More

    ಸಾಹಿತ್ಯ ಸಮ್ಮೇಳನಕ್ಕಾಗಿ ಜೋಳಿಗೆ ಭಿಕ್ಷಾ ಅಭಿಯಾನ

    ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿಶೇಷ ರೀತಿಯಲ್ಲಿ ಆಚರಿಸಲು ಮುಂದಾಗಿರುವ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಸಿಂಗಾಪುರದಲ್ಲಿ ಜೋಳಿಗೆ ಭಿಕ್ಷಾ ಅಭಿಯಾನಕ್ಕೆ ಚಾಲನೆ ನೀಡಿತು. ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ತೋಟದಲ್ಲಿನ ತೆಂಗಿನಕಾಯಿಗಳನ್ನು ಜೋಳಿಗೆಗೆ ತುಂಬಿ ಬುಧವಾರ ಶುಭಹಾರೈಸಿದರು.

    ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ ರೈತರು ಬೆಳೆದ ದವಸ ಧಾನ್ಯಗಳು, ತೆಂಗಿನಕಾಯಿಗಳನ್ನು ಭಿಕ್ಷಾ ರೂಪದಲ್ಲಿ ಸಂಗ್ರಹಿಸಿ ಸಮ್ಮೇಳನ ನಡೆಸಲು ಈ ಬಾರಿ ಚಿಂತಿಸಿದ್ದು, ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಜೋಳಿಗೆ ಅಭಿಯಾನ ಶುರು ಮಾಡಲಾಗಿದೆ.

    ಜನಸಾಮಾನ್ಯರನ್ನು ಪರಿಷತ್ತಿಗೆ ಹತ್ತಿರ ಮಾಡುವ ಉದ್ದೇಶದಿಂದ ಜನತೆಯ ಪಾಲು ಕನ್ನಡ ಸಾಹಿತ್ಯ ಪರಿಷತ್ತಿಗೆ ಸೇರಬೇಕು, ಸಮ್ಮೇಳನದಲ್ಲಿ ಜನರ ಸಹಭಾಗಿತ್ವ ಇರಲೆಂಬ ಸದುದ್ದೇಶದಿಂದ ಎಲ್ಲರ ಮನೆಗಳಿಗೆ ಜೋಳಿಗೆ ಹಿಡಿದು ಹೋಗುತ್ತಿರುವ ವಿನೂತನ ಪ್ರಯೋಗವನ್ನು ಚಿಕ್ಕನಾಯಕನಹಳ್ಳಿ ಕಸಾಪ ಘಟಕ ಕೈಗೊಂಡಿರುವುದು ಮಾದರಿ ಬೆಳವಣಿಗೆ ಎಂದು ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದರು.

    ತಾಲೂಕು ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಕಟ್ಟೆಮನೆ ಮಾತನಾಡಿ, 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಿರಿಯ ಲೇಖಕರು ಹಾಗೂ ಚರಿತ್ರೆಯ ಸಂಶೋಧಕರೂ ಆದ ಡಾ.ತಿಮ್ಮನಹಳ್ಳಿ ವೇಣುಗೋಪಾಲ್ ಅವರ ಸರ್ವಾಧ್ಯಕ್ಷತೆಯಲ್ಲಿ ಫೆಬ್ರವರಿ 4 ಮತ್ತು 5 ರಂದು ಚಿಕ್ಕನಾಯಕನಹಳ್ಳಿಯ ಕನ್ನಡ ಸಂಘದ ವೇದಿಕೆಯಲ್ಲಿ ಆಯೋಜಿಸಿದೆ ಎಂದರು.

    ಸಮ್ಮೇಳನದ ಆಯೋಜನೆಗೆ ಸುಮಾರು 5 ಲಕ್ಷ ರೂಪಾಯಿ ಅಂದಾಜು ವೆಚ್ಚ ನಿರೀಕ್ಷಿಸಿದ್ದು, ಈ ಮೊತ್ತವನ್ನು ಸಾರ್ವಜನಿಕವಾಗಿ ಹಳ್ಳಿ ಹಳ್ಳಿಯಲ್ಲಿ ರೈತ ಉತ್ಪನ್ನಗಳನ್ನು ಭಿಕ್ಷಾ ರೂಪದಲ್ಲಿ ಸಂಗ್ರಹಿಸುವ ಮೂಲಕ ಸ್ವಾಭಿಮಾನಿ ಹಾಗೂ ಸ್ವಾವಲಂಬಿ ಸಮ್ಮೇಳನ ಆಯೋಜಿಸಬೇಕೆಂಬ ಆಶಯ ಕನ್ನಡ ಸಾಹಿತ್ಯ ಪರಿಷತ್ತಿನದ್ದಾಗಿದೆ ಎಂದು ತಿಳಿಸಿದರು.

    ಚಲನಚಿತ್ರ ಕಲಾವಿದ ಹುಳಿಯಾರ್ ಗೌಡಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಯೋಗಿಶ್ವರಪ್ಪ, ನಾಗರಾಜು, ತಾ.ಕಸಾಪ ಉಪಾಧ್ಯಕ್ಷ ನಂದೀಶ್ ಭಟ್ಲೆರಿ, ಗೌರವ ಕಾರ್ಯದರ್ಶಿ ನಿರೂಪ್, ಕೋಶಾಧ್ಯಕ್ಷ ಎಂ.ಎಸ್.ಯೋಗೀಶ್ ಕುಮಾರ್, ಸಂಚಾಲಕ ಚಂದ್ರಶೇಖರ್ ಚಿಕ್ಕರಾಂಪುರ, ಕರವೇ ತಾಲೂಕು ಅಧ್ಯಕ್ಷ ಸಿ.ಟಿ.ಗುರುಮೂರ್ತಿ, ರೈತ ಗುರುಮೂರ್ತಿ, ಹುಳಿಯಾರ್ ಹೋಬಳಿ ಅಧ್ಯಕ್ಷ ನಾರಾಯಣಪ್ಪ, ರಘು, ಹರ್ಷ, ನವೀನ್ ರಾವತ್ ಇದ್ದರು.

    ಸಾಹಿತ್ಯ ಸಮ್ಮೇಳನವನ್ನು ಜನಸಾಮಾನ್ಯರ ಸಮ್ಮೇಳನವನಾಗಿಸಬೇಕು ಎನ್ನುವ ಉದ್ದೇಶವಿಟ್ಟು ಜೋಳಿಗೆ ಅಭಿಯಾನ ಮಾಡಿರುವುದರಿಂದ ತಾಲೂಕಿನ ಜನತೆ ಸಾಹಿತ್ಯ ಸಂಭ್ರಮದಲ್ಲಿ ತಮ್ಮ ಪಾಲು ನೀಡಲು ಅವಕಾಶ ಕಲ್ಪಿಸಿದಂತಾಗಿದೆ.
    | ಕೆ.ಎಸ್.ಸಿದ್ದಲಿಂಗಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts