More

    ಬಳ್ಳಾರಿಯಲ್ಲಿ 221 ಕೋಟಿ ರೂ. ವೆಚ್ಚದಲ್ಲಿ ಯುಜಿಡಿ ಅಭಿವೃದ್ಧಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಹೇಳಿಕೆ

    ಬಳ್ಳಾರಿ: ನಗರದಲ್ಲಿ ಹಳೆಯದಾಗಿರುವ ಒಳಚರಂಡಿ ವ್ಯವಸ್ಥೆಯನ್ನು 221 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ತಿಳಿಸಿದರು.

    ನಗರದ ಬಿ.ಗೋನಾಳ ಗ್ರಾಮದ ಬಳಿ 102 ಎಕರೆ ವಸತಿ ಯೋಜನೆಗೆ ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಬುಡಾ ಹಾಗೂ ಗೋನಾಳ ಗ್ರಾಮದ ರೈತರಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಜಿಲ್ಲಾ ಖನಿಜ ಪ್ರತಿಷ್ಠಾನದ ಅನುದಾನ ಪಡೆದು ಒಳಚರಂಡಿ ಕಾಮಗಾರಿ ಆರಂಭಕ್ಕೆ ಚಾಲನೆ ನೀಡಲಾಗುವುದು. ಗೋನಾಳ ಗ್ರಾಮದ ವಸತಿ ಯೋಜನೆ ಬೇಗ ಪೂರ್ಣಗೊಳ್ಳಲಿ. ಇನ್ನೂ 300 ಎಕರೆ ಪ್ರದೇಶದಲ್ಲಿ ವಸತಿ ಬಡಾವಣೆ ಅಭಿವೃದ್ಧಿಪಡಿಸಿ ನಿವೇಶನಗಳ ಕೊರತೆ ದೂರ ಮಾಡುವಂತೆ ಸಲಹೆ ನೀಡಿದರು.

    ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್, ಶಾಸಕ ಜಿ.ಸೋಮಶೇಖರರೆಡ್ಡಿ, ಎಂಎಲ್ಸಿ ಕೆ.ಸಿ.ಕೊಂಡಯ್ಯ ಮಾತನಾಡಿದರು. ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಸಚಿವ ಬೈರತಿ ಬಸವರಾಜ್ ಅವರಿಗೆ ಬೆಳ್ಳಿಗದೆ ನೀಡಿ ಸನ್ಮಾನಿಸಿದರು. ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ, ಬುಡಾ ಆಯುಕ್ತ ಈರಪ್ಪ ಬಿರಾದಾರ ಇತರರಿದ್ದರು.

    ಕುಡಿವ ನೀರಿನ ಯೋಜನೆಗೆ ಚಾಲನೆ: ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಹಾಗೂ ಮಹಾನಗರ ಪಾಲಿಕೆಯಿಂದ ಕೈಗೊಂಡಿರುವ ಬಳ್ಳಾರಿಯ 12 ವಲಯಗಳಿಗೆ ನಿರಂತರ ಕುಡಿವ ನೀರಿನ ಯೋಜನೆಗೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಚಾಲನೆ ನೀಡಿದರು. ರಾಘವೇಂದ್ರ ಕಾಲನಿ, ತಾರಾನಾಥ ಆಯುರ್ವೇದಿಕ್ ಕಾಲೇಜು ಪ್ರದೇಶ, ಗೋನಾಳು, ಬಿಸಿಲಹಳ್ಳಿ, ದೊಡ್ಡ ಮಾರುಕಟ್ಟೆ ಪ್ರದೇಶ, ಸತ್ಯನಾರಾಯಣಪೇಟೆ, ಬಸವೇಶ್ವರನಗರ, ಮಿಲ್ಲರಪೇಟೆ, ರಾಮಯ್ಯ ಕಾಲನಿ, ಆಶ್ರಯ ಕಾಲನಿ, ವೆಂಕಟರಮಣ ಕಾಲನಿ, ವಾಜಪೇಯಿ ಬಡಾವಣೆಯಲ್ಲಿ ಯೋಜನೆ ಕಾರ್ಯಗತಗೊಂಡಿದೆ. ಇನ್ನೂ 15 ವಲಯಗಳನ್ನು ಡಿ.31ಕ್ಕೆ ಉದ್ಘಾಟಿಸಲಾಗುವುದು ಎಂದು ಸಚಿವ ಭೈರತಿ ಬಸವರಾಜ ತಿಳಿಸಿದರು. ಶಾಸಕ ಜಿ.ಸೋಮಶೇಖರರೆಡ್ಡಿ ಮಾತನಾಡಿ, 2008ರಲ್ಲಿ ನಿರಂತರ ಕುಡಿವ ನೀರು ಸರಬರಾಜಿನ ಕನಸು ಕಂಡಿದ್ದು ಈಗ ನನಸಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts