More

    ಪ್ರಿಯಕರನೊಂದಿಗೆ ಎರಡನೇ ಮದುವೆ..!

    ಬಾಗಲಕೋಟೆ: ಕಲ್ಪತರು ನಾಡಿನ ಯುವತಿಗೂ ಕೋಟೆ ನಾಡಿನ ಯುವಕನಿಗೂ ಉಂಟಾದ ಮೊಬೈಲ್ ಪ್ರೇಮಾಂಕುರ ಮುಚಖಂಡಿ ವೀರಭದ್ರನ ಸನ್ನಿಧಿಯಲ್ಲಿ ಮದುವೆಯಲ್ಲಿ ಸುಖಾಂತ್ಯ ಕಂಡಿದೆ. ಆದರೆ, ಈ ಮದುವೆಯಿಂದ ಯುವತಿಯ ಅಪ್ಪನ ಗೋಳಾಟ ಕಂಡು ಎಂತವರ ಕರಳು ಚುರುಕ್ ಎನ್ನದೇ ಇರಲಾರದು. ಅಷ್ಟಕ್ಕೂ ಯುವತಿ ತನಗೆ ಮನೆಯವರು ಇಷ್ಟವಿಲ್ಲದೆ ಮಾಡಿದ್ದರು ಎನ್ನಲಾದ ಬಾಲ್ಯವಿವಾಹದ ಗಂಡನನ್ನು ತೊರೆದು ಬಂದು ತನ್ನಿಷ್ಟದ ಪ್ರಿಯಕರನ ಜತೆಗೆ ಎರಡನೇ ಮದುವೆ ಆಗಿದ್ದಾಳೆ ಎನ್ನುವುದು ಈ ವಿಚಿತ್ರ ಮದುವೆ ಪ್ರಸಂಗ.

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ನವದಂಪತಿ ತಮಗೆ ಯುವತಿ ಕಡೆಯಿಂದ ತೊಂದರೆ ಆದೀತು ಎಂದು ರಕ್ಷಣೆಗಾಗಿ ಪೊಲೀಸರ ರಕ್ಷಣೆ ಕೋರಿರುವ ಘಟನೆ ಬಾಗಲಕೋಟೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.

    ಏನಿದು ಘಟನೆ? ಮದುವೆಯಾದವರು ಯಾರು?
    ತುಮಕೂರು ಮೂಲದ ಐಶ್ವರ್ಯ ಎನ್ನುವ ಯುವತಿ ಹಾಗೂ ಬಾಗಲಕೋಟೆ ಮೂಲದ ಆಕಾಶ ಎನ್ನುವವರಿಬ್ಬರೂ ಪ್ರಾಪ್ತ ವಯಸ್ಸಿನವರು ಆಗಿದ್ದು, ಮಂಗಳವಾರ ಮದುವೆ ಆಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಆಕಾಶ ಚಿತ್ರದುರ್ಗದ ಕೋಟೆ ನೋಡಲೆಂದು ಹೋಗಿದ್ದರು. ಅಲ್ಲಿಗೆ ಐಶ್ವರ್ಯ ಸಹ ಕುಟುಂಬದವರ ಜತೆ ಬಂದಿದ್ದರು. ಒಬ್ಬರನ್ನೊಬ್ಬರು ನೋಡಿ ಪರಿಚಯ ಮಾಡಿಕೊಂಡಿದ್ದಲ್ಲದೆ ಐಶ್ವರ್ಯ ಆಕಾಶ ಮೊಬೈಲ್ ನಂಬರ್ ಪಡೆದಿದ್ದರು.

    ಮೊಬೈಲ್ ಮಾತುಕತೆ ಪ್ರೀತಿಗೆ ತಿರುಗಿತ್ತು. ಆಗ ಐಶ್ವರ್ಯ ಇನ್ನೂ ಅಪ್ರಾಪ್ತೆ ಇದ್ದಳು. ಅಷ್ಟರಲ್ಲಿ ಯುವತಿ ಮನೆಯಲ್ಲಿ ಬಳ್ಳಾರಿ ಮೂಲದ ಯುವಕನೊಂದಿಗೆ ಮದುವೆ ಮಾಡಿದ್ದರು. ಒಂದು ಕಡೆಗೆ ಬಾಲ್ಯ ವಿವಾಹ ಮತ್ತೊಂದು ಕಡೆಗೆ ಯುವತಿಗೆ ಇಷ್ಟ ಇಲ್ಲದ ಮದುವೆ ಇದಾಗಿತ್ತು. ಮದುವೆಯಾದ ಬಳಿಕ ಕೆಲ ತಿಂಗಳು ಮೊಬೈಲ್ ಪ್ರಿಯಕರನ ಸಂಬಂಧ ಕಟ್ ಆಗಿತ್ತು ಎನ್ನುವುದು ಐಶ್ವರ್ಯ ಹೇಳುತ್ತಿರುವ ಮಾತು.
    ಇಷ್ಟವಿಲ್ಲದ ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋದಾಗ ಅಲ್ಲಿ ಕಿರುಕುಳ ಇತ್ತಂತೆ. ಪತಿ ಬೆಂಗಳೂರಲ್ಲಿ ಪ್ರತಿಷ್ಠಿತ ರಾಜಕೀಯ ಮುಖಂಡ ಒಬ್ಬರ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದರಂತೆ. ಈ ಮಧ್ಯೆ ಬಾಗಲಕೋಟೆ ಮೂಲದ ಆಕಾಶ ಜತೆಗೆ ಮತ್ತೆ ಮೊಬೈಲ್ ಸಂಪರ್ಕ ದೊರೆತಿದೆ. ಅಲ್ಲದೆ, ಬೆಂಗಳೂರಿನಲ್ಲಿ ಇದ್ದಾಗ ಆಕಾಶ ಸಹ ಒಂದೆರಡು ಸಲ ಭೇಟಿ ಮಾಡಿ ಬಂದಿದ್ದನಂತೆ.

    ನೀನೇ ನನ್ನ ಜೀವ ಅಂತ ಬಂದ್ಲು
    ಈಗ್ಗೆ ಎರಡ್ಮೂರು ದಿನಗಳ ಹಿಂದೆ ದಿಢೀರನೇ ಬಾಗಲಕೋಟೆಗೆ ಬಂದ ಐಶ್ವರ್ಯ, ತನ್ನನ್ನು ಮದುವೆ ಆಗುವಂತೆ ಆಕಾಶಗೆ ಹೇಳಿದ್ದಾಳೆ. ಯಾವುದೇ ಕಾರಣಕ್ಕೂ ಬಾಲ್ಯ ವಿವಾಹದ ಗಂಡನ ಜತೆಗೆ ಬಾಳಲಾರೆ ಎಂದು ನಿಷ್ಠುರವಾಗಿಯೂ ಹೇಳಿದ್ದಾರೆ. ಮೊದಲೇ ಇಬ್ಬರ ನಡುವೆ ಇದ್ದ ಪ್ರೀತಿ ಅಂತಿಮವಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿ ಮಂಗಳವಾರ ಬಾಗಲಕೋಟೆ ಸಮೀಪದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮದುವೆನೂ ಆಗಿದ್ದೇವೆ ಎಂದು ಐಶ್ವರ್ಯ ಮತ್ತು ಆಕಾಶ ಹೇಳುತ್ತಾರೆ.

    ಇವರಿಬ್ಬರದು ಬೇರೆ ಬೇರೆ ಜಾತಿ. ಇದರಿಂದ ಜಾತಿಗೆ ಹೆಚ್ಚಿನ ಮಹತ್ವ ಕೊಡುವ ತಮ್ಮ ಕುಟುಂಬದಿಂದ ತೊಂದರೆ ಆಗಬಹುದು ಎಂದು ಐಶ್ವರ್ಯ ಆಕಾಶ ಜತೆ ಬಾಗಲಕೋಟೆ ಎಸ್ಪಿ ಕಚೇರಿಗೆ ತೆರಳಿ ಅಲ್ಲಿದ್ದ ಸಿಬ್ಬಂದಿ ಎದುರು ರಕ್ಷಣೆ ಕೋರಿದ್ದಾರೆ.

    ಅಯ್ಯೋ ವಿಧಿಯೇ?
    ಮಗಳು ಬಾಗಲಕೋಟೆಗೆ ಬಂದಿದ್ದಾಳೆ ಎಂದು ತಿಳಿದ ಐಶ್ವರ್ಯ ಅವರ ತಂದೆ ಜೀವರಾಜ್ ಹಾಗೂ ಅವರ ಪುತ್ರ ನೇರವಾಗಿ ಬೆಂಗಳೂರಿನಿಂದ ಬಾಗಲಕೋಟೆಗೆ ಬಂದು ಆಕಾಶ ಅವರ ಮನೆಯವರನ್ನು ಭೇಟಿ ಮಾಡಿ ಮಗಳನ್ನು ಕಳುಹಿಸುವಂತೆ ಕೋರಿದ್ದರಂತೆ. ಅದಕ್ಕೆ ಅವರು ಏನು ಹೇಳಿದರೋ ಏನೋ ಅಲ್ಲಿಂದ ಅವರು ಎಸ್ಪಿ ಕಚೇರಿಗೆ ಬಂದು ಆವರಣದಲ್ಲಿ ಮಗಳನ್ನು ಕಂಡು ಗೋಳೋ ಎಂದು ಅಳಲು ಆರಂಭಿಸಿದರು.
    ಮಗಳ ಹಿಂದೆ ಹಿಂದೆ ಹೋಗಿ ‘ಅಯ್ಯೋ ವಿಧಿಯೇ? ಬೇಡ ಮಗಳೇ ಮನೆಗೆ ಬಾ’ ಎಂದು ಗೋಗರೆದರು. ಮತ್ತೊಂದೆಡೆ ಆಕಾಶನ ಕಾಲಿಡಿದುಕೊಂಡು ‘ಬೇಡ ಕಣಣ್ಣ…. ನಿನ್ನ ಕಾಲಿಗೆ ಬೀಳ್ತೇನಿ ಕಳ್ಸಿ ಕೊಡಣ್ಣ…. ನನ್ನ ಬಿಡಬೇಡಿ… ನಮ್ಮಪ್ಪ, ತಂದೆ ನನ್ನ ಮಗಳನ್ನು ಕಳ್ಸಿ ಕೊಡಿ’ ಅಂತ ಕಣ್ಣೀರು ಹಾಕಿದರು.

    ಮಗಳ ಕಡೆಗೆ ಕೈ ಮಾಡಿ ‘ನನ್ನ ಕಂದ… ಮಗಳೇ… ನನ್ನ ಬಿಟ್ಟು ಹೋಗ್ಬೇಡ.. ಹೋಗ್ಬೇಡ’ ಅಂತ ಪರಿಪರಿಯಾಗಿ ಬೇಡಿಕೊಂಡರು, ಕಣ್ಣೀರು ಕೋಡಿ ಹರಿಸಿದರು. ತಮ್ಮ ಜತೆಗೆ ಇದ್ದ ಮಗನನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತರು. ಆದರೆ, ಜಪ್ಪಯ್ಯ ಅಂದರೂ ಆಕಾಶ ಬಿಟ್ಟು ತಾನೆಲ್ಲೂ ಬರಲ್ಲ ಎನ್ನುವ ನಿರ್ಧಾರ ತಳೆದಿರುವ ಐಶ್ವರ್ಯಗೆ ಅಪ್ಪನ ಕಣ್ಣೀರು ಕೋಡಿ ಕಂಡು ಕಣ್ಣು ತುಂಬಿ ಬಂತಾದರೂ ಅವರ ಜತೆ ಹೋಗುವ ಮನಸ್ಸು ಮಾಡಲಿಲ್ಲ.

    ಮತ್ತೊಂದೆಡೆ ತಾವಿಬ್ಬರೂ ಈಗ ದೇವಸ್ಥಾನದಲ್ಲಿ ಮದುವೆ ಆಗಿದ್ದು, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ನೋಂದಣಿ ಮಾಡಿಸಲು ಎಲ್ಲ ತಯಾರಿಯನ್ನು ಮಾಡಿಕೊಂಡಿದ್ದೇವೆ ಎಂದು ಐಶ್ವರ್ಯ-ಆಕಾಶ ತಿಳಿಸಿದರು.

    ನಾವಿಬ್ಬರೂ ಪರಸ್ಪರ ಒಪ್ಪಿ ಮದುವೆ ಆಗಿದ್ದೇವೆ. ನಾಲ್ಕು ವರ್ಷಗಳ ಹಿಂದೆ ನಮ್ಮ ಮನೆಯಲ್ಲಿ ಬೇಡ ಎಂದು ಒತ್ತಾಯದಿಂದ ಬಾಲ್ಯ ವಿವಾಹ (17ನೇ ವಯಸ್ಸಿನಲ್ಲಿ) ಮಾಡಿದ್ದರು. ಗಂಡನ ಮನೆಯಲ್ಲಿ ಬಹಳ ಕಿರುಕುಳ ಇತ್ತು. ನಾನು ಇಲ್ಲಿಗೆ ಬಂದು ಆಕಾಶ ಜತೆ ಮದುವೆ ಆಗಿದ್ದೇನೆ. ಈಗ ನನಗೆ ಪ್ರಾಪ್ತ ವಯಸ್ಸು. ಇದು ನನ್ನ ಸ್ವಂತ ನಿರ್ಧಾರ. ಇದ್ದರೂ ಸತ್ತರೂ ಇವರ ಜತೆಯೇ ಇರುತ್ತೇನೆ. ಎಲ್ಲಿಗೂ ಹೋಗಲ್ಲ.
    ಐಶ್ವರ್ಯ, ಮದುವೆಯಾದ ಯುವತಿ

    ಐಶ್ವರ್ಯ ಇಲ್ಲಿಗೆ ಬರುವುದು ಹೇಳಿರಲಿಲ್ಲ. ಬಂದ ಮೇಲೆ ಎಲ್ಲ ವಿಷಯ ತಿಳಿಸಿದರು. ನನ್ನನ್ನೆ ನಂಬಿಕೊಂಡು ಬಂದಿದ್ದಾರೆ. ಅವರನ್ನು ಕೈಬಿಡಬಾರದು ಎಂದು ಮದುವೆ ಮಾಡಿಕೊಂಡಿದ್ದೇನೆ. ನಾವಿಬ್ಬರೂ ಚೆನ್ನಾಗಿ ಬದುಕುತ್ತೇವೆ. ನಾಲ್ಕು ವರ್ಷಗಳ ಹಿಂದೆ ಅವಳಿಗೆ ಇಷ್ಟ ಇಲ್ಲದಿದ್ದರೂ ಬಲವಂತದಿಂದ ಮದುವೆ ಮಾಡಿದ್ದರು. ಅದು ಬೇಡ ಎಂದು ಇಲ್ಲಿಗೆ ಬಂದಿದ್ದಾರೆ. ನಾನು ಒಪ್ಪಿ ಮದುವೆ ಆಗಿದ್ದೇನೆ. ಅವರ ತಂದೆ ಕಡೆಯವರು ಮಿಸ್ಸಿಂಗ್ ಕೇಸ್ ದಾಖಲು ಮಾಡಿದ್ದಾರಂತೆ. ಯಾರ ಮೇಲೆ ಮಾಡಿದ್ದಾರೆ ಅಂತ ನನಗೆ ಗೊತ್ತಿಲ್ಲ.
    ಆಕಾಶ, ಐಶ್ವರ್ಯ ಮದುವೆಯಾದ ಯುವಕ

    ರಕ್ಷಣೆ ಕೋರಿ ಯಾರು ಬರುತ್ತಾರೆ. ಅವರಿಗೆ ಸಂದರ್ಭನುಸಾರ ಕಾನೂನಿಗೆ ಅನುಗುಣವಾಗಿ ರಕ್ಷಣೆ ಕೊಡಲಾಗುತ್ತಿದೆ. ಈ ವರೆಗೂ ನನಗೆ ಯಾರೂ ಅರ್ಜಿ ಕೊಟ್ಟಿಲ್ಲ. ನನಗೆ ಇಲ್ಲದೆ ಸ್ಥಳೀಯ ಠಾಣೆಗೆ ಅರ್ಜಿ ಕೊಟ್ಟಲ್ಲಿ ಕಾನೂನು ಪ್ರಕಾರ ರಕ್ಷಣೆ ಕೊಡಲಾಗುವುದು.
    ಲೋಕೇಶ ಜಗಲಾಸರ್ ಎಸ್ಪಿ ಬಾಗಲಕೋಟೆ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts