More

    ಶಾಸಕ ಸವದಿ ವಿರುದ್ಧ ರಣ ಕಹಳೆ

    ಬಾಗಲಕೋಟೆ: ಜಿಲ್ಲೆಯ ತೇರದಾಳ ಮತಕ್ಷೇತ್ರ ವ್ಯಾಪ್ತಿಯ ಮಹಾಲಿಂಗಪುರ ಪುರಸಭೆ, ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ತಳ್ಳಾಟ, ನೂಕಾಟದಲ್ಲಿ ಪುರಸಭೆ ಮಹಿಳಾ ಸದಸ್ಯೆಯ ಗರ್ಭಪಾತಕ್ಕೆ ಕಾರಣರಾದ ತೇರದಾಳ ಶಾಸಕ ಸಿದ್ದು ಸವದಿ ವಿರುದ್ಧ ಕಾಂಗ್ರೆಸ್ ರಣ ಕಹಳೆ ಮೊಳಗಿಸಿದೆ.

    ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಮಾಜಿ ಸಚಿವೆ ಉಮಾಶ್ರೀ ಸುದ್ದಿಗೋಷ್ಠಿ ನಡೆಸಿ ಮಹಿಳಾ ಸದಸ್ಯೆಯ ಗರ್ಭಪಾತಕ್ಕೆ ಕಾರಣರಾದ ತೇರದಾಳದ ಶಾಸಕ ಸಿದ್ದು ಸವದಿ ಅವರ ರಾಜೀನಾಮೆಗೆ ಆಗ್ರಹಿಸಿ ಡಿ.5 ರಂದು ಬೃಹತ್ ಪ್ರತಿಭಟನಾ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ. ಅಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೋಳಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಸೇರಿ ರಾಜ್ಯ, ಜಿಲ್ಲಾಮಟ್ಟದ ನಾಯಕರು ಭಾಗವಹಿಸಲಿದ್ದಾರೆ. ಈ ಕುರಿತು ಮುಂದಿನ ಅಧಿವೇಶನದಲ್ಲಿಯೂ ಹೋರಾಟ ನಡೆಸಲಾಗುವುದು ಎಂದರು.

    ಶಾಸಕ ಸಿದ್ದು ಸವದಿ ಅವರಿಗೆ ಯಾವ ರೀತಿ ಹಕ್ಕು ಇದೆ. ಎಲ್ಲ ಜನಪ್ರತಿನಿಧಿಗಳಿಗೂ ಅದೇ ಸಮಾನವಾದ ಹಕ್ಕು ಇದೆ. ಆದರೆ, ಮಹಾಲಿಂಗಪುರ ಪುರಸಭೆ ಅಧ್ಯಕ್ಷೆ, ಉಪಾಧ್ಯಕ್ಷೆ ಸ್ಥಾನದ ಚುನಾವಣೆ ವೇಳೆ ಮಹಿಳಾ ಸದಸ್ಯೆಯರ ಹಕ್ಕಿಗೆ ಕೊಡಲಿ ಪೆಟ್ಟು ನೀಡುವಲ್ಲಿ ಶಾಸಕ ಸವದಿ ಕೂಡ ಭಾಗಿಯಾಗಿದ್ದರು. ಇದರಿಂದ ಮಹಿಳೆಯರು ರಾಜಕೀಯ ಕ್ಷೇತ್ರಕ್ಕೆ ಬರಲು ಹಿಂದೇಟು ಹಾಕುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಬಿಜೆಪಿಯ ಚಾಂದಿನಿ ನಾಗೇಶ ನಾಯಕ, ಗೋದಾವರಿ ಬಾಟ, ಸವಿತಾ ಹುರಕಡ್ಲಿ ಹಾಗೂ ಕಾಂಗ್ರೆಸ್‌ನ ಸುಜಾತಾ ಮಾಂಗ ಅವರು ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ವೇಳೆ ತಮ್ಮ ಹಕ್ಕು ಚಲಾಯಿಸಲು ಹೊರಟಿದ್ದರು. ಪುರಸಭೆ ಮುಖ್ಯದ್ವಾರದ ಬಳಿ ಅವರನ್ನು ತಡೆಯಲು ವ್ಯವಸ್ಥಿತವಾಗಿ ಸಂಚು ರೂಪಿಸಲಾಗಿತ್ತು. ಗೋದಾವರಿ ಬಾಟ ಎಂಬುವವರನ್ನು ಮುಖ್ಯದ್ವಾರದ ಗೇಟ್ ಮೇಲೆ ಎತ್ತಿ ಹೊರಗೆ ಹಾಕಿ ಕಿಡ್ನಾಪ ಮಾಡಲಾಯಿತು. ಇನ್ನು ಚಾಂದಿನಿ ನಾಯಕ, ಸವಿತಾ ಹುರಕಡ್ಲಿ, ಸುಜಾತಾ ಮಾಂಗ ಒಳ ಪ್ರವೇಶಿಸುವ ವೇಳೆ ಚಾಂದಿನಿ ನಾಯಕ ಅವರನ್ನು ಸ್ವತಃ ಶಾಸಕರೇ ನೂಕಿ, ಪುರಸಭೆ ಕಚೇರಿಯ ಮೆಟ್ಟಿಲುಗಳಿಂದ ಬೀಳುವಂತೆ ಮಾಡಿದ್ದಾರೆ. ಇದು ಮಹಿಳಾ ಕುಲಕ್ಕೆ ಮಾಡಿದ ದೊಡ್ಡ ಅವಮಾನ ಎಂದು ದೂರಿದರು.

    ಶಾಸಕ ಸವದಿ ಜನರನ್ನು ರಕ್ಷಿಸುವಲ್ಲಿ ಆಸಕ್ತಿ ತೋರಿಸಬೇಕಿತ್ತು. ಆದರೆ, ಅವರ ನಡೆ, ನುಡಿ ನೋಡಿದರೆ ಬೇರೆ ರೀತಿ ಇದೆ. ಮಹಿಳೆಯರ ಮೇಲೆ ದೌರ್ಜನ್ಯ ಮಾಡಿರುವುದು ಜನರು ಕಣ್ಣಾರೆ ನೋಡಿದ್ದಾರೆ. ಏಳು ವರ್ಷಗಳ ಬಳಿಕ ಗರ್ಭಿಣಿಯಾಗಿದ್ದ ಒಬ್ಬ ಮಹಿಳೆಯ ಸಂಭ್ರಮ ಕಸಿದುಕೊಂಡಿದ್ದಾರೆ. ಭ್ರೂಣಹತ್ಯೆ ಪ್ರಕರಣ, ದಲಿತ ಮಹಿಳೆಯ ಮೇಲಾದ ದೌರ್ಜನ್ಯ ಕುರಿತು ಶಾಸಕರ ವಿರುದ್ಧ ಪ್ರಕರಣ ದಾಖಲಿಸಿಬೇಕು. ಇದನ್ನು ಪೊಲೀಸ್ ಇಲಾಖೆ, ಮಹಿಳಾ ಆಯೋಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯಾವುದೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಕಿಡಿಕಾರಿದರು.

    ವಿಧಾನಪರಿಷತ್ ಸದಸ್ಯ, ಮಾಜಿ ಸಚಿವ ಆರ್.ಬಿ. ತಿಮ್ಮಾಪುರ, ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಮಾಜಿ ಸಚಿವ ಎಚ್.ವೈ. ಮೇಟಿ, ಮಾಜಿ ಶಾಸಕ ಜೆ.ಟಿ. ಪಾಟೀಲ, ಮಾಧ್ಯಮ ವಕ್ತಾರ ನಾಗರಾಜ ಹದ್ಲಿ, ಬಾಗಲಕೋಟೆ ಗ್ರಾಮೀಣ ಬ್ಲಾಕ್ ಅಧ್ಯಕ್ಷ ಎಸ್.ಎನ್. ರಾಂಪುರ, ನಗರ ಮಹಿಳಾ ಬ್ಲಾಕ್ ಅಧ್ಯಕ್ಷೆ ರೇಣುಕಾ ನ್ಯಾಮಗೌಡ ಸೇರಿ ಇತರರು ಇದ್ದರು.

    ಶಾಸಕ ಸಿದ್ದು ಸವದಿ ಅಮಾನವೀಯವಾಗಿ ವರ್ತಿಸಿದ್ದಾರೆ. ಇದು ಕೊಲೆಗಿಂತ ಕಡಿಮೆ ಪ್ರಕರಣ ಏನಲ್ಲ. ಅವರ ವಿರುದ್ಧ ಸರ್ಕಾರ ಕೊಲೆ ಪ್ರಕರಣ ದಾಖಲಿಸಬೇಕು.
    ಎಸ್.ಜಿ. ನಂಜಯ್ಯನಮಠ, ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ

    ತೇರದಾಳ ಶಾಸಕ ಸಿದ್ದು ಸವದಿ ಪ್ರಕರಣ ಖಂಡಿಸಿ ಅಧಿವೇಶನದಲ್ಲೂ ಕಾಂಗ್ರೆಸ್ ಹೋರಾಟ ನಡೆಸಲಿದೆ. ಸೂಕ್ತ ಕ್ರಮಕ್ಕೆ ವಿಧಾನಸಭೆ ಅಧ್ಯಕ್ಷರಿಗೆ ಮನವಿ ಮಾಡಲಾಗುವುದು. ದಲಿತ ಮಹಿಳೆ ದೌರ್ಜನ್ಯವಾದರೂ ಡಿಸಿಎಂ ಗೋವಿಂದ ಕಾರಜೋಳ ಸಾಂತ್ವನ ಕೂಡ ಹೇಳಿಲ್ಲ. ವಿಷಾದ ಕೂಡ ವ್ಯಕ್ತಪಡಿಸಿಲ್ಲ. ಅವರ ದಲಿತ ಕಾಳಜಿ ಇದರಿಂದ ಗೊತ್ತಾಗುತ್ತದೆ.
    ಆರ್.ಬಿ. ತಿಮ್ಮಾಪುರ, ವಿಧಾನಪರಿಷತ್ ಸದಸ್ಯ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts