More

    ಯೋಜನಾ ಪ್ರದೇಶ ವಿಸ್ತರಣೆಗೆ ಸರ್ಕಾರಕ್ಕೆ ಪ್ರಸ್ತಾವನೆ

    ಬಾಗಲಕೋಟೆ: ನಗರಾಭಿವೃದ್ಧಿ ಪ್ರಾಧಿಕಾರದ ಆಡಳಿತ ಮಂಡಳಿ ಅನೇಕ ಮಹತ್ತರ ಉದ್ದೇಶಗಳನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ. ನಿವೇಶನ ರಹಿತ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ನಿವೇಶನ ಹಂಚಿಕೆ ಮಾಡುವ ನಿಟ್ಟಿನಲ್ಲಿ ಶ್ರಮ ವಹಿಸಲಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ ತಿಳಿಸಿದರು.

    ಪ್ರಾಧಿಕಾರ ಮೊದಲ ಸಭೆಯಲ್ಲಿ ಮುಳುಗಡೆ ನಗರಿ ಬಾಗಲಕೋಟೆ ಅಭಿವೃದ್ಧಿ ಪಡಿಸುವ ಬಗ್ಗೆ ಅನೇಕ ವಿಷಯಗಳನ್ನು ಚರ್ಚಿಸಲಾಯಿತು. ನಗರದ ನಿವೇಶನ ರಹಿತರಿಗೆ ಹಾಗೂ ಸರ್ಕಾರಿ ಇಲಾಖೆಯ ಎ, ಬಿ, ಸಿ, ಡಿ ವರ್ಗದ ನೌಕರರಿಗೆ ಕೈಗೆಟುಕುವ ದರದಲ್ಲಿ ನಿವೇಶನ ಹಂಚಿಕೆ ಮಾಡುವ ಯೋಜನೆಯ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ನವನಗರದ ಯೂನಿಟ್-3ಗೆ ವಿನ್ಯಾಸ ಅನುಮೋದನೆ ನೀಡಲು, ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದ ವಿಸ್ತರಣೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ವರದಿಯನ್ನು ಸಿದ್ಧಪಡಿಸಲು ನಿರ್ಧರಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಬಾಗಲಕೋಟೆ ನಗರದ ನಿವೇಶನ ರಹಿತರಿಗೆ ಹಾಗೂ ಸರ್ಕಾರಿ ನೌಕರರಿಗೆ ಕಡಿಮೆ ದರದಲ್ಲಿ ನಿವೇಶನಗಳನ್ನು ಹಂಚುವ ಯೋಜನೆಯಡಿ ಭೂಮಾಲೀಕರೊಡನೆ, ರೈತರೊಂದಿಗೆ ಒಪ್ಪಂದ ಮಾಡಿಕೊಂಡು ಜಮೀನನ್ನು ಪ್ರಾಧಿಕಾರದಿಂದಲೇ ಅಭಿವೃದ್ಧಿಪಡಿಸಿ, ಲಭ್ಯವಾಗುವ ನಿವೇಶನಗಳ ಪೈಕಿ ಶೇ.50ರಷ್ಟು ನಿವೇಶನ ಭೂ-ಮಾಲೀಕರಿಗೆ ನೀಡಿ ಉಳಿದ ಶೇ.50ರಷ್ಟು ನಿವೇಶನಗಳನ್ನು ನಿವೇಶನ ರಹಿತರಿಗೆ ಕಡಿಮೆ ದರದಲ್ಲಿ ಹಂಚಿಕೆ ಮಾಡಲಾಗುವುದು. ಇದಕ್ಕೆ ರೈತರು, ಭೂಮಾಲೀಕರು ಕೈಜೋಡಿಸಬೇಕು ಎಂದು ಮನವಿ ಮಾಡಿದ ಅವರು, ಪ್ರತಿ ವಿಷಯ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು ಎಂದರು.

    ಪ್ರಾಧಿಕಾರದ ಸದಸ್ಯ ರಾಜು ವಿ.ನಾಯ್ಕರ ಮಾತನಾಡಿ, ಪ್ರಾಧಿಕಾರದ ಯೋಜನಾ ಪ್ರದೇಶವನ್ನು 22 ಕಿ.ಮೀ. ವರೆಗೆ ವಿಸ್ತರಣೆ ಮಾಡಲಾಗುವುದು. ಮುಳುಗಡೆಯಾಗುವ ಗ್ರಾಮ ಹೊರತುಪಡಿಸಿ, ಉಳಿದ ಗ್ರಾಮಗಳನ್ನು ಪ್ರಾಧಿಕಾರದ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಬುಡಾ ಎಲ್ಲ ರೀತಿಯ ಸುಸಜ್ಜಿತ ಲೇಔಟ್ ಸಿದ್ಧಪಡಿಸಲಿದೆ ಎಂದರು.

    ಪ್ರಾಧಿಕಾರದಿಂದ ಸರ್ಕಾರಿ ನೌಕರರು ಹಾಗೂ ನಿವೇಶನ ರಹಿತರಿಗೆ ಕಡಿಮೆ ದರದಲ್ಲಿ ನಿವೇಶನ ನೀಡಬೇಕು ಎಂಬ ಮಹತ್ವಕಾಂಕ್ಷೆಯ ಯೋಜನೆಯನ್ನು ಶಾಸಕ ವೀರಣ್ಣ ಚರಂತಿಮಠ ಹಾಕಿಕೊಂಡಿದ್ದು, ಅವರ ಮಾರ್ಗದರ್ಶನದಲ್ಲಿ ಈ ಕೆಲಸ ಶೀಘ್ರ ಆರಂಭಿಸಲಾಗುವುದು ಎಂದು ಹೇಳಿದರು. ಪ್ರಾಧಿಕಾರದ ಸದಸ್ಯ ಗುಂಡು ಶಿಂಧೆ ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts