More

    ಅಯೋಗ್ಯ ಅವಕಾಶ ಧಿಕ್ಕರಿಸಿ

    ಬಾಗಲಕೋಟೆ: ಬರುವ ಅವಕಾಶಗಳನ್ನು ಬಳಸಿಕೊಂಡರೆ ಬದುಕು ಸುಂದರಗೊಳ್ಳಲ್ಲ. ಅಯೋಗ್ಯ ಅವಕಾಶಗಳನ್ನು ಧಿಕ್ಕರಿಸಿ ನಡೆದಾಗ ಜೀವನದಲ್ಲಿ ಸಂತೃಪ್ತಿ ಕಾಣಬಹುದು. ನಾವು ಪ್ರತಿಯೊಂದು ಕಾಯಕ ಪ್ರೀತಿಸಿ, ಗೌರವಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ನಟ, ನಿರ್ದೇಶಕ ಎಸ್.ಎನ್.ಸೇತುರಾಮ ಹೇಳಿದರು.

    ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಬಾಗಲಕೋಟೆ ಗೆಳೆಯರ ಬಳಗ ಭಾನುವಾರ ಹಮ್ಮಿಕೊಂಡಿದ್ದ ‘ಎಂಥಾ ಚಂದದ ಬದುಕು’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಭ್ರಮೆ ಇಟ್ಟುಕೊಂಡು ಬದುಕು ನಡೆಸಬಾರದು. ವಾಸ್ತವಿಕ ನೆಲೆಗಟ್ಟಿನಲ್ಲಿ ಜೀವಿಸುವುದನ್ನು ಕಲಿಯಬೇಕು. ನಮ್ಮ ಜವಾಬ್ದಾರಿ, ಕರ್ತವ್ಯಗಳಿಂದ ನುಣಿಚಿಕೊಳ್ಳಬಾರದು. ಸಂಪತ್ತು ಗಳಿಸಲು ಜೀವನ ಮೀಸಲಿಡಬಾರದು. ಸಾಹಿತ್ಯ, ಸಂಗೀತ, ನಾಟಕಗಳ ಒಡನಾಟ ಬೆಳೆಸಿಕೊಳ್ಳಬೇಕು. ಅಹಂಕಾರ ಬಂದರೆ ಅಲ್ಲಿಗೆ ಪ್ರಪಂಚ ಇಷ್ಟೇ ಎನ್ನುವ ಭಾವ ಬರುತ್ತದೆ. ಇದರಿಂದ ಎಚ್ಚರವಿರಬೇಕು ಎಂದು ಸಲಹೆ ನೀಡಿದರು.

    ನಾನು ಆದಾಯ ತೆರಿಗೆ ಇಲಾಖೆಯಲ್ಲಿ ಉನ್ನತ ಹುದ್ದೆ ಅಲಂಕರಿಸಿ ನಿವೃತ್ತಿಯಾದೆ. ಉದ್ಯಮಿ ವಿಜಯ ಮಲ್ಯ ಪ್ರಕರಣಗಳು ಕೂಡ ನನ್ನ ಅವಧಿಯಲ್ಲಿ ಬಂದಿದ್ದವು. ಆದರೆ, ಸರ್ಕಾರಿ ಕಚೇರಿಯಲ್ಲಿ ಕಳ್ಳರಿಗೆ ಸಿಗುವ ಮರ್ಯಾದೆ ನೋಡಿದರೆ ಅಚ್ಚರಿ ಮೂಡಿಸುತ್ತದೆ. ಇಂತಹ ಗೌರವ ಸಂತರಿಗೆ ಸಿಗದಿರುವುದು ನೋವಿನ ಸಂಗತಿ. ಕಳ್ಳರೊಂದಿಗೆ ಶಾಮೀಲಾಗಿ ಬದುಕಿನಲ್ಲಿ ನೆಮ್ಮದಿ, ಸಂತೋಷ ಬಯಸುತ್ತೇವೆ. ಅದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

    ಮಠಾಧೀಶರಿಗೂ ಮೋಹ ಬಿಟ್ಟಿಲ್ಲ
    ಮಠ, ಮಾನ್ಯಗಳ ಪೀಠಾಧಿಪತಿಗಳಿಗೂ ವೈರಾಗ್ಯ ಬಂದಿಲ್ಲ. ಅವರು ಕೂಡ ಪ್ರಾಪಂಚಿಕ ಜಂಟಾಟದಲ್ಲಿ ಸಿಲುಕಿದ್ದಾರೆ. ಪಾದಪೂಜೆ ಹೆಸರಿನಲ್ಲಿ ಕಳ್ಳರಿಗೆ ಅವಕಾಶ ನೀಡುತ್ತಾರೆ. ಭಕ್ತರಿಗೆ ವೈರಾಗ್ಯದ ಬೋಧನೆ ಮಾಡುತ್ತಾರೆ. ವಾಸ್ತವದಲ್ಲಿ ಅವರಲ್ಲಿನ ಆಸೆ, ಕನಸು ಸಾಮಾನ್ಯ ಮನುಷ್ಯರಂತೆ ಇವೆ. ಧರ್ಮ, ಅಧರ್ಮದ ಬಗ್ಗೆ ಅವರಿಗೆ ಚಿಂತೆ ಇಲ್ಲ. ಮಠಗಳಿಗೆ ಬರುವ ಆದಾಯ, ವ್ಯವಹಾರ, ತಾವು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ ಲಾಭದ ಬಗ್ಗೆ ಮಠಾಧೀಶರು ಟೆನ್ಷನ್ ಮಾಡಿಕೊಳ್ಳುತ್ತಾರೆ. ರಾಜಕೀಯ ಮಾಡುತ್ತಾರೆ. ಹೀಗಾಗಿ ಅವರಿಗೂ ಬಿಪಿ, ಶುಗರ ಕಾಯಿಲೆ ಆವರಿಸಿದೆ ಎಂದು ತಮ್ಮ ಮೃದುಮಾತಿನಲ್ಲಿಯೇ ಚುಚ್ಚಿದರು.

    ಮಧ್ಯವರ್ತಿಗಳಿಂದಲೇ ದೇಶದ ವ್ಯವಸ್ಥೆ ಹಾಳಾಗುತ್ತಿದೆ. ಸರ್ಕಾರಿ ಅಧಿಕಾರಿಗಳು ಸೇವೆಗಿಂತ ತಮ್ಮ ಗಳಿಕೆಯಲ್ಲಿಯೇ ಹೆಚ್ಚು ಸಮಯ ಕಳೆಯುತ್ತಾರೆ. ಪ್ರಾಮಾಣಿಕತೆ, ನಂಬಿಕೆ ಮಾರಾಟ ಮಾಡಿದರೆ, ಕಾಸು, ಕಾರಿಗೆ ಮಾರು ಹೋದಾಗ ಜೀವನದಲ್ಲಿ ಏನೇ ಒಲಿದರು ನೆಮ್ಮದಿ ತರುವುದಿಲ್ಲ. ಅಕ್ರಮ ಹಣ, ಆಸ್ತಿ ನಮ್ಮನ್ನು ಸೇರುವಾಗ ನಮಗೆ ಗೊತ್ತೆ ಆಗುವುದಿಲ್ಲ. ಅದು ಯಾವಾಗ ನಮ್ಮನ್ನು ತಿನ್ನುತ್ತಾ ಹೋಗುತ್ತದೆಯೋ ಅವಾಗ ಬದುಕಿನಲ್ಲಿ ಜಿಗುಪ್ಸೆ ಶುರುವಾಗುತ್ತದೆ. ಆ ವೇಳೆ ಕಾಲ ಮಿಂಚಿ ಹೋಗಿರುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

    ಬಿವಿವಿ ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ(ಬೇವೂರ), ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ, ಗೆಳೆಯರ ಬಳಗದ ಅಧ್ಯಕ್ಷ ಡಾ.ಎ.ಎಸ್.ಖಾಸನೀಸ್, ಉಪಾಧ್ಯಕ್ಷ ಎಂ.ಎಂ.ಹಂಡಿ, ಕಾರ್ಯದರ್ಶಿ ಎಸ್.ಜಿ.ಕುರಹಟ್ಟಿ, ಸಹ ಕಾರ್ಯದರ್ಶಿ ಮಹಾಂತೇಶ ಹಿರೇಮಠ, ಕೋಶಾಧ್ಯಕ್ಷ ವಿನೋದ ಯಡಹಳ್ಳಿ ಇದ್ದರು.

    ನಾಗರಿಕತೆ ವಿಜ್ಞಾನ, ಜ್ಞಾನದಿಂದ ಬರಲ್ಲ
    ರಸ್ತೆ, ನೀರು, ಸೌಲಭ್ಯ ಸಿಕ್ಕರೆ ಅಭಿವೃದ್ಧಿ. ಅದೇ ನಾಗರಿಕತೆ ಎನ್ನುವ ಭಾವ ವಿಶ್ವದಲ್ಲಿದೆ. ಆದರೆ, ಭಾರತದಲ್ಲಿ ನಾಗರಿಕತೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕ್ರಿಸ್ತಶಕ ಆರಂಭವಾಗುವ ಮುನ್ನ ಮಹಾವೀರ, ಬುದ್ಧ ಇಲ್ಲಿ ಜನಿಸಿದ್ದರು. ಬದುಕು ಹೇಗೆ ನಡೆಸಬೇಕು ಎಂದು ಅರಿವು ಮೂಡಿಸಿದ್ದರು. ಪೂರ್ವಿಕರು ನದಿ ಪಕ್ಕದಲ್ಲಿ ಊರು ಕಟ್ಟಿ ಬೆಳೆಸಿದರು. ವಿಜ್ಞಾನ, ಜ್ಞಾನದಿಂದ ನಾಗರಿಕೆ ಬರುವುದಿಲ್ಲ. ಜೀವಿಸುವ ಶೈಲಿಯಲ್ಲಿ ನಾಗರಿಕತೆ ಅಡಗಿದೆ. ಅದರಿಂದ ಆರೋಗ್ಯವಂತ ಜೀವನ ದೊರೆತಿದೆ. ಹೀಗಾಗಿ ದೇಶದ ಜನ ಕೋವಿಡ್‌ನಂತಹ ಹೆಮ್ಮಾರಿಯಿಂದ ರಕ್ಷಿಸಿಕೊಳ್ಳಲು ಸಾಧ್ಯವಾಯಿತು ಎಂದು ಸೇತುರಾಮ ಅಭಿಪ್ರಾಯಪಟ್ಟರು.

    ಕೋವಿಡ್‌ನಲ್ಲೂ ರಾಜಕೀಯ
    ಭಾರತದಲ್ಲಿ ಎಲ್ಲ ಧರ್ಮಗಳಿವೆ. ನಾನಾ ಭಾಷೆ, ಸಂಸ್ಕೃತಿ, ಸಂಗೀತ, ನಾಟಕ, ರಂಗಭೂಮಿ ಇಲ್ಲಿದೆ. ವಿಶ್ವದ ಯಾವ ರಾಷ್ಟ್ರದಲ್ಲಿಯೂ ಈ ರೀತಿ ಇಲ್ಲ. ನಾವೆಂದು ಬೇರೆ ದೇಶದ ಮೇಲೆ ದಾಳಿ ಮಾಡಿದ ಉದಾಹರಣೆ ಇತಿಹಾಸದಲ್ಲಿ ಇಲ್ಲ. ಪಂಚಾಯಿತಿ ಕಟ್ಟೆ, ಮನೆಯಲ್ಲಿ ಕುಳಿತು ಜಿಡಿಪಿ ಸುಧಾರಣೆ ಬಗ್ಗೆ ಮಾತನಾಡುತ್ತೇವೆ. ಅದು ನಮ್ಮಂದಿಲೇ ಬೆಳವಣಿಗೆಯಾಗಬೇಕು ಎನ್ನುವ ಸಣ್ಣ ಅರಿವು ನಮಗಿಲ್ಲ. ಪ್ರತಿಯೊಂದರಲ್ಲಿ ರಾಜಕೀಯ ಮಾಡುವುದನ್ನು ಕರಗತ ಮಾಡಿಕೊಂಡಿದ್ದೇವೆ. ಕರೊನಾ ನಡುವೆಯೂ ರಾಜಕೀಯ ಸಮಾವೇಶ, ಪ್ರತಿಭಟನೆ ಮಾಡುತ್ತೇವೆ. ಪ್ರಪಂಚದಲ್ಲಿ ಕೋವಿಡ್ ರಾಜಕೀಯವಾಗಿ ಬಳಸಿಕೊಂಡಿದ್ದು ನಮ್ಮ ದೇಶದಲ್ಲಿ ಮಾತ್ರ ಎಂದು ವ್ಯಂಗ್ಯವಾಡಿದರು.

    ಅಪರಿಚಿತರಾದ ಉದ್ಯಮಿಗಳು, ಚಿತ್ರರಂಗದವರು ಮದುವೆ ಮಾಡಿಕೊಂಡರೆ, ಮನೆ ಕಟ್ಟಿದರೆ ಸಂತೋಷ ಪಡುತ್ತೇವೆ. ಪರಿಚಿತ ಸಹೋದರ, ಸಹೋದರಿಯರು, ಸಂಬಂಧಿಕರಲ್ಲಿ ಈ ಪ್ರಗತಿ ಕಂಡರೆ ಸಹಿಸಿಕೊಳ್ಳುವುದಿಲ್ಲ. ಆ ಸಂಭ್ರಮದಲ್ಲಿಯೂ ಭಾಗಿಯಾಗಲ್ಲ. ಬದುಕಿದ್ದಾಗ ಅವರೊಂದಿಗೆ ಜಗಳವಾಡುತ್ತೇವೆ. ಸತ್ತಾಗ ಸಂತಾಪ ಸೂಚಿಸಲು ಮುಂದಾಗುತ್ತೇವೆ. ಯಾಕೆ ಕೋಪ ಮಾಡಿಕೊಂಡೆ ಅಂತ ಕಾರಣ ಹುಡುಕುತ್ತಿಲ್ಲ. ನಗುವುದಕ್ಕೆ ಕಾರಣ ಕೇಳುತ್ತಿದ್ದೇವೆ. ಇದರಿಂದ ಬದುಕು ಹೇಗೆ ಸುಂದರಗೊಳ್ಳಲು ಸಾಧ್ಯ.
    ಎಸ್.ಎನ್.ಸೇತುರಾಮ ನಟ, ನಿರ್ದೇಶಕ



    ಅಯೋಗ್ಯ ಅವಕಾಶ ಧಿಕ್ಕರಿಸಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts