಯತಪ್ಪಿ ಬಿದ್ದು ಗಾಯಗೊಳ್ಳುತ್ತಿರುವ ಘಟನೆಗಳು ನಡೆಯುತ್ತಲೇ ಇದೆ. ಅಲ್ಲದೇ ಗರ್ಭೀಣಿಯರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಹೆರಿಗೆಯಾಗಿರುವ ಘಟನೆಗಳು ನಡೆದಿದೆ ಎಂದು ಗಮನಕ್ಕೆ ತಂದರು.


    ಇತ್ತ ರಾತ್ರಿ ವೇಳೆ ತುರ್ತು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತೆರಳಬೇಕಾದರೆ ನರಕಯಾತನೆ ಅನುಭವಿಸುವಂತಾಗಿದೆ. ಮಳೆ ಬಂದ ವೇಳೆಯಲ್ಲಂತೂ ಗುಂಡಿಗಳಲ್ಲಿ ನೀರು ನಿಲ್ಲುವುದರಿಂದ ವಾಹನ ಸವಾರರು ಸಂಚರಿಸಲು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಹದಗೆಟ್ಟ ರಸ್ತೆಯಿಂದ ಸಾರ್ವಜನಿಕರು ಹೈರಾಣರಾಗಿದ್ದಾರೆ. ಆದ್ದರಿಂದ ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವುದರ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರು. ಇದಕ್ಕೆ ಸಚಿವರು ಸಕಾರಾತ್ಮಕ ಸ್ಪಂದಿಸಿ ಅಗತ್ಯ ಭರವಸೆ ನೀಡಿದರು.


    ಈ ಸಂದರ್ಭದಲ್ಲಿ ಹನೂರು ಶಾಸಕ ಎಂ.ಆರ್ ಮಂಜುನಾಥ್, ಮುಖಂಡರಾದ ಫಜಲ್, ಸಿದ್ದರಾಜು, ಮಾದೇಶ್ ಹಾಗೂ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts