More

    ತಾಂಡಾಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆ

    ಬಾಗಲಕೋಟೆ: ಜಿಲ್ಲೆಯಲ್ಲಿರುವ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗುವುದು. ಬಹು ದಿನಗಳಿಂದ ಬಾಕಿ ಉಳಿದ ಈ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಶೀಘ್ರದಲ್ಲಿ ಈ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.

    ನಗರದ ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಮಹಾನ್ ಸಂತ ಸೇವಾಲಾಲ್ ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ನಡೆದುಕೊಳ್ಳಬೇಕು. ಬಂಜಾರ ಸಮುದಾಯದವರು ಕಾಯಕ ಜೀವಿಗಳಾಗಿದ್ದು, ಶಿವನ ಆಶೀರ್ವಾದದಿಂದ ಹುಟ್ಟಿಬಂದ ಸೇವಾಲಾಲ್ ತಪಸ್ಸಿನಿಂದ ಶಕ್ತಿಯನ್ನು ಪಡೆದು ಪವಾಡ ಪುರುಷರಾದವರು. ಸಮಾಜ ಸುಧಾರಣೆಗೆ ಹತ್ತು ಹಲವಾರು ಪವಾಡಗಳನ್ನು ಮಾಡಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕು. ಪರರ ಸೊತ್ತನ್ನು ಕಳುವು ಮಾಡಬಾರದೆಂದು ಸಂತರು ತಿಳಿಸಿದ್ದಾರೆ ಎಂದು ಹೇಳಿದರು.

    ಜಿಲ್ಲಾಧಿಕಾರಿ ಕೆ. ರಾಜೇಂದ್ರ ಮಾತನಾಡಿ, ಜಿಲ್ಲೆಯಲ್ಲಿರುವ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಈ ಬಗ್ಗೆ 25 ಅಧಿಸೂಚನೆಗಳನ್ನು ಸಹ ಹೊರಡಿಸಲಾಗಿದೆ. ಅನುಷ್ಠಾನಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸಮುದಾಯದವರ ಸಹಕಾರ ಸಹ ಅಗತ್ಯವಾಗಿದೆ ಎಂದು ತಿಳಿಸಿದರು.

    ಸಮಾಜದ ಮುಖಂಡರಾದ ಬಲರಾಮ್ ನಾಯಕ ಮಾತನಾಡಿ, ಸೇವಾಲಾಲರು ಅನೇಕ ಪವಾಡಗಳೊಂದಿಗೆ ಮಾನವರನ್ನು ಪಾವನರನ್ನಾಗಿ ಮಾಡಿದ್ದಾರೆ. ಸೇವಾಲಾಲರು ಒಬ್ಬ ಸನ್ಯಾಸಿ, ಪವಾಡ ಪುರುಷ ಅಷ್ಟೇ ಅಲ್ಲ, ಶ್ರೇಷ್ಠ ತತ್ವಜ್ಞಾನಿ ಹಾಗೂ ಕಾಲಜ್ಞಾನಿಗಳಾಗಿದ್ದರು ಎಂದು ಬಣ್ಣಿಸಿದರು.

    ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಹೂವಪ್ಪ ರಾಠೋಡ, ರಂಗನಗೌಡ ಗೌಡರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಎನ್.ಹೇಮಾವತಿ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

    ತಾಂಡಾಗಳು ಕಂದಾಯ ಗ್ರಾಮಗಳಾಗಿ ಸೇರ್ಪಡೆಗೊಂಡ ಬಳಿಕ ತಾಂಡಾಗಳಲ್ಲಿ ಅಭಿವೃದ್ಧಿ ಮಹಾಪೂರವೇ ಹರಿದು ಬರುತ್ತದೆ. ಸರ್ವೇ ಮಾಡಲು ಬರುವ ಸಿಬ್ಬಂದಿಗೆ ಸ್ಪಂದಿಸಬೇಕು. ಗ್ರಾಮದಲ್ಲಿನ ವಿವರನ್ನು ಸರಿಯಾಗಿ ನೀಡಬೇಕು. ಪ್ರತಿಯೊಬ್ಬರೂ ಮನೆ ಖಾತೆ ಮಾಡಿಕೊಳ್ಳಬೇಕು.
    ವೀರಣ್ಣ ಚರಂತಿಮಠ ಶಾಸಕ ಬಾಗಲಕೋಟೆ



    ತಾಂಡಾಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆ
    ತಾಂಡಾಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts