More

    ಕರೊನಾ ನಿರ್ಲಕ್ಷ್ಯ ಸಲ್ಲದು

    ಲಕ್ಷ್ಮೇಶ್ವರ: ಪ್ರಸ್ತುತ ಸಮಾಜದಲ್ಲಿ ಯಾರಿಗೂ ಶಾಂತಿ, ಸಮಾಧಾನ, ನೆಮ್ಮದಿ ಇಲ್ಲದಂತಾಗಿದೆ. ಎಲ್ಲರಲ್ಲೂ ಆತಂಕ ಮನೆ ಮಾಡಿದೆ ಇಂತಹ ಪರಿಸ್ಥಿತಿಯಲ್ಲಿ ಲಿಂ.ವೀರಗಂಗಾಧರ ಜಗದ್ಗುರುಗಳು ತೋರಿದ ಧರ್ಮದ ಬೆಳಕು ಬದುಕಿಗೆ ದಾರಿದೀಪವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

    ಮಂಗಳವಾರ ಪಟ್ಟಣದ ಇಟಗಿ ಬಸವೇಶ್ವರ ದೇವಸ್ಥಾನದಲ್ಲಿ ಲಿಂ.ಜ. ವೀರಗಂಗಾಧರ ಶಿವಾಚಾ ರ್ಯರ 38ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಲಕ್ಷ್ಮೇಶ್ವರ ಲಿಂ.ಜಗದ್ಗುರುಗಳ ಪುಣ್ಯಾರಾಧನೆಯಲ್ಲಿ ಪಾಲ್ಗೊಳ್ಳುವುದು ಶ್ರೇಷ್ಠ ಕಾರ್ಯವಾಗಿದೆ. ಆದರೂ, ಕರೊನಾ ಸೋಂಕು ಕಡಿಮೆಯಾಗಿದೆ ಎಂಬ ಭ್ರಮೆಯಿಂದ ಯಾರೂ ನಿರ್ಲಕ್ಷ್ಯೋರಬಾರದು.

    ನಮ್ಮ ಜೀವನ ನಮ್ಮ ಕೈಯಲ್ಲಿಯೇ ಇದ್ದು ಇನ್ನಷ್ಟು ದಿನ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ವ್ಯಕ್ತಿಗತ ಅಂತರ ಕಾಯಬೇಕು. ಆದಷ್ಟು ಬೇಗ ರಾಜ್ಯದ ಜನತೆ ಕರೊನಾ ಭೀತಿಯಿಂದ ಮುಕ್ತರಾಗುವಂತಾಗಲಿ ಎಂದರು. ಮಾಜಿ ಶಾಸಕ ಜಿ.ಎಸ್. ಗಡ್ಡದ್ದೇವರಮಠ, ಗಂಗಾಧರಯ್ಯ ಹಾಲೇವಾಡಿಮಠ, ಸುರೇಶ ರಾಚನಾಯ್ಕರ್, ನಿಂಗಪ್ಪ ಜಾವೂರ, ಕಾಶಪ್ಪ ಮುಳಗುಂದ, ಬಸಣ್ಣ ಪುಟಾಣಿ, ಚನ್ನಪ್ಪ ಕೋಲಕಾರ, ಗದಿಗೆಪ್ಪ ಯತ್ನಳ್ಳಿ, ಶೇಖಪ್ಪ ಹುರಕಡ್ಲಿ, ಶಿವನಗೌಡ ಕಟ್ಟಿಗೌಡ್ರ, ಮಲ್ಲೇಶಪ್ಪ ಹೊಟ್ಟಿ, ದುಂಡಪ್ಪ ಕಮತದ, ಭರಮಪ್ಪ ಕೊಡ್ಲಿ, ಬಸವರಾಜ ಮೆಣಸಿನಕಾಯಿ, ಬಸಯ್ಯ ಶಿಗ್ಲಿಮಠ, ಬಸವರಾಜ ಉಮಚಗಿ ಇತರರು ಇದ್ದರು. ಶಿವಲಿಂಗಯ್ಯ ಹಾಲೇವಾಡಿಮಠ ನಿರೂಪಿಸಿದರು.

    ಧರ್ಮದಿಂದ ಶಾಂತಿ, ಸಂತೃಪ್ತ ಬದುಕು: ಬ್ರಹ್ಮಾಂಡ ಬೆಳಗಲು ಸೂರ್ಯ ಬೇಕಾಗುವಂತೆ ಮನದ ಶಾಂತಿಗೆ, ಸಂತೃಪ್ತ ಬದುಕಿಗೆ ಧರ್ಮವೊಂದೇ ಆಶಾಕಿರಣವಾಗಿದೆ. ಧರ್ಮಮಾರ್ಗ ತೋರಿದ ಲಿಂ.ವೀರಗಂಗಾಧರ ಜಗದ್ಗುರುಗಳ ಸ್ಮರಣೆ ಮುಖ್ಯವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

    ಸಮೀಪದ ಮುಕ್ತಿಮಂದಿರ ಕ್ಷೇತ್ರದಲ್ಲಿ ಲಿಂ.ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರ 38ನೇ ವರ್ಷದ ಪುಣ್ಯ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಲಿಂ.ವೀರಗಂಗಾಧರ ಜಗದ್ಗುರುಗಳು ಸಾಮಾಜಿಕ ಚಿಂತನೆ, ಅಧ್ಯಯನ, ಸಿದ್ಧಿ, ಪೂಜೆ ಧ್ಯಾನಗಳ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ವಣಕ್ಕಾಗಿ ಜೀವನವನ್ನೇ ಪಣಕ್ಕಿಟ್ಟು ಸಾಧನೆಗೈದ ಆಚಾರ್ಯ ಶ್ರೇಷ್ಠರು. ನೀತಿ ಇಲ್ಲದ ಶಿಕ್ಷಣ, ಭೀತಿ ಇಲ್ಲದ ಶಾಸನ, ಮಿತಿಯಿಲ್ಲದ ಜೀವನ, ಸೀಮಾತೀತ ಸ್ವಾತಂತ್ರ ಇವು

    ರಾಷ್ಟ್ರ ವಿಘಾತಗಳು ಎಂಬ ಎಚ್ಚರಿಕೆಯ ಸಂದೇಶ ಇಂದು ಪ್ರಸ್ತುತ. ಅವರು ಕೊಟ್ಟ ಸಂದೇಶ ಮತ್ತು ತೋರಿದ ಧರ್ಮದ ದಾರಿ ಎಂದೆಂದಿಗೂ ದಾರಿ ದೀಪ. ಅವರ 38ನೇ ವರ್ಷದ ಪುಣ್ಯಾರಾಧನೆ ಪವಿತ್ರ ಸಂಸ್ಮರಣೆಯಲ್ಲಿ ಪಾಲ್ಗೊಂಡ ಭಕ್ತ ಸಂಕುಲಕ್ಕೆ ಉನ್ನತಿ ಸಮೃದ್ಧಿ ಶಾಂತಿ ಲಭಿಸಲೆಂದು ಮತ್ತು ಮಹಾಮಾರಿ ಕರೊನಾ ನಿಮೂಲನೆಯಾಗಿ ಜನಜೀವನ ಯಥಾಸ್ಥಿತಿಯಾಗಲಿ ಎಂದು ಆಶಿಸುತ್ತೇವೆ ಎಂದರು.

    ಸುಳ್ಳದ ಶಿವಸಿದ್ಧರಾಮೇಶ್ವರ ಶ್ರೀ, ಬಂಕಾಪುರ ರೇವಣಸಿದ್ಧೇಶ್ವರ ಶ್ರೀ, ಚಳ್ಳಕೆರೆ ಸಿದ್ಧವೀರ ಶ್ರೀ, ಕಲಾದಗಿ ಗಂಗಾಧರ ಶ್ರೀ, ಕರೇವಾಡಿಮಠ ಲಕ್ಷ್ಮೇಶ್ವರ ಶ್ರೀಗಳು ಪಾಲ್ಗೊಂಡಿದ್ದರು. ಮಾಜಿ ಶಾಸಕ ಜಿ.ಎಸ್. ಗಡ್ಡದ್ದೇವರಮಠ, ರಾಮಕೃಷ್ಣ ದೊಡ್ಡಮನಿ, ಎಸ್.ಪಿ. ಬಳಿಗಾರ ಸೇರಿ ನೂರಾರು ಭಕ್ತರು ಆಗಮಿಸಿದ್ದರು. ಶ್ರೀಗಳ ಅಣತಿಯಂತೆ ಎಲ್ಲರೂ ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಯ್ದುಕೊಂಡು ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಬೆಳಗ್ಗೆ ಗದ್ದುಗೆಗೆ ಮಹಾಪೂಜೆ, ಪಂಚಾಮೃತಭಿಷೇಕ, ಪೂಜೆ, ರುದ್ರಾಭಿಷೇಕ, ಶಿವಸ್ತೋತ್ರ ಸಹಸ್ರ ನಾಮಾವಳಿ, ಧರ್ಮಗೀತೆ ಮತ್ತು ಮಹಾಮಂಗಳಾರತಿ ನಡೆದವು. ನಂತರ ಗದ್ದುಗೆಯ ಆವರಣದಲ್ಲಿ ಲಿಂ. ಜಗದ್ಗುರುಗಳ ಮಹಾಮೂರ್ತಿಯ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು.

    ತ್ರಿಕೋಟಿ ಲಿಂಗ ಸ್ಥಾಪನೆಗೆ ಸಹಕರಿಸಿ: ನೇತೃತ್ವ ವಹಿಸಿದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ತನಗಾಗಿ ಮಾಡುವ ಕಾರ್ಯ ಲೌಕಿಕ. ಸರ್ವರಿಗಾಗಿ ಮಾಡುವ ಕಾರ್ಯ ಅಲೌಕಿಕ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಮಾನವ ಧರ್ಮದ ಏಳಿಗೆಗಾಗಿ ದುಡಿದವರು. ಅವರು ಈ ನಾಡಿಗೆ ಕೊಟ್ಟ ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಸಂದೇಶ ಸಾರ್ವಕಾಲಿಕ ಸತ್ಯವಾಗಿದೆ. ಅವರ ಸಂಕಲ್ಪದಂತೆ ಶ್ರೀಕ್ಷೇತ್ರದಲ್ಲಿ ಭಕ್ತಕುಲಕೋಟಿ ಸಹಕಾರದಿಂದ ತ್ರಿಕೋಟಿ ಶಿವಲಿಂಗ ಪ್ರತಿಷ್ಠಾಪನಾ ಕಾರ್ಯ ಭರದಿಂದ ನಡೆದಿದೆ. ಈಗಾಗಲೇ 29500 ಶಿವಲಿಂಗಳು ಕ್ಷೇತ್ರದಲ್ಲಿ ರಾರಾಜಿಸುತ್ತಿದ್ದು ಪ್ರತಿಷ್ಠಾಪನಾ ಕಾರ್ಯಕ್ಕೆ ಭಕ್ತರಿಂದ ಇನ್ನಷ್ಟು ಸಹಾಯ ಸಹಕಾರ ಬೇಕಿದೆ. ಆದಷ್ಟು ಬೇಗ ಈ ಪವಿತ್ರ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ತ್ರಿಕೋಟಿ ಲಿಂಗ ಸ್ಥಾಪನೆ ಬಳಿಕ ಈ ಪುಣ್ಯಕ್ಷೇತ್ರ ಪ್ರಸಿದ್ಧ ಯಾತ್ರಾ ಕ್ಷೇತ್ರವಾಗಲಿದೆ ಎಂದರು.<p

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts