More

    ಕೆಂಡದ ಬಿಸಿಲಿಗೆ ಬಾಗಲಕೋಟೆ ಕೊತ ಕೊತ…!

    ಅಶೋಕ ಶೆಟ್ಟರ, ಬಾಗಲಕೋಟೆ:
    ಬಾಗಲಕೋಟೆ ಜಿಲ್ಲೆಯಲ್ಲಿ ಭರ್ತಿ ಚಳಿಗಾಲದಲ್ಲೇ ಬೆವರಿನ ಸ್ನಾನ ಮಾಡಿಸಿದ್ದ ಈ ಸಲದ ತಾಪಮಾನ ಇದೀಗ ರಣಕೇಕೆ ಹಾಕುತ್ತಿದೆ. ಫೆಬ್ರುವರಿ, ಮಾರ್ಚ್‌ನಲ್ಲಿ ಗರಿಷ್ಠ ಉಷ್ಣಾಂಶ ದಾಖಲಿಸಿದ್ದ ಜಿಲ್ಲೆಯಲ್ಲಿ ಈಗ ಉಷ್ಣ ದಾಟಿಕೊಂಡು ತೀವ್ರ ಉಷ್ಣದತ್ತ ಹೆಜ್ಜೆ ಹಾಕಿದೆ. ಭಾಸ್ಕರನ ಆರ್ಭಟಕ್ಕೆ ಜಿಲ್ಲೆ ಕೊತ ಕೊತ ಎನ್ನುತ್ತಿದೆ.

    ಬಾಗಲಕೋಟೆ ಜಿಲ್ಲೆ ಮಾರ್ಚ್ 25 ರಿಂದಲೇ ಕೆಂಡದಂತೆ ನಿಗಿ ನಿಗಿ ಎನ್ನುತ್ತಿದೆ. 38 ರಿಂದ 40 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇರಬೇಕಿದ್ದ ತಾಪಮಾನ ಏಪ್ರಿಲ್ 3ರಂದು 42.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿ ಜನರು ಮನೆಯಿಂದ ಆಚೆ ಕಾಲಿಡದಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಈಗ ಅದು ಮತ್ತಷ್ಟು ಏರಿಕೆ ಕಂಡಿದೆ.

    ಬೆಚ್ಚಿ ಬೀಳುತ್ತಿದ್ದಾರೆ ಜನರು

    ನೆತ್ತಿ ಬಿರಿಯುವ ಬಿಸಿಲು, ಸಹಿಸಲಸಾಧ್ಯ ಧಗೆ, ಉಷ್ಣ ಗಾಳಿಯಿಂದ ಜನರ ಕಂಗಾಲಾಗಿ ಹೋಗಿದ್ದಾರೆ. ಸೂರ್ಯೋದಯ ಜೊತೆ ಜೊತೆಯಾಗಿಯೇ ಝಳದ ಆರ್ಭಟ ಶುರುವಾಗುತ್ತಿರುವುದು ಜನರನ್ನು ಬೆಚ್ಚಿ ಬೀಳಿಸಿದೆ. ಕೆಲಸಕ್ಕೆ ಹೋಗುವ ಉದ್ಯೋಗಿಗಳು, ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಂತೂ ವಿಲವಿಲ ಎನ್ನತೊಡಗಿದ್ದಾರೆ.

    ಇಂಥ ಬಿಸಿಲನ್ನು ನನ್ನ ಜೀವಮಾನದಲ್ಲಿ ಕಂಡಿದ್ದಿಲ್ಲ, ಇದೇನು ಬಂತೋ ಎಂದು ಹಿರೀಕರು ಹೌಹಾರುತ್ತಿದ್ದಾರೆ. ಇದು ಬರೀ ಬಾಗಲಕೋಟೆ ಜಿಲ್ಲೆಯ ಪರಿಸ್ಥಿತಿ ಮಾತ್ರವಲ್ಲದೇ ಪಕ್ಕದ ವಿಜಯಪುರ, ಗದಗ, ಕೊಪ್ಪಳ, ಬಳ್ಳಾರಿ, ರಾಯಚೂರ, ಕಲಬುರಗಿಯಲ್ಲೂ ಇದೇ ಪರಿಸ್ಥಿತಿ ಇದೆ. ಗಮನಾರ್ಹ ಎಂದರೆ ಈ ಸಲ ಕಲಬುರಗಿ, ರಾಯಚೂರ ಬಿಸಿಲು ಮೀರಿಸುವ ಧಗೆ ಬಾಗಲಕೋಟೆಯನ್ನು ಕಾಡತೊಡಗಿದೆ.

    ನವೆಂಬರ್ ತಿಂಗಳಲ್ಲೆ ಸುಳಿವು ನೀಡಿತ್ತು

    ಪ್ರಸಕ್ತ ವರ್ಷ ಬೇಸಿಗೆ ಭಯಾನಕ ಆಗಿರುತ್ತದೆ ಎಂದು ನವಂಬರ್ ಚಳಿಗಾಲದಲ್ಲೆ ಸುಳಿವು ನೀಡಿತ್ತು. ಸರಾಸರಿ 30 ಡಿಗ್ರಿ ಸೆಲ್ಸಿಯಸ್ ಇರಬೇಕಾದ ತಾಪಮಾನ 33 ಡಿಗ್ರಿ ವರೆಗೂ ಹೋಗಿತ್ತು. ಫೆಬ್ರವರಿ ತಿಂಗಳಲ್ಲಿ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ವರೆಗೂ ಸಾಗಿತ್ತು. ಮಾರ್ಚ್ ತಿಂಗಳಲ್ಲಿ 40ರ ಗಡಿ ದಾಟಿಕೊಂಡು ಇದೀಗ 41 ರಿಂದ 42.3 ಡಿಗ್ರಿ ವರೆಗೂ ಬಂತು ನಿಂತಿದೆ. ಇದೇ ಉಷ್ಣಾಂಶ ಮುಂದುವರಿದರೆ ಈ ಸಲ ದಾಖಲೆಯ 44 ಡಿಗ್ರಿ ಸೆಲ್ಸಿಯಸ್ ದಾಟುವ ಅಪಾಯ ಇದೆ ಎಂದು ಹವಾಮಾನ ಶಾಸ್ತ್ರಜ್ಞರು ಹೇಳುತ್ತಿದ್ದಾರೆ.

    ಢೋಗಿ ಬರದ ನೆನಪು

    ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ ಹತ್ತು ಹದಿನೈದು ದಿನಗಳಿಂದ ರಾಜ್ಯದಲ್ಲಿ ಗರಿಷ್ಠ ತಾಪಮಾನ ದಾಖಲಾಗುವ ಜಿಲ್ಲೆಗಳಲ್ಲಿ ಒಂದಾಗಿದೆ. ಸದ್ಯ ಧಗೆ, ಬಿಸಿಲಿನ ಝಳ, ನೆತ್ತಿ ಬಿರಿಯುವ ಬಿಸಲು ಇದೆಲ್ಲ ಆತಂಕಕ್ಕೆ ಕಾರಣವಾಗಿದೆ. 1792 ರಿಂದ 1796ರಲ್ಲಿ ಬಾಗಲಕೋಟೆ ಒಳಗೊಂಡ ಅಖಂಡ ವಿಜಯಪುರ ಗದಗ ಒಳಗೊಂಡ ಅಖಂಡ ಧಾರವಾಡ ಜಿಲ್ಲೆಗಳಲ್ಲಿ ಢೋಗಿ ಬರ ಕಾಣಿಸಿಕೊಂಡಿತ್ತು. ತೀವ್ರ ಬರದಿಂದಾಗಿ ಕುಡಿವ ನೀರು, ಊಟಕ್ಕೆ ಆಹಾರ ಇಲ್ಲದೇ ಸಾಕಷ್ಟು ಜನ ಜೀವ ಬಿಟ್ಟಿದ್ದರು. ಆದರೆ, ಇವತ್ತು ಆಧುನಿಕ ತಂತ್ರಜ್ಞಾನದ ನೆರವು ಇರುವುದರಿಂದ ಅಷ್ಟೊಂದು ಭೀಕರ ಪರಿಣಾಮ ಇಲ್ಲವಾದರೂ ಆ ಬಿಸಿಲಿನ ಅನುಭವ ಇದೆ ಎಂದು ಹವಾಮಾನ ಶಾಸ್ತ್ರಜ್ಞ ಡಾ. ಪ್ರವೀಣ ಗುಳೇದ ಹೇಳುತ್ತಾರೆ.

    ಬಾಗಲಕೋಟೆಯಲ್ಲಿ ಮಾರ್ಚ್ 24 ರಿಂದ ಏ.3 ರವರೆಗೆ ದಾಖಲಾದ ತಾಪಮಾನ

    ಮಾ. 24-38.8, ಮಾ.25- 39.8, ಮಾ.26- 40.2, ಮಾ. 27- 40.2, ಮಾ. 28- 40.6, ಮಾ.29-40.9, ಮಾ.30- 40.4, ಮಾ.31- 41.2, ಏ.01- 40.7, ಏ.02- 40.2, ಏ.03- 42.3

    ತೀವ್ರ ಉಷ್ಣಾಂಶದಿಂದ ತೊಂದರೆ ಏನು..?

    ತೀವ್ರ ಉಷ್ಣಾಂಶದಿಂದ ಮಾನವನ ಶರೀರದ ಮೇಲೆ ಅಪಾರ ಪ್ರಮಾಣದ ಪರಿಣಾ ಬೀರುತ್ತವೆ. ಇದರಿಂದ ಮಕ್ಕಳು ಹಾಗೂ ವೃದ್ಧರ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸುವಂತೆ ಚಿಕ್ಕಮಕ್ಕಳ ತಜ್ಞ ಡಾ. ದೇವರಾಜ್ ಪಾಟೀಲ ಹೇಳುತ್ತಾರೆ.

    ತೀವ್ರ ಉಷ್ಣಾಂಶದಿಂದಾಗಿ ಹೀಟ್ ಸ್ಟ್ರೋಕ್ ಸಮಸ್ಯೆ ಉಂಟಾಗಿ ಮಿದುಳಿನ ಮೇಲೆ ಪ್ರಭಾವ ಬೀರಲಿದೆ. ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶ ಸಂಬಂಧಿ ಕಾಯಿಲೆ, ಕಿಡ್ನಿ ತೊಂದರೆ, ಚರ್ಮರೋಗದ ಕಾಯಿಲೆಗಳಿಗೆ ತುತ್ತಾಗುವ ಅಪಾಯ ಇದೆ ಎನ್ನುತ್ತಾರೆ.

    ಜಿಲ್ಲೆಯಲ್ಲಿ ಸರಾಸರಿ ತಾಪಮಾನ ಮೀರಿ ಅಧಿಕ ಉಷ್ಣಾಂಶ ದಾಖಲಾಗುತ್ತಿದೆ. ಈ ಪೂರ್ವದಲ್ಲಿ ಜಿಲ್ಲೆಯಲ್ಲಿ ಗರಿಷ್ಠ 44 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ನಾಲ್ಕೈದು ದಶಕದಲ್ಲಿ ಇಷ್ಟೊಂದು ತಾಪಮಾನ ದಾಖಲಾಗಿಲ್ಲ. ಇದೇ ರೀತಿ ಉಷ್ಣ ವಲಯ ಮುಂದುವರಿದರೆ ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ. ಈ ಬಗ್ಗೆ ಜನರು ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು.
    ಡಾ. ಪ್ರವೀಣ ಗುಳೇದ ಹವಾಮಾನ ಶಾಸ್ತ್ರಜ್ಞರು, ಬಾಗಲಕೋಟೆ
    ಪ್ರಸಕ್ತ ವರ್ಷ ಅಧಿಕ ತಪಮಾನ ದಾಖಲಾಗುತ್ತಿದ್ದು, ಆರೋಗ್ಯ ರಕ್ಷಣೆ ಕಡೆಗೆ ಜನರು ಗಮನ ಹರಿಸಬೇಕು. ಮಧ್ಯಾಹ್ನದ ಹೊತ್ತು ಕೆಲಸಕ್ಕೆ ಹೊರಗಡೆ ಹೋಗದಿರುವುದು ಒಳ್ಳೆಯದು. ಹೆಚ್ಚು ನೀರು ಕುಡಿಯಬೇಕು. ಲಿಂಬು ಶರಬತ್ ಕುಡಿಯಬೇಕು. ತೆಳುವಾದ ಬಟ್ಟೆ ಧರಿಸಬೇಕು. ಮಕ್ಕಳು ಮತ್ತು ವೃದ್ಧರನ್ನು ಮನೆಯಿಂದ ಹೊರಗಡೆ ಕಳುಹಿಸಬಾರದು. ತೀರಾ ಅನಿವಾರ್ಯ ಇದ್ದರೆ ನೆರಳಿನ ಆಶ್ರಯದಲ್ಲಿ ಮನೆಯಿಂದ ಹೊರಗೆ ಹೋಗಬೇಕು.
    ಡಾ. ದೇವರಾಜ್ ಪಾಟೀಲ, ಚಿಕ್ಕಮಕ್ಕಳ ತಜ್ಞರು, ಬಾಗಲಕೋಟೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts