More

    ಚಳಿಗೆ ನಡುಗಿದ ಕೋಟೆನಾಡು!

    ಬಾಗಲಕೋಟೆ: ಉರಿ ಉರಿ ಬಿಸಲು, ಝಳದಿಂದ ಜಿಲ್ಲೆಯಲ್ಲಿ ವರ್ಷವಿಡೀ ಬಿಸಿ ಬಿಸಿ ವಾತಾವರಣವೇ ಕಂಡು ಬರುತ್ತಿತ್ತು. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿದ ಪರಿಣಾಮ ಚಿತ್ರಣವೇ ಬದಲಾಗಿ ಹೋಗಿದೆ. ಥರಗುಟ್ಟುವ ಚಳಿಗೆ ಕೋಟೆನಾಡು ಅಕ್ಷರಶಃ ಗಢ ಗಢ ನಡುಗುತ್ತಿದೆ.!

    ವಾಯುಭಾರದ ಕುಸಿತದಿಂದ ಶುಕ್ರವಾರ ರಾತ್ರಿಯಿಂದಲೇ ಜಿಲ್ಲೆಯ ನಾನಾ ಭಾಗದಲ್ಲಿ ತುಂತು ಮಳೆ ಆರಂಭವಾಗಿದ್ದು, ಶನಿವಾರ ಸಂಜೆವರೆಗೂ ವರುಣ ದೇವನ ಸಿಂಚನ ಮುಂದುವರಿದಿತ್ತು. ಎಲ್ಲೆಡೆ ಮೋಡ ಕವಿದ ವಾತಾವರಣ ಕಂಡು ಬಂದಿದ್ದು, ಬರದನಾಡು ಎಂದೇ ಖ್ಯಾತಿ ಪಡೆದಿದ್ದ ಜಿಲ್ಲೆಯಲ್ಲಿ ಬಹುವರ್ಷಗಳ ಬಳಿಕ ತಾಪಮಾನದಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿದೆ.

    ಹರಡಿದ ಇಬ್ಬನಿ, ತಂಪಾದ ಸುಳಿಗಾಳಿ
    ಜಿಲ್ಲೆಯಲ್ಲಿ ಇಬ್ಬನಿ ಎಲ್ಲೆಂದರಲ್ಲಿ ಹರಡಿಕೊಂಡಿದ್ದು, ಅಪ್ಪಟ್ಟ ಮಲೆನಾಡಿನಂತೆ ಜಿಲ್ಲೆಯ ರಸ್ತೆ, ಬೆಟ್ಟಗುಡ್ಡಗಳು, ಗಿಡಮರಗಳು ಕಂಗೊಳಿಸುತ್ತಿವೆ. ಇಬ್ಬನಿಯ ಮಂದಹಾಸಕ್ಕೆ ಜಿಲ್ಲೆಯ ಕೆರೆ, ನದಿ, ಹಿನ್ನೀರು ಪ್ರದೇಶ ವ್ಯಾಪ್ತಿಯಲ್ಲಿ ಪಕ್ಷಿಗಳ ಮೆಲ್ಲನೆಯ ಸವಿನುಡಿ, ಸ್ವಚ್ಛಂದವಾಗಿ ನಡೆಯುತ್ತಿರುವ ಹಾರಾಟ ಎಲ್ಲರನ್ನು ಸೆಳೆಯುತ್ತಿದೆ. ಇನ್ನು ತಂಪಾದ ಸುಳಿಗಾಳಿಗೆ ಜನರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದು, ರಸ್ತೆ, ಪ್ರಮುಖ ಬೀದಿ, ವೃತ್ತಗಳಲ್ಲಿ ಜನದಟ್ಟಣೆ ಕ್ಷಿಣಿಸಿದೆ. ಮನೆಯಲ್ಲಿ ಇದ್ದರು ಸಹ ಬೆಚ್ಚಿನೆಯ ಹೊದಿಕೆ, ತಲೆ ಗವಚ ಹಾಕಿಕೊಂಡೆ ಕಾಲ ಕಳೆಯುವಂತಾಗಿದೆ. ಅನೇಕ ಜನ ಮನೆ ಸುತ್ತಮುತ್ತಲು ಬೆಂಕಿ ಹಾಕಿಕೊಂಡು ಮೈಬಿಸಿ ಮಾಡಿಕೊಳ್ಳುತ್ತಿರುವ ಸನ್ನಿವೇಶ ಕಂಡು ಬರುತ್ತಿದೆ.

    ಆರೋಗ್ಯದ ಬಗ್ಗೆ ಕಾಳಜಿ ವಹಿಸಿವುದು ಅಗತ್ಯವಾಗಿದೆ. ಮಕ್ಕಳು, ಹಿರಿಯರು, ಅನಾರೋಗ್ಯ ಪೀಡಿತರು ಎಚ್ಚರಿಕೆ ವಹಿಸಬೇಕು. ಬಿಸಿಯಾದ ಆಹಾರ ಸೇವನೆ ಮಾಡಿ ಬೆಚ್ಚಗೆ ಇರಬೇಕು. ಒಟ್ಟಾರೆ ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಬಾಗಲಕೋಟೆ ನಗರದ ವೈದ್ಯ ಡಾ.ವಿಕಾಶ ದಡ್ಡೇನವರ ‘ವಿಜಯವಾಣಿ’ ಮೂಲಕ ಸಾರ್ವಜನಿಕರಿಗೆ ವಿನಂತಿಸಿದ್ದಾರೆ.

    ಕೃಷಿ ಕ್ಷೇತ್ರದಲ್ಲಿ ಏರಿಳಿತ
    ಇನ್ನು ಬದಲಾಗಿರುವ ಈ ವಾತವರಣ ಕೃಷಿ ಕ್ಷೇತ್ರದಲ್ಲಿ ಬಹಳಷ್ಟು ಏರಿಳಿತವಾಗುವ ಲಕ್ಷಣ ಗೋಚರಿಸಿದೆ. ಹಿಂಗಾರು ಜೋಳ, ಕಡಲೆಗೆ ಪೂರಕವಾಗಿದೆ. ದ್ರಾಕ್ಷಿ, ಕಟಾವಿಗೆ ಬಂದ ಮೆಕ್ಕೆಜೋಳ, ಹತ್ತಿಗೆ ಹೊಡೆತ ನೀಡಬಹುದು. ತೊಗರಿ, ಕಡಲೆಗೆ ಕೀಟ್‌ಬಾಧೆ ತಗಲುವ ಸಾಧ್ಯತೆ ಇದೆ. ಕೃಷಿಕರು ತಮ್ಮ ಬೆಳೆಗಳನ್ನು ಗಮನಿಸಿ ವಿಜ್ಞಾನಿಗಳ ಸಲಹೆ ಪಡೆದುಕೊಂಡು ಎಚ್ಚರಿಕೆ ವಹಿಸಿದಲ್ಲಿ ಬೆಳೆಗಳನ್ನು ರಕ್ಷಿಸಿಕೊಳ್ಳಬಹುದು.

    5 ದಶಕಗಳ ಬಳಿಕ ಈ ವಾತವರಣ
    ಪ್ರವಾಹ, ಅತಿವೃಷ್ಟಿ ಎಂತಹ ಪಾಕೃತಿಕ ವಿಕೋಪಗಳು ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಜಿಲ್ಲೆಯಲ್ಲಿ ಸಂಭವಿಸುತ್ತಿವೆ. ಇದರಿಂದ ಜಿಲ್ಲೆಯ ಅಂತರ್ಜಲ ಮಟ್ಟದಲ್ಲಿ ಏರಿಕೆ ಕಂಡು ಬಂದಿದ್ದು, ವಾತಾವರಣ ಮೇಲೆಯೂ ವಿಶೇಷವಾಗಿ ಪರಿಣಾಮ ಬೀರಿದೆ. ಈ ವರ್ಷ ಒಂದು ತಿಂಗಳು ಮುಂಚಿತವಾಗಿ ಚಳಿ ಅನುಭವ ಕಂಡು ಬಂದಿರುವುದು ಕುತೂಹಲಕ್ಕೆ ಕಾರಣವಾಗಿತ್ತು. ಅದರಲ್ಲೂ ಕಳೆದ ಒಂದು ವಾರದಿಂದ ಕನಿಷ್ಠ 12, 13 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಜಿಲ್ಲೆಯ ವಾತಾವರಣದಲ್ಲಿ ಸರಾಸರಿ ತಾಪಮಾನ ಶೇ.3 ರಿಂದ 4 ಕುಸಿತ ಕಂಡಿದೆ. 5 ದಶಕಗಳ ಬಳಿಕ ಜಿಲ್ಲೆಯಲ್ಲಿ ಈ ವಾತಾವರಣ ಸೃಷ್ಟಿಯಾಗಿದ್ದು, ಇದಕ್ಕೆ ಲಾಕ್‌ಡೌನ್‌ನಿಂದ ತಾಪಮಾನದಲ್ಲಿ ಇಳಿಕೆಯಾಗಿರುವುದೇ ಪ್ರಮುಖ ಕಾರಣ ಎಂದು ಹವಾಮಾನ ತಜ್ಞ ಪ್ರವೀಣ ಗುಳೇದ ವಿಶ್ಲೇಷಿಸಿದ್ದಾರೆ.

    ವಾಯುಭಾರ ಕುಸಿತ ಜತೆಗೆ ಜಿಲ್ಲೆಯಲ್ಲಿ ಹಿಂದಿನ ಅನೇಕ ವರ್ಷಗಳ ಹವಾಮಾನ ದಾಖಲೆ ನೋಡಿದಾಗ ಮಹತ್ತರ ಬದಲಾವಣೆ ಕಂಡು ಬಂದಿದೆ. ತಾಪಮಾನದಲ್ಲಿ ಇಳಿಕೆ ಕಂಡು ಬಂದಿರುವುದು ನೋಡಿದರೆ ಲಾಕ್‌ಡೌನ್ ಪರಿಣಾಮ ಪ್ರಕೃತಿಯೂ ತನ್ನ ಹಳೇ ವೈಭವಯಕ್ಕೆ ಮರಳುತ್ತಿದೆ. ನಾವೆಲ್ಲ ಇದೆನೆಲ್ಲ ಗಮನಿಸಿ ಪಾಠ ಕಲಿಯಬೇಕು. ಮುಂದಿನ ಪೀಳಿಗೆ ಜನರಿಗೆ ನಿಸರ್ಗದ ಕೊಡುಗೆ ನೀಡಬೇಕು.
    ಪ್ರವೀಣ ಗುಳೇದ, ಹವಾಮಾನ ತಜ್ಞ ಬಾಗಲಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts