More

    ಕೋವಿಡ್ ನೆವ ಹೇಳದೆ ಕೆಲಸ ಮಾಡಿ..! ಅಧಿಕಾರಿಗಳಿಗೆ ಶಾಸಕ ಖಡಕ್ ಸೂಚನೆ

    ಬಾಗಲಕೋಟೆ: ಕೋವಿಡ್ ಸೋಂಕು ವಿರುದ್ಧ ಹೋರಾಟ ನಡೆಸುತ್ತಲೆ ಅಭಿವೃದ್ಧಿ ಕೆಲಸ ಮಾಡಬೇಕಿದೆ. ಸರ್ಕಾರ ಕಾಲಕಾಲಕ್ಕೆ ಅನುದಾನ ಬಿಡುಗಡೆ ಮಾಡುತ್ತಿದೆ. ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಾಮಗಾರಿ ಮಾಡಬೇಕು. ಕಾರ್ಯನಿರ್ವಹಿಸಬೇಕು. ಪ್ರತಿಯೊಂದಕ್ಕೂ ಕೋವಿಡ್ ನೆಪ ಹೇಳುವುದು ಸರಿಯಲ್ಲ ಎಂದು ಶಾಸಕ ವೀರಣ್ಣ ಚರಂತಿಮಠ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

    ನಗರದ ಬಿವಿವಿ ಸಂಘದ ನೂತನ ಸಭಾ ಭವನದಲ್ಲಿ ಸೋಮವಾರ ಬಾಗಲಕೋಟೆ ಮತಕ್ಷೇತ್ರ ವ್ಯಾಪ್ತಿಗೆ ಬರುವ ಬಾಗಲಕೋಟೆ, ಹುನಗುಂದ ತಾಲೂಕಿನ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಗ್ರಾಮೀಣ ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಶಾಲೆಗಳು, ಕೊಠಡಿ ದುರಸ್ತಿಗಳನ್ನು ಬೇಗನೆ ಪೂರ್ಣಗೊಳಿಸಬೇಕು. ಶಾಲೆಗಳು ಬಂದ್ ಇರುವುದರಿಂದ ಕಾಮಗಾರಿ ನಡೆಸಲು ಯಾವುದೇ ಅಡೆ-ತಡೆ ಉಂಟಾಗುವುದಿಲ್ಲ. ಸುಖಾಸುಮ್ಮನೇ ಬಿಲ್ ತೆಗೆಯುವುದು ಸರಿಯಲ್ಲ. ಗ್ರಾಮೀಣ ಜನರಿಗೆ ಸೌಲಭ್ಯ ಒದಗಿಸಲು ಇದು ಸಕಾಲ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಖರೀದಿ ಕೇಂದ್ರಗಳ ಬಗ್ಗೆ ದೂರುಗಳು ಬರುತ್ತಿದ್ದು, ರೈತರಿಗೆ ಸರಿಯಾಗಿ ಸ್ಪಂದಿಸಬೇಕು ಎಂದು ತಿಳಿಸಿದರು.

    ಕಡ್ಲಿಮಟ್ಟಿ, ಇಲಾಳ ಪುನರ್ ವಸತಿ ಕೇಂದ್ರ, ಆಲೂರ ತಾಂಡಾದಲ್ಲಿ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಮನೆ ಮನೆಗೆ ನಲ್ಲಿ ನೀರು ಸಂಪರ್ಕಿಸುವ ಕಾಮಗಾರಿ ಸರಿಯಾಗಿ ಆಗಿಲ್ಲ. ಕಾಮಗಾರಿಗಳಲ್ಲಿ ಲೋಪ-ದೋಷಗಳು ಕಂಡು ಬಂದಿವೆ. ಗ್ರಾಮೀಣ ಭಾಗದಲ್ಲಿ ಈ ರೀತಿ ಅದರಲ್ಲಿ ಗ್ರಾಮಸ್ಥರ ಸಂಶಯಕ್ಕೆ ಕಾರಣವಾಗುತ್ತದೆ. ಯಾವುದೇ ಕಾರಣಕ್ಕೂ ಗುತ್ತಿಗೆದಾರರ ಬಗ್ಗೆ ಮೃದು ಧೋರಣೆ ಅನುಸರಿಸಬಾರದು. ಟೆಂಡರ್ ಪ್ರಕ್ರಿಯೆಯಲ್ಲಿ ಆಗಿರುವ ಒಪ್ಪಂದದ ಬಗ್ಗೆ ಹಳ್ಳಿ ಜನರಿಗೆ ತಿಳಿಸಬೇಕು ಎಂದು ನಿರ್ದೇಶನ ನೀಡಿದರು.

    ಗ್ರಾಮೀಣ ಭಾಗದಲ್ಲಿ ವಿದ್ಯುತ್, ರಸ್ತೆ ಸಂಪರ್ಕ ಸರಿಯಾಗಿ ಕಲ್ಪಿಸಲು ನಿರಂತರ ಜ್ಯೋತಿ ಯೋಜನೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ನಮ್ಮ ಗ್ರಾಮ ನಮ್ಮ ರಸ್ತೆ, ನಮ್ಮ ದಾರಿ ನಮ್ಮ ಹೊಲ ಸೇರಿ ಹಲವಾರು ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಿದೆ. ಕೆಲವು ಕಾಮಗಾರಿಗಳು ಪೂರ್ಣಗೊಂಡಿಲ್ಲ. ಅನೇಕ ಕಡೆ ಕಾಮಗಾರಿ ನಡೆದರೂ 5 ವರ್ಷದ ನಿರ್ವಹಣೆ ನಿಯಮ ಪಾಲನೆಯಾಗುತ್ತಿಲ್ಲ. ಹೀಗೆ ಆದರೆ ಸಹಿಸಲು ಸಾಧ್ಯವಿಲ್ಲ. ನಿಯಮಾನುಸಾರವಾಗಿ ನಡೆದುಕೊಳ್ಳಬೇಕು. ತಪ್ಪು ಕಂಡು ಬಂದಲ್ಲಿ ಶಿಸ್ತು ಕ್ರಮ ನಿಶ್ಚಿತ ಎಂದರು ಹೇಳಿದರು.

    ಬಾಗಲಕೋಟೆ ತಾ.ಪಂ. ಆಡಳಿತ ಅಧಿಕಾರಿ ಚೇತನಾ ಪಾಟೀಲ, ಇಒ ಶಿವಾನಂದ ಕಲ್ಲಾಪುರ, ಹುನಗುಂದ ಇಒ ಸಿ.ಬಿ. ಮ್ಯಾಗೇರಿ, ಬಾಗಲಕೋಟೆ ತಹಸೀಲ್ದಾರ ಗುರುಸಿದ್ದಯ್ಯ ಹಿರೇಮಠ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.ಎಇಇ ಕಂಕನವಾಡಿ ಅಮಾನತುಗೊಳಿಸಿ
    ಎಸ್‌ಎಪಿ, ಟಿಎಸ್‌ಪಿ ಯೋಜನೆ ಅನುದಾನ ಬಳಕೆ, ಕಾಮಗಾರಿ ಬಗ್ಗೆ ಸರಿಯಾಗಿ ಮಾಹಿತಿ ನೀಡದ ಕೃಷ್ಣಾ ಜಲ ಭಾಗ್ಯ ನಿಗಮದ ಬಾಗಲಕೋಟೆ ವಿಭಾಗದ ಎಇಇ ಡಿ.ಬಿ. ಕಂಕನವಾಡಿ ಮೇಲೆ ಶಾಸಕ ಚರಂತಿಮಠ ಸಿಡಿಮಿಡಿಗೊಂಡರು. ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಈ ನಿರ್ಲಕ್ಷೃ ಧೋರಣೆ ಮಾಡುವುದು ಸರಿಯಲ್ಲ. ಕೂಡಲೇ ಅಮಾನತುಗೊಳಿಸಲು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡುತ್ತೇನೆ ಎಂದು ತಿಳಿಸಿದರು.

    ನೀವು ನೆಟ್ಟ ಸಸಿಗಳನ್ನು ದೇವರೇ ಎಣಿಕೆ ಮಾಡಬೇಕು
    ಪ್ರಾದೇಶಿಕ, ಸಾಮಾಜಿಕ ಅರಣ್ಯ ಇಲಾಖೆಯವರು ಪ್ರತಿವರ್ಷ ಸಾವಿರಾರು ಹೊಸ ಸಸಿಗಳನ್ನು ನೆಡುವ ಬಗ್ಗೆ ವರದಿ ನೀಡುತ್ತೀರಿ. ವಾಸ್ತವದಲ್ಲಿ ಅವುಗಳು ಬೆಳೆದಿಲ್ಲ ಎನ್ನುವುದು ಬಹಿರಂಗ ಸತ್ಯ. ದೇವರೇ ಬಂದು ನೀವು ನೆಟ್ಟ ಸಸಿಗಳನ್ನು ಎಣಿಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಚಾಟಿ ಬೀಸಿದರು. ಬಾಗಲಕೋಟೆ ಸಮೀಪದ ಮಲ್ಲಯ್ಯನ ಗುಡಿ ಸುತ್ತಮುತ್ತ ಉತ್ತಮವಾದ ಜಾಗವಿದೆ. ಕೂಡಲೇ ಪಾರ್ಕ್ ಮಾದರಿ ಅರಣ್ಯ ಬೆಳೆಸಬೇಕು. ನರೇಗಾ ಯೋಜನೆ ಅಡಿ ಕಾಮಗಾರಿ ಕೈಗೊಳ್ಳಬೇಕು ಎಂದು ಶಾಸಕ ವೀರಣ್ಣ ಚರಂತಿಮಠ ಸೂಚನೆ ನೀಡಿದರು.

    ಲವಳೇಶ್ವರ, ಭೈರಮಟ್ಟಿ, ಹೊಸೂರ ಮುಂತಾದ ಗ್ರಾಮಗಳಲ್ಲಿ ವಿದ್ಯುತ್, ಶುದ್ಧ ಕುಡಿಯುವ ನೀರಿನ ಘಟಕಗಳ ಸಮಸ್ಯೆ ಇರುವ ಬಗ್ಗೆ ದೂರುಗಳು ಬಂದಿದ್ದು ಅವುಗಳನ್ನು ಸರಿಪಡಿಸಬೇಕು. ಸ್ಮಶಾನವಿಲ್ಲದ ಗ್ರಾಮಗಳಿಗೆ ಬೇಗನೆ ಸ್ಮಶಾನ ವ್ಯವಸ್ಥೆ ಕಲ್ಪಿಸಬೇಕು. ಹುನಗುಂದ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಕೆಡಿಪಿ ಸಭೆಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಇದೇ ಪುನರಾವರ್ತನೆಯಾದರೆ ಸಹಿಸಲ್ಲ. ವ್ಯವಸ್ಥೆ ಸುಧಾರಣೆ ಆಗಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ನಿಶ್ಚಿತ.
    ವೀರಣ್ಣ ಚರಂತಿಮಠ ಶಾಸಕ ಬಾಗಲಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts